PSI ನೇಮಕಾತಿ ಪರೀಕ್ಷೆ ಹಗರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಸಿಐಡಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ದಿವ್ಯಾ ಹಾಗರಗಿ ಸೇರಿದಂತೆ 5 ಆರೋಪಿಗಳನ್ನು ಮಹಾರಾಷ್ಟ್ರದ ಪುಣೆಯಲ್ಲಿ ಬಂಧಿಸಿದ್ದಿ ನಿಷ್ಪಕ್ಷಪಾತ ತನಿಖೆ ನಡೆಸುತ್ತೇವೆ ಎಂದ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ಕರ್ನಾಟಕ ಸಿಐಡಿ ಪೊಲೀಸರು ದಿವ್ಯಾ ಹಾಗರಗಿ ಸೇರಿದಂತೆ ಐವರನ್ನು ಮಹಾರಾಷ್ಟ್ರದ ಪುಣೆಯಲ್ಲಿ ಬಂಧಿಸಿದ್ದಾರೆ. ಇಂದು ಕಲಬುರಗಿಗೆ ವಿಚಾರಣೆಗೆ ಕರೆದುಕೊಂಡು ಬರುತ್ತಾರೆ ಎಂದರು.
545 ಪಿಎಸ್ಐ ಹುದ್ದೆಗಳ ನೇಮಕಾತಿಗೆ ನಡೆಸಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಕೆಲವರು ಮಾಡಿದ ಅಕ್ರಮದಿಂದಾಗಿ ಕಷ್ಟಪಟ್ಟು ಓದಿ ಪರೀಕ್ಷೆ ಬರೆದವರಿಗೆ ಕಷ್ಟ ಮತ್ತು ಅನ್ಯಾಯವಾಗಿದೆ. ಈ ವಿಷಯದಲ್ಲಿ ನೋವಾಗಿದೆ. ಅನೇಕ ವರ್ಷಗಳಿಂದ ಸರ್ಕಾರದ ಪರೀಕ್ಷೆಗಳು ನಡೆಯುತ್ತಿದ್ದು ಆಗಾಗ ಹಗರಣಗಳು ಕೂಡ ಆಗುತ್ತಿವೆ. ಇದಕ್ಕೆ ಇತಿಶ್ರೀ ಹಾಡಬೇಕೆಂದು ಸರ್ಕಾರ ಸವಾಲಾಗಿ ತೆಗೆದುಕೊಂಡಿದೆ ಎಂದು ಹೇಳಿದ್ದಾರೆ.

ಸಿಐಡಿ ತಂಡ ಉತ್ತಮವಾಗಿದ್ದು ಈ ಪ್ರಕರಣದಲ್ಲಿ ನಿಷ್ಪಕ್ಷಪಾತವಾಗಿ ತನಿಖೆ ನಡೆಸಲಿದೆ, ಎಷ್ಟೇ ಪ್ರಭಾವಿಗಳಿದ್ದರೂ ಸರ್ಕಾರ ಯಾವುದೇ ಕಾರಣಕ್ಕೂ ಮಧ್ಯೆ ಪ್ರವೇಶಿಸುವುದಿಲ್ಲ ಎಂದಿದ್ದಾರೆ