ಮೂಲ : ದೇವದತ್ತ ಪಟ್ಟನಾಯಕ್ –
How the migratory patterns of the Brahmins, the weavers shaped Indian culture – ಇಕನಾಮಿಕ್ ಟೈಮ್ಸ್ , 2-5-2020
ಅನುವಾದ : ನಾ ದಿವಾಕರ
ನಾವು ವಲಸೆಯ ಬಗ್ಗೆ ಪ್ರಸ್ತಾಪಿಸುವಾಗೆಲ್ಲಾ, 3500 ವರ್ಷಗಳ ಹಿಂದಿನ ಆರ್ಯರ ವಲಸೆಯನ್ನು ಕುರಿತು ಮಾತನಾಡುತ್ತೇವೆ. ಬ್ರಿಟೀಷ್ ವಸಾಹತುಶಾಹಿಗಳು ತಮ್ಮದೇ ಆದ ರಾಜಕೀಯ ಕಾರಣಗಳಿಗಾಗಿ, ಇದನ್ನು ಆಕ್ರಮಣ ಎಂದೇ ಪ್ರತಿಪಾದಿಸಿದ್ದರು. ಆದರೆ ಭಾಷಾಶಾಸ್ತ್ರ, ಪುರಾತತ್ವ ಶಾಸ್ತ್ರ ಮತ್ತು ಅನುವಂಶಿಕತೆಯನ್ನು ಆಧರಿಸಿದ ವೈಜ್ಞಾನಿಕ ಅನ್ವೇಷಣೆ ಮತ್ತು ಪರಿಶೋಧನೆಗಳು, ಆರ್ಯರ ವಲಸೆ ಪ್ರಕ್ರಿಯೆಯು ಹಲವು ಶತಮಾನಗಳಲ್ಲಿ ಹರಡಿಕೊಂಡಿರುವುದನ್ನು ನಿರೂಪಿಸಿವೆ.
ಆದಾಗ್ಯೂ ಭಾರತೀಯ ಸಂಸ್ಕೃತಿ ಕೇವಲ ಆರ್ಯರ ಆಕ್ರಮಣದ ಪ್ರತಿಫಲ ಅಲ್ಲ. ಉಪಖಂಡದ ಒಳಗೆ ಅನೇಕ ವಲಸೆಗಳು ಸಂಭವಿಸಿವೆ ಆದರೆ ಇವುಗಳನ್ನು ಇತಿಹಾಸದ ಪಠ್ಯಗಳಲ್ಲಿ ಚರ್ಚೆಗೊಳಪಡಿಸಿಲ್ಲ. ಇವು ಸಾರ್ವಜನಿಕ ಸ್ಮರಣೆಯ ಒಂದು ಭಾಗವೂ ಆಗಿಲ್ಲ. ಭಾರತದ ಚಹರೆಯನ್ನೇ ಬದಲಿಸಿದ ಮೂರು ಪ್ರಮುಖ ವಲಸೆಗಳನ್ನು ಕುರಿತು ಚರ್ಚಿಸೋಣ.
ಭಾರತದ ವಿವಿಧ ಭಾಗಗಳಲ್ಲಿ ಕ್ರಿ ಶ 500 ರಿಂದ 1000ದ ನಡುವೆ ಬಹುಮುಖ್ಯವಾದ ವಲಸೆಗಳು ಸಂಭವಿಸಿದ್ದವು. ಇವೆಲ್ಲವೂ ಬ್ರಾಹ್ಮಣರ ವಲಸೆಗಳು. ಬ್ರಾಹ್ಮಣರು ವಿಶೇಷ ಕೌಶಲಗಳೊಡನೆ ಬಂದಿದ್ದರು. ತಮ್ಮ ಆಶ್ರಯದಾತರ ಭೌತಿಕ ಯೋಗಕ್ಷೇಮಕ್ಕಾಗಿ ಯಜ್ಞ ಯಾಗಾದಿಗಳನ್ನು ನಡೆಸುತ್ತಿದ್ದ ವೈದಿಕ ಬ್ರಾಹ್ಮಣರಿಗಿಂತಲೂ ಭಿನ್ನವಾಗಿ, ನವ ಬ್ರಾಹ್ಮಣರು ಗ್ರಾಮಗಳನ್ನು ಸ್ಥಾಪಿಸುವುದರಲ್ಲಿ ತೊಡಗಿದ್ದರು. ಗ್ರಾಮಗಳು ವ್ಯವಸಾಯಕ್ಕೊಳಗಾದ ಭೂಮಿಯ ವಿಸ್ತಾರವನ್ನೂ ಹೆಚ್ಚಿಸಿದ್ದವು. ಆದ್ದರಿಂದಲೇ ಅರಸರ ಆಗಮನವಾಗಿತ್ತು. ಹಾಗಾಗಿ ಭಾರತದ ವಿವಿಧ ಪ್ರಾಂತ್ಯಗಳಲ್ಲಿ ಅರಸರು ಅಥವಾ ಮಹತ್ವಾಕಾಂಕ್ಷಿ ದಂಡನಾಯಕರು ತಮ್ಮ ಸಂಸ್ಥಾನಗಳಿಗೆ ಬ್ರಾಹ್ಮಣರನ್ನು ಆಹ್ವಾನಿಸಿ, ದೇವಾಲಯಗಳನ್ನು ಸ್ಥಾಪಿಸಲು ಪ್ರೋತ್ಸಾಹಿಸಿದ್ದರು. ತನ್ಮೂಲಕ ಗ್ರಾಮೀಣ ದೈವಗಳನ್ನು ಮುಖ್ಯವಾಹಿನಿಯ ಪೌರಾಣಿಕ ದೈವಗಳನ್ನಾಗಿ ಪರಿವರ್ತಿಸಿದ್ದರು. ದೇವಾಲಯದ ದೈವಕ್ಕೇ ಗ್ರಾಮದ ನೈಜ ಒಡೆತನವನ್ನು ನೀಡಲಾಯಿತು. ಅರಸ ಕೇವಲ ರಾಯಭಾರಿಯಾಗಿದ್ದರೆ, ಪುರೋಹಿತರು ಅರಸರಿಗೆ ಮತ್ತು ದೇವರಿಗೆ ತಮ್ಮ ಸೇವೆ ಸಲ್ಲಿಸುತ್ತಿದ್ದರು. ಕ್ರಮೇಣ ದೇವಾಲಯವೇ ತೆರಿಗೆ ಸಂಗ್ರಹ ಕೇಂದ್ರವಾಯಿತು. ಅಷ್ಟೇ ಅಲ್ಲದೆ ಸಂಸ್ಕೃತಿಯ ಕೇಂದ್ರವೂ ಆಯಿತು. ಕಲೆ, ಸಂಗೀತ ಮತ್ತು ಸಾಹಿತ್ಯ ಬೆಳವಣಿಗೆಯಾಯಿತು. ಹಾಗಾಗಿ ಬ್ರಾಹ್ಮಣರು ಅರಸರಿಗೆ ರಾಜಪಟ್ಟವನ್ನು ನೆರವಾಗಿದ್ದೇ ಅಲ್ಲದೆ ಇದರಿಂದ ರಾಜರಿಗೆ ಭೂಮಿಯ ಮೇಲೆ ತಮ್ಮ ಆಧಿಪತ್ಯ ಸಾಧಿಸಲೂ ನೆರವಾದರು. ಇದನ್ನು ವಾಮನ ಅವತಾರದ ಪುರಾಣ ಕಥನದಲ್ಲಿ ಹೇಳಲಾಗಿದೆ. ವಾಮನನಿಗೆ ಅಸುರ ದೊರೆ ಬಲಿ ತುಂಡು ಭೂಮಿಯನ್ನು ಪರಭಾರೆ ಮಾಡುತ್ತಾನೆ. ಬ್ರಾಹ್ಮಣರು ಪಡೆದ ಭೂಮಿಯನ್ನು ಬ್ರಹ್ಮದೇಯ ಎಂದು ಕರೆಯಲಾಗುತ್ತದೆ. ಬ್ರಾಹ್ಮಣರು ನೆಲೆಸುವ ಭೂಮಿಯನ್ನು ಅಗ್ರಹಾರಗಳೆಂದು ಕರೆಯಲಾಗುತ್ತದೆ. ಭಾರತದಲ್ಲಿ ದೇಶದುದ್ದಕ್ಕೂ, ರಾಜರು ಹೇಗೆ ಈ ಭೂಮಿ ಪರಭಾರೆ ಮಾಡುತ್ತಿದ್ದರು ಎನ್ನುವುದನ್ನು ದಾಖಲಿಸುವ ತಾಮ್ರದ ಫಲಕಗಳನ್ನು ಕಾಣಬಹುದು.

ಬ್ರಾಹ್ಮಣರ ವಲಸೆಗಳಲ್ಲಿ ಅತಿ ಹೆಚ್ಚು ಜನಜನಿತವಾಗಿರುವ ವಲಸೆ ಸಂಭವಿಸಿದ್ದು, ಸೇನಾ ಅರಸರು ಗಂಗಾ ತೀರದ ಬ್ರಾಹ್ಮಣರನ್ನು ಬಂಗಾಲಕ್ಕೆ ಬರುವಂತೆ ಆಹ್ವಾನಿಸಿದಾಗ. ಮತ್ತೊಂದು ವಲಸೆ ಎಂದರೆ, ಕೊಂಕಣ ಮತ್ತು ಗೋವಾದ ರಾಜರು ಕಾಶ್ಮೀರದ ಗೌಡ ಸಾರಸ್‌ವತ ಬ್ರಾಹ್ಮಣರನ್ನು ಆಹ್ವಾನಿಸಿದಾಗ. ಈ ಬ್ರಾಹ್ಮಣರು ಕಾಶ್ಮೀರದಿಂದ ಪಯಣಿಸಿ, ಸರಸ್ವತಿ ನದಿಯ ದಂಡೆಯ ಮೂಲಕವೇ, ಬಂಗಾಲವನ್ನು ಹಾದು, ಕೊಂಕಣದ ಕರಾವಳಿಗೆ ಬಂದು ತಲುಪುತ್ತಾರೆ. ಮತ್ತೊಂದು ವಲಸೆಯು ಸಂಭವಿಸಿದ್ದು, ಮಹಾರಾಷ್ಟ್ರದಿಂದ ಮಧುರೈ ಮತ್ತು ತಂಜಾವೂರಿಗೆ ಬ್ರಾಹ್ಮಣರನ್ನು ಆಹ್ವಾನಿಸಿದಾಗ. ಈ ರೀತಿಯಲ್ಲೇ ಇದೇ ಅವಧಿಯಲ್ಲಿ ಸಂಸ್ಕೃತ ಪಟ್ಟಣಗಳು ದೇಶದೆಲ್ಲೆಡೆ ವ್ಯಾಪಿಸಿದ್ದವು.
ಮತ್ತೊಂದು ವಲಸೆ ಎಂದರೆ ನೇಕಾರರ ವಲಸೆ. ಈ ವಲಸೆಗಳು ಕ್ರಿಶ 1500 ರಿಂದ 1800ರ ಅವಧಿಯಲ್ಲಿ ಸಂಭವಿಸಿದ್ದವು. ಡೆಕ್ಕನ್ ಪ್ರಸ್ಥಭೂಮಿಯು ಕೃಷಿ ಆರ್ಥಿಕತೆಯ ನಿಯಂತ್ರಣದಲ್ಲಿತ್ತು. ಭಾರತದ ಕರಾವಳಿ ಪ್ರದೇಶಗಳು ನೇಕಾರ ಸಮುದಾಯಗಳಿಗಾಗಿಯೇ ಜನಪ್ರಿಯವಾಗಿದ್ದವು. ವಸ್ತ್ರವನ್ನು ಜಗತ್ತಿನ ವಿವಿಧ ದೇಶಗಳಿಗೆ ರಫ್ತು ಮಾಡಲಾಗುತ್ತಿತ್ತು. ತತ್ಪರಿಣಾಮ ಭಾರತ ಜವಳಿ ಕೇಂದ್ರವಾಯಿತು.
ಕಥೆ ಹೀಗೆ ಸಾಗುತ್ತದೆ. ಮಾರ್ಕಂಡೇಯ ದೇವರುಗಳಿಗೆ ವಸ್ತ್ರವನ್ನು ನೀಡಲು ಅಪೇಕ್ಷಿಸುತ್ತಾನೆ. ಹಾಗಾಗಿ ಒಂದು ಅಗ್ನಿಕುಂಡದಿಂದ ಭವನ ಋಷಿ ಎಂಬ ಪ್ರಾಜ್ಞನನ್ನು ಸೃಷ್ಟಿಸುತ್ತಾನೆ. ಭವನ ಋಷಿಯ ಬಳಿ, ತಾನು ವಿಷ್ಣುವಿನ ಹೊಕ್ಕಳಿನಿಂದ ಪಡೆದಂತಹ ದಾರದ ಉಂಡೆ ಇರುತ್ತದೆ. ಈ ದಾರವನ್ನೇ ಬಳಸಿ ನೇಯ್ಗೆ ಮಾಡಿ, ನವಿರಾದ ವಸ್ತ್ರವನ್ನು ತಯಾರಿಸಿ, ದೇವರುಗಳಿಗೆ ಹಂಚುತ್ತಾನೆ. ಭವನ ಋಷಿಯಿಂದಲೇ ಪದ್ಮಶಾಲಿ ಮತ್ತು ಇತರ ನೇಕಾರ ಸಮುದಾಯಗಳೂ ಜನ್ಮ ತಾಳುತ್ತವೆ. ನೇಕಾರರು ಸೌರಾಷ್ಟ್ರದಿಂದ ಮಧ್ಯ ಪ್ರದೇಶಕ್ಕೆ ವಲಸೆ ಹೋಗಿ, ವಿಜಯನಗರ ಸಾಮ್ರಾಜ್ಯದ ವಿವಿಧ ಸಂಸ್ಥಾನಗಳಲ್ಲಿ ನೆಲೆಸುತ್ತಾರೆ. ದೇವಾಲಯಗಳ ನಡುವೆ ನೇಕಾರರು ಹೆಚ್ಚು ಜನಪ್ರಿಯರಾಗಿರುತ್ತಾರೆ, ಏಕೆಂದರೆ ವಸ್ತ್ರವನ್ನು ದೇವಾಲಯದ ಪೂಜಾ ವಿಧಿವಿಧಾನಗಳಿಗೆ ಬಳಸುತ್ತಿರುತ್ತಾರೆ. ದೇವಾಯಗಳ ಸುತ್ತ ಮುತ್ತ ವಾಸಿಸುವ ಸಮುದಾಯಗಳೂ ಸಹ ಈ ವಸ್ತ್ರವನ್ನು ಬಳಸುತ್ತಿರುತ್ತಾರೆ. ಅವರನ್ನು ಬಂದರು ನಗರಗಳಿಗೆ ಆಹ್ವಾನಿಸಲಾಗುತ್ತದೆ. ಅಲ್ಲಿಂದ ವ್ಯಾಪಾರಿಗಳು ತಮ್ಮ ಸರಕುಗಳನ್ನು ವಿಶ್ವದ ಇತರ ಭಾಗಗಳಿಗೆ ಮಾರಾಟ ಮಾಡುತ್ತಾರೆ. ಎಲ್ಲಿ ಉತ್ತಮ ರೀತಿಯ ಉತ್ತೇಜನ ದೊರೆಯುವುದೋ, ಹೆಚ್ಚಿನ ತೆರಿಗೆ ವಿನಾಯಿತಿ ದೊರೆಯುವುದೋ ಆ ಪ್ರದೇಶಗಳಿಗೆ ಹೋಗುತ್ತಿರುತ್ತಾರೆ. ಈ ಕಾಲಘಟ್ಟದಲ್ಲಿ ಹಲವು ರೀತಿಯ ಏಳು ಬೀಳುಗಳು ಸಂಭವಿಸುತ್ತವೆ. ಇದರ ನಡುವೆಯೇ ಭಾರತ ಕೇವಲ ಹತ್ತಿ ವಸ್ತ್ರಗಳಿಗೆ ಮಾತ್ರವೇ ಅಲ್ಲದೆ ರೇಷ್ಮೆ ವಸ್ತ್ರಗಳಿಗೂ ಪ್ರಸಿದ್ಧಿಯಾಗುತ್ತದೆ. ಕಸೂತಿ ವಸ್ತ್ರಗಳ ಬಳಕೆಗೂ ಪ್ರಸಿದ್ಧಿಯಾಗುತ್ತದೆ.

ಮೂರನೆಯ ವಲಸೆ ಎಂದರೆ ಸೇನಾನಿ ಬೈರಾಗಿಗಳು. ಸಾಮಾನ್ಯವಾಗಿ ನಾವು ನಾಗಾ ಬಾಬಾಗಳನ್ನು ಕುಂಭಮೇಳದ ಆಧ್ಯಾತ್ಮಿಕ ಜನರು ಎಂದು ಭಾವಿಸುತ್ತೇವೆ. ಆದರೆ ಕ್ರಿಶ 16 ನೆಯ ಶತಮಾನದಿಂದ 19ನೆಯ ಶತಮಾನದವರೆಗಿನ ಅವಧಿಯಲ್ಲಿ , ಬ್ರಿಟೀಷರು ಇವರನ್ನು ನಿಸ್ಸೈನೀಕರಣಗೊಳಿಸುವವರೆಗೂ, ಇವರು ಪ್ರಬಲ ಮಜೂರಿಗೆ ದೊರೆಯುವ ಸೇನಾನಿಗಳಾಗಿದ್ದರು. ಅಖಾಡಾಗಳು ಕುಟುಂಬಗಳಿಂದ ಹೊರತಾದ, ಕುಲ ಸಂಬಂಧಗಳಿಲ್ಲದ ಪುರುಷರಿಗೆ ತರಬೇತಿ ಕೇಂದ್ರಗಳಾಗಿದ್ದವು. ಇವರು ಅಲೆಮಾರಿ ಗುಂಪುಗಳಾಗಿದ್ದರು. ಇವರು ಶಿವನ ಯುದ್ಧ ಸ್ವರೂಪಿಯಾದ ಭೈರವ ಮತ್ತು ಹನುಮಾನ್‌ನನ್ನೂ ಸಹ ಆರಾಧಿಸುತ್ತಿದ್ದರು. ಅನೇಕರ ಅಭಿಪ್ರಾಯದಲ್ಲಿ ವಾನರ ಸೇನೆಯೂ ರಾಮನಿಗೆ ಸೇವೆ ಸಲ್ಲಿಸಿದ ಪ್ರಥಮ ರಣ-ಬೈರಾಗಿಗಳ ಸೇನೆಯಾಗಿತ್ತು. ಜನಪ್ರಿಯ ಐತಿಹ್ಯಗಳಲ್ಲಿ ಇವರು ಇಸ್ಲಾಂ ಆಕ್ರಮಣಕಾರಿಂದ ಹಿಂದೂ ಧರ್ಮವನ್ನು ರಕ್ಷಿಸುವವರಾಗಿ ಕಾಣುತ್ತಾರೆ. ಆದರ ವಾಸ್ತವವಾಗಿ ಇವರು ಮುಜೂರಿಯ ಮೇಲೆ ಲಭ್ಯವಾಗುತ್ತಿದ್ದರು, ಹಿಂದೂ ಹಾಗೂ ಮುಸ್ಲಿಂ ದೊರೆಗಳೂ ಇವರನ್ನು ತೆರಿಗೆ ಸಂಗ್ರಹಿಸುವ ಸಲುವಾಗಿ, ತಮ್ಮ ಭೂಮಿಯ ಅತಿಕ್ರಮಣಕಾರರನ್ನು ತಡೆಗಟ್ಟುವ ಸಲುವಾಗಿ ಬಳಸಿಕೊಳ್ಳುತ್ತಿದ್ದರು. ಅಖಾಡಾಗಳು ಸಂಗ್ರಹಿಸುವ ಸಂಪತ್ತನ್ನು ಬ್ಯಾಂಕಿಂಗ್ ವ್ಯವಹಾರಗಳಿಗೆ, ವಾಣಿಜ್ಯ ಉದ್ದೇಶಗಳಿಗೂ ಬಳಸಿಕೊಳ್ಳಲಾಗುತ್ತಿತ್ತು. ಇಂದಿಗೂ ಸಹ ಭಾರತದಲ್ಲಿರುವ ಅಖಾಡಾಗಳನ್ನು ನೆರೆಹೊರೆಯ ಪ್ರದೇಶಗಳಲ್ಲಿ ಮೂಲ-ಬ್ಯಾಂಕಿಂಗ್ ಸಂಸ್ಥೆಗಳೆಂದೇ ಪರಿಗಣಿಸಲಾಗುತ್ತದೆ.
ಹಾಗಾಗಿ, ನಾವು ಬ್ರಾಹ್ಮಣರ, ನೇಕಾರರ ಮತ್ತು ಸೇನಾನಿ ಬೈರಾಗಿಗಳ ವಲಸೆಗಳನ್ನು ಭಾರತೀಯ ಇತಿಹಾಸದ ವಿವಿಧ ಕಾಲಘಟ್ಟಗಳಲ್ಲಿ ಗುರುತಿಸಬಹುದು. ಈ ವಲಸೆಗಳೇ ಭಾರತೀಯ ಸಂಸ್ಕೃತಿಯನ್ನೂ ರೂಪಿಸಿವೆ. ಈ ಕುರಿತು ನಾವು ಹೆಚ್ಚಿನ ಚರ್ಚೆಗಳನ್ನು ನಡೆಸುವುದಿಲ್ಲವಾದರೂ, ಚಿನ್ಮಯ್ ತುಂಬೆ, ವಿಜಯಾ ರಾಮಸ್ವಾಮಿ ಮತ್ತು ವಿಲಿಯಂ ಪಿಂಚ್ ಮೊದಲಾದ ವಿದ್ವಾಂಸರು ಈ ಕುರಿತು ಬರೆಯುತ್ತಿದ್ದಾರೆ.
ಅಡಿ ಟಿಪ್ಪಣಿ : ಶಿವಮೊಗ್ಗೆಯ ಬಳಿಯ ತಾಳಗುಂದ ಶಾಸನದಲ್ಲಿ ಮಯೂರ ಶರ್ಮ ,ಮಯೂರ ವರ್ಮಾ ಆದ ಘಟನೆಯನ್ನು ತಿಳಿಸುತ್ತದೆ. ಬ್ರಾಹ್ಮಣ ನೊಬ್ಬ ಕ್ಷತ್ರಿಯನಾಗಿ ರಾಜವಂಶವೊಂದನ್ನು ಶುರುಮಾಡಿದ್ದು ಚಾರಿತ್ರಿಕ ಘಟನೆ. ಆದರೆ ಮಯೂರವರ್ಮನಿಗೆ ಅಂದಿನ ಬ್ರಾಹ್ಮಣರು ಸರ್ವ್ತೋಭದ್ರ ಯಾಗ ಮಾಡಲು ನಿರಾಕರಿಸಿದರು. ಮಯೂರವರ್ಮ ಹೆದರಲಿಲ್ಲ. ಬಂಗಾಳದ ನವದ್ವೀಪದಿಂದ ೬೪ ಬ್ರಾಹ್ಮಣ ಕುಟುಂಬಗಳನ್ನು ಕರೆಸಿ ಯಾಗ ಮುಗಿಸಿದ. ಈ ಬ್ರಾಹ್ಮಣರು ಕರ್ನಾಟಕ ದಲ್ಲೇ ನೆಲೆಗೊಂಡರು .ಇವರೇ ಹವ್ಯಕ ಬ್ರಾಹ್ಮಣರು . ಹವಿಸ್ಸನ್ನು ಪಡೆದ ವರು . ಇಂದಿಗೂ ಸಹ ಇವರ ಸಂಪ್ರದಾಯಗಳಿಗೂ ಬಂಗಾಳದ ಬ್ರಾಹ್ಮಣ ರ ಸಂಪ್ರದಾಯಗಳಿಗೂ ಸಾಮ್ಯತೆಗಳನ್ನು ನೋಡಬಹುದು. ಇದರ ಬಗ್ಗೆ ಸಂಶೋಧನಾ ಲೇಖನಗಳು ಪ್ರಕಟವಾಗಿವೆ. ಸರ್ವತೋಭದ್ರ ಯಾಗ ಮಾಡಲು ಸ್ಥಳೀಯ ಬ್ರಾಹ್ಮಣರು ನಿರಾಕರಿಸಿದಾಗ ಹೊರಗಿನಿಂದ ಕರೆಸಿಕೊಂಡ ಮಧ್ವ ಬ್ರಾಹ್ಮಣರಲ್ಲಿ ಅರವತ್ತು ವೋಕ್ಕಲು ಎಂಬ ಪಂಗಡವಿದೆ. ಇದು ಅರವತ್ತನಾಲ್ಕು ವೋಕ್ಕಲು . ಕೊಂಕಣಿ ಬ್ರಾಹ್ಮಣರು ವಿಂಧ್ಯ ದಾಟಿ ಬಂದಿದ್ದಾರೆ . ಚರಿತ್ರೆ ಯಲ್ಲಿ ಇವರು ಎರಡು ಬಾರಿ ಎತ್ತಂಗಡಿಯಾಗಿ ವಲಸೆಹೋಗಿದ್ದರೆ .. ಮೊದಲು ಕಾಶ್ಮೀರದಿಂದ, ಎರಡನೆಯಬಾರಿ ಪೋರ್ಚುಗೀಸರಿಂದ ಗೋವೆಯ ಹೊರಗೆ .. ಮುಳುಕನಾಡು, ಸೀರ್ಯ ನಾಡು, ಆರವೇಲು , ಕಾ ಸಲನಾಡು , ಮೂಗೂರು ಕರ್ನಾಟಕ, ಸೋಸಲೆ ಕರ್ನಾಟಕ ಮುಂತಾದ ಹೆಸರಿನ ಪಂಗಡಗಳು ವಲಸೆಹೋದ ಬ್ರಾಹ್ಮಣ ಪಂಗಡಗಳ ಹೆಸರುಗಳನ್ನೂ ತಿಳಿಸುತ್ತವೆ. ವಿಪ್ರುಲ ಗೋತ್ರ ವಿವರಾಲು ಎಂಬ ತೆಲುಗು ಪುಸ್ತಕವಿದೆ . ಬ್ರಾಹ್ಮಣರ ವಲಸೆಯನ್ನು ಪಟ್ಟಿಮಾಡಿ ನೀಡಿದೆ. – ಅನುವಾದಕ – ವಿವಿಧ ಮೂಲಗಳ ಸಂಗ್ರಹ









