ಐಪಿಎಲ್‌ನ ಯಶಸ್ವಿ ತಂಡಗಳಲ್ಲಿ ಒಂದಾಗಿರುವ ಚೆನ್ನೈ ಸೂಪರ್ ಕಿಂಗ್ಸ್ (CSK)ನಲ್ಲಿ ಮಾಜಿ ನಾಯಕ ಎಂ.ಎಸ್. ಧೋನಿ ಶೇ.15ರಿಂದ 20ರಷ್ಟು ಷೇರುಗಳನ್ನು ಖರೀದಿಸಲು ಮುಂದಾಗಿದ್ದಾರೆ ಎಂಬ ವರದಿಗಳನ್ನು ಫ್ರಾಂಚೈಸಿ ತಳ್ಳಿಹಾಕಿದೆ. ಧೋನಿ ಈ ಬಗ್ಗೆ ಯಾವುದೇ ಮಾತುಕತೆ ನಡೆಸಿಲ್ಲ ಎಂದು ಸಿಎಸ್‌ಕೆ ಆಡಳಿತ ಸ್ಪಷ್ಟಪಡಿಸಿದೆ. ಆದರೆ, ಧೋನಿ ಈಗಾಗಲೇ ಫ್ರಾಂಚೈಸಿಯಲ್ಲಿ ಸಣ್ಣ ಪ್ರಮಾಣದ ಷೇರುಗಳನ್ನು ಹೊಂದಿದ್ದಾರೆ ಎಂಬುದು ಬಹಿರಂಗವಾಗಿದೆ. ಕ್ರಿಕ್‌ಬಝ್ ವರದಿ ಪ್ರಕಾರ, ಧೋನಿ ಈ ಹಿಂದೆ ಖಾಸಗಿ ವಹಿವಾಟಿನ ಮೂಲಕ ಒಂದು ಲಕ್ಷಕ್ಕೂ ಹೆಚ್ಚು ಸಿಎಸ್‌ಕೆ ಷೇರುಗಳನ್ನು ಖರೀದಿಸಿದ್ದಾರೆ. ಸಿಎಸ್‌ಕೆ ಷೇರುಗಳು ಷೇರುಪೇಟೆಯಲ್ಲಿ ಲಿಸ್ಟ್ ಆಗಿಲ್ಲದ ಕಾರಣ, ಇಂತಹ ವಹಿವಾಟುಗಳು ಆಫ್-ಮಾರ್ಕೆಟ್ ಮೂಲಕ ನಡೆಯುತ್ತವೆ.
ಧೋನಿ ಹೊಂದಿರುವ ಒಂದು ಲಕ್ಷಕ್ಕೂ ಹೆಚ್ಚು ಷೇರುಗಳು ಸಂಖ್ಯೆಯಲ್ಲಿ ದೊಡ್ಡದಾಗಿ ಕಂಡರೂ, ಸಿಎಸ್‌ಕೆಯ ಒಟ್ಟು ಷೇರುಗಳಿಗೆ ಹೋಲಿಸಿದರೆ ಇದು ಸುಮಾರು ಶೇ.0.01ರಿಂದ 0.02ರಷ್ಟು ಮಾತ್ರ. ಪ್ರಸ್ತುತ ಅನ್‌ಲಿಸ್ಟೆಡ್ ಮಾರುಕಟ್ಟೆಯ ಅಂದಾಜು ಮೌಲ್ಯವನ್ನು ಆಧರಿಸಿದರೆ, ಈ ಷೇರುಗಳ ಮೌಲ್ಯ ಸುಮಾರು ₹2.6 ಕೋಟಿಯಿಂದ ₹3 ಕೋಟಿಯಷ್ಟಿರಬಹುದು ಎಂದು ವರದಿಗಳು ತಿಳಿಸಿವೆ. ಸಿಎಸ್‌ಕೆಯ ಒಟ್ಟು ಷೇರುಗಳಲ್ಲಿ ಎನ್. ಶ್ರೀನಿವಾಸನ್ ಕುಟುಂಬವು ಶೇ.55ಕ್ಕಿಂತ ಹೆಚ್ಚಿನ ಪಾಲನ್ನು ಹೊಂದಿದ್ದು, ಕಂಪನಿಯ ಮೇಲಿನ ನಿಯಂತ್ರಣವೂ ಅವರ ಕುಟುಂಬದ ಬಳಿಯಿದೆ ಎಂದು ವರದಿಯಾಗಿದೆ. ಸಾರ್ವಜನಿಕ ಷೇರುದಾರರ ಬಳಿಯೂ 30 ಕೋಟಿಗೂ ಹೆಚ್ಚು ಷೇರುಗಳಿವೆ.
ಕಳೆದ ಕೆಲವು ತಿಂಗಳಿಂದ ಧೋನಿ ಸಿಎಸ್‌ಕೆಯಲ್ಲಿ ದೊಡ್ಡ ಪಾಲು ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂಬ ವದಂತಿಗಳು ಹರಿದಾಡಿದ್ದವು. ಕೆಲವು ವರದಿಗಳಲ್ಲಿ ಅವರು ಮೊದಲು ಶೇ.25ರಷ್ಟು ಪಾಲು ಬಯಸಿದ್ದರು, ಬಳಿಕ ಶೇ.20ಕ್ಕೆ ಇಳಿಸಿದ್ದರು ಎಂಬ ಹೇಳಿಕೆಗಳೂ ಬಂದಿದ್ದವು. ಆದರೆ ಈ ಮಾಹಿತಿಯನ್ನು ಸಿಎಸ್‌ಕೆ ಆಡಳಿತ ಸ್ಪಷ್ಟವಾಗಿ ತಳ್ಳಿಹಾಕಿದ್ದು, ಧೋನಿ ಷೇರು ಪಾಲು ಹೆಚ್ಚಿಸುವ ಕುರಿತು ಯಾವುದೇ ಮಾತುಕತೆ ನಡೆದಿಲ್ಲ ಎಂದು ಹೇಳಿದೆ.

ಷೇರು ಪಾಲು ಅತ್ಯಲ್ಪವಾಗಿದ್ದರೂ, ಸಿಎಸ್‌ಕೆ ತಂಡದ ಪ್ರಮುಖ ಕ್ರಿಕೆಟ್ ನಿರ್ಧಾರಗಳಲ್ಲಿ ಧೋನಿಯ ಪ್ರಭಾವ ಮುಂದುವರಿದಿದೆ. ಹೊಸ ಮುಖ್ಯ ಕೋಚ್ ಆಯ್ಕೆ ಹಾಗೂ ಮುಂದಿನ ಹರಾಜಿಗೆ ಮುನ್ನ ಆಟಗಾರರ ಕುರಿತು ಚರ್ಚೆಗಳಲ್ಲಿ ಧೋನಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದು ವರದಿಯಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್‌ನಲ್ಲಿ ಐದು ಬಾರಿ ಚಾಂಪಿಯನ್ ಆಗಿರುವ ಅತ್ಯಂತ ಯಶಸ್ವಿ ತಂಡಗಳಲ್ಲಿ ಒಂದಾಗಿದೆ. 2023ರಲ್ಲಿ ಕೊನೆಯ ಬಾರಿಗೆ ಪ್ರಶಸ್ತಿ ಗೆದ್ದಿದ್ದ ಸಿಎಸ್‌ಕೆ, ಆ ಬಳಿಕ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡಲು ವಿಫಲವಾಗಿದೆ. ಕಳೆದ ಕೆಲವು ಸೀಸನ್‌ಗಳಲ್ಲಿ ಪ್ಲೇಆಫ್ ಹಂತ ತಲುಪಲು ತಂಡಕ್ಕೆ ಸಾಧ್ಯವಾಗಿಲ್ಲ.
ಇದೀಗ ಮುಂದಿನ ಐಪಿಎಲ್ ಸೀಸನ್‌ನಲ್ಲಿ ಧೋನಿ ತಂಡದೊಂದಿಗೆ ಮುಂದುವರಿಯುತ್ತಾರೆಯೇ, ನಾಯಕ ಋತುರಾಜ್ ಗಾಯಕ್ವಾಡ್ ಹಾಗೂ ಹೊಸ ಕೋಚಿಂಗ್ ತಂಡದೊಂದಿಗೆ ಸಿಎಸ್‌ಕೆ ಮತ್ತೆ ಬಲಿಷ್ಠವಾಗಿ ಕಮ್‌ಬ್ಯಾಕ್ ಮಾಡುತ್ತದೆಯೇ ಎಂಬುದು ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ.







