ಇಂದು ವಿಶ್ವ ಪರಿಸರ ದಿನ, ಎಲ್ಲಾ ಕಡೆಗಳಲ್ಲೂ ಸರ್ಕಾರ, ಸಂಘ ಸಂಸ್ಥೆಗಳು ವಿಶ್ವ ಪರಿಸರ ದಿನಾಚಣೆ ಮಾಡಲಾಗ್ತಿದೆ. ಆದರೆ ಇಂದಿನ ಪರಿಸ್ಥಿತಿಯಲ್ಲಿ ನಾವೆಲ್ಲರೂ ಒಂದು ಪ್ರಶ್ನೆ ಮಾಡಿಕೊಳ್ಳಬೇಕಾದ ಅವಶ್ಯಕತೆ ಇದೆ. ಅದೇನೆಂದರೆ ವಿಶ್ವ ಪರಿಸರ ದಿನವನ್ನು ಆಚರಣೆ ಮಾಡುವ ನೈತಿಕತೆ ಮನುಷ್ಯರಿಗೆ ಇದೆಯಾ..? ಎಂಬುದು. ಎಲ್ಲರೂ ಜಯಂತಿಗಳು, ವಿಶೇಷ ದಿನಗಳನ್ನು ಆಚರಣೆ ಮಾಡುವುದು ಸರಿ. ಇದರಿಂದ ಮುಂದಿನ ತಲೆಮಾರಿಗೆ ಪರಿಸರದ ಬಗ್ಗೆ ಅರಿವು ಮೂಡಿಸಲು ಅನೂಕೂಲ ಆಗುತ್ತದೆ. ಆದರೆ ವಿಶ್ವ ಪರಿಸರ ದಿನದಂದೇ ಪರಿಸರಕ್ಕೆ ಮಾರಕವಾದ ಕೆಲಸಗಳನ್ನು ಮಾಡುತ್ತ, ಪರಿಸರ ರಕ್ಷಣೆ ಸಾಧ್ಯವೇ..? ಇದನ್ನು ಎಲ್ಲರೂ ಮನಗಾಣಬೇಕು.
ಪರಿಸರ ರಕ್ಷಣೆ ಎಂದರೆ ಏನು..? ರಕ್ಷಣೆ ಮಾಡುವುದು ಹೇಗೆ..?
ನಮ್ಮ ಸುತ್ತಮುತ್ತಲು ಇರುವಂತಹ ಪಡೆದ ಪರಿಸರವನ್ನು ಮೊದಲು ನಾವು ಸ್ವಚ್ಛವಾಗಿ ಇಡುವ ಕೆಲಸ ಮಾಡಬೇಕು. ಮನೆಯನ್ನು ಸ್ವಚ್ಛವಾಗಿಡುವ ಉದ್ದೇಶದಿಂದ ಪಕ್ಕದ ಬೀದಿಯಲ್ಲಿ ಕಸ ಎಸೆಯುವುದನ್ನು ಮೊದಲು ನಿಲ್ಲಿಸಬೇಕು. ಮನೆಯಿಂದ ಖರೀದಿಗಾಗಿ ಅಂಗಡಿಗಳಿಗೆ ಹೋಗುವ ಮುನ್ನ ಕೈಚೀಲ ಹಿಡಿಕೊಂಡು ಹೋಗುವ ಮೂಲಕ ಪರಿಸರಕ್ಕೆ ಮಾರಕ ಆಗಿರುವ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಬೇಕು. ಊಟ, ನೀರು, ತಿಂಡಿ ತಿನಿಸುಗಳನ್ನು ಸೇವಿಸಲು ಪ್ಲಾಸ್ಟಿಕ್ ಮುಕ್ತ ಪೇಪರ್ ಪ್ಲೇಟ್ ಬಳಸುವುದು ಸೂಕ್ತ. ಬಳಕೆ ಹಾಗು ನಿರ್ವಹಣೆಗೆ ಅನುಕೂಲ ಎನ್ನುವ ಕಾರಣಕ್ಕೆ ಪ್ಲಾಸ್ಟಿಕ್ ಬಳಸುವುದು ಪರಿಸರಕ್ಕೆ ಮಾರಕ.
ಪರಿಸರಕ್ಕೆ ಮಾರಕ ಆಗ್ತಿರೋದು ಏನು..?
ಮರ ಗಿಡಗಳನ್ನು ಬೆಳಸಬೇಕು ಅನ್ನೋದು ಸರಿ. ಆದರೆ ಪರಿಸರ ಅಂದರೆ ಕೇವಲ ಮರಗಿಡಗಳನ್ನು ಬೆಳೆಸುವುದು ಮಾತ್ರ ಅಲ್ಲ. ಮಣ್ಣಿನ ಆರೋಗ್ಯವೂ ಕೂಡ ಪರಿಸರದ ವ್ಯಾಪ್ತಿಗೇ ಬರುತ್ತದೆ. ನಾವು ಬಳಸಿ ಬಿಸಾಡುವ ಪ್ಲಾಸ್ಟಿಕ್ ನೂರಾರು ವರ್ಷಗಳ ಕಾಲ ಭೂಮಿಯಲ್ಲಿದ್ದರೂ ಬೇರೆ ವಸ್ತುಗಳ ರೀತಿ ಮಣ್ಣಿನಲ್ಲಿ ಕರಗುವುದಿಲ್ಲ. ಅಂದರೆ ಭೂಮಿಯ ಆರೋಗ್ಯ ನಿಧಾನವಾಗಿ ಕೆಡುತ್ತದೆ. ಇತ್ತೀಚಿಗೆ ನದಿಗಳ ಮೂಲಕ ಸಮುದ್ರ ಸೇರುತ್ತಿರುವ ಪ್ಲಾಸ್ಟಿಕ್ನಿಂದ ಮನುಷ್ಯನ ಆರೋಗ್ಯದ ಮೇಲೆ ಮಾರಕ ಪರಿಣಾಮ ಬೀರುವುದು ಮಾತ್ರವಲ್ಲದೆ, ಪರಿಸರದಲ್ಲಿ ತನ್ನಷ್ಟಕ್ಕೆ ತಾನೇ ನಡೆಯುವ ಚಟುವಟಿಕೆಗಳ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎನ್ನುವ ವರದಿಗಳು ಬರುತ್ತಿವೆ.
ಲಾಭದ ಉದ್ದೇಶದಿಂದ ಯೂರಿಯಾ ಬಳಕೆ..!
ರೈತರು ಬೆಳೆಯುವ ಬೆಳೆಗಳಿಗೆ ಅತಿ ಹೆಚ್ಚು ಯೂರಿಯಾ ಬಳಕೆ ಮಾಡುವ ಮೂಲಕ ಮಣ್ಣಿನ ಆರೋಗ್ಯ ಕೆಟ್ಟು ಹೋಗಿದೆ. ಎಲ್ಲಾ ಸರ್ಕಾರಗಳಿಗೆ ಮಣ್ಣಿನ ಆರೋಗ್ಯ ಕೆಟ್ಟಿದೆ. ಅದರಿಂದ ಬೆಳೆಯುವ ಆಹಾರ ಸೇವಿಸಿದ ಮನುಷ್ಯನ ಆರೋಗ್ಯ ಹಾಳಾಗುತ್ತಿದೆ ಎನ್ನುವುದು ತಿಳಿದಿದೆ. ಆದರೂ ಸುಮ್ಮನಿದ್ದಾರೆ ಎಂದರೆ ಮಾರುಕಟ್ಟೆ ಹಿಡಿತ ಕೆಲಸ ಮಾಡುತ್ತದೆ. ಯೂರಿಯಾ ತಯಾರಿಕಾ ಕಂಪನಿಗಳು ಸರ್ಕಾರದ ಮೇಲೆ ಪ್ರಭಾವ ಬೀರುತ್ತವೆ. ಇನ್ನು ಯೂರಿಯಾ ಪ್ರಮಾಣ ಸೇವನೆ ಹೆಚ್ಚಾಗಿ ರೋಗ ರುಜಿನಗಳು ಬರುವುದರಿಂದ ಮಾತ್ರೆ, ಔಷಧಿಗಳನ್ನು ಜನರು ಕೊಳ್ಳಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಸರ್ಕಾರ ಭೂಮಿಯ ಆರೋಗ್ಯವನ್ನು ಕಾಪಾಡಲು ಮುಂದಾಗದಂತೆ ಮೆಡಿಸಿನ್ ಮಾಫಿಯಾ ಕೂಡ ಸರ್ಕಾರದ ಮೇಲೆ ಹಿಡಿತ ಸಾಧಿಸುತ್ತದೆ.
‘ವಿಶ್ವ ಪರಿಸರ ದಿನಾಚರಣೆ’ ಯಾಕೆ ಮಾಡಲು ಯೋಗ್ಯರಲ್ಲ..!?
ವಿಶ್ವ ಪರಿಸರ ದಿನಾಚರಣೆ ಮಾಡುವ ಕಾರ್ಯಕ್ರಮದಲ್ಲೇ ಪ್ಲಾಸ್ಟಿಕ್ ಬಾಟೆಲ್ನಿಂದ ನೀರು ಕುಡಿಯುತ್ತ ಆಚರಣೆ ಮಾಡುವುದು ಅವಿವೇಕತನದ ಪರಮಾವಧಿ ಎನ್ನಬಹುದು. ಕೈಗಾರಿಕೆಗಳನ್ನು ಸ್ಥಾಪಿಸಲು ಅವಕಾಶ ಕೊಟ್ಟು ಕೈಗಾರಿಕೆಯ ತ್ಯಾಜ್ಯ ನದಿಗೆ ಹೋಗುವುದನ್ನು ತಡೆಯದೆ ಇದ್ದರೂ ಪರಿಸರ ದಿನಾಚರಣೆ ಮಾಡುವ ಉದ್ದೇಶ ಏನು..? ಪರಿಸರದಲ್ಲಿ ವಾಯು ಮಾಲಿನ್ಯ ಹೆಚ್ಚಾಗುವುದನ್ನು ತಡೆಯುವ ಉದ್ದೇಶದಿಂದ ವಿದ್ಯುತ್ ಚಾಲಿತ ವಾಹನಗಳನ್ನು ಬಳಸಲು ಸರ್ಕಾರ ಉತ್ತೇಜನ ನೀಡುತ್ತಿತ್ತು. ಆದರೆ ಜೂನ್ 1 ರಿಂದ ಸಬ್ಸಿಡಿ ರದ್ದು ಮಾಡಿದ್ರಿಂದ ಎಲೆಕ್ಟ್ರಿಕ್ ವಾಹನ ದರ ಗಗನಕ್ಕೆ ಏರಿದೆ. ಇದು ಪರಿಸರ ರಕ್ಷಣೆಯ ಚಿಂತನೆಯೇ..? ಪ್ರಶ್ನೆ ಮಾಡಿಕೊಳ್ಳಬೇಕಿದೆ. ಪ್ರಕೃತಿ ಉತ್ತಮವಾಗಿದ್ದರೆ ಮಾತ್ರ ಮನುಷ್ಯ ಆರೋಗ್ಯವಂತ ಜೀವನ ಮಾಡುತ್ತಾನೆ. ಪರಿಸರ ಆರೋಗ್ಯವಾಗಿದ್ದರೆ ಮಾನವನ ಜೀವಿತಾವಧಿ 100 ವರ್ಷದಿಂದ 50-60ಕ್ಕೆ ಇಳಿಯುತ್ತಲೇ ಇರಲಿಲ್ಲ ಅಲ್ಲವೇ..?
ಕೃಷ್ಣಮಣಿ