ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ತನ್ನ ತೃಣಮೂಲ ಕಾಂಗ್ರೆಸ್ ಪಕ್ಷವನ್ನು ಅಭೂತಪೂರ್ವ ಯಶಸ್ಸಿನೆಡೆಗೆ ಕೊಂಡೊಯ್ದಿದ್ದಾರೆ. ಅದಾಗ್ಯೂ, ತಾನು ಸ್ಪರ್ಧಿಸಿದ್ದ ನಂದಿಗ್ರಾಮ ಕ್ಷೇತ್ರದಲ್ಲಿ ತನ್ನ ಮಾಜಿ ಸಹವರ್ತಿ ಸುವೆಂದು ಅಧಿಕಾರಿ ವಿರುದ್ಧ ಅಲ್ಪಮತಗಳ ಅಂತರದಲ್ಲಿ ಸೋಲು ಕಂಡಿದ್ದಾರೆ.
ಇಡೀ ರಾಜ್ಯದಲ್ಲಿ ಗೆಲುವಿನ ನಾಗಾಲೋಟ ನಡೆಸಿದ ಮಮತಾ, ತಾನು ನಿಂತಿದ್ದ ಕ್ಷೇತ್ರದಲ್ಲೇ ಸೋಲನುಭವಿಸಿರುವುದು ಟಿಎಂಸಿ ಹಾಗೂ ಸ್ವತಃ ಮಮತಾ ಅವರಿಗೆ ಸಾಕಷ್ಟು ಇರಿಸುಮುರಿಸು ತಂದಿದೆ. ನಂದಿಗ್ರಾಮದಲ್ಲಿ ಮಮತಾ ಸೋಲಿನ ಬಳಿಕ ಗೊಂದಲವೊಂದು ಸೃಷ್ಟಿಯಾಗಿದ್ದು, ಶಾಸಕ ಸ್ಥಾನವೂ ಗೆಲ್ಲಲಾಗದ ಮಮತಾ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಬಹುದೇ ಎಂಬ ಪ್ರಶ್ನೆ ಎದುರಾಗಿದೆ.
ಬಿಜೆಪಿಯಂತೂ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಯಲು ಮಮತಾ ಬ್ಯಾನರ್ಜಿಗೆ ಯಾವುದೇ ನೈತಿಕ ಹಕ್ಕಿಲ್ಲ. ಅವರು ಮುಖ್ಯಮಂತ್ರಿ ಸ್ಥಾನಕ್ಕೆ ಪ್ರಮಾಣ ವಚನ ಸ್ವೀಕರಿಸಬಾರದೆಂದು ಒತ್ತಾಯಿಸಿದೆ.
ಪ್ರಸ್ತುತ ಮುಖ್ಯಮಂತ್ರಿ ನಂದಿಗ್ರಾಮದಲ್ಲಿ ಸೋತಿದ್ದಾರೆ. ಬಿಜೆಪಿಯ ಸುವೆಂದು ಅಧಿಕಾರಿ 1,622 ಮತಗಳಿಂದ ಅವರ ವಿರುದ್ಧ ಜಯಗಳಿಸಿದ್ದಾರೆ. ಈ ಅಪಮಾನಕಾರಿ ಸೋಲಿನ ಬಳಿಕವೂ ಮುಖ್ಯಮಂತ್ರಿ ಪದವಿಯಲ್ಲಿ ಮುಂದುವರೆಯಲು ಮಮತಾ ಬ್ಯಾನರ್ಜಿಗೆ ನೈತಿಕತೆ ಇದೆಯೇ ಎಂದು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಪ್ರಶ್ನಿಸಿದ್ದಾರೆ.
ಮಮತಾ ಬ್ಯಾನರ್ಜಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಬಹುದೇ ಎಂಬ ಪ್ರಶ್ನೆಗೆ ಸಂಕ್ಷಿಪ್ತವಾಗಿ ಉತ್ತರಿಸುವುದಾದರೆ, ಹೌದು ಆಕೆಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲು ಇನ್ನೂ ಅವಕಾಶವಿದೆ.
ಈ ಕುರಿತು ಪ್ರತಿಧ್ವನಿಯೊಂದಿಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಮುಖಂಡ, ಕಾನೂನು ತಜ್ಞ ಬಿ ಎಲ್ ಶಂಕರ್, ಮುಂದಿನ ಆರು ತಿಂಗಳುಗಳ ಕಾಲ ಮಮತಾ ಬ್ಯಾನರ್ಜಿ ಮುಖ್ಯಮಂತ್ರಿಯಾಗಿ ಮುಂದುವರೆಯಲು ಸಾಂವಿಧಾನಿಕವಾಗಿ, ತಾಂತ್ರಿಕವಾಗಿ ಯಾವುದೇ ತೊಡಕಿಲ್ಲ. ಆದರೆ, ಆರು ತಿಂಗಳೊಳಗೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲಬೇಕು ಎಂದು ಹೇಳಿದ್ದಾರೆ.
ಮಮತಾ ಬ್ಯಾನರ್ಜಿ ಮುಖ್ಯಮಂತ್ರಿಯಾಗಬಹುದು. ಈಗ ಮುಖ್ಯಮಂತ್ರಿಯಾಗಿ ಮುಂದುವರೆದು, ಆರು ತಿಂಗಳೊಳಗೆ ಚುನಾವಣೆಗೆ ಸ್ಪರ್ಧಿಸುವುದನ್ನು ಯಾರೂ ಪ್ರಶ್ನಿಸಲಾಗದು. ಸಾಂವಿಧಾನಿಕವಾಗಿ, ಕಾನೂನುಬದ್ಧವಾಗಿ ಮತ್ತು ನೈತಿಕವಾಗಿ, ಮಮತಾ ಬ್ಯಾನರ್ಜಿ ಸಿಎಂ ಆಗುವುದನ್ನು ಯಾರೂ ಆಕ್ಷೇಪಿಸಬಾರದು ಎಂದು ರಾಜ್ಯಸಭಾ ಸದಸ್ಯ ಹಾಗೂ ಕಾನೂನು ತಜ್ಞ ಅಭಿಷೇಕ್ ಸಿಂಘ್ವಿ ಹೇಳಿದ್ದಾರೆ.
ಭಾರತ ಸಂವಿಧಾನದ 164 (4)ನೇ ವಿಧಿ ಪ್ರಕಾರ ಯಾವುದೇ ಒಬ್ಬ ಸಚಿವ ಸತತ ಆರು ತಿಂಗಳುಗಳ ಕಾಲ ರಾಜ್ಯ ಶಾಸಕಾಂಗದ ಸದಸ್ಯರಲ್ಲದಿದ್ದರೂ ಆ ಸ್ಥಾನದಲ್ಲಿ ಮುಂದುವರಿಯಬಹುದು. ಆರು ತಿಂಗಳ ಬಳಿಕವೂ ಶಾಸಕಾಂಗದ ಸದಸ್ಯರಾಗದಿದ್ದರೆ, ಅವರು ಆ ಸ್ಥಾನದಿಂದ ಕೆಳಗಿಳಿಯಬೇಕಾಗುತ್ತದೆ.
ಹಾಗಾಗಿ, ಮಮತಾ ಬ್ಯಾನರ್ಜಿಗೆ ಮುಂದಿನ ಆರು ತಿಂಗಳುಗಳ ಕಾಲ ಮುಖ್ಯಮಂತ್ರಿಯಾಗಿ ಮುಂದುವರೆಯುವ ಅವಕಾಶವಿದೆ. ಹಾಗೂ, ಈ ಅವಧಿ ಮುಗಿಯುವ ಮೊದಲೇ ಯಾವುದಾದರೂ ಉಪಚುನಾವಣೆಯಲ್ಲಿ ಸ್ಪರ್ಧಿಸಿ ರಾಜ್ಯ ಶಾಸಕಾಂಗದ ಸದಸ್ಯರಾಗಬೇಕು. ಒಂದು ವೇಳೆ ಯಾವುದೇ ವಿಧದಲ್ಲಿ ಶಾಸಕಾಂಗದ ಸದಸ್ಯರಾಗಲು ಮಮತಾ ಸೋತರೆ, ಆರು ತಿಂಗಳ ಬಳಿಕ ಅವರೂ ಮುಖ್ಯಮಂತ್ರಿ ಹುದ್ದೆಯನ್ನು ತ್ಯಜಿಸಬೇಕಾಗುತ್ತದೆ.
ಮಮತಾ ಬ್ಯಾನರ್ಜಿ ರಾಜ್ಯ ಶಾಸಕಾಂಗದಲ್ಲಿ ಸದಸ್ಯರಾಗದೆ ಮುಖ್ಯಮಂತ್ರಿಯಾಗುವುದು ಇದೇ ಮೊದಲೇನಲ್ಲ. 2011 ರಲ್ಲಿ ಮಮತಾ ನೇತೃತ್ವದ ಟಿಎಂಸಿ ಮೊದಲ ಬಾರಿ ಅಧಿಕಾರ ಹಿಡಿಯುವಾಗ, ಮಮತಾ ಬ್ಯಾನರ್ಜಿ ಲೋಕಸಭಾ ಸದಸ್ಯರಾಗಿದ್ದರು. ಅದಾಗ್ಯೂ, ಮುಖ್ಯಮಂತ್ರಿ ಪ್ರಮಾಣವಚನ ಸ್ವೀಕರಿಸಿದ ಮಮತಾ, ತರುವಾಯ ಭವಾನಿಪೊರ್ ಕ್ಷೇತ್ರದಿಂದ ಉಪಚುನಾವಣೆ ಸ್ಪರ್ಧಿಸಿ ಗೆಲುವು ಪಡೆದರು. ಆ ಮೂಲಕ ಮುಖ್ಯಮಂತ್ರಿ ಗಾದಿಯನ್ನು ಭದ್ರಪಡಿಸಿದರು.
ಸದ್ಯ, ಖರ್ಧಾಹ ಕ್ಷೇತ್ರ ಖಾಲಿಯಿದೆ. ಖರ್ಧಾಹ ಕ್ಷೇತ್ರದಲ್ಲಿ ಕೋವಿಡ್19 ನಿಂದ ಮೃತಪಟ್ಟ ಟಿಎಂಸಿಯ ಕಾಜಲ್ ಸಿನ್ಹಾ ಗೆಲುವು ಸಾಧಿಸಿದ್ದಾರೆ. ಸುಮಾರು 15000 ಕ್ಕೂ ಹೆಚ್ಚು ಅಂತರದೊಂದಿಗೆ ಟಿಎಂಸಿ ಇಲ್ಲಿ ಗೆಲುವು ಪಡೆದುಕೊಂಡಿದ್ದು, ಈ ಕ್ಷೇತ್ರದಲ್ಲಿ ಟಿಎಂಸಿ ಭದ್ರ ಬುನಾದಿ ಹೊಂದಿದೆ. ಟಿಎಂಸಿ ಮೂಲಗಳ ಪ್ರಕಾರ ಈ ಕ್ಷೇತ್ರದಲ್ಲಿಯೇ ಮಮತಾ ಬ್ಯಾನರ್ಜಿ ಮತ್ತೊಮ್ಮೆ ಸ್ಪರ್ಧಿಸುವ ಸಾಧ್ಯತೆ ಇದೆ!
ಇನ್ನು, ವಿಧಾನಸಭಾ ಪರಿಷತ್ತು ಹೊಂದಿರುವ ರಾಜ್ಯಗಳಲ್ಲಿ ಎಂಎಲ್‌ಸಿ ಆಗುವ ಮೂಲಕವೂ ಮುಖ್ಯಮಂತ್ರಿಯಾಗಬಹುದು. ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ಕೂಡಾ ತನ್ನ ಮುಖ್ಯಮಂತ್ರಿ ಸ್ಥಾನವನ್ನು ಉಳಿಸಿಕೊಂಡದ್ದು ಈ ವಿಧಾನದ ಮೂಲಕ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅಂತೂ ಕಳೆದ 36 ವರ್ಷಗಳಿಂದ ಯಾವುದೇ ಬಹಿರಂಗ ಚುನಾವಣೆಯಲ್ಲಿ ಸ್ಪರ್ಧಿಸದೆಯೇ ಮುಖ್ಯಮಂತ್ರಿಯಾಗಿ ಉಳಿದಿರುವುದಕ್ಕೂ ಇದುವೇ ಕಾರಣ. 2017 ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆನೆ ನಡೆಸಿರದ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಕೂಡಾ ಮುಖ್ಯಮಂತ್ರಿ ಆಗಿರುವುದು ಹೀಗೆಯೇ.
ಆದರೆ, ಪಶ್ಚಿಮ ಬಂಗಾಳದಲ್ಲಿ ಶಾಸಕಾಂಗ ಪರಿಷತ್ತು ಚಾಲ್ತಿಯಲ್ಲಿಲ್ಲ. 1969 ರಲ್ಲಿಯೇ ಪಶ್ಚಿಮ ಬಂಗಾಳದ ಪರಿಷತ್ ಅನ್ನು ರದ್ದು ಪಡಿಸಲಾಗಿದೆ. ಹಾಗಾಗಿ, ಮತ್ತೊಮ್ಮೆ ಬಹಿರಂಗ ಚುನಾವಣೆಯನ್ನು ಎದುರಿಸದೆ ಮಮತಾ ಅವರಿಗೆ ಮುಖ್ಯಮಂತ್ರಿ ಆಗಿ ಮುಂದುವರಿಯುವ ಅವಕಾಶವೇ ಇರುವುದಿಲ್ಲ.
ಸದ್ಯ, ಬಿಜೆಪಿ ತನ್ನ ಸೋಲಿನ ಅಪಮಾನವನ್ನು ಮರೆ ಮಾಚಲು ಮಮತಾ ಅವರ ನೈತಿಕತೆಯನ್ನು ಪ್ರಶ್ನಿಸುತ್ತಿದೆ. ಮುಖ್ಯಮಂತ್ರಿಯಾಗಿ ಮುಂದುವರಿಯುವ ನೈತಿಕತೆ ಮಮತಾರಿಗಿಲ್ಲ ಎಂದೇ ಪ್ರತಿಪಾದಿಸುತ್ತಿದೆ. ಬಿಜೆಪಿಯ ಈ ಪ್ರಶ್ನೆಗೆ ಮಮತಾ ಬ್ಯಾನರ್ಜಿ ಹೇಗೆ ಉತ್ತರಿಸುತ್ತಾರೆ ಎನ್ನುವುದು ಸದ್ಯದ ಕುತೂಹಲ.