“ಪೊಲೀಸರಿಗೆ ಆತ್ಮ ಗೌರವವೆಂಬುದೇ ಇಲ್ಲ. ಎಲ್ಲ ಪೊಲೀಸರೂ ಕೆಟ್ಟು ಹಾಳಾಗಿ ಹೋಗಿದ್ದಾರೆ. ಪೊಲೀಸರು ಲಂಚ ಪಡೆದುಕೊಂಡು ನಾಯಿಯ ಹಾಗೆ ಬಿದ್ದಿರುತ್ತಾರೆ. ಅಂಥವರು ಪೊಲೀಸ್ ಯೂನಿಫಾರ್ಮ್ ಬಿಚ್ಚಿಟ್ಟು ಹೋಗಲಿ” ಕಳೆದ ಎರಡು ದಿನಗಳಿಂದ ಭಾರೀ ಚರ್ಚೆಗೆ ಗ್ರಾಸವಾಗಿರುವ ಕರ್ನಾಟಕ ಪೊಲೀಸರ ಘನತೆ ಮತ್ತು ಗೌರವವನ್ನು ಮಣ್ಣುಪಾಲು ಮಾಡುವ ಈ ಹೇಳಿಕೆಯನ್ನು ಯಾರೋ ಬೀದಿ ಮೇಲೆ ಹೋಗುವವರು ನೀಡಿದ್ದಲ್ಲ; ಬದಲಾಗಿ ಅದೇ ಕರ್ನಾಟಕ ಪೊಲೀಸ್ ವ್ಯವಸ್ಥೆಯ ಹೊಣೆ ಹೊತ್ತಿರುವ ಗೃಹ ಸಚಿವರೇ ಆಡಿರುವ ಮಾತುಗಳು ಇವು.
ಜನಸಾಮಾನ್ಯರ ಕಣ್ಣಲ್ಲಿ ಕರ್ನಾಟಕ ಪೊಲೀಸರನ್ನು ನಿಕೃಷ್ಟರನ್ನಾಗಿ ಮಾಡುವ, ವ್ಯವಸ್ಥೆಯ ಮೇಲಿನ ಜನರ ಗೌರವ ಮತ್ತು ಭರವಸೆಯನ್ನು ಕಳೆಯುವ ಇಂತಹ ಹೇಳಿಕೆಯನ್ನು ಸ್ವತಃ ಗೃಹ ಸಚಿವರೇ ನೀಡಿದರೆ, ಅದರ ಪರಿಣಾಮಗಳೇನು? ಸ್ವತಃ ತಮ್ಮದೇ ನಿಯಂತ್ರಣದಲ್ಲಿರುವ ಇಲಾಖೆಯ ಮಾನ ಕಳೆಯುವಂತಹ ಈ ಹೇಳಿಕೆ ನೇರವಾಗಿ ಕಾನೂನು ಮತ್ತು ಸುವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ ಎಂಬ ಕನಿಷ್ಟ ವಿವೇಚನೆಯನ್ನೂ ಮರೆತು ಸಚಿವರು ಈ ಹೇಳಿಕೆ ನೀಡಿದರೆ? ಎಂಬುದು ಈಗ ಚರ್ಚೆಯಾಗುತ್ತಿರುವ ಸಂಗತಿ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ತಮ್ಮ ಕಾರ್ಯಾಲಯದಲ್ಲೇ ಕುಳಿತು ಪೊಲೀಸ್ ಅಧಿಕಾರಿಯೊಬ್ಬರೊಂದಿಗೆ ಮೊಬೈಲ್ ನಲ್ಲಿ ಮಾತನಾಡುತ್ತಾ ಸಚಿವ ಆರಗ ಅವರು ಈ ಮಾತುಗಳನ್ನು ಆಡಿದ್ದಾರೆ. ಸಚಿವರ ಮಾತುಗಳು ವಿಡಿಯೋ ಸಹಿತ ವೈರಲ್ ಆಗಿವೆ.
ತೀರ್ಥಹಳ್ಳಿಯಲ್ಲಿ ಗೋಸಾಗಣೆ ಮಾಡುವವರ ವಿರುದ್ಧ ಕಾರ್ಯಾಚರಣೆ ನಡೆಸಿದ ಗೋರಕ್ಷಕರ ಮೇಲೆಯೇ ಸಾಗಣೆಗಾರರು ವಾಹನ ಚಲಾಯಿಸಿದ ಘಟನೆ ಕಳೆದ ವಾರ ನಡೆದಿತ್ತು. ಆ ಘಟನೆಯ ಬೆನ್ನಲ್ಲೇ ಚಿಕ್ಕಮಗಳೂರು ಜಿಲ್ಲೆಯ ಪೊಲೀಸ್ ಅಧಿಕಾರಿಯೊಬ್ಬರೊಂದಿಗೆ ಮಾತನಾಡುತ್ತಾ ಸಚಿವರು ಹೀಗೆ ಹೀನಾಯವಾಗಿ ಇಡೀ ಇಲಾಖೆಯ ಪೊಲೀಸರನ್ನೇ ಜನರ ಕಣ್ಣಲ್ಲಿ ಸಣ್ಣವರಾಗಿ ಮಾಡಿ ತುಚ್ಛವಾಗಿ ಮಾತನಾಡಿರುವುದು ಬೆಳಕಿಗೆ ಬಂದಿದೆ.
“ಗೋ ಸಾಗಾಣೆ ಮಾಡೋದು ಯಾರು ಅಂತ ಪೊಲೀಸರಿಗೆ ಗೊತ್ತಿದೆ. ಆದರೆ, ಲಂಚ ತಿಂದು ಏನೂ ಗೊತ್ತಿಲ್ಲದಂತೆ ನಾಯಿಯ ಹಾಗೆ ಬಿದ್ದಿರುತ್ತಾರೆ. ಪೊಲೀಸರಿಗೆ ಆತ್ಮಗೌರವ ಬೇಕಲ್ಲ” ಎಂದು ವೈರಲ್ ಆಗಿರುವ ವೀಡಿಯೊದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಆಕ್ರೋಶದ ಮಾತುಗಳನ್ನು ಆಡಿದ್ದಾರೆ.
“ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದು, ಪೊಲೀಸರ ಕೈಗೆ ಕಾನೂನು ನೀಡಿದರೂ ಅಕ್ರಮ ಗೋ ಸಾಗಾಣೆ ನಡೆಯುತ್ತಿದೆ. ಪೊಲೀಸರಿಗೆ ಕೈತುಂಬಾ ಸಂಬಳ ನೀಡುತ್ತೇವೆ. ಆದರೂ, ಎಂಜಲು ಕಾಸಿನಾಸೆಗೆ ಲಂಚ ಪಡೆದು ಗೋ ಸಾಗಾಟಕ್ಕೆ ಅವಕಾಶ ಕೊಡುತ್ತಿದ್ದಾರೆ. ಯೋಗ್ಯತೆ ಇಲ್ಲದಿದ್ದರೆ ಯೂನಿಫಾರ್ಮ್ ಬಿಚ್ಚಿಟ್ಟು, ಮನೆ ಕಡೆ ಹೋಗಿ, ಮಣ್ಣು ಹೊರಲಿ. ನಾನು ಗೃಹ ಸಚಿವ ಸ್ಥಾನದಲ್ಲಿ ಇರಬೇಕೋ ಬೇಡವೋ?” ಎಂದು ಆರಗ ಹೇಳಿರುವುದು ವೀಡಿಯೋದಲ್ಲಿ ದಾಖಲಾಗಿದೆ.

ವೈರಲ್ ವಿಡಿಯೋ ರಾಜ್ಯಾದ್ಯಂತ ಭಾರೀ ಸಂಚಲನ ಸೃಷ್ಡಿಸಿದ್ದು ಸಚಿವರ ಹಿಡಿತತಪ್ಪಿದ ಮಾತುಗಳ ಬಗ್ಗೆ ಸಾರ್ವಜನಿಕ ವಲಯದಲ್ಲಿ ಮತ್ತು ಸ್ವತಃ ಅವರದೇ ಆಡಳಿತ ಪಕ್ಷ ಬಿಜೆಪಿಯ ಒಳಗೂ ಭಾರೀ ಅಸಮಾಧಾನ ಮತ್ತು ಆಕ್ರೋಶ ವ್ಯಕ್ತವಾಗುತ್ತಲೇ ಎಚ್ಚೆತ್ತ ಸಚಿವರು, ಸ್ಪಷ್ಡನೆ ನೀಡಿ ತಿಪ್ಪೆ ಸಾರಿಸುವ ಯತ್ನ ಮಾಡಿದ್ದಾರೆ.
“ನಾನು ಎಲ್ಲಾ ಪೊಲೀಸರ ವಿರುದ್ಧ ಮಾತನಾಡಿಲ್ಲ. ಗೋವಿನ ಕಳ್ಳರಿಗೆ, ಗೋ ಸಾಗಾಣಿಕೆಗೆ ಬೆಂಬಲ ನೀಡುವ ಪೊಲೀಸರ ಬಗ್ಗೆಯಷ್ಟೇ ಮಾತನಾಡಿದ್ದೇನೆ. ನನಗೆ ಪೊಲೀಸರ ಬಗ್ಗೆ ಅಪಾರವಾದ ಗೌರವವಿದೆ. ಮೊನ್ನೆ ಗೋ ಕಳ್ಳರನ್ನು ಹಿಡಿಯಲು ಹೋದವರ ಮೇಲೆಯೇ ಕಾರು ಹತ್ತಿಸಲಾಗಿದೆ.
ಇದರಿಂದ ಗಂಭೀರವಾಗಿ ಗಾಯಗೊಂಡವರು ಬದುಕುಳಿದಿರುವುದೇ ದೊಡ್ಡ ಪವಾಡ. ಆ ಘಟನೆಯಿಂದ ಬೇಸರವಾಗಿ ಮಾತನಾಡಿದ್ದೇನೆ. ಎಲ್ಲ ಪೊಲೀಸರೂ ಒಂದೇ ರೀತಿ ಇರುವುದಿಲ್ಲ. ಈ ರೀತಿಯ ಕೆಲವು ಪೊಲೀಸರಿಂದ ಇಡೀ ಇಲಾಖೆಗೆ ಕೆಟ್ಟ ಹೆಸರು ಬರುತ್ತಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಆದರೆ ಸಚಿವರ ಈ ಹೇಳಿಕೆ ಈಗಾಗಲೇ ರಾಜ್ಯ ಪೊಲೀಸರ ನೈತಿಕ ಸ್ಥೈರ್ಯ ಕುಂದಿಸುವ ನಿಟ್ಟಿನಲ್ಲಿ ದೊಡ್ಡಮಟ್ಟದ ಹಾನಿ ಮಾಡಿಯಾಗಿದೆ. ಇಲಾಖೆಯನ್ನು ಸಮರ್ಥಿಸಿಕೊಳ್ಳಬೇಕಾದ, ಅಧಿಕಾರಿ ಮತ್ತು ಸಿಬ್ಬಂದಿ ವರ್ಗದ ನೈತಿಕ ಸ್ಥೈರ್ಯ ಮತ್ತು ವಿಶ್ವಾಸ ಎತ್ತಿ ಹಿಡಿಯಬೇಕಾದ ಇಲಾಖೆಯ ಸಚಿವರೇ ನೀಡಿದ ತೀರಾ ಅವಹೇಳನಕಾರಿ ಮತ್ತು ಅವಮಾನಕರ ಹೇಳಿಕೆ ರಾಜ್ಯ ಪೊಲೀಸ್ ಇತಿಹಾಸದಲ್ಲೇ ದೊಡ್ಡ ಕಪ್ಪು ಚುಕ್ಕೆಯಾಗಿ ಅಳಿಸಲಾಗದಂತೆ ದಾಖಲಾಗಿಹೋಗಿದೆ.
ಒಂದು ಕಡೆ ಇಲಾಖೆಯ ವ್ಯವಸ್ಥೆಯ ನೈತಿಕ ಜಂಘಾಬಲವನ್ನೆ ಉಡುಗಿಸಿರುವ ಈ ಹೇಳಿಕೆ ಕುರಿತು ಇಲಾಖೆಯ ಒಳಗೂ ದೊಡ್ಡ ಮಟ್ಟದ ಅಸಮಾಧಾನ ಮತ್ತು ಅಸಹನೆ ಹುಟ್ಟಿಸಿದ್ದರೆ, ಗೃಹ ಸಚಿವರಾಗಿ ಆರಗ ಜ್ಞಾನೇಂದ್ರ ಅವರಿಗೆ ಇಲಾಖೆಯ ಮೇಲೆ ಹಿಡಿತವೂ ಇಲ್ಲ, ಪೊಲೀಸ್ ವ್ಯವಸ್ಥೆಯ ಮೇಲೆ ಸ್ವತಃ ಗೃಹ ಸಚಿವರಿಗೇ ವಿಶ್ವಾಸವೂ ಇಲ್ಲ ಎಂಬ ಸಂದೇಶವನ್ನು ಕೂಡ ರವಾನಿಸಿದೆ.
ಸಚಿವರಾಗಿ, ಸರ್ಕಾರದ ಭಾಗವಾಗಿ ಕೆಲಸ ಮಾಡಿದ ಅನುಭವ ಇರದ ಆರಗ ಜ್ಞಾನೇಂದ್ರ ಅವರನ್ನು ಏಕಾಏಕಿ ಗೃಹ ಸಚಿವ ಸ್ಥಾನಕ್ಕೆ ಏರಿಸಿದಾಗಲೇ ಅವರ ಅನನುಭವ, ಗೃಹ ಖಾತೆಯಂತಹ ನಿರ್ಣಾಯಕ ಸ್ಥಾನವನ್ನು ನಿಭಾಯಿಸಲು ಬೇಕಾದ ದಿಟ್ಟತನ, ಸೂಕ್ಷ್ಮತೆಗಳು ಅವರ ವ್ಯಕ್ತಿತ್ವದಲ್ಲಿ ಇವೆಯೇ ಎಂಬ ಪ್ರಶ್ನೆಗಳು ಎದ್ದಿದ್ದವು. ಇಂತಹ ಮಾತುಗಳು ಸ್ವತಃ ಬಿಜೆಪಿ ಮತ್ತು ಆರ್ ಎಸ್ ಎಸ್ ಅಂತರಂಗದಲ್ಲೂ ಮಾರ್ದನಿಸಿದ್ದವು.
ಅಂತಹ ಮಾತುಗಳ ನಡುವೆಯೇ ಗೃಹ ಸಚಿವರಾಗಿ ಅಧಿಕಾರ ಸ್ವೀಕರಿಸಿದ ವಾರದಲ್ಲೇ ನಡೆದ ಮೈಸೂರು ಗ್ಯಾಂಗ್ ರೇಪ್ ಪ್ರಕರಣದ ವಿಷಯದಲ್ಲಿ ಸಚಿವರ ಬಾಲಿಶಃ ಹೇಳಿಕೆ ಮತ್ತು ಪ್ರಕರಣವನ್ನು ನಿಭಾಯಿಸಿದ ರೀತಿ ಅಂತಹ ಅನುಮಾನಗಳಿಗೆ ಪುಷ್ಟಿ ನೀಡಿದ್ದವು. ಆ ಬಳಿಕ ಕೂಡ ಬಿಟ್ ಕಾಯಿನ್ ಪ್ರಕರಣವೂ ಸೇರಿದಂತೆ ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದಂತೆ ಹಲವು ಮಹತ್ವದ ವಿಷಯಗಳಲ್ಲಿ ಸಚಿವರ ಅನನುಭವ ಮತ್ತು ಅಪಕ್ಷ ಹೇಳಿಕೆ ಮತ್ತು ನಿಲುವುಗಳು ಮತ್ತೆ ಮತ್ತೆ ಚರ್ಚೆಗೆ ಒಳಗಾಗಿದ್ದವು.
ಇದೀಗ ಸ್ವತಃ ತಮ್ಮದೇ ಹೊಣೆಗಾರಿಕೆಯ ಇಲಾಖೆಯ ಬಗ್ಗೆಯೇ ಸಾರಾಸಗಟಾಗಿ, ಬಹಿರಂಗವಾಗಿ ತೀರಾ ಅವಹೇಳನಕಾರಿ ಮಾತುಗಳನ್ನು ಆಡುವ ಮೂಲಕ ಕರ್ನಾಟಕ ಪೊಲೀಸರ ಐತಿಹಾಸಿಕ ಘನತೆ ಮತ್ತು ಗೌರವಕ್ಕೆ ಮಾತ್ರವಲ್ಲದೆ, ತಮ್ಮದೇ ಸ್ಥಾನಮಾನಕ್ಕೂ ಮಸಿ ಬಳಿದುಕೊಂಡಿದ್ದಾರೆ.
ಅಂತಿಮವಾಗಿ ಪೊಲೀಸ್ ವ್ಯವಸ್ಥೆಯ ಮೇಲಿನ ಜನರ ನಂಬಿಕೆ ಮತ್ತು ಭರವಸೆಗೂ ಕುಂದು ತಂದಿದ್ದಾರೆ ಎಂಬುದು ತೀರಾ ದುರಾದೃಷ್ಟಕರ.
ಅಷ್ಟಕ್ಕೂ ಸಚಿವರು ಪೊಲೀಸರ ವಿರುದ್ಧ ಈ ಪರಿಯ ಆಕ್ರೋಶ ಹೊರಬಿದ್ದಿರುವುದು ಯಾವುದೋ ಜನಸಾಮಾನ್ಯರಿಗೆ ಪೊಲೀಸರಿಂದ ಕಿರುಕುಳವಾಗಿದೆ, ಅಥವಾ ಅನ್ಯಾಯವಾಗಿದೆ ಎಂಬ ಕಾರಣಕ್ಕಲ್ಲ, ಯಾವುದೊ ಅಮಾಯಕರ ಮೇಲೆ, ಯಾವುದೋ ಮಹಿಳೆಯ ಮೇಲೆ, ದೀನ-ದಲಿತರ ಮೇಲೆ ದೌರ್ಜನ್ಯವಾಗಿದೆ ಎಂಬ ಕಾರಣಕ್ಕಲ್ಲ. ಬದಲಾಗಿ ಸಂಘಪರಿವಾರದ ಕಾಲಾಳುಗಳಾದ ಗೋರಕ್ಷಕರಿಗೆ ಪೊಲೀಸರು ಬೆಲೆ ಕೊಡುತ್ತಿಲ್ಲ, ಅವರ ಧರ್ಮ ರಕ್ಷಣೆಯ ಹೆಸರಿನ ಕಾನೂನು ಕೈಗೆ ತೆಗೆದುಕೊಳ್ಳುವ ‘ಅಕ್ರಮ’ಗಳ ಬೆನ್ನಿಗೆ ಖಾಕಿಪಡೆ ನಿಂತಿಲ್ಲ ಎಂಬ ಕಾರಣಕ್ಕೆ!
ಈ ಅಂಶ ಕೂಡ ಗೃಹ ಸಚಿವರಾಗಿ ಆರಗ ಅವರ ನೈಜ ಕಾಳಜಿ ಏನು ಎಂಬ ಬಗ್ಗೆ ಸಾಕಷ್ಟು ಹೇಳುತ್ತದೆ.