ಬೆಂಗಳೂರು: ನಗರದ ಬ್ಯಾಟರಾಯನಪುರ(Byatarayanapura) ವಿಧಾನಸಭಾ ಕ್ಷೇತ್ರದ ಕೋಗಿಲು ಲೇಔಟ್ನಲ್ಲಿ(Kogilu Layout) ಅಕ್ರಮವಾಗಿ ವಾಸವಾಗಿದ್ದ ಕುಟುಂಬಗಳನ್ನು ನೆಲಸಮ ಮಾಡಲಾಗಿದೆ. ಘನ ತ್ಯಾಜ್ಯ ವಿಲೇವಾರಿ ಘಟಕದ ಸ್ಥಳದಲ್ಲಿದ್ದ ಕುಟುಂಬಗಳು ಬೀದಿ ಪಾಲಾಗಿವೆ. ಅಕ್ರಮ ಒತ್ತುವರಿಗೆ ತೆರವು ಕಾರ್ಯಾಚರಣೆಯಲ್ಲಿ ನೂರಕ್ಕೂ ಅಧಿಕ ಕುಟುಂಬಗಳು ಸಂಕಷ್ಟದಲ್ಲಿವೆ. ಆದರೆ ಇದೇ ವಿಚಾರ ಇದೀಗ ತೀವ್ರ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಅಕ್ರಮ ತೆರವಿನ ಬಳಿಕ ಕೇರಳ ಸಿಎಂ ಪಿಣರಾಯಿ ವಿಜಯನ್ ರಾಜ್ಯ ಸರ್ಕಾರದ ನಡೆಯನ್ನು ಟೀಕಿಸಿ ಸಾಮಾಜಿಕ ಜಾಲಾತಾಣದಲ್ಲಿ ಪೋಸ್ಟ್ ಮಾಡಿದ್ದರು.

ಕರ್ನಾಟಕ ಸರ್ಕಾರ ಉತ್ತರ ಪ್ರದೇಶದ ‘ಬುಲ್ಡೋಜರ್ ನೀತಿ’ ಅನುಸರಿಸುತ್ತಿದೆ. ಫಕೀರ್ ಕಾಲೋನಿ, ವಸೀಮ್ ಲೇಔಟ್ನಲ್ಲಿ ನೋಟಿಸ್ ನೀಡದೆ ಮನೆ ತೆರವುಗೊಳಿಸಿದ್ದರಿಂದ ನೂರಾರು ಕುಟುಂಬಗಳು ಬೀದಿಗೆ ಬಿದ್ದಿವೆ. ಇದು ಸಂವಿಧಾನ ವಿರೋಧಿ ಕ್ರಮ. ಇದು ದುಃಖಕರ ವಿಚಾರ, ಸಂಘ ಪರಿವಾರದ ಅಲ್ಪಸಂಖ್ಯಾತ ವಿರೋಧಿ ರಾಜಕೀಯವನ್ನು ಈಗ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಕೂಡ ಮಾಡುತ್ತಿದೆ. ಭಯ ಮತ್ತು ಕ್ರೂರತೆಯ ಬಲದ ಮೂಲಕ ಆಡಳಿತ ನಡೆಸುವಾಗ, ಸಾಂವಿಧಾನಿಕ ಮೌಲ್ಯಗಳು ಮತ್ತು ಮಾನವ ಘನತೆ ಮೊದಲ ಬಲಿಯಾಗುತ್ತವೆ. ಈ ಮೋಸದ ಪ್ರವೃತ್ತಿಯನ್ನು ವಿರೋಧಿಸಲು ಮತ್ತು ಸೋಲಿಸಲು ಎಲ್ಲಾ ಜಾತ್ಯತೀತ ಮತ್ತು ಪ್ರಜಾಪ್ರಭುತ್ವ ಶಕ್ತಿಗಳು ಒಟ್ಟಾಗಿ ಒಟ್ಟುಗೂಡಬೇಕು ಎಂದು ವಿಜಯನ್ ಆಕ್ರೋಶ ವ್ಯಕ್ತಪಡಿಸಿದ್ದರು.

ಕೇರಳ ಚುನಾವಣೆಗೆ ಕೋಗಿಲು ಕೇಸ್ ಹೈಜಾಕ್
ಅಲ್ಲದೆ ಕೇರಳ ಸಿಎಂ ಸೂಚನೆ ಮೇರೆಗೆ ಅಲ್ಲಿನ ಸಂಸದ ಎಎ ರಹೀಂ ಘಟನಾ ಸ್ಥಳಕ್ಕೆ ಭೇಟಿ ನೀಡಿ, ಕರ್ನಾಟಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿ ಕಾರಿದ್ದರು. ಇದಾದ ಬೆನ್ನಲ್ಲಿಯೇ ಕೇರಳ ಶಾಸಕ ಜಲೀಲ್ ಕೋಗಿಲು ಸಂತ್ರಸ್ತರನ್ನು ಭೇಟಿಯಾಗಿದ್ದರು. ಕರ್ನಾಟಕದ ಈ ವಿಚಾರವನ್ನು ಮುಂಬರುವ ಕೇರಳ ವಿಧಾನಸಭಾ ಚುನಾವಣೆಗೆ ಹೈ ಜಾಕ್ ಮಾಡುವ ಪ್ರಯತ್ನಗಳು ಮುಂದುವರೆದಿವೆ. ಹೀಗಾಗಿಯೇ ಪಿಣರಾಯಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳೋಕೆ ರಾಜ್ಯದ ಆಂತರಿಕ ವಿಚಾರದಲ್ಲಿ ಮೂಗು ತೋರಿಸಿದ್ದಾರೆ.

ಕೇರಳ ಸಿಎಂ ಒಂದೇ ಒಂದು ಪೋಸ್ಟ್ಗೆ ಹಲವು ಬೆಳವಣಿಗೆಗಳು ನಡೆದು ರಾಜ್ಯ ಸರ್ಕಾರಕ್ಕೆ ಕಾಂಗ್ರೆಸ್ ಹೈಕಮಾಂಡ್ನಿಂದ ಖಡಕ್ ಸೂಚನೆಯು ಬರುತ್ತದೆ. ಆ ನಿವಾಸಿಗಳಿಗೆ ಪರ್ಯಾಯ ವಸತಿ ವ್ಯವಸ್ಥೆ ಸರ್ಕಾರದಿಂದ ಮಾಡಿಕೊಡುವಂತೆ ನಿರ್ದೇಶನವೂ ಬರುತ್ತದೆ. ಖುದ್ದು ಕೇರಳ ಕಾಂಗ್ರೆಸ್ ಸಂಸದ ಹಾಗೂ ರಾಜ್ಯ ಎಐಸಿಸಿ ಉಸ್ತುವಾರಿ ಕೆ.ಸಿ. ವೇಣು ಗೋಪಾಲ್ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ನೀಡುತ್ತಾರೆ. ಆದರೆ ಇದನ್ನು ಖಂಡಿಸಿರುವ ವಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ನಮ್ಮ ರಾಜ್ಯದ ಆಂತರಿಕ ವಿಚಾರದಲ್ಲಿ ಹಸ್ತಕ್ಷೇಪಕ್ಕೆ ವೇಣು ಗೋಪಾಲ್ ಯಾರು? ಎಂದು ಪ್ರಶ್ನಿಸುತ್ತಿವೆ.

ಕೇಳಿಸುತ್ತಿಲ್ಲವೆ ಉತ್ತರದ ಕೂಗು..?
ಕೇರಳ ಸಂಸದನ ಬಳಿಕ ಸಿಎಂ, ಡಿಸಿಎಂ ಇಬ್ಬರಿಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಕೋಗಿಲು ಸಂತ್ರಸ್ತರ ಕಡೆ ಗಮನ ಹರಿಸುವಂತೆ ತಿಳಿಸುತ್ತಾರೆ. ರಾಹುಲ್ ಹೇಳಿದ್ದೇ ತಡ ಡಿಕೆ ಶಿವಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಬೇರೆ ವ್ಯವಸ್ಥೆ ಮಾಡುತ್ತೇವೆ, ನೀವು ಯಾರು ಆತಂಕ ಪಡಬೇಡಿ ಎಂದು ಹೇಳಿ ಬಂದಿದ್ದರು. ಇದಾದ ಬಳಿಕ ತಕ್ಷಣ ಸಭೆ ನಡೆಸಿ ಸಿಎಂ ಸಿದ್ದರಾಮಯ್ಯ ಅರ್ಹರಿಗೆ 7 ಕಿ.ಮೀ ಅಂತರದಲ್ಲಿ ತಲಾ ಒಂದು ಮನೆಗೆ 11.2 ಲಕ್ಷ ರೂ ಮೌಲ್ಯದಲ್ಲಿ ನಿರ್ಮಿಸಲಾಗಿರುವ ಮನೆಗಳನ್ನು ಹಂಚಿಕೆ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡುತ್ತಾರೆ.

ಹೈಕಮಾಂಡ್ ಮೆಚ್ಚಿಸೋಕೆ ರಾಜ್ಯದ ಹಿತ ಬಲಿ..
ಈ ಘೋಷಣೆಯೆ ಹಿಂದೆ ಹೈಕಮಾಂಡ್ ಮೆಚ್ಚಿಸುವ ತಂತ್ರಗಾರಿಕೆ ಅಡಗಿರುವುದು ಸುಳ್ಳಲ್ಲ. ಯಾಕೆಂದರೆ ಸತತವಾಗಿ ಹಲವು ವರ್ಷಗಳಿಂದಲೂ ರಾಜ್ಯದ ವಿವಿಧ ಜಿಲ್ಲೆಗಳು ಸೇರಿದಂತೆ ಉತ್ತರ ಕರ್ನಾಟಕದ ಭಾಗದಲ್ಲಿ ನೆರೆ ಸಂತ್ರಸ್ತರಿಗೆ ಸೂರಿಲ್ಲದೆ ಸಂಕಷ್ಟದ ಜೀವನ ಮಾಡುವಂತಾಗಿದೆ. ಅವರು ಈ ರಾಜ್ಯದ ಮತದಾರರು, ಅರ್ಹರಾಗಿಯೇ ಇದ್ದರೂ ಸಹ ಅವರಿಗೆ ರಾಜ್ಯ ಸರ್ಕಾರ ಅನ್ಯಾಯ ಮಾಡುತ್ತಿದೆ ಎಂಬ ಕೂಗು ಜಾಸ್ತಿಯಾಗುತ್ತಿದ್ದು, ಉತ್ತರದ ಕೂಗು ಕೇಳಿಸುತ್ತಿಲ್ಲವೇ ಎಂಬ ಅನುಮಾನ ಮೂಡಿದೆ.

ಕೇರಳದ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬರಲು ಹಾತೊರೆಯುತ್ತಿರುವ ಕಾಂಗ್ರೆಸ್ ರಾಜ್ಯದ, ಕನ್ನಡಿಗರ ಹಿತವನ್ನು ಬಲಿಕೊಡುತ್ತಿದೆ. ಹೈಕಮಾಂಡ್ ಸಂಸ್ಕೃತಿಯಿಂದ ರಾಜ್ಯದ ಏಳ್ಗೆಗೆ ಸಾಧ್ಯವಾಗುವುದಿಲ್ಲ. ಪ್ರವಾಹದಲ್ಲಿ ನೊಂದು ಬೆಂದು ಬದುಕು ಕಟ್ಟಿಕೊಳ್ಳಲು ಪರದಾಡುತ್ತಿರುವ ನೆರೆ ಸಂತ್ರಸ್ತರಿಗೆ ಇದುವರೆಗೂ ಶಾಶ್ವತ ಮನೆಗಳನ್ನು ನೀಡದ ರಾಜ್ಯ ಸರ್ಕಾರ ಕೋಗಿಲು ಸಂತ್ರಸ್ತರಿಗೆ ಮಾತ್ರ ಮಿಡಿಯುವುದು ಎಷ್ಟು ಸರಿ ಎಂದು ಇದೀಗ ಉತ್ತರ ಕರ್ನಾಟಕದ ನೆರೆ ಸಂತ್ರಸ್ತರು ಸಿದ್ದರಾಮಯ್ಯ ಸರ್ಕಾರವನ್ನು ಪ್ರಶ್ನಿಸುವಂತಾಗಿದೆ.

ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದಕ್ಕೆ ಸುಣ್ಣ..
ಸಂತ್ರಸ್ತರಲ್ಲಿ ಅರ್ಹರಾದವರಿಗೆ ಮಾನವೀಯ ನೆಲೆಯಲ್ಲಿ ಮನೆಗಳನ್ನು ನೀಡಲಾಗುತ್ತದೆ. ಹೊಸ ವರ್ಷಾರಂಭದಲ್ಲಿ ಮನೆಗಳ ಕೀ ಹಸ್ತಾಂತರಿಸಲಾಗುತ್ತದೆ ಎಂದು ಸರಕಾರ ತಿಳಿಸಿತ್ತು. ಆದರೆ, ದಾಖಲೆ ಪರಿಶೀಲನೆ ಮುಂದುವರಿದ ಕಾರಣ ಒಂದು ದಿನ ತಡವಾಗಿ ಅಂದರೆ ಜನವರಿ 2ರಂದು ಈ ಪ್ರಕ್ರಿಯೆ ಪ್ರಾರಂಭವಾಗುತ್ತದೆ ಎಂದು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಸ್ಪಷ್ಟ ಪಡಿಸಿದ್ದಾರೆ. ಆದರೆ ಇದಕ್ಕೂ ಮುನ್ನವೇ ಸ್ಥಳಕ್ಕೆ ಬಿಜೆಪಿ ಸತ್ಯ ಶೋಧನಾ ಸಮಿತಿ ಭೇಟಿ ನೀಡಿ ರಾಜ್ಯದಲ್ಲಿ ಕಾಂಗ್ರೆಸ್ ಮಿನಿ ಬಾಂಗ್ಲಾ ದೇಶ ನಿರ್ಮಾಣಕ್ಕೆ ಮುಂದಾಗಿದ ಎಂದು ವಾಗ್ದಾಳಿ ನಡೆಸಿದೆ.

ಆದರೆ ರಾಜ್ಯ ಸರ್ಕಾರ ಒಂದು ಕಣ್ಣಿಗೆ ಸುಣ್ಣ ಇನ್ನೊಂದಕ್ಕೆ ಬೆಣ್ಣೆ ಒರೆಸುವ ಕಾರ್ಯಕ್ಕೆ ಮುಂದಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ನಡೆಯನ್ನು ನೆರೆ ಸಂತ್ತಸ್ತರು ಸಿಡಿದಿದ್ದಿದ್ದಾರೆ. ಅವರಿಗೆ ಮನೆಗಳನ್ನು ನೀಡಿದರೆ ನಮಗೂ ಪುನರ್ವಸತಿ ಕಲ್ಪಿಸಬೇಕೆಂದು ಒತ್ತಾಯಿಸಿದ್ದಾರೆ. ಇನ್ನಾದರೂ ಎಚ್ಚೆತ್ತು ರಾಜ್ಯ ಸರ್ಕಾರ ನೆರೆ ಸಂತ್ರಸ್ತರಿಗೆ ಸೂರು ಒದಗಿಸುವ ಕೆಲಸವನ್ನು ಮಾಡುತ್ತಾ ಅನ್ನೋದನ್ನು ಕಾದು ನೋಡಬೇಕಿದೆ.






