
ಬೆಂಗಳೂರು: ಬಿಗ್ಬಾಸ್ ಮಾಜಿ ಸ್ಪರ್ಧಿ ಹಾಗೂ ಮಾಡೆಲ್ ದಿವ್ಯಾ ಸುರೇಶ್ ಹಿಟ್ ಅಂಡ್ ರನ್ ಮಾಡಿ ಪರಾರಿಯಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ..
ಅ.04ರಂದು ಬ್ಯಾಟರಾಯನಪುರದ ಎಂ.ಎಂ.ರಸ್ತೆಯಲ್ಲಿ ಘಟನೆ ನಡೆದಿದ್ದು, ದಿವ್ಯಾ ಸುರೇಶ್ ವಿರುದ್ಧ ಬ್ಯಾಟರಾಯನಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಗಿದ್ದೇನು..?
ದೀಪಾಂಜಲಿ ನಗರ ನಿವಾಸಿ ಅನುಷಾಗೆ ಎಂಬುವರಿಗೆ ಅ.4ರ ಮಧ್ಯರಾತ್ರಿ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಹೀಗಾಗಿ ಸಂಬಂಧಿ ಕಿರಣ್ ಬೈಕ್ನಲ್ಲಿ ಅನುಷಾ, ಅನಿತಾ ಆಸ್ಪತ್ರೆಗೆ ತೆರಳುತ್ತಿದ್ದರು. ಈ ವೇಳೆ ಬ್ಯಾಟರಾನಪುರದ ಎಂ.ಎಂ ರಸ್ತೆ ಬಳಿ ನಾಯಿಗಳು ಬೊಗಳಿವೆ. ಭಯದಿಂದ ಕಿರಣ್ ಬೈಕ್ನಲ್ಲಿ ಸ್ವಲ್ಪ ಬಲ ಬದಿಗೆ ಹೋಗಿದ್ದಾರೆ. ಈ ವೇಳೆ ವೇಗವಾಗಿ ಕಾರನ್ನು ಚಾಲನೆ ಮಾಡಿಕೊಂಡು ಬಂದ ದಿವ್ಯಾ, ಬೈಕ್ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದಾರೆ.

ಆದರೆ ಕಾರ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ನಲ್ಲಿದ್ದ ಮೂವರು ನೆಲಕ್ಕೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣ ಅವರನ್ನು ಅಶ್ವಿನಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಈ ವೇಳೆ ಅನುಷಾಗೆ ಮಂಡಿ ಚಿಪ್ಪು ಹೊಡೆದಿದ್ದು, ಆಪರೇಷನ್ ಮಾಡಲಾಗಿದೆ.

ಅನುಷಾಗೆ ಆಪರೇಷನ್ ನಡೆದ ಬಳಿಕ ಅ. 7ರಂದು ಬ್ಯಾಟರಾಯನಪುರ ಸಂಚಾರ ಪೊಲೀಸ್ ಠಾಣೆಗೆ ಗಾಯಾಳು ಸಂಬಂಧಿ ಕಿರಣ್ ದೂರು ನೀಡಿದ್ದಾರೆ. ಈ ಸಂಬಂಧ ಪೊಲೀಸರು ಕೇಸ್ ದಾಖಲಿಸಿ ತನಿಖೆ ನಡೆಸ್ತಿದ್ದಾರೆ. ಆದರೆ ಇದುವರೆಗೆ ದಿವ್ಯಾ ಸುರೇಶ್ ತಮ್ಮನ್ನು ಸಂಪರ್ಕಿಸಿಲ್ಲ ಎಂದು ಕಿರಣ್ ಬೇಸರ ವ್ಯಕ್ತಪಡಿದ್ದಾರೆ.












