• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 16, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಮಿಲೆನಿಯಂ ಮಕ್ಕಳು ಅಂಬೇಡ್ಕರರನ್ನು ಹೇಗೆ ನೋಡಬೇಕು ?̈

ಕೃಷ್ಣ ಮಣಿ by ಕೃಷ್ಣ ಮಣಿ
April 21, 2025
in ಕರ್ನಾಟಕ, ರಾಜಕೀಯ
0
ಮಿಲೆನಿಯಂ ಮಕ್ಕಳು ಅಂಬೇಡ್ಕರರನ್ನು ಹೇಗೆ ನೋಡಬೇಕು ?̈
Share on WhatsAppShare on FacebookShare on Telegram

( ದಿನಾಂಕ 17 ಏಪ್ರಿಲ್‌ 2025 ರಂದು ಮಂಡ್ಯದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ನಡೆದ ಡಾ. ಬಿ.ಆರ್.‌ ಅಂಬೇಡ್ಕರ್‌ ಜಯಂತಿಯಲ್ಲಿ ಮಾಡಿದ ಭಾಷಣದ ಲೇಖನರೂಪ )

ADVERTISEMENT

ನಾ ದಿವಾಕರ

ಭಾರತದ ರಾಜಕೀಯ ಮತ್ತು ಸಾಮಾಜಿಕ ವಲಯಗಳ ಚರ್ಚೆಗಳಲ್ಲಿ ಡಾ. ಬಿ. ಆರ್.‌ ಅಂಬೇಡ್ಕರ್‌ ಅವರನ್ನು ನಾನಾ ರೀತಿಯಲ್ಲಿ ಬಣ್ಣಿಸಲಾಗುತ್ತಿರುವುದನ್ನು ನೀವೆಲ್ಲಾ ನೋಡುತ್ತಲೇ ಇದ್ದೀರಿ. ಮೂರು ದಿನಗಳ ಹಿಂದೆ ನಡೆದ ಅವರ 135ನೇ ಜನ್ಮದಿನದ ಸಂದರ್ಭದಲ್ಲಿ ಅವರನ್ನು ಕುರಿತ ಭಾಷಣ, ಉಪನ್ಯಾಸಗಳಲ್ಲಿ ವಿವಿಧ ವಲಯಗಳ ಚಿಂತಕರು ಬಾಬಾ ಸಾಹೇಬ್‌ ಅವರನ್ನು ತಮ್ಮದೇ ಸೈದ್ಧಾಂತಿಕ, ತಾತ್ವಿಕ ದೃಷ್ಟಿಕೋನಗಳಿಂದ ನೋಡಿ ವ್ಯಾಖ್ಯಾನ ಮಾಡಿರುವುದನ್ನೂ ನೀವು ಕೇಳಿರುತ್ತೀರಿ, ಓದಿರುತ್ತೀರಿ  ಅಥವಾ ಟಿವಿಗಳಲ್ಲಿ ನೋಡಿರುತ್ತೀರಿ. ಸಂವಿಧಾನ ಶಿಲ್ಪಿ, ನವ ಭಾರತ ನಿರ್ಮಾತೃ, ಸಮಾಜ ಸುಧಾರಕ, ಕ್ರಾಂತಿಕಾರಿ ನಾಯಕ, ಬೌದ್ಧ ಧಮ್ಮದ ಪರಿಚಾರಕ  ಹೀಗೆ ಹಲವು ಆಯಾಮಗಳಲ್ಲಿ ನಾವು ಅಂಬೇಡ್ಕರರನ್ನು ನೋಡುತ್ತೇವೆ. ಇವೆಲ್ಲಕ್ಕಿಂತಲೂ ವೈಯುಕ್ತಿಕವಾಗಿ ಹಾಗೂ ಒಬ್ಬ ಮಾರ್ಕ್ಸ್‌ವಾದಿ ಚಿಂತಕನಾಗಿ ನನಗೆ ಅಂಬೇಡ್ಕರ್‌ ಸ್ವಾತಂತ್ರ್ಯಪೂರ್ವ ಭಾರತದ ಪ್ರಪ್ರಥಮ ಸ್ತ್ರೀವಾದಿಯಾಗಿ ಕಾಣುತ್ತಾರೆ. ಇದರ ಬಗ್ಗೆ ಈಗಾಗಲೇ ಸುಶೀಲಾ ಮೇಡಂ ನಿಮಗೆ ಸವಿಸ್ತಾರವಾಗಿ ಹೇಳಿದ್ದಾರೆ.

D. K. Shivakumar : ಕರಾವಳಿ ಬರೀ ಹಿಂದುತ್ವನೇ ಅಲ್ಲ.. ಎಲ್ಲಾ ಧರ್ಮದವರು ಇಲ್ವಾ ಎಂದ ಡಿಕೆಶಿ #pratidhvani

ಇಲ್ಲಿ ನೆರೆದಿರುವ ನಿಮ್ಮನ್ನು ಮಿಲೆನಿಯಂ ಮಕ್ಕಳು ಅಥವಾ ನವ ಶತಮಾನದ ಮಕ್ಕಳು ಎಂದೇ ಗುರುತಿಸುವುದು ಸ್ವಾಭಾವಿಕ. ನಿಮ್ಮ ಓರಿಗೆಯ ಮಕ್ಕಳು ಹುಟ್ಟಿ, ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸುವ ಹೊತ್ತಿಗೆ, ವಿಶಾಲ ಪ್ರಪಂಚದ ಆಗುಹೋಗುಗಳಿಗೆ,  ಸ್ವತಂತ್ರ ಭಾರತ ಹಲವು ಕವಲುಗಳಲ್ಲಿ ಹಾದು ಬಂದು ಒಂದು ನಿರ್ಣಾಯಕ ಘಟ್ಟದಲ್ಲಿ ನಿಂತಿತ್ತು. ಅಂದರೆ ಈ ಶತಮಾನದ ಎರಡನೇ ದಶಕವನ್ನು ಪರಿಗಣಿಸಿ ಹೇಳುತ್ತಿದ್ದೇನೆ. ನೀವು ಕಾಣುತ್ತಿರುವ ಭಾರತವನ್ನು ನವ ಭಾರತ ಎಂದು ಕರೆಯಲಾಗುತ್ತದೆ , ಮುಂದೆ ವಿಕಸಿತ ಭಾರತ ಎಂದೂ ಕರೆಯಲಾಗುತ್ತದೆ. ಅಂದರೆ ನಾವು ವಿಕಾಸದ ಹಾದಿಯಲ್ಲಿ ಸಾಗುತ್ತಿದ್ದೇವೆ. ಬೌದ್ಧಿಕವಾಗಿ, ಸಾಂಸ್ಕೃತಿಕವಾಗಿ, ಸಾಮಾಜಿಕವಾಗಿ ಹಾಗೂ ನಾಗರಿಕರಾಗಿ ನಾವು ವಿಕಸಿತ ಆಗುವತ್ತ ಸಾಗುತ್ತಿದ್ದೇವೆ ಎಂದೂ ಪರಿಭಾವಿಸಬಹುದು ಅಲ್ಲವೇ ? ಈ ಡಿಜಿಟಲ್‌ ಯುಗವನ್ನು ಸತ್ಯೋತ್ತರ ಯುಗ ಎಂದೂ ಕರೆಯಲಾಗುತ್ತದೆ. ಅಂದರೆ ಇದಕ್ಕೂ ಮುಂಚಿನ ಕಾಲಘಟ್ಟ ಸಂಪೂರ್ಣ ಸತ್ಯವಂತ ಯುಗವಾಗಿತ್ತು ಎಂದರ್ಥವಲ್ಲ. ಈಗಿನ ಯುಗದಲ್ಲಿ ಚರಿತ್ರೆಯನ್ನು ಮಿಥ್ಯೆ ಮಾಡುವ, ಪೌರಾಣಿಕ ಮಿಥ್ಯೆಗಳನ್ನು ಚರಿತ್ರೆಯನ್ನಾಗಿ ಮಾಡುವ ಬೌದ್ಧಿಕ ಪ್ರಕ್ರಿಯೆ ಚುರುಕಾಗಿದೆ. ಹಾಗಾಗಿ ಇಂದು ಸುಳ್ಳುಗಳು ವಿಜೃಂಭಿಸುತ್ತಿವೆ.

ಈ ಸುಳ್ಳುಗಳನ್ನು ಸತ್ಯ ಎಂದು ಬಿಂಬಿಸುವ ಸಲುವಾಗಿಯೇ ವಿಶ್ವದ ಮೊಟ್ಟಮೊದಲ ಅನಧಿಕೃತ ವಿಶ್ವವಿದ್ಯಾಲಯಕ್ಕೂ ನವ ಭಾರತ ಸಾಕ್ಷಿಯಾಗಿದೆ. ಇದನ್ನು ಸಾಮಾನ್ಯ ಪರಿಭಾಷೆಯಲ್ಲಿ ʼ ವಾಟ್ಸಾಪ್‌ ವಿಶ್ವವಿದ್ಯಾಲಯ ʼಎಂದೂ ಕರೆಯಲಾಗುತ್ತದೆ. ಇಲ್ಲಿ ಉತ್ಪಾದನೆಯಾಗುವ ಅಭಿಪ್ರಾಯಗಳು, ನಿರೂಪಣೆಗಳು, ಬೌದ್ಧಿಕ ಚಿಂತನೆಗಳು ಹೆಚ್ಚಿನ ಪ್ರಮಾಣದಲ್ಲಿ ಚಾರಿತ್ರಿಕ ಸತ್ಯಗಳನ್ನು ಸುಳ್ಳಾಗಿಸುವ ಅಥವಾ ಪೌರಾಣಿಕ ಮಿಥ್ಯೆಗಳನ್ನು ನೈಜಚರಿತೆ ಎಂದು ನಿರೂಪಿಸುವ ನಿಟ್ಟಿನಲ್ಲಿ ಸಾಗುತ್ತವೆ. ಈ ಪ್ರಕ್ರಿಯೆಗೆ ಡಾ. ಬಿ.ಆರ್.‌ ಅಂಬೇಡ್ಕರ್‌ ಅವರೂ ಬಲಿಯಾಗಿದ್ದಾರೆ. ಅವರು ಹೇಳದೆ ಇರುವ ಅಭಿಪ್ರಾಯಗಳು ಇಲ್ಲಿ ಪುಂಖಾನುಪುಂಖವಾಗಿ ಹರಿದಾಡುತ್ತವೆ. ಕೋಟ್ಯಂತರ  ಸಂಖ್ಯೆಯ ಯುವ ಸಮೂಹಕ್ಕೆ ಕ್ಷಣ ಮಾತ್ರದಲ್ಲಿ ತಲುಪಿ, ನಂಬುವಂತೆ ಮಾಡುತ್ತದೆ. ಆದರೆ ಇದರಿಂದಾಚೆಗೆ ನಾವು, ನೀವು ಅಂಬೇಡ್ಕರ್‌ ಅವರನ್ನು ಅರ್ಥಮಾಡಿಕೊಳ್ಳಬೇಕಿದೆ.

ಕಣ್ಣೋಟ-ಮುನ್ನೋಟದ ಮೂಲಕ ಅಂಬೇಡ್ಕರ್‌

ಮಿಲೆನಿಯಂ ಮಕ್ಕಳು ಅಂಬೇಡ್ಕರ್‌ ಅವರನ್ನು ಹೇಗೆ ನೋಡಬೇಕು ? ವಿವಿಧ ಮೂಲಗಳಿಂದ ನೀವು ಪಡೆದಿರುವಂತಹ ಮಾಹಿತಿಗಳೇ ನಿಮಗೆ ಆಧಾರವಾಗಿರಲು ಸಾಧ್ಯ. ನಿಮ್ಮ ಪಠ್ಯಕ್ರಮಗಳಲ್ಲಿರುವ ಅಧ್ಯಾಯಗಳೂ ಅವರನ್ನು ಪರಿಚಯಿಸುತ್ತವೆ. ಆದರೆ ಅದು “ ಅಂಬೇಡ್ಕರ್‌  ಬಗ್ಗೆ ” ತಿಳಿದುಕೊಳ್ಳಲು ನೆರವಾಗುವ ಆಕರಗಳಷ್ಟೇ. ಅಂಬೇಡ್ಕರರನ್ನು ಅರ್ಥಮಾಡಿಕೊಳ್ಳುವುದು ಎಂದರೇನು ? ಅಂದರೆ ಅವರ ಬದುಕು, ಬರಹ, ತತ್ವ ಸಿದ್ಧಾಂತ, ವ್ಯಕ್ತಿತ್ವ, ರಾಜಕೀಯ ಒಳನೋಟ, ಸಾಂಸ್ಕೃತಿಕ ಚಿಂತನೆ ಮತ್ತು ಸಾಮಾಜಿಕ ದಾರ್ಶನಿಕತೆಯನ್ನು ಅರ್ಥಮಾಡಿಕೊಳ್ಳುವುದು ಇವತ್ತಿನ ತುರ್ತು. ಈ ನಿಟ್ಟಿನಲ್ಲಿ, ಪದವಿ-ಪದವಿ ಪೂರ್ವ ವಿದ್ಯಾಭ್ಯಾಸದಲ್ಲಿರುವ ನಿಮಗೆ ಭವಿಷ್ಯದ ಓದು, ಅಧ್ಯಯನ ಬಹಳ ಮುಖ್ಯ. ಇದನ್ನು ರೂಢಿಸಿಕೊಳ್ಳುವ ವಾತಾವರಣ ಶಿಕ್ಷಣ ವ್ಯವಸ್ಥೆಯಲ್ಲಿರುವುದು ಕಡಿಮೆಯಾದರೂ ಹೊರಜಗತ್ತಿನಲ್ಲಿ ವಿಪುಲವಾದ ಸಾಹಿತ್ಯ ಲಭ್ಯವಾಗುತ್ತದೆ. ಅದನ್ನು ಬಳಸಿಕೊಳ್ಳಲು  ಇಂತಹ ಸಣ್ಣ ಉಪನ್ಯಾಸ, ಪರಿಚಯಾತ್ಮಕ ಕಾರ್ಯಕ್ರಮಗಳು ನೆರವಾಗುತ್ತವೆ.

ಅಂಬೇಡ್ಕರ್‌ ಅವರ ಬಾಲ್ಯ-ಬದುಕು ಪರಿಚಯಿಸುವ ಮುನ್ನ ನಿಮಗೆ ಒಂದೆರಡು Anecdotes , ಅಂದರೆ ಅವರ ಜೀವನ ಕಾಲದಲ್ಲಿ ನಡೆದ ನೈಜ ಪ್ರಸಂಗಗಳನ್ನು ಹೇಳುತ್ತೇನೆ. ಮುಕ್ತಾ ಸರ್ವಗೋಡ್‌ (ಮುಕ್ತಾಬಾಯಿ) 1922ರಲ್ಲಿ ಮಹಾರಾಷ್ಟ್ರದ ಅಸ್ಪೃಶ್ಯ ಮಹಾರ್‌ ಜಾತಿಯ ಮಹಿಳೆ. ಅವರು ತಮ್ಮ ಆತ್ಮಕತೆಯಲ್ಲಿ ಹೇಳುವ ಪ್ರಸಂಗ ಹೀಗಿದೆ “ ಅಖಾಡ್‌ ಮಾಸ, ಅಂದರೆ ಆ಼ಷಾಡ ಮಾಸದ ಮಳೆ ಸುರಿಯುವ ಹೊತ್ತಿಗೆ ಈ ಸಮುದಾಯದವರು ಮದುವೆಗಳನ್ನು ಮಾಡಲು  ತಡಬಡಾಯಿಸುತ್ತಿರುತ್ತಾರೆ ”. ಇದು ಗಾದೆ ಮಾತಾಗಿದೆ. ಆದರೆ ಈ ಮಾಸದಲ್ಲಿ ಸವರ್ಣೀಯರು ಅಂದರೆ ಮೇಲ್ಜಾತಿಯವರ ಮದುವೆಗಳು ನಡೆಯುವುದಿಲ್ಲ. ಕಾರಣ ಏನುಗೊತ್ತೇ ? ನಿಮಗೇ ಅಲ್ಲ, ಯಾರಿಗೂ ಊಹಿಸಲಾಗದ ಕಾರಣ  ಇದು.  ಮೇಲ್ಜಾತಿಯವರ ಮದುವೆಗಳು ಕೆಳಜಾತಿಯವರ ಮದುವೆಗಳು ನಡೆಯುವಾಗಲೇ ನಡೆದರೆ, ಆ ಮದುವೆಯ ಊಟದ ಮೇಲೆ ಕೂರುವ ನೊಣಗಳೇ ಮತ್ತೊಂದು ಮದುವೆಯಲ್ಲಿನ ಊಟವನ್ನು ಅಶುದ್ದಗೊಳಿಸುತ್ತದೆ ಎಂಬ ನಂಬಿಕೆ. ಇದು 20ನೇ ಶತಮಾನದ ಮೂರು-ನಾಲ್ಕನೆ ದಶಕದ ಪ್ರಸಂಗ.  ( ಜಾತಿ ಮತ್ತು ಲಿಂಗತ್ವ –ಅನು . ದು ಸರಸ್ವತಿ –ಪುಟ ಸಂಖ್ಯೆ 254)

ಮತ್ತೊಂದು ಪ್ರಸಂಗವನ್ನು ಬೇಬಿ ಕೊಂಡಿಬಾ ಕಾಂಬ್ಳೆ (1929ರಲ್ಲಿ ಜನಿಸಿದವರು) ಅವರ ಜೀವನದಲ್ಲಿ ಗುರುತಿಸಬಹುದು. ಕಾಡಿನಿಂದ ಸೌದೆ ಸಂಗ್ರಹಿಸಿ ಮೇಲ್ಜಾತಿಯವರ ಮನೆಗಳಿಗೆ ಸರಬರಾಜು ಮಾಡುವುದು ಇವರ ಕಸುಬು. ಒಂದು ಪ್ರಸಂಗದಲ್ಲಿ, ಈಕೆ ಸೌದೆ ಹೊರೆಯನ್ನು ಮೇಲ್ಜಾತಿಯರೊಬ್ಬರ ಮನೆಯ ಅಂಗಳದಲ್ಲೋ, ಹಿತ್ತಲಲ್ಲೋ ಹಾಕುವಾಗ, ತಾನು ಬಿಚ್ಚಿ ಹಾಕಿದ ಹೊರೆಯನ್ನು ʼ ವೈದ್ಯರು ರೋಗಿಯನ್ನು ಪರೀಕ್ಷಿಸುವಂತೆ ʼ ಪರೀಕ್ಷಿಸಬೇಕು. ಇದನ್ನು ಮೇಲ್ಜಾತಿ ಮಹಿಳೆ ದೂರದಿಂದಲೇ ನೋಡುತ್ತಿರುತ್ತಾಳೆ. ಈ ತಪಾಸಣೆಗೆ ಕಾರಣ, ಈ ಅಸ್ಪೃಶ್ಯ ಮಹಿಳೆಯ ಬಟ್ಟೆಯ ತುಂಡೋ ಅಥವಾ ಕೂದಲೋ ಕಟ್ಟಿಗೆಗಳಿಗೆ ಅಂಟಿಕೊಂಡಿದ್ದರೆ ಅದನ್ನು ತೆಗೆದುಹಾಕಬೇಕಿತ್ತು. ಹಾಗೊಮ್ಮೆ ಏನಾದರೂ ಕಂಡರೆ ಅದನ್ನು ಸಗಣಿ ಹಾಕಿ ಶುದ್ಧಗೊಳಿಸಬೇಕು, ಮನೆ ಅಪವಿತ್ರವಾಗುತ್ತದೆ ಎಂಬ ಕಾರಣಕ್ಕಾಗಿ. ( ಜಾತಿ ಮತ್ತು ಲಿಂಗತ್ವ – ಅನು : ದು ಸರಸ್ವತಿ-ಪುಟ 380-381).

ಈ ಎರಡೂ ಘಟನೆಗಳನ್ನು ನಿಮ್ಮ ಮುಂದಿಟ್ಟ ಉದ್ದೇಶ, ಇದು ನಡೆದದ್ದು 19ನೇ ಶತಮಾನದಲ್ಲಿ ಅಲ್ಲ. ಭಾರತ ಆಧುನಿಕತೆಯೊಡನೆ ಗುರುತಿಸಿಕೊಂಡು, ಸ್ವತಂತ್ರ ದೇಶವಾಗಲು ಹೋರಾಡುತ್ತಿದ್ದ 20ನೇ ಶತಮಾನದ ಮೂರು-ನಾಲ್ಕನೇ ದಶಕದಲ್ಲಿ. ಭಾರತೀಯ ಸಮಾಜದಲ್ಲಿದ್ದ ಅಸ್ಪೃಶ್ಯತೆ, ಅಸಮಾನತೆ ಮತ್ತು ಅಪಮಾನಗಳ ನಡುವೆ ಬಾಬಾಸಾಹೇಬ್‌ ಅಂಬೇಡ್ಕರ್‌ ತಮ್ಮ ಸಾಮಾಜಿಕ-ರಾಜಕೀಯ ಜೀವನವನ್ನು ನಡೆಸಿದ್ದರು. ಈ ಹಸಿವು, ಅಪಮಾನ ಮತ್ತು ಅಗೌರವಗಳ ನಡುವೆಯೇ ಬದುಕುತ್ತಿದ್ದ ಲಕ್ಷಾಂತರ ಅಸ್ಪೃಶ್ಯರ ವಿಮೋಚನೆ ಅವರ ಗುರಿಯಾಗಿದ್ದುದಕ್ಕೆ ಕಾರಣ, ಭಾರತದಲ್ಲಿದ್ದ ಇಂತಹ ಒಂದು ಸಾಂಪ್ರದಾಯಿಕ ಸಮಾಜ. ಇದು ಚರಿತ್ರೆಯಲ್ಲಿ ಇನ್ನೆಷ್ಟು ಹೀನಮಟ್ಟಕ್ಕಿಳಿದಿರಬಹುದು ಎಂಬ ಆಲೋಚನೆಯೇ ಅವರನ್ನು ಆಳವಾದ ಅಧ್ಯಯನ, ಸಂಶೋಧನೆ ಮತ್ತು ಹೋರಾಟದ ಕಡೆಗೆ ಕರೆದೊಯ್ದಿತ್ತು. ಈ ತಳಸಮಾಜದ ಜನರ ನಡುವೆ ತಮ್ಮನ್ನು ಒಂದಾಗಿಸಿಕೊಂಡು, ಸ್ವಾತಂತ್ರ್ಯ ಹೋರಾಟದ ನಡುವೆಯೂ, ಭಾರತದ ಅಸ್ಪೃಶ್ಯರಿಗೆ, ಸ್ಪೃಶ್ಯ ದಲಿತ ಸಮುದಾಯಗಳಿಗೆ ವಸಾಹತು ದಾಸ್ಯದಿಂದ ಮಾತ್ರವೇ ಅಲ್ಲ, ಜಾತಿ ವ್ಯವಸ್ಥೆಯ ದಾಸ್ಯದ ಸಂಕೋಲೆಗಳಿಂದಲೂ ವಿಮೋಚನೆ ಬೇಕು ಎಂಬ ಅವರ ಅಚಲ ನಿಲುವಿನ ಫಲ ಭಾರತದ ಸಂವಿಧಾನ.

ಅಪಮಾನದ ನೆಲೆಗಳನ್ನು ದಾಟಿ

19ನೇ ಶತಮಾನದ ಉತ್ತರಾರ್ಧವನ್ನು ನೆನೆದಾಗ ಒಂದು ವಿಶೇಷ ಸಂಗತಿ ನಿಮಗೆ ಕಾಣಲೇಬೇಕು. ಭಾರತದ ಉಜ್ವಲ ಭವಿಷ್ಯದ ನಿರ್ಮಾಣಕ್ಕಾಗಿ ತಮ್ಮ ದೂರಗಾಮಿ ಆಲೋಚನೆಗಳನ್ನು ದೇಶಕ್ಕೆ ಕೊಟ್ಟ ಐವರು ದಾರ್ಶನಿಕರ ಜನನ ಆದದ್ದು ಈ ನಾಲ್ಕೈದು ದಶಕಗಳ ನಡುವೆ. 1861ರಲ್ಲಿ ರವೀಂದ್ರನಾಥ ಠಾಗೋರ್‌, 1863ರಲ್ಲಿ ಸ್ವಾಮಿ ವಿವೇಕಾನಂದ, 1869ರಲ್ಲಿ ಮಹಾತ್ಮ ಗಾಂಧಿ,  1889ರಲ್ಲಿ ಜವಹರಲಾಲ್‌ ನೆಹರೂ ಮತ್ತು 1891ರಲ್ಲಿ ಡಾ. ಬಿ.ಆರ್.‌ ಅಂಬೇಡ್ಕರ್.‌ ಆದರೆ ಅಂಬೇಡ್ಕರ್‌ ಅವರನ್ನು ಅತ್ಯಂತ ಗಾಢವಾಗಿ ಪ್ರಭಾವಿಸಿದ್ದು, 19ನೇ ಶತಮಾನದಲ್ಲೇ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಕ್ರಾಂತಿಕಾರಕ ಚಿಂತನೆಗಳನ್ನು ಬಿತ್ತಿದ ಜೋತಿಬಾ ಫುಲೆ, ಸಾವಿತ್ರಿಬಾಯಿ ಫುಲೆ̧ ಅವರ ಸ್ವಾಭಿಮಾನ, ಶಿಕ್ಷಣ, ಘನತೆ ಮತ್ತು ಆಧುನಿಕತೆಯ ಪರಿಕಲ್ಪನೆಗಳು.  ಅಂಬೇಡ್ಕರ್‌ ಅವರಿಗೆ ಇದು ಮೂಲ ತಾತ್ವಿಕ ಪ್ರೇರಣೆಯಾಗಿತ್ತು. ಅಂಬೇಡ್ಕರ್‌ ಪ್ರತಿನಿಧಿಸಿದ ಮಹಾರ್‌ ಜಾತಿಯು ಪ್ರಧಾನವಾಗಿ ಬ್ರಿಟೀಷ್‌ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದುದರಿಂದ, ಆಧುನಿಕ ಇಂಗ್ಲಿಷ್‌ ಶಿಕ್ಷಣ ಮತ್ತು ಸಾಮಾಜಿಕ ಮೇಲ್‌ ಚಲನೆ ಈ ಸಮುದಾಯದ ಅನೇಕರನ್ನು ನಗರಗಳೆಡೆಗೆ ಕರೆತಂದಿತ್ತು. ಆದರೆ ಅಂಬೇಡ್ಕರ್‌ ಅವರ ಬಾಲ್ಯದ ಬದುಕಿನ ಹಾದಿ ಹೂವಿನ ಹಾಸಿಗೆಯಾಗಿರಲಿಲ್ಲ.

ಸ್ವಂತ ಬದುಕಿನಲ್ಲಿ ತೀವ್ರ ಹಸಿವು ಬಡತನ ಅನುಭವಿಸದೆ ಹೋದರೂ ಅಂಬೇಡ್ಕರ್‌ ಜಾತಿ ಅವಮಾನಗಳನ್ನು ಎದುರಿಸುತ್ತಲೇ ಬೆಳೆದರು. ತಾವು ನಿಂತ ನೆಲ ಅಸಮಾನತೆಯ ಕೂಪವಾಗಿದೆ ಎಂಬ ಅರಿವು ಅವರಲ್ಲಿ ಮೂಡಿದ್ದುದರಿಂದಲೇ ಅಂಬೇಡ್ಕರ್‌, ಜಾತಿ ವಿನಾಶ ಅಥವಾ ಜಾತಿ ರಹಿತ ಸಮಾಜವನ್ನು ತಮ್ಮ ಧ್ಯೇಯವನ್ನಾಗಿಸಿಕೊಂಡು ಹೋರಾಡಿದ್ದರು. ಒಂದು ಕಡೆ ಅವರೇ ಹೀಗೆ ಹೇಳಿಕೊಳ್ಳುತ್ತಾರೆ “ ನಾನು ಶಾಲೆಯಲ್ಲಿ ಉತ್ತಮ ಅಂಕ ಗಳಿಸಿದ್ದರೂ, ಸಹಪಾಠಿಗಳ ನಡುವೆ ಕೂರುವಂತಿರಲಿಲ್ಲ ಒಂದು ಮೂಲೆಯಲ್ಲಿ ಏಕಾಂಗಿಯಾಗಿ ಕುಳಿತು ಪಾಠ ಕೇಳುತ್ತಿದ್ದೆ ನನಗಾಗಿ ಗೋಣಿ ಚೀಲವೂ ಪ್ರತ್ಯೇಕವಾಗಿತ್ತು. ಕೊಠಡಿಯನ್ನು ಶುಚಿಗೊಳಿಸುವ ವ್ಯಕ್ತಿ ನನ್ನ ಈ ಗೋಣಿಚೀಲವನ್ನೂ ಮುಟ್ಟುತ್ತಿರಲಿಲ್ಲ. ಅದನ್ನು ಮನೆಗೆ ಕೊಂಡೊಯ್ಯಬೇಕಿತ್ತು. ” “ ನೀರು ಕುಡಿಯಲು ನಲ್ಲಿಯನ್ನು ನಾನು ಮುಟ್ಟುವಂತಿರಲಿಲ್ಲ ಅದಕ್ಕಾಗಿಯೇ ಇದ್ದ ಜವಾನ ರಜೆಯಲ್ಲಿದ್ದರೆ ನಾನು ಇಡೀ ದಿನ ನೀರಿಲ್ಲದೆ ಕಳೆಯಬೇಕಾಗುತ್ತಿತ್ತು ”

ಮತ್ತೊಂದು ಪ್ರಸಂಗದಲ್ಲಿ ತಂದೆಯೊಡನೆ ಇರಲು ಸತಾರಾದಿಂದ ಕೊರೆಗಾಂವ್‌ಗೆ ರೈಲಿನಲ್ಲಿ ಹೋದಾಗ, ಅಲ್ಲಿ ಅವರ ತಂದೆ ಬಂದಿರಲಿಲ್ಲ. ಇವರು ಹೋಗಬೇಕಾದರೆ ಎತ್ತಿನ ಬಂಡಿ ಒಂದೇ ಸಾರಿಗೆ. ಯಾರೊಬ್ಬರೂ ಇವರನ್ನು ಬಂಡಿ ಹತ್ತಿಸಲು ಒಪ್ಪಲಿಲ್ಲ. ಒಬ್ಬ ವ್ಯಕ್ತಿ ಒಪ್ಪಿದರೂ ದುಪ್ಪಟ್ಟು ಹಣ ಕೇಳಿದ್ದೇ ಅಲ್ಲದೆ ಇವರೇ ಓಡಿಸಬೇಕು ಎಂದು ಷರತ್ತು ಹಾಕಿದ್ದ. “ ನಾನು ಅಸ್ಪೃಶ್ಯ ಎಂದು ನನಗೆ ತಿಳಿದಿದ್ದರೂ ಈ ಘಟನೆ ನನಗೆ ಅಸ್ಪೃಶ್ಯರ ಬಗ್ಗೆ ಆಲೋಚನೆ ಮಾಡುವಂತೆ ಮಾಡಿತ್ತು ” ಎಂದು ಅಂಬೇಡ್ಕರ್‌ ಹೇಳಿಕೊಳ್ಳುತ್ತಾರೆ. ಈ ಒಂದು ಘಟನೆಯೇ ನನ್ನ ಬದುಕಿನ ಆಲೋಚನೆಯ ದಿಕ್ಕನ್ನೇ ಬದಲಿಸಿತು, ಭಾರತದಲ್ಲಿ ಇಡೀ ಸಮಾಜವು ಜಾತಿಗ್ರಸ್ತವಾಗಿದ್ದು, ಪ್ರತಿ ವ್ಯಕ್ತಿಯೂ ಮತ್ತೊಬ್ಬನನ್ನು ಜಾತಿಯ ಮೂಲಕವೇ ನೋಡುತ್ತಾನೆ ಎಂದು ಅರಿವಾಗಿತ್ತು ಎಂದೂ ಹೇಳಿಕೊಳ್ಳುತ್ತಾರೆ. ಹಿಂದೂ ಸಮಾಜ ಮೆಟ್ಟಿಲುಗಳಿಲ್ಲದ ಬಹುಮಹಡಿ ಕಟ್ಟಡದ ಹಾಗೆ. ಒಂದು ಹಂತದಲ್ಲಿರುವವರು ಮೇಲಕ್ಕೂ ಹೋಗಲಾರರು ಕೆಳಕ್ಕೂ ಬರಲಾರರು. ಎಂದು ಅಂಬೇಡ್ಕರ್‌ ಒಂದೆಡೆ ಹೇಳುತ್ತಾರೆ.

ಉನ್ನತ ಶಿಕ್ಷಣದ ನಡುವೆ ಹೊಸ ಚಿಂತನೆಗಳು

ಕೊಲಂಬಿಯಾ ವಿಶ್ವವಿದ್ಯಾಲಯದಿಂದ ಪದವಿ, ಡಾಕ್ಟರೇಟ್ ಪಡೆದು ಹಿಂದಿರುಗಿದ ಮೇಲೆ‌ ಸರ್ಕಾರಿ ಕೆಲಸಕ್ಕೆ ಸೇರುತ್ತಾರೆ. “ ಅಲ್ಲಿ ಸಹೋದ್ಯೋಗಿಗಳು ಸಂಬಂಧಪಟ್ಟ ಕಡತಗಳನ್ನು ಕೈಗೆ ಕೊಡುತ್ತಿರಲಿಲ್ಲ. ದೂರದಿಂದ ನನ್ನ ಮೇಜಿನ ಮೇಲೆ ಬಿಸಾಡುತ್ತಿದ್ದರು, ನನ್ನನ್ನು ಸ್ಪರ್ಶಿಸುವುದೇ ಮಲಿನ ಎಂದು ಮೇಲ್ಜಾತಿಯವರು ಭಾವಿಸಿದ್ದರು, ಕಚೇರಿಯಲ್ಲಿದ್ದ ಕುಡಿವ ನೀರಿನ ಜಗ್‌ ಇವರು ಬಳಸುವಂತಿರಲಿಲ್ಲ. ಕ್ಲಬ್‌ಗಳಲ್ಲಿ ಯಾವುದೇ ಆಟಗಳಲ್ಲೂ ಎಲ್ಲರೊಡನೆ ಸೇರುವಂತಿರಲಿಲ್ಲ. ಪ್ರತ್ಯೇಕವಾಗಿರಬೇಕಾಗುತ್ತಿತ್ತು ” ಎಂದು ಅಂಬೇಡ್ಕರ್‌ ಹೇಳಿಕೊಳ್ಳುತ್ತಾರೆ. ಇವರು ತಂಗಲು ಕೊಟ್ಟಿದ್ದ ಕೋಣೆ ವಸ್ತುಶಃ ಹಳೆಯ ವಸ್ತುಗಳು, ಮುರಿದ ಪೀಠೋಪಕರಣಗಳು, ಬಳಸದ ಸಾಮಾನುಗಳು ಇದ್ದ ಒಂದು ಗೋದಾಮಿನಂತಿತ್ತು. ಅಲ್ಲೇ ಒಂದು ಮೂಲೆಯಲ್ಲಿ ಇವರು ಮಲಗಬೇಕಿತ್ತು. ಈ ಅಪಮಾನಗಳ  ಹಿನ್ನೆಲೆಯಲ್ಲೇ ಭೀಮ್‌ರಾವ್‌ ಎಂಬ ವ್ಯಕ್ತಿ ಜಾತಿ ವಿನಾಶದ ಪ್ರವರ್ತಕರಾಗಿದ್ದೇ ಅಲ್ಲದೆ, ಅಂಬೇಡ್ಕರ್‌ ಈ ರೀತಿಯಲ್ಲಿ ಅಂಬೇಡ್ಕರ್‌ ಆದರು ಎಂದು ಕ್ರಿಸ್ಟೋಫರ್‌ ಜೆಫರ್‌ಲೋಟ್‌ ವ್ಯಾಖ್ಯಾನ ಮಾಡುತ್ತಾರೆ. ಅಸಮಾನತೆ ಮತ್ತು ಜಾತಿಗ್ರಸ್ತ ಮನಸ್ಥಿತಿಯನ್ನು ತೊಡೆದುಹಾಕುವುದು ಅವರ ಧ್ಯೇಯವಾಯಿತು. 12ನೇ ಶತಮಾನದಲ್ಲಿ ಪಂಪ ಹೇಳಿದ ಮನುಷ್ಯ ಜಾತಿ ತಾನೊಂದೇ ವಲಂ ಎಂಬ ಉದಾತ್ತ ಚಿಂತನೆಯನ್ನು ಅಂಬೇಡ್ಕರ್‌ ಭಾರತದ ಸಂವಿಧಾನವನ್ನಾಗಿ ಮಾಡಿರುವುದನ್ನು ನೀವೆಲ್ಲರೂ ಗುರುತಿಸಿರುತ್ತೀರಿ.

ಬರೋಡದ ಮಹಾರಾಜ ಸಯ್ಯಾಜಿ ರಾವ್‌ ಗಾಯಕ್ವಾಡ್‌ ಮತ್ತು ಕೊಲ್ಹಾಪುರದ ಛತ್ರಪತಿ ಶಾಹುಜಿ ಮಹಾರಾಜ್‌ ಇವರ ಉತ್ತೇಜನ, ಬೆಂಬಲ ಇಲ್ಲದೆ ಹೋಗಿದ್ದರೆ, ಬಹುಶಃ ಭೀಮ್‌ ರಾವ್‌ ಅವರು ಅಂಬೇಡ್ಕರ್‌ ಆಗುತ್ತಿರಲಿಲ್ಲ. ಈ ಮಹನೀಯರ ನೆರವಿನಿಂದ ವಿದೇಶದಲ್ಲಿ ವ್ಯಾಸಂಗ ಮಾಡುವ  ಅವಕಾಶ ಪಡೆದ ಅಂಬೇಡ್ಕರ್‌ 1913-16ರ ನಡುವೆ ಕೊಲಂಬಿಯಾದ ವಿಶ್ವವಿದ್ಯಾಲಯದಲ್ಲಿ ನಡೆಸಿದ ವ್ಯಾಸಂಗ ಅವರ ಜೀವನದ ದಿಕ್ಕನ್ನೇ ಬದಲಿಸಿತ್ತು, ಆಧುನಿಕ ಚಿಂತನೆಗಳಾದ ಪ್ರಜಾಪ್ರಭುತ್ವ, ಸಮಾನತೆ, ಸ್ವಾತಂತ್ರ್ಯ ಮತ್ತು ಸೋದರತ್ವ-ಸೋದರಿತ್ವದ ಕಲ್ಪನೆಗಳಿಗೂ ತೆರೆದುಕೊಳ್ಳಲು ನೆರವಾಗಿತ್ತು. ತಮ್ಮ ಬದುಕಿನಲ್ಲಿ ವೈಯುಕ್ತಿಕವಾಗಿ ಅನುಭವಿಸಿದ ಅಪಮಾನಗಳು ಮತ್ತು ಸುತ್ತಲಿನ ಸಮಾಜದಲ್ಲಿ ತಮ್ಮ ಜನ , ಇವರನ್ನು depressed classes , ಎಂದು ಕರೆಯಲಾಗುತ್ತಿತ್ತು ಎದುರಿಸುತ್ತಿದ್ದ ಬಡತನ, ಹಸಿವು, ಜಾತಿ ನಿಂದನೆ, ಅಸ್ಪೃಶ್ಯತೆ ಮತ್ತು ಅಪಮಾನಗಳು ಅಂಬೇಡ್ಕರ್‌ ಅವರನ್ನು ಹೊಸ ಚಿಂತನೆಗಳತ್ತ ಕೊಂಡೊಯ್ದಿತ್ತು. ಪಶ್ಚಿಮ ರಾಷ್ಟ್ರಗಳ ಪ್ರಜಾಪ್ರಭುತ್ವದ ಮೌಲ್ಯಗಳು, ಅಮೆರಿಕದ ಅಧ್ಯಕ್ಷರಾಗಿದ್ದ ಥಾಮಸ್‌ ಜೆಫರ್‌ಸನ್‌ ಅವರ ಅಭಿವ್ಯಕ್ತಿ ಸ್ವಾತಂತ್ರ್ಯದ ಕಲ್ಪನೆ, ಅಬ್ರಾಹಂ ಲಿಂಕನ್‌ ಅವರ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ ಇವೆಲ್ಲವನ್ನೂ ಯಥಾವತ್ತಾಗಿ, ಗ್ರಾಂಥಿಕವಾಗಿ ಸ್ವೀಕರಿಸದೆ, ಭಾರತದಲ್ಲಿ ಶತಮಾನಗಳಿಂದ ಬೇರೂರಿದ್ದ ಜಾತಿ ವ್ಯವಸ್ಥೆ, ಅದು ಸೃಷ್ಟಿಸಿದ್ದ ಶ್ರೇಣೀಕೃತ ಸಮಾಜ ಮತ್ತು ಅದರೊಳಗಿನ ತಾರತಮ್ಯಗಳ ನೆಲೆಯಲ್ಲಿ ಅಂಬೇಡ್ಕರ್‌ ತಮ್ಮ ತಾತ್ವಿಕ ಚಿಂತನೆಗಳನ್ನು ವಿಸ್ತರಿಸಿದ್ದರು.

ಮಿಲೆನಿಯಂ ತಲೆಮಾರು ಅಂಬೇಡ್ಕರರನ್ನು ಹೇಗೆ ನೋಡಬೇಕು ?

UNSPECIFIED – CIRCA 1865: Karl Marx (1818-1883), philosopher and German politician. (Photo by Roger Viollet Collection/Getty Images)

ಇದು ತಾತ್ವಿಕ ಪ್ರಶ್ನೆ. ಸಾಮಾನ್ಯ ರಾಜಕೀಯ ಚರ್ಚೆಗಳಲ್ಲಿ ಕಾಣುವಂತೆ ಅಂಬೇಡ್ಕರ್‌ vs ಗಾಂಧಿ, ಅಂಬೇಡ್ಕರ್‌ vs Marx ,, ಇಂತಹ ವಾದಗಳಿಂದಾಚೆಗೆ ನಿಮಗೆ ಅಂಬೇಡ್ಕರ್‌ ಒಬ್ಬ ವಿಮೋಚಕರಾಗಿ, ಸುಧಾರಕರಾಗಿ, ಜಾತಿ ವ್ಯವಸ್ಥೆಯನ್ನು ನಾಶಪಡಿಸುವ ಛಲ ತೊಟ್ಟ ಕ್ರಾಂತಿಕಾರಿಕ ವ್ಯಕ್ತಿಯಾಗಿ ಕಾಣಬೇಕು. ಭಾರತದ ಸಂವಿಧಾನದಲ್ಲಿ ಅಂಬೇಡ್ಕರ್‌ ಅವರು ಅಳವಡಿಸಿರುವ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ, ಅಭಿವ್ಯಕ್ತಿ ಸ್ವಾತಂತ್ರ್ಯ, ವ್ಯಕ್ತಿ ಸ್ವಾತಂತ್ರ್ಯ, ಧಾರ್ಮಿಕ ಉಪಾಸನಾ ಸ್ವಾತಂತ್ರ್ಯ ಇವೆಲ್ಲವೂ ಭವಿಷ್ಯ ಭಾರತವನ್ನು ಕಟ್ಟುವ ಅಡಿಗಲ್ಲುಗಳು. ನಿಮ್ಮ ಸುತ್ತಲೂ ಲಭ್ಯವಾಗುವ ಅಕಾಡೆಮಿಕ್‌ ಚರ್ಚೆ ಮತ್ತು ಸಾರ್ವಜನಿಕ ಸಂವಾದ-ಸಂಕಥನಗಳಲ್ಲಿ ಕೇಳಿಬರುವ ಅಂಬೇಡ್ಕರ್‌ ಬಗೆಗಿನ ಮಾಹಿತಿಗಳು ನಿಮಗೆ ಬಹಳ ಉಪಯುಕ್ತವಾಗುವುದು ಹೌದು. ಆದರೆ ಅಲ್ಲಿ ನಿಮಗೆ ಕೇಳಿಬರುವ ವೈರುಧ್ಯಗಳು ನಿಮ್ಮ ಅರಿವಿನ ವಿಸ್ತಾರಕ್ಕೆ ಅಡ್ಡಿ ಉಂಟುಮಾಡುತ್ತವೆ. ಏಕೆಂದರೆ ವರ್ತಮಾನದಲ್ಲಿ ನಿಂತು ಚರಿತ್ರೆಯನ್ನೂ, ಚಾರಿತ್ರಿಕ ವ್ಯಕ್ತಿಗಳ ತಾತ್ವಿಕ ನೆಲೆಗಳನ್ನೂ ವ್ಯಾಖ್ಯಾನಿಸುವಾಗ ನಾವು ಸಹಜವಾಗಿಯೇ ʼ ಚರಿತ್ರೆಯನ್ನು ವರ್ತಮಾನದಲ್ಲಿಟ್ಟು ನೋಡುತ್ತೇವೆ ʼ. ಇಲ್ಲಿ ಚಾರಿತ್ರಿಕ ವಾಸ್ತವಗಳು ಹಿಂಬದಿಗೆ ಸರಿಯುತ್ತವೆ. ಎರಡು ಉದಾಹರಣೆಗಳನ್ನುಕೊಡಬಹುದಾದರೆ, ಅಂಬೇಡ್ಕರ್‌ ಕಮ್ಯುನಿಸ್ಟ್‌ ವಿರೋಧಿ ಎಂಬ ಆರೋಪ. ತಮ್ಮ ಗಾಂಧಿ ಮತ್ತು ಕಾಂಗ್ರೆಸ್‌ ಅಸ್ಪೃಶ್ಯರಿಗೆ ಮಾಡಿರುವುದೇನು ಕೃತಿಯಲ್ಲಿ ಅಂಬೇಡ್ಕರ್‌ “ ಭಾರತದಲ್ಲಿ ದಾಸ್ಯ ವರ್ಗಗಳು ಮುಂದಿಟ್ಟ ಮೀಸಲಾತಿ ಬೇಡಿಕೆ, ಮಾರ್ಕ್ಸ್‌ ಬೋಧಿಸಿದ ಮತ್ತು ರಷ್ಯಾವು ಕಾರ್ಯರೂಪಕ್ಕೆ ತಂದ ಇದೇ ಆಲೋಚನೆಯ ಸಾರವನ್ನೇ ಆಧರಿಸಿದೆ ” (ಪುಟ 450) ಎಂದು ಹೇಳುತ್ತಾರೆ.

ಮತ್ತೊಂದು ಸಂದರ್ಭದಲ್ಲಿ ತಾವೇ ಕಟ್ಟಿದ್ದ ಇಂಡಿಯನ್‌ ಲೇಬರ್‌ ಪಾರ್ಟಿಯ ಸಭೆಯೊಂದರಲ್ಲಿ, ತಕಾರ್ಮಿಕರನ್ನು ಉದ್ದೇಶಿಸಿ ಮಾತನಾಡುವಾಗ,, ಭಾರತದ ಪ್ರತಿಯೊಬ್ಬ ಕಾರ್ಮಿಕರೂ ಓದಲೇ ಬೇಕಾದ ಐದು ಪುಸ್ತಕಗಳಲ್ಲಿ ಕಮ್ಯುನಿಸ್ಟ್‌ ಮ್ಯಾನಿಫೆಸ್ಟೋ ಒಂದು ಎಂದು ಹೇಳುತ್ತಾರೆ. ಅಂದರೆ ನಿಮ್ಮಲ್ಲಿ ಇತಿಹಾಸದ ವಿದ್ಯಾರ್ಥಿಗಳಿರುತ್ತೀರಿ.  ಮುಂದಿನ ಕನಿಷ್ಠ ಏಳೆಂಟು ದಶಕಗಳಲ್ಲಿ, ಈ ಶತಮಾನದ ಕೊನೆಯವರೆಗೆ ನಿಮ್ಮ ತಲೆಮಾರು ವಿಕಸಿತ ಭಾರತವನ್ನು ಪ್ರತಿನಿಧಿಸುತ್ತದೆ, ಮುನ್ನಡೆಸುತ್ತದೆ.  ಈ ಹಿನ್ನೆಲೆಯಲ್ಲಿ ನಿಮಗೆ ಅಂಬೇಡ್ಕರ್‌ ಹೇಗೆ ಕಾಣಬೇಕು ? ಆರ್ಥಿಕ-ಸಾಮಾಜಿಕ-ಸಾಂಸ್ಕೃತಿಕ-ಧಾರ್ಮಿಕ ಸಮಾನತೆಯ ಹರಿಕಾರರಾಗಿ ಕಾಣಬೇಕು. ಲಿಂಗ ಸಮಾನತೆಯ ಪ್ರವರ್ತಕರಾಗಿ ಕಾಣಬೇಕು. ಸಂವಿಧಾನ ಮತ್ತು ಪ್ರತಿಮೆಗಳಿಂದಾಚೆಗೂ ಒಬ್ಬ ಅಂಬೇಡ್ಕರ್‌ ಇದ್ದಾರೆ ಎನ್ನುವುದನ್ನು ಅರಿತುಕೊಳ್ಳಬೇಕು. ಅವರನ್ನು ನೀವು ಕಾಣಬೇಕಿರುವುದು ಡಿಜಿಟಲ್‌ ಯುಗದಲ್ಲೂ  ಅಸಮಾನತೆ-ಶೋಷಣೆ-ಲೈಂಗಿಕ ದೌರ್ಜನ್ಯ-ತಾರತಮ್ಯ- ಅಸ್ಪೃಶ್ಯತೆಯನ್ನು ಅನುಭವಿಸುತ್ತಿರುವ ಎಲ್ಲ ಸಮಾಜಗಳ ಕಟ್ಟಕಡೆಯ ಮನುಷ್ಯರ ನಡುವೆ. ಅಲ್ಲಿ ಅವರು ನಿಮಗೆ ಭವಿಷ್ಯದ ದಿಕ್ಸೂಚಿಯನ್ನು ಒದಗಿಸುತ್ತಾರೆ.

ಕೊನೆಯದಾಗಿ ನೀವು ಅತಿ ಹೆಚ್ಚು ಕೇಳಿರಬಹುದಾದ ಅಂಬೇಡ್ಕರ್‌ ಸುತ್ತಲಿನ ಸಂವಾದದಲ್ಲಿ ಗಾಂಧಿ vs ಅಂಬೇಡ್ಕರ್‌ ನಡುವಿನ ತಾತ್ವಿಕ ಕಲಹ ಹೆಚ್ಚಾಗಿರುತ್ತದೆ. ಒಂದು ಮಾತಿನಲ್ಲಿ ಹೇಳುವುದಾದರೆ, ಮಹಾತ್ಮ ಗಾಂಧಿ ಸಹ ಅಸ್ಪೃಶ್ಯತೆಯ ವಿರುದ್ಧ ತಡವಾಗಿಯಾದರೂ ಹೋರಾಟ ನಡೆಸಿದ್ದರು. ಆದರೆ ಇಬ್ಬರು ಮಹಾನ್‌ ವ್ಯಕ್ತಿಗಳ ನಡುವೆ ನೀವು ಗುರುತಿಸಬೇಕಾದ ವ್ಯತ್ಯಾಸ ಎಂದರೆ, ಗಾಂಧಿ ವಿಶಾಲ ದೇಶದ (Towards Nation) ಕಡೆ ನೋಡಿದರು, ಆದರೆ ಅಂಬೇಡ್ಕರ್‌ ತಾವು ನಿಂತ-ಬದುಕಿದ ನೆಲದ ಕಡೆ ನೋಡಿದರು. ಈ ನೆಲದ ವಾಸ್ತವವನ್ನು (Ground Reality) ಅರಿತೇ ಅಂಬೇಡ್ಕರ್‌ ವಿಶ್ವದ ಎಲ್ಲ ತತ್ವಶಾಸ್ತ್ರಗಳನ್ನೂ ಅಧ್ಯಯನ ಮಾಡಿ ಅಂತಿಮವಾಗಿ ಬುದ್ಧನ ಹಾದಿಯಲ್ಲಿ ಸಾಗಿದರು. ತಮ್ಮ ಓದು ಅಧ್ಯಯನ ಮತ್ತು ಸಂಶೋಧನೆಯಲ್ಲಿ ಅಂಬೇಡ್ಕರ್‌ ಯಾವ ಪ್ರಾಚೀನ ಮೀಮಾಂಸೆಯನ್ನೂ ತಿರಸ್ಕರಿಸಲಿಲ್ಲ, ಯಾವ ದಾರ್ಶನಿಕರನ್ನೂ ನಿರಾಕರಿಸಲಿಲ್ಲ. ಬದಲಾಗಿ ಎಲದಕ್ಕೂ ಮುಖಾಮುಖಿಯಾಗಿ ಅದರೊಳಗಿನ ಮಾನವ ವಿರೋಧಿ ನೆಲೆಗಳನ್ನು ಸಮಕಾಲೀನ ಸಂದರ್ಭದಲ್ಲಿಟ್ಟು ನೋಡುವ ಮೂಲಕ, ಭಾರತೀಯ ಸಮಾಜಕ್ಕೆ ಅಗತ್ಯವಾದ ಸಮಾನತೆಯ ಸಂದೇಶವನ್ನು ರವಾನಿಸಿದರು. ಮಿಲೆನಿಯಂ ಮಕ್ಕಳಾದ ನೀವು ಮಾಡಬೇಕಿರುವುದೇನು ?

ವಿರಮಿಸುವ ಮುನ್ನ

ಒಂದು ನಿದರ್ಶನದ ಮೂಲಕ ನನ್ನ ಮಾತುಗಳಿಗೆ ವಿರಾಮ ಹೇಳುತ್ತೇನೆ. ನಿಮಗೆ ಆರೋಗ್ಯ ಏರುಪೇರಾದರೆ ಚಿಕಿತ್ಸೆಗಾಗಿ ತಜ್ಞ-ಸೂಕ್ತ ವೈದ್ಯರನ್ನು ಸಂಪರ್ಕಿಸುತ್ತೀರಿ ಅಲ್ಲವೇ ? ನಮ್ಮ ಕಾಲದಲ್ಲಿ ವೈದ್ಯರ ಸಹಾಯಕರಾಗಿ ಕಾಂಪೌಂಡರ್‌ ಇರುತ್ತಿದ್ದರು, ಈಗಿಲ್ಲ ಆದರೆ ನಿಮ್ಮ ಸಮಸ್ಯೆಗೆ ನರ್ಸ್‌ಗಳನ್ನು ಸಂಪರ್ಕಿಸಿದರೆ ಏನಾಗುತ್ತದೆ. ಸರಿಯಾದ ಚಿಕಿತ್ಸೆ ದೊರೆಯುವುದಿಲ್ಲ. ಹಾಗೆಯೇ ಚರಿತ್ರೆ ಮತ್ತು ವರ್ತಮಾನದ ಸಮಾಜವನ್ನು ಅರ್ಥಮಾಡಿಕೊಳ್ಳಲು ನಾವು ನೇರವಾಗಿ ವೈದ್ಯರನ್ನೇ ಸಂಪರ್ಕಿಸಬೇಕು. ಅಂಬೇಡ್ಕರ್‌, ಮಾರ್ಕ್ಸ್‌, ಗಾಂಧಿ, ಲೋಹಿಯಾ ಮುಂತಾದವರು ಈ ವೈದ್ಯರು. ನಮ್ಮಂತಹ ಭಾಷಣಕಾರರು ನರ್ಸ್‌ಗಳಷ್ಟೇ.  ಭಾರತೀಯ ಸಮಾಜ ಸಾಗುತ್ತಿರುವ ಹಾದಿಯಲ್ಲಿ ಸುದೀರ್ಘ ಪಯಣ ನಡೆಸಲಿರುವ ನೀವು ಈ ಸಮಾಜದ ಒಳಸುಳಿಗಳನ್ನು ಅರ್ಥಮಾಡಿಕೊಳ್ಳಲು ಅಂಬೇಡ್ಕರ್‌ ಎಂಬ ಚಿಕಿತ್ಸಕ ವೈದ್ಯರನ್ನು ಸಂಪರ್ಕಿಸಲೇಬೇಕು. ಇತರ ಚಿಕಿತ್ಸಕರು ಪೂರಕವಾಗಬಹುದು, ಆದರೆ ಜಾತಿಗ್ರಸ್ತ ಭಾರತೀಯ ಸಮಾಜಕ್ಕೆ ಅಂಟಿರುವ ಮೂಲ ವ್ಯಾಧಿಯನ್ನು ಗುಣಪಡಿಸುವ ಮಾರ್ಗಗಳಿಗಾಗಿ ಅಂಬೇಡ್ಕರ್‌ ಮೊದಲಿಗರಾಗಿ ಕಾಣುತ್ತಾರೆ. ಹಾಗಾಗಿ ಪ್ರಾಚೀನ, ಚಾರಿತ್ರಿಕ, ಸಮಕಾಲೀನ, ವರ್ತಮಾನದ ಭಾರತವನ್ನು ಅರ್ಥಮಾಡಿಕೊಳ್ಳಬೇಕೆಂದರೆ, ಭವಿಷ್ಯ ಭಾರತವನ್ನು ಕಟ್ಟಬೇಕಾದರೆ, ನೀವು ನಿಮ್ಮ ತಲೆಮಾರು ಅಂಬೇಡ್ಕರ್‌ ಅವರನ್ನು ಕಡ್ಡಾಯವಾಗಿ ಓದಲೇ ಬೇಕು.

ವಿದ್ಯಾರ್ಥಿ ದೆಸೆಯಲ್ಲಿ ನಿಮಗೆ ಪಠ್ಯೇತರ ಓದಿಗಾಗಿ ದಕ್ಕುವ ಸಮಯದಲ್ಲಿ ಮೊಬೈಲ್‌ ಬಳಕೆಯ ಸಮಯವನ್ನು ಕಡಿಮೆ ಮಾಡಿ, ಆ ಅವಧಿಯಲ್ಲಿ ಓದುವಂತವರಾಗಿ. ವ್ಯಾಸಂಗದ ನಂತರ ಅಧ್ಯಯನ ಸಂಶೋಧನೆ ನಿಮ್ಮ ಆಯ್ಕೆ ಆದರೆ ಓದು, ನಿರಂತರ ಓದು ಕಡ್ಡಾಯವಾಗಿಸಿಕೊಳ್ಳುವ ಮನಸ್ಥಿತಿ ನಿಮ್ಮಲ್ಲಿ ಮೂಡಲಿ.

ಎಲ್ಲರಿಗೂ ಅಂಬೇಡ್ಕರ್‌ ಜಯಂತಿಯ ಶುಭಾಶಯಗಳು.

Tags: 10 lines on dr br ambedkar10 lines on dr br ambedkar in englishAmbedkarambedkar jayantibabasaheb ambedkarbhimrao ambedkarBR AmbedkarDr AmbedkarDr B R Ambedkardr babasaheb ambedkardr bhimrao ambedkardr br ambedkardr br ambedkar drawingdr br ambedkar essaydr br ambedkar essay in englishdr br ambedkar old interviewsdr br ambedkar speechessay on dr br ambedkaressay on dr br ambedkar in english
Previous Post

ದಾಂಡೇಲಿಯ ಆಸ್ತಿ ವಿಚಾರಕ್ಕೆ ಓಂಪ್ರಕಾಶ್ ಹತ್ಯೆ…?

Next Post

ಸಂವಿಧಾನದ ಜಪ ಮಾಡ್ತಾರೆ..ಆದ್ರೆ ಧರ್ಮ ಸ್ವಾತಂತ್ರ್ಯ ಹರಣ ಮಾಡ್ತಾರೆ – ಕಾಂಗ್ರೆಸ್ ವಿರುದ್ಧ ಶ್ರೀ ಸುಬುಧೇಂದ್ರ ತೀರ್ಥರು ಕಿಡಿ 

Related Posts

ಮದ್ಯ ತೆರಿಗೆ, ಶಿಕ್ಷಣ ಮತ್ತು ಸರ್ಕಾರದ ನೀತಿಗಳ ವಿರುದ್ಧ ಎಚ್. ವಿಶ್ವನಾಥ್ ವಾಗ್ದಾಳಿ- ಸಿಎಂ ಬಿಯರ್ ಗುಟ್ಟು-ರಟ್ಟು!
ರಾಜಕೀಯ

ಮದ್ಯ ತೆರಿಗೆ, ಶಿಕ್ಷಣ ಮತ್ತು ಸರ್ಕಾರದ ನೀತಿಗಳ ವಿರುದ್ಧ ಎಚ್. ವಿಶ್ವನಾಥ್ ವಾಗ್ದಾಳಿ- ಸಿಎಂ ಬಿಯರ್ ಗುಟ್ಟು-ರಟ್ಟು!

by ಪ್ರತಿಧ್ವನಿ
April 16, 2026
0

ಬೆಂಗಳೂರು: ರಾಜ್ಯ ಸರ್ಕಾರದ ಮದ್ಯ ತೆರಿಗೆ ನೀತಿ, ಶಿಕ್ಷಣ ವ್ಯವಸ್ಥೆ ಹಾಗೂ ಆರ್ಥಿಕ ಸ್ಥಿತಿಗತಿಗಳ ಕುರಿತು ಬಿಜೆಪಿ ಎಂಎಲ್‌ಸಿ ಎಚ್ ವಿಶ್ವನಾಥ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ...

Read moreDetails
ಎಸ್‌ಎಸ್‌ಎಲ್‌ಸಿ ಪರೀಕ್ಷೆ: ತೃತೀಯ ಭಾಷೆಗೆ ಅಂಕಗಳ ಬಗ್ಗೆ ಹೈಕೋರ್ಟ್ ನಿರ್ದೇಶನ ಇಲ್ಲಿದೆ

ಎಸ್‌ಎಸ್‌ಎಲ್‌ಸಿ ಪರೀಕ್ಷೆ: ತೃತೀಯ ಭಾಷೆಗೆ ಅಂಕಗಳ ಬಗ್ಗೆ ಹೈಕೋರ್ಟ್ ನಿರ್ದೇಶನ ಇಲ್ಲಿದೆ

April 16, 2026
ಇಂದು ಸಂಸತ್ತಿನಲ್ಲಿ ಐತಿಹಾಸಿಕ ತಿದ್ದುಪಡಿ ವಿಧೇಯಕ ಮಂಡನೆ

ಇಂದು ಸಂಸತ್ತಿನಲ್ಲಿ ಐತಿಹಾಸಿಕ ತಿದ್ದುಪಡಿ ವಿಧೇಯಕ ಮಂಡನೆ

April 16, 2026
ಯೋಗೇಶ್ ಗೌಡ ಕೊಲೆ ಪ್ರಕರಣಕ್ಕೆ ಅಂತಿಮ ತೀರ್ಪು: ಶಾಸಕ ವಿನಯ್ ಕುಲಕರ್ಣಿ ದೋಷಿ-ನಿರ್ದೋಷಿ ?

ಯೋಗೇಶ್ ಗೌಡ ಕೊಲೆ ಪ್ರಕರಣಕ್ಕೆ ಅಂತಿಮ ತೀರ್ಪು: ಶಾಸಕ ವಿನಯ್ ಕುಲಕರ್ಣಿ ದೋಷಿ-ನಿರ್ದೋಷಿ ?

April 15, 2026
ವಿಜಯಪುರದಲ್ಲಿ ಗುಂಡಿನ ಸದ್ದು; ಗ್ರಾಮ ಪಂಚಾಯಿತಿ ಸದಸ್ಯನ ಹತ್ಯೆ

ವಿಜಯಪುರದಲ್ಲಿ ಗುಂಡಿನ ಸದ್ದು; ಗ್ರಾಮ ಪಂಚಾಯಿತಿ ಸದಸ್ಯನ ಹತ್ಯೆ

April 14, 2026
Next Post
ಸಂವಿಧಾನದ ಜಪ ಮಾಡ್ತಾರೆ..ಆದ್ರೆ ಧರ್ಮ ಸ್ವಾತಂತ್ರ್ಯ ಹರಣ ಮಾಡ್ತಾರೆ – ಕಾಂಗ್ರೆಸ್ ವಿರುದ್ಧ ಶ್ರೀ ಸುಬುಧೇಂದ್ರ ತೀರ್ಥರು ಕಿಡಿ 

ಸಂವಿಧಾನದ ಜಪ ಮಾಡ್ತಾರೆ..ಆದ್ರೆ ಧರ್ಮ ಸ್ವಾತಂತ್ರ್ಯ ಹರಣ ಮಾಡ್ತಾರೆ - ಕಾಂಗ್ರೆಸ್ ವಿರುದ್ಧ ಶ್ರೀ ಸುಬುಧೇಂದ್ರ ತೀರ್ಥರು ಕಿಡಿ 

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada