ನಗೋಯಾ : ಐಚಿ-ನಗೋಯಾ ಏಷ್ಯನ್ ಗೇಮ್ಸ್‌ನ ಮಹಿಳೆಯರ 10 ಮೀಟರ್ ಏರ್ ರೈಫಲ್ ವಿಭಾಗದಲ್ಲಿ ಭಾರತದ ತಾರಾ ಶೂಟರ್ ಇಲಾವೆನಿಲ್ ವಲರಿವನ್ ಅಮೋಘ ಪ್ರದರ್ಶನ ನೀಡಿ ವೈಯಕ್ತಿಕ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದಾರೆ. ಇದರೊಂದಿಗೆ ಒಂದೇ ದಿನದಲ್ಲಿ ಎರಡು ಬೆಳ್ಳಿ ಪದಕ ಗೆದ್ದು ಗಮನಾರ್ಹ ಸಾಧನೆ ಮಾಡಿದ್ದಾರೆ.

ಭಾನುವಾರ ನಡೆದ ಫೈನಲ್ ಹಣಾಹಣಿಯಲ್ಲಿ ಇಲಾವೆನಿಲ್ 252.4 ಅಂಕ ಗಳಿಸಿ ಎರಡನೇ ಸ್ಥಾನ ಪಡೆದರು. ಜಪಾನ್‌ನ ಹಿನಾತಾ ತೈಚಿ 253.0 ಅಂಕಗಳೊಂದಿಗೆ ಏಷ್ಯನ್ ಗೇಮ್ಸ್ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದರೆ, ದಕ್ಷಿಣ ಕೊರಿಯಾದ ಹ್ಯೋಜಿನ್ ಬಾನ್ (230.4 ಅಂಕ) ಕಂಚಿನ ಪದಕಕ್ಕೆ ತೃಪ್ತಿಪಟ್ಟರು.
ಕೊನೆಯ ಎರಡು ಶಾಟ್‌ಗಳ ಹಂತದಲ್ಲಿ ಇಲಾವೆನಿಲ್ ಮತ್ತು ತೈಚಿ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಇಲಾವೆನಿಲ್ 10.4 ಮತ್ತು 10.1 ಅಂಕಗಳನ್ನು ಹೊಡೆದರೆ, ತೈಚಿ ಸತತವಾಗಿ 10.6 ಹಾಗೂ 10.2 ಅಂಕ ಕಲೆಹಾಕಿ ದಾಖಲೆಯೊಂದಿಗೆ ಅಗ್ರಸ್ಥಾನಕ್ಕೇರಿದರು.

ಇದಕ್ಕೂ ಮುನ್ನ ನಡೆದ ಮಹಿಳೆಯರ 10 ಮೀಟರ್ ಏರ್ ರೈಫಲ್ ತಂಡ ಸ್ಪರ್ಧೆಯಲ್ಲಿ ಇಲಾವೆನಿಲ್, ಸೋನಮ್ ಮಸ್ಕರ್ ಮತ್ತು ವಿದರ್ಸಾ ವಿನೋದ್ ಅವರನ್ನೊಳಗೊಂಡ ಭಾರತ ತಂಡ ಬೆಳ್ಳಿ ಪದಕ ಜಯಿಸಿತ್ತು. ಈ ಮೂಲಕ ಭಾರತದ ಶೂಟಿಂಗ್ ತಂಡವು ಕೂಟದಲ್ಲಿ ಎರಡು ಬೆಳ್ಳಿ ಪದಕಗಳೊಂದಿಗೆ ಶುಭಾರಂಭ ಕಂಡಿದೆ.
ಮತ್ತೊಂದೆಡೆ, ಮಿಕ್ಸ್‌ಡ್ ಮಾರ್ಷಲ್ ಆರ್ಟ್ಸ್ (MMA) ಕ್ರೀಡಾಪಟು ಸುಚಿಕಾ ತರಿಯಾಲ್ ಮಹಿಳೆಯರ 60 ಕೆಜಿ ವಿಭಾಗದ ಸೆಮಿಫೈನಲ್ ಪ್ರವೇಶಿಸುವ ಮೂಲಕ ದೇಶಕ್ಕೆ ಮತ್ತೊಂದು ಪದಕ ಖಚಿತಪಡಿಸಿದ್ದಾರೆ.






