• Home
  • About Us
  • ಕರ್ನಾಟಕ
Friday, July 25, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ ಅಭಿಮತ

ಸೌಹಾರ್ದ ಭಂಜಕರಿಂದ ಶಿಕ್ಷಣಾರ್ಥಿಗಳನ್ನು ರಕ್ಷಿಸಬೇಕಿದೆ

ನಾ ದಿವಾಕರ by ನಾ ದಿವಾಕರ
February 11, 2022
in ಅಭಿಮತ
0
ಸೌಹಾರ್ದ ಭಂಜಕರಿಂದ ಶಿಕ್ಷಣಾರ್ಥಿಗಳನ್ನು ರಕ್ಷಿಸಬೇಕಿದೆ
Share on WhatsAppShare on FacebookShare on Telegram

ಇತ್ತೀಚೆಗೆ ತಾನೇ ರಾಜ್ಯಾದ್ಯಂತ ವಿವೇಕಾನಂದರ ಜನ್ಮದಿನವನ್ನು ಸಂಭ್ರಮದಿಂದ ಆಚರಿಸಲಾಗಿದೆ. ವಿವೇಕಾನಂದರ ಆಲೋಚನೆ ಮತ್ತು ತಾತ್ವಿಕ ಚಿಂತನೆಗಳಿಗೆ ವಿರುದ್ಧ ದಿಕ್ಕಿನಲ್ಲೇ ನಡೆಯುತ್ತಿದ್ದರೂ ರಾಜ್ಯ ಬಿಜೆಪಿ ಸರ್ಕಾರ ಮತ್ತು ಸಂಘಪರಿವಾರದ ವಿವಿಧ ಸಂಘಟನೆಗಳು, ಈ ಜಂಗಮ ಸನ್ಯಾಸಿಯ ಸಂದೇಶಗಳಿಗೆ ತಮ್ಮದೇ ಆದ ವ್ಯಾಖ್ಯಾನಗಳನ್ನು ನೀಡುವ ಮೂಲಕ ಯುವ ಸಮೂಹವನ್ನು ಸೆಳೆಯಲು ಯತ್ನಿಸುತ್ತಿವೆ. ಪ್ರತಿಯೊಂದು ಶಾಲಾ ಕಾಲೇಜಿನಲ್ಲೂ ವಿವೇಕಾನಂದ ಜಯಂತಿಯಂದು ಅವರ ಆದರ್ಶಗಳ ಪರಿಚಯ ಮಾಡಿಕೊಡುವ ಮೂಲಕ ವಿದ್ಯಾರ್ಥಿ ಸಮುದಾಯದಲ್ಲಿ ಆತ್ಮಸ್ಥೈರ್ಯವನ್ನು ಮೂಡಿಸುವ ಪ್ರಯತ್ನಗಳು ನಡೆಯುತ್ತಿವೆ. “ ಏಳಿ ಎದ್ದೇಳಿ ಗುರಿ ಮುಟ್ಟುವವರೆಗೂ ನಿಲ್ಲದಿರಿ ” ಎಂದು ವಿವೇಕಾನಂದರು ದೇಶದ ಶೋಷಿತ ವರ್ಗಗಳಿಗೆ ನೀಡಿದ ಕರೆಗೆ ಹಿಂದೂ ಮತೀಯ ಅರ್ಥವನ್ನು ಕಲ್ಪಿಸುವ ಮೂಲಕ, ಯುವ ಸಮುದಾಯದ ನಡುವೆ ಜಾತಿ, ಮತ ಮತ್ತು ಧಾರ್ಮಿಕ ಅಸ್ಮಿತೆಗಳ ಗೋಡೆಗಳನ್ನು ಕಟ್ಟುವಲ್ಲಿ ಈ ಸಂಘಟನೆಗಳು ಯಶಸ್ವಿಯಾಗಿವೆ.

ADVERTISEMENT

ಈ ಪ್ರತ್ಯೇಕತೆಯ ಗೋಡೆಗಳು ಮತ್ತು ವಿಷಬೇಲಿಗಳಿಂದ ಸುತ್ತುವರೆಯಲ್ಪಟ್ಟ ವಿದ್ಯಾರ್ಥಿ ಸಮುದಾಯವೇ ಕಳೆದ ಹಲವು ದಿನಗಳಿಂದ ರಾಜ್ಯದಲ್ಲಿ ಹಿಜಾಬ್-ಕೇಸರಿಶಾಲುಗಳ ನಡುವೆ ಮತ್ತಷ್ಟು ಕಂದರಗಳನ್ನು ನಿರ್ಮಿಸುವುದಕ್ಕೆ ಮುಂದಾಗಿದೆ. ಶಿಕ್ಷಣ ವ್ಯವಸ್ಥೆಯಲ್ಲಿ ವಿದ್ಯಾರ್ಥಿ ಸಮುದಾಯ ಎದುರಿಸುತ್ತಿರುವ ಜ್ವಲಂತ ಜಟಿಲ ಸಮಸ್ಯೆಗಳಿಂದ ಜಾಗೃತರಾಗಬೇಕಿದ್ದ ವಿದ್ಯಾರ್ಥಿ ಸಮುದಾಯ ಇಂದು ತಾವು ಧರಿಸಬೇಕಾದ ಉಡುಪು ಮತ್ತು ಆ ಉಡುಪಿಗೆ ನೀಡಲಾಗುತ್ತಿರುವ ಧಾರ್ಮಿಕ ಲೇಪನದ ಚೌಕಟ್ಟಿನಲ್ಲಿ ತನ್ನನ್ನೇ ಬಂಧಿಸಿಕೊಳ್ಳುತ್ತಿದೆ. ಹಿಜಾಬ್ ವಿರುದ್ಧ ಕೇಸರಿ ಶಾಲು, ಜೈ ಶ್ರೀರಾಮ್ ವಿರುದ್ಧ ಜೈ ಭೀಮ್ ಅಥವಾ ಅಲ್ಲಾಹು ಅಕ್ಬರ್ ಘೋಷಣೆಗಳು ವಿದ್ಯಾರ್ಥಿ ಸಮುದಾಯದ ಮನದಲ್ಲಿ ಅಸ್ಮಿತೆಗಳ ಬೀಜ ಬಿತ್ತುವುದರಲ್ಲಿ ಸಫಲವಾಗುತ್ತಿದೆ. ಈಗಾಗಲೇ ಅಸ್ಮಿತೆಗಳ ನೊಗಭಾರಕ್ಕೆ ಸಿಲುಕಿ ಜರ್ಝರಿತವಾಗಿರುವ ಸಮಾಜದಲ್ಲಿ, ಪ್ರಾಪಂಚಿಕ ಜ್ಞಾನವೇ ಇಲ್ಲದಂತಹ ಯುವ ಸಮುದಾಯವನ್ನು ಅಸ್ಮಿತೆಯ ಬೇಲಿಗಳಲ್ಲಿ ಬಂಧಿಸಲಾಗುತ್ತಿದೆ.

ಭಾರತದಲ್ಲಿ ಸ್ವಾತಂತ್ರ್ಯ ಪೂರ್ವದಿಂದಲೂ ವಿದ್ಯಾರ್ಥಿ ಚಳುವಳಿಗೆ ಒಂದು ಪರಂಪರೆ ಇದೆ. ಸಮಾಜವನ್ನು ಕಾಡುತ್ತಿರುವ ಬಡತನ, ಅನಕ್ಷರತೆ, ಜಾತೀಯತೆ, ಅಸಹಿಷ್ಣುತೆ, ಅಸ್ಪೃಶ್ಯತೆ, ಮಹಿಳೆಯರ ಮೇಲಿನ ದೌರ್ಜನ್ಯ, ಸಾಮಾಜಿಕಾರ್ಥಿಕ ಶೋಷಣೆ ಇವುಗಳ ವಿರುದ್ಧ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಮತ್ತು ಸಮಾಜದ ಓರೆಕೋರೆಗಳನ್ನು ತಿದ್ದಬೇಕಾದ ಸಂದರ್ಭದಲ್ಲಿ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಪ್ರಯತ್ನಗಳು ನಡೆಯುತ್ತಲೇ ಬಂದಿವೆ. ಇದರೊಟ್ಟಿಗೇ ಭಾರತದ ಸಂವಿಧಾನದ ಆಶಯಗಳಂತೆ ಸಾಮಾಜಿಕಾರ್ಥಿಕ ಸಮಾನತೆ, ಸಾಂಸ್ಕೃತಿಕ ಸೌಹಾರ್ದತೆ, ಭ್ರಾತೃತ್ವ ಮತ್ತು ಶೋಷಣಾ ರಹಿತ ಸಮಾಜವನ್ನು ಸಾಕಾರಗೊಳಿಸಲು ಬೇಕಾದ ಬೌದ್ಧಿಕ ಆಲೋಚನೆಗಳನ್ನು ವಿದ್ಯಾರ್ಥಿ ಸಮುದಾಯದಲ್ಲಿ ಬಿತ್ತುತ್ತಲೇ ಬರಲಾಗಿದೆ.

“ಅಮೃತ ಕಾಲ”ದತ್ತ ದಾಪುಗಾಲು ಹಾಕುತ್ತಿರುವ ಪ್ರಸ್ತುತ “ಆತ್ಮನಿರ್ಭರ” ಭಾರತದಲ್ಲಿ ವಿದ್ಯಾರ್ಥಿ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳಾದರೂ ಏನು ? ದೇಶದ ಸಾಮಾಜಿಕ ಪರಿಸರ ಬದಲಾಗುತ್ತಿರುವಷ್ಟೇ ಕ್ಷಿಪ್ರ ಗತಿಯಲ್ಲಿ ಆರ್ಥಿಕ ಸ್ಥಿತ್ಯಂತರಗಳೂ ಬದಲಾಗುತ್ತಿವೆ. ನವ ಉದಾರವಾದದ ಬಂಡವಾಳಶಾಹಿ ಅರ್ಥವ್ಯವಸ್ಥೆ  ಈಗಾಗಲೇ ಇರುವ ಆರ್ಥಿಕ ತಾರತಮ್ಯಗಳನ್ನು ಮತ್ತಷ್ಟು ಹಿಗ್ಗಿಸಿ ಬಡವ-ಶ್ರೀಮಂತರ ನಡುವಿನ ಕಂದರವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಹೊಸ ಆರ್ಥಿಕ ನೀತಿಗಳನ್ನು ಜಾರಿಗೊಳಿಸಲಾಗುತ್ತಿದೆ. ಸಾರ್ವತ್ರಿಕ ಹಕ್ಕು ಎಂದು ಪರಿಗಣಿಸಲ್ಪಡಬೇಕಾಗಿದ್ದ ಶಿಕ್ಷಣ ಇಂದು ಉಳ್ಳವರ ಸ್ವತ್ತಾಗಿದೆ. ಒಕ್ಕೂಟ ಸರ್ಕಾರ ಜಾರಿಗೊಳಿಸುತ್ತಿರುವ ಹೊಸ ಶಿಕ್ಷಣ ನೀತಿ ಈ ಕಂದರವನ್ನು ಹೆಚ್ಚಿಸುತ್ತಲೇ ಡಿಜಿಟಲೀಕರಣದ ಮೂಲಕ ಪ್ರತ್ಯೇಕತೆಯ ಗೋಡೆಗಳನ್ನು ನಿರ್ಮಿಸುತ್ತಿದೆ. ಹೆಚ್ಚುತ್ತಿರುವ ಆರ್ಥಿಕ ಅಸಮಾನತೆಯೊಂದಿಗೇ ಸಾಮಾಜಿಕ ಅಂತರವನ್ನೂ ಹೆಚ್ಚಿಸುವ ನಿಟ್ಟಿನಲ್ಲಿ ಧಾರ್ಮಿಕ ಸಂಕೇತಗಳನ್ನು ಬಳಸುತ್ತಿರುವ ಮತಾಂಧರು ವಿದ್ಯಾರ್ಥಿ ಸಮುದಾಯವನ್ನು ದಿಕ್ಕು ತಪ್ಪಿಸುತ್ತಿದ್ದಾರೆ.

ಸಮಕಾಲೀನ ಇತಿಹಾಸದಲ್ಲೇ ಇಣುಕಿ ನೋಡಿದರೂ ಇವತ್ತಿನ ವಿದ್ಯಾರ್ಥಿಗಳಿಗೆ 1970ರ ದಶಕದ ವಿದ್ಯಾರ್ಥಿ ಚಳುವಳಿಗಳು ಆದರ್ಶಪ್ರಾಯವಾಗಿ ಕಾಣಬೇಕಲ್ಲವೆ ?. ಜಾತಿ ಶೋಷಣೆಯ ವಿರುದ್ಧ, ಸಮಾನತೆಗಾಗಿ ದೇಶಾದ್ಯಂತ ನಡೆದ ಅನೇಕ ವಿದ್ಯಾರ್ಥಿ ಚಳುವಳಿಗಳು, ಯುವ ಸಮುದಾಯದ ಸಾಂವಿಧಾನಿಕ ಶೈಕ್ಷಣಿಕ ಹಕ್ಕುಗಳಿಗಾಗಿ ಹೋರಾಡಿವೆ. ಈ  ಹೋರಾಟಗಳ ಫಲವಾಗಿಯೇ ಇಂದು ಲಕ್ಷಾಂತರ ವಿದ್ಯಾರ್ಥಿಗಳು ತಮಗೆ ಬರುವ ವಿದ್ಯಾರ್ಥಿ ವೇತನದಿಂದಲೇ ವ್ಯಾಸಂಗ ಮುಗಿಸುತ್ತಿದ್ದಾರೆ. ವಿಶ್ವವಿದ್ಯಾಲಯಗಳು ಸಂಶೋಧನೆಯ ನೆಲೆಗಳನ್ನು ವಿಸ್ತರಿಸಿವೆ. ಅಧ್ಯಯನ ಪೀಠಗಳು ದೇಶದ ನೈಜ ಇತಿಹಾಸವನ್ನು ತೆರೆದಿಟ್ಟಿವೆ. ಭಾಷೆ ಮತ್ತು ಸಾಹಿತ್ಯದ ನೆಲೆಗಳನ್ನು ವಿಸ್ತರಿಸುವ ಹಲವು ಸಂಸ್ಥೆಗಳು ಕುವೆಂಪು ಪ್ರತಿಪಾದಿಸಿದ ವಿಶ್ವಮಾನವತೆಯನ್ನು ಸಾಕಾರಗೊಳಿಸಲು ಪ್ರಯತ್ನಿಸುತ್ತಿವೆ.

ಈ ಪ್ರಯತ್ನಗಳಿಂದ ಜಾಗೃತಾವಸ್ಥೆಗೆ ತಲುಪಿದ್ದ ವಿದ್ಯಾರ್ಥಿ ಸಮುದಾಯದ ನಡುವೆ ಇಂದು ಜಾತಿಯ ಗೋಡೆಗಳು ನಿರ್ಮಾಣವಾಗಿದೆ. ಮತೀಯ ಬೇಲಿಗಳು ಸೃಷ್ಟಿಯಾಗಿವೆ. ಧಾರ್ಮಿಕ ಮೂಲಭೂತವಾದ, ಮತಾಂಧತೆ ಕೇಸರಿ ಶಾಲುಗಳ ಮೂಲಕ, ಹಿಜಾಬ್‍ಗಳ ಮೂಲಕ ಶಾಲಾ ಕೊಠಡಿಗಳನ್ನು ಪ್ರವೇಶಿಸುತ್ತಿವೆ. ಮುಸ್ಲಿಂ ಹೆಣ್ಣುಮಕ್ಕಳ ಸಾಂವಿಧಾನಿಕ ಹಕ್ಕುಗಳನ್ನು ಮತೀಯ ನೆಲೆಯಲ್ಲಿ ಕಸಿದುಕೊಳ್ಳುವ ಒಂದು ವಿಕೃತ ಮತಾಂಧ ರಾಜಕಾರಣಕ್ಕೆ ಹಿಂದೂ ಮತೀಯವಾದಿಗಳು ಷಡ್ಯಂತ್ರಗಳನ್ನು ರೂಪಿಸುತ್ತಿದ್ದಾರೆ. ಮತ್ತೊಂದೆಡೆ ತಮ್ಮ ಸಾಂವಿಧಾನಿಕ ಹಕ್ಕುಗಳಿಗಿಂತಲೂ ಮಿಗಿಲಾಗಿ, ಧಾರ್ಮಿಕ ಅಸ್ಮಿತೆ ಮತ್ತು ಸಂಕೇತಗಳ ರಕ್ಷಣೆಗಾಗಿ ಹೋರಾಡುವ ಮೂಲಕ ಮುಸ್ಲಿಂ ಮತೀಯವಾದಿಗಳು, ಮಕ್ಕಳ ಮನಸಿನಲ್ಲಿ “ಅನ್ಯಭಾವ” ಸೃಷ್ಟಿಸುವಲ್ಲಿ ತೊಡಗಿವೆ. ಶಾಲಾ ಕಾಲೇಜುಗಳಲ್ಲಿರುವ ಶಿಕ್ಷಣಾರ್ಥಿಗಳು ಜಾತಿ-ಮತ-ಶ್ರೇಣಿಗಳ ಹಂಗಿಲ್ಲದ ಒಂದು ಸುಂದರ ಲೋಕದಲ್ಲಿ, ಮಾನವೀಯ ನೆಲೆಗಳನ್ನು ವಿಸ್ತರಿಸುವ ಕಾಲಾಳುಗಳಾಗಿ ರೂಪುಗೊಳ್ಳಬೇಕಾದ ಸಂದರ್ಭದಲ್ಲಿ ಇಂದು ಹಿಜಾಬ್ ಕೇಸರಿ ಶಾಲುಗಳ ನಡುವಿನ ಸಂಘರ್ಷಕ್ಕೆ ಬಲಿಯಾಗುತ್ತಿದ್ದಾರೆ.

ಶತಮಾನದ ತಲೆಮಾರು ಎಂದೇ ಪರಿಗಣಿಸಲಾಗುವ ಒಂದು ಇಡೀ ಪೀಳಿಗೆ ಇಂದು ಭಾರತದ ಬಹುತ್ವ ಸಂಸ್ಕೃತಿಯ ನೆಲೆಗಳಿಂದ ವಿಮುಖವಾಗಿ, ದ್ವೇಷ ರಾಜಕಾರಣಕ್ಕೆ ದಾಳವಾಗುತ್ತಿದೆ. ತಮ್ಮ ಮುಂದಿರುವ ಜಟಿಲ ಸವಾಲುಗಳನ್ನು ಅರ್ಥಮಾಡಿಕೊಂಡು, ಶೈಕ್ಷಣಿಕ ವಲಯದಲ್ಲಿ ಉದ್ಭವಿಸುತ್ತಿರುವ ಸಮಸ್ಯೆಗಳನ್ನು ಎದುರಿಸಲು ಸಜ್ಜಾಗಬೇಕಾದ ವಿದ್ಯಾರ್ಥಿಗಳು ತಮ್ಮ ಜ್ಞಾನ ದೇಗುಲಕ್ಕೇ ಕಲ್ಲೆಸೆಯುವ ಮಟ್ಟಿಗೆ ಹಾದಿ ತಪ್ಪಿದ್ದಾರೆ. ಆದರೆ ವಿದ್ಯಾರ್ಥಿ ಸಮುದಾಯ ಯೋಚಿಸಬೇಕಾದ್ದು ತಮ್ಮ ಹಾಗೂ ತಮ್ಮ ನಂತರದ ತಲೆಮಾರಿನ ಭವಿಷ್ಯದ ಬಗ್ಗೆ ಅಲ್ಲವೇ ? ವಾಣಿಜ್ಯೀಕರಣಕ್ಕೊಳಗಾಗಿದ್ದ ಶಿಕ್ಷಣ ವ್ಯವಸ್ಥೆ ಇಂದು ಕಾರ್ಪೋರೇಟೀಕರಣಕ್ಕೊಳಗಾಗುತ್ತಿದೆ. ಡಿಜಿಟಲ್ ಬೋಧನೆ ಅಥವಾ ಆನ್ ಲೈನ್ ಶಿಕ್ಷಣ ಎಂಬ ಹೊಸ ಅವಿಷ್ಕಾರಗಳು, ಸಮಾಜದ ಮೇಲ್ಪದರದ ಗಣ್ಯ ಸಮುದಾಯವನ್ನು ಪೋಷಿಸುವ ಮತ್ತು ಉತ್ತೇಜಿಸುವ ಶೈಕ್ಷಣಿಕ ವೇದಿಕೆಯನ್ನು ನಿರ್ಮಿಸುತ್ತವೆ.

ಬದುಕು ಸವೆಸಲು ಅವಶ್ಯವಾದ ಮೂಲಭೂತ ಸೌಕರ್ಯಗಳಿಂದಲೇ ವಂಚಿತರಾಗಿರುವ ಕೋಟ್ಯಂತರ ಮಕ್ಕಳು ನಮ್ಮ ನಡುವೆ ಇದ್ದಾರೆ.  ಗ್ರಾಮೀಣ ಮತ್ತು ನಗರ ಪ್ರದೇಶಗಳ ತಳಮಟ್ಟದ ಜನಸಮುದಾಯಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಮರೀಚಿಕೆಯಾಗುತ್ತಿದೆ. ಸರ್ಕಾರಗಳು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರವನ್ನು ತಮ್ಮ ಆದ್ಯತಾ ವಲಯದಿಂದ ಹೊರಗಿರಿಸುತ್ತಲೇ, ವ್ಯಾಪಾರೀಕರಣಗೊಂಡ ಶಿಕ್ಷಣವನ್ನು ಮಾರುಕಟ್ಟೆ ವ್ಯಾಪ್ತಿಗೊಳಪಡಿಸಲಾಗುತ್ತಿದೆ. ಒಂದು ಸಮೀಕ್ಷೆಯ ಪ್ರಕಾರ ಏಳನೆಯ ತರಗತಿಯಿಂದ ತೇರ್ಗಡೆಯಾದವರ ಪೈಕಿ ಶೇ 58ರಷ್ಟು ಮಕ್ಕಳು ಮಾತ್ರವೇ ಎಂಟನೆಯ ತರಗತಿಯನ್ನು ಪ್ರವೇಶಿಸುತ್ತಿದ್ದಾರೆ. ಅಂದರೆ ನೂರರಲ್ಲಿ 42 ಮಕ್ಕಳು ಏಳನೆ ತರಗತಿಗೇ, 12-13 ವಯೋಮಾನದಲ್ಲೇ ನಿರ್ಗಮಿಸಿರುತ್ತಾರೆ. ಇವರೆಲ್ಲರೂ ಶ್ರಮಜೀವಿಗಳ ಲೋಕಕ್ಕೆ ಸೇರ್ಪಡೆಯಾಗುತ್ತಾರೆ. ಮತ್ತೊಂದೆಡೆ ಕಳೆದ ಮೂರು ವರ್ಷಗಳಲ್ಲಿ ದೇಶದಲ್ಲಿ 25 ಸಾವಿರ ಯುವಕ ಯುವತಿಯರು ನಿರುದ್ಯೋಗದ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಖಾಸಗೀಕರಣ ಪ್ರಕ್ರಿಯೆ ಚುರುಕಾದಂತೆಲ್ಲಾ ಕಾಲೇಜು ಶಿಕ್ಷಣ ತಳಸಮುದಾಯಗಳ ಪಾಲಿಗೆ ಗಗನ ಕುಸುಮವಾಗುತ್ತಿದೆ. ಸಾಮಾಜಿಕ ಶೋಷಣೆ ಮತ್ತು ಆರ್ಥಿಕ ಅಸಮಾನತೆಯಿಂದ ಹಿಂದುಳಿದಿರುವ ವರ್ಗಗಳಿಗೆ ಉನ್ನತ ಶಿಕ್ಷಣದಲ್ಲಿ ಅವಕಾಶ ಕಲ್ಪಿಸಲೆಂದೇ ರೂಪಿಸಲಾದ ಸರ್ಕಾರದ ಅನೇಕ ಆಡಳಿತ ನೀತಿಗಳಿಗೆ ತಿಲಾಂಜಲಿ ನೀಡಲಾಗಿದೆ. ಉನ್ನತ ಶಿಕ್ಷಣ ಮತ್ತು ಸ್ನಾತಕೋತ್ತರ ವ್ಯಾಸಂಗದಲ್ಲಿ ದೊರೆಯುತ್ತಿದ್ದ ವಿದ್ಯಾರ್ಥಿ ವೇತನದಿಂದ ಅಸಂಖ್ಯಾತ ಮಕ್ಕಳು ವಂಚಿತರಾಗುತ್ತಿದ್ದಾರೆ. ವ್ಯವಸ್ಥಿತವಾಗಿ ಸರ್ಕಾರಿ ಶಾಲೆಗಳನ್ನು ಹಂತಹಂತವಾಗಿ ಅವಸಾನದತ್ತ ಕರೆದೊಯ್ಯುತ್ತಿರುವ ನವ ಉದಾರವಾದಿ ನೀತಿಗಳಿಂದ, ದುಡಿಯುವ ವರ್ಗಗಳ ಮಕ್ಕಳು ಶಿಕ್ಷಣ ವಂಚಿತರಾಗುತ್ತಿದ್ದಾರೆ. ಕೋವಿದ್ ಸಂದರ್ಭದಲ್ಲೇ 45 ಲಕ್ಷಕ್ಕೂ ಹೆಚ್ಚು ಮಕ್ಕಳು ಶಿಕ್ಷಣವಂಚಿತರಾಗಿರುವುದಾಗಿ ವರದಿಯಾಗಿದೆ.

ಈ ಸಮಸ್ಯೆಗಳು ಇಂದಿನ ವಿದ್ಯಾರ್ಥಿ ಸಮುದಾಯವನ್ನು ಜಾಗೃತಗೊಳಿಸಬೇಕಿತ್ತು. ಪ್ರಾಥಮಿಕ ಶಿಕ್ಷಣದಿಂದ ಪದವಿ ಕಾಲೇಜುಗಳವರೆಗೆ ಸರ್ಕಾರಿ ಶಾಲೆಗಳಲ್ಲಿ ಮೂಲ ಸೌಕರ್ಯಗಳ ಕೊರತೆ ಇದೆ. ಒಂದು¸ ಸಮೀಕ್ಷೆಯ ಪ್ರಕಾರ ರಾಜ್ಯದ ಸರ್ಕಾರಿ ಶಾಲಾ ಕಾಲೇಜುಗಳ ಶೇ 27ರಷ್ಟು ಹೆಣ್ಣುಮಕ್ಕಳು ಶುದ್ಧ ಬಳಕೆಯ ನೀರು, ಶೌಚಾಲಯ ಮತ್ತು ಆರೋಗ್ಯಕರ ವಾತಾವರಣ ಇಲ್ಲದೆ ತಮ್ಮ ವಿದ್ಯಾರ್ಜನೆ ತೊರೆಯುತ್ತಿದ್ದಾರೆ. ಸಾರಿಗೆ ವ್ಯವಸ್ಥೆ ಸಮರ್ಪಕವಾಗಿಲ್ಲದ ಕಾರಣ ಸಾವಿರಾರು ಗ್ರಾಮೀಣ ಮಕ್ಕಳು ದೂರದಲ್ಲಿನ ಸರ್ಕಾರಿ ಶಾಲೆಗೆ ಸೇರಲಾಗದೆ ಖಾಸಗಿ ಶಾಲೆಗಳಲ್ಲಿ ಹೆಚ್ಚಿನ ಶುಲ್ಕ ನೀಡಿ ಶಿಕ್ಷಣ ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ಸಾವಿರಾರು ಬೋಧಕ ಹುದ್ದೆಗಳು ಖಾಲಿ ಉಳಿದಿವೆ. ಶಿಕ್ಷಕರ ಕೊರತೆಯ ಪರಿಣಾಮ, ಬೋಧನೆಯ ಗುಣಮಟ್ಟ ಕುಂಠಿತವಾಗುತ್ತಿದೆ. ಅತಿಥಿ ಉಪನ್ಯಾಸಕರ ಮೂಲಕವೇ ಕಾಲೇಜು ನಿರ್ವಹಿಸುತ್ತಿರುವ ಸರ್ಕಾರ ಬೋಧಕ ಸಿಬ್ಬಂದಿಯ ಬದುಕನ್ನೂ ಅನಿಶ್ಚಿತತೆಗೆ ದೂಡುತ್ತಿದೆ.

ಒಕ್ಕೂಟ ಸರ್ಕಾರದ ಅಧಿಕೃತ ಮಾಹಿತಿಯ ಪ್ರಕಾರವೇ ದೇಶದ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಶೇ 17.1ರಷ್ಟು ಬೋಧಕ ಹುದ್ದೆಗಳು ಖಾಲಿ ಇವೆ. ಸಿಕ್ಕಿಂನಲ್ಲಿ ಶೇ 57.5, ಬಿಹಾರ ಶೇ 39.9, ಜಾರ್ಖಂಡ್ ಶೇ 40.1, ಉತ್ತರಖಾಂಡ್ ಶೇ 24.3, ಛತ್ತಿಸ್ ಘಡ್ ಶೇ 21.7, ಮಧ್ಯಪ್ರದೇಶ ಶೇ 19.5 ಆಂಧ್ರ ಪ್ರದೇಶ ಶೇ 14.1, ತೆಲಂಗಾಣ ಶೇ 12.7, ಪಶ್ಚಿಮ ಬಂಗಾಲ ಶೇ 11.3, ದೆಹಲಿ ಶೇ 11.1 ಮತ್ತು ಕರ್ನಾಟಕದಲ್ಲೂ ಸಹ ಶೇ 14.2ರಷ್ಟು ಬೋಧಕ ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳನ್ನು ಭರ್ತಿ ಮಾಡುವುದರ ಮೂಲಕ ಮೂಲ ಸೌಕರ್ಯಗಳನ್ನು ಒದಗಿಸುವ ಬದಲು ಸರ್ಕಾರಗಳು ಹೆಚ್ಚಿನ ಸಂಖ್ಯೆಯ ಸರ್ಕಾರಿ ಶಾಲೆಗಳನ್ನು ಪರಸ್ಪರ ವಿಲೀನಗೊಳಿಸುವ ಮೂಲಕ, ಬಡ ಮಕ್ಕಳಿಗೆ ಸಾರಿಗೆ ಸಂಪರ್ಕ ಸಮಸ್ಯೆಯನ್ನು ಸೃಷ್ಟಿಸುತ್ತಿವೆ. ಖಾಲಿ ಇರುವ ಬೋಧಕ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ಶಿಕ್ಷಕರನ್ನು ನೇಮಿಸುವ ಮೂಲಕ, ಸಾಮಾಜಿಕ ಭದ್ರತೆ ಮತ್ತು ಆರ್ಥಿಕ ಸುಸ್ಥಿರತೆ ಕುಂಠಿತವಾಗುವಂತೆ ಮಾಡಲಾಗುತ್ತಿದೆ.

ವಿದ್ಯಾರ್ಥಿ ಸಮುದಾಯದ ಮೇಲೆ ಈ ಬೆಳವಣಿಗೆಗಳು ಎಂತಹ ಪರಿಣಾಮ ಬೀರುತ್ತವೆ ಎಂಬುದನ್ನು ಶಿಕ್ಷಣಾರ್ಥಿಗಳಿಗೆ ಮನದಟ್ಟು ಮಾಡಬೇಕಿದೆ. ಪರೀಕ್ಷೆಗಾಗಿಯೇ ವ್ಯಾಸಂಗ ಮಾಡಿ ಅಂಕಸಾಮ್ರಾಟರಾಗಿ ಮೆರೆಯುವ ಮೇಲ್ವರ್ಗದ, ಗಣ್ಯ ಸಮುದಾಯಗಳ, ಶ್ರೀಮಂತ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳ ವಾತಾವರಣದಿಂದಲೇ ಸಾಮಾಜಿಕ ವಾಸ್ತವಗಳಿಂದ ವಿಮುಖರಾಗುವಂತಹ ಪರಿಸ್ಥಿತಿಯನ್ನು ಸೃಷ್ಟಿಸಲಾಗುತ್ತಿದೆ. ಗುಣಮಟ್ಟದ ಶಿಕ್ಷಣ ನೀಡುವ ನೆಪದಲ್ಲಿ ಸಮಾಜದಲ್ಲಿ ಈಗಾಗಲೇ ಬೇರೂರಿರುವ ಉಳ್ಳವರ-ಇಲ್ಲದವರ ನಡುವಿನ ಕಂದರವನ್ನು ಹಿಗ್ಗಿಸಲಾಗುತ್ತಿದೆ. ಇದರ ನಡುವೆಯೇ ಶುಲ್ಕ ಪಾವತಿಸಲೂ ಸಾಧ್ಯವಾಗದ ಕೋಟ್ಯಂತರ ಬಡ ಮಕ್ಕಳು ಕಾಲೇಜು ವ್ಯಾಸಂಗವನ್ನು ಅರ್ಧದಲ್ಲೇ ತೊರೆಯುತ್ತಿದ್ದಾರೆ.

ಈ ನಿರ್ಗಮಿಸುವ ಅವಕಾಶವಂಚಿತ ವರ್ಗಗಳಿಗೆ ಹೊಸ ಶಿಕ್ಷಣ ವ್ಯವಸ್ಥೆಯಲ್ಲಿ ನಿರ್ಗಮನದ ಮಾರ್ಗಗಳನ್ನೂ ಅಧಿಕೃತವಾಗಿಯೇ ಸೃಷ್ಟಿಸಲಾಗುತ್ತಿದೆ. 2020ರ ಹೊಸ ಶಿಕ್ಷಣ ನೀತಿಯ ಪರಿಣಾಮ ಹೆಚ್ಚಿನ ಸಂಖ್ಯೆಯ ಬಡ, ಕೆಳಮಧ್ಯಮ ವರ್ಗದ ಹೆಣ್ಣುಮಕ್ಕಳು ಕಾಲೇಜು ಶಿಕ್ಷಣದಿಂದ ವಂಚಿತರಾಗುವ ಸಾಧ್ಯತೆಗಳಿವೆ, ಹಾಗೆಯೇ ಹೆಚ್ಚಿನ ಶಿಕ್ಷಣಾರ್ಥಿಗಳನ್ನು ಅವರ ಮೂಲ ಜಾತಿ ಆಧಾರಿತ ಕಸುಬುಗಳತ್ತ ದೂಡುವ ಸಾಧ್ಯತೆಗಳೂ ಇವೆ. ಶಿಕ್ಷಣ ವ್ಯವಸ್ಥೆಯನ್ನು ಕೇಂದ್ರೀಕರಿಸುವ ಮೂಲಕ, ಪ್ರತಿಭೆ ಮತ್ತು ಕೌಶಲ್ಯವನ್ನು ಪ್ರೋತ್ಸಾಹಿಸುವ ನೆಪದಲ್ಲಿ ರಾಷ್ಟ್ರಮಟ್ಟದ ಅರ್ಹತಾ ಪರೀಕ್ಷೆಗಳನ್ನು ನಡೆಸುವ ಕೇಂದ್ರ ಸರ್ಕಾರದ ಯೋಜನೆಗಳು, ತಳಸಮುದಾಯಗಳ, ಕೆಳ ಮಧ್ಯಮ ವರ್ಗಗಳ ಕೋಟ್ಯಂತರ ಶಿಕ್ಷಣಾರ್ಥಿಗಳನ್ನು ಅವಕಾಶವಂಚಿತರನ್ನಾಗಿ ಮಾಡುತ್ತವೆ.

ಈ ಬೆಳವಣಿಗೆಗಳ ನಡುವೆಯೇ ದೇಶಾದ್ಯಂತ ವ್ಯಾಪಕವಾಗಿ ಹರಡಿರುವ ವಾಟ್ಸಾಪ್ ವಿಶ್ವವಿದ್ಯಾಲಯಗಳ ಮೂಲಕ ವಿಚ್ಚಿದ್ರಕಾರಿ ಮತಾಂಧ ಶಕ್ತಿಗಳು ಎಳೆಯ ಮಕ್ಕಳಲ್ಲಿರಬೇಕಾದ ಇತಿಹಾಸ ಪ್ರಜ್ಞೆಯನ್ನೇ ನಾಶಪಡಿಸುತ್ತಿವೆ. ಚಾರಿತ್ರಿಕ ವ್ಯಕ್ತಿಗಳನ್ನು, ಘಟನೆಗಳನ್ನು ಮತ್ತು ಭಾರತದ ವಿಮೋಚನೆಗೆ ಕಾರಣರಾದ ಮಹಾನ್ ನಾಯಕರನ್ನೂ ಸಹ ಜಾತಿ-ಮತಗಳ ಅಸ್ಮಿತೆಯ ಚೌಕಟ್ಟಿನಲ್ಲಿ ಬಂಧಿಸಿ, ಭಾರತದ ಬಹುತ್ವ ಸಂಸ್ಕೃತಿಯನ್ನೇ ಬುಡಮೇಲು ಮಾಡುವ ಪ್ರಯತ್ನಗಳು ಹಿಂದೂ ಮತಾಂಧ ಸಂಘಟನೆಗಳ ಮೂಲಕ ನಡೆಯುತ್ತಲೇ ಇದೆ. ಇದರ ಪರಿಣಾಮವಾಗಿಯೇ ಇಂದು ಶಿಕ್ಷಣಾರ್ಥಿಗಳು ಶಾಲಾ ಕಾಲೇಜುಗಳ ಆವರಣದಲ್ಲಿ ತಮ್ಮ ಸಹಪಾಠಿಗಳಲ್ಲೂ ಧಾರ್ಮಿಕ ಅಸ್ಮಿತೆಯನ್ನು ಗುರುತಿಸುವ ಸಂಕುಚಿತತೆಗೆ ಬಲಿಯಾಗುತ್ತಿದ್ದಾರೆ. ಹಿಜಾಬ್-ಕೇಸರಿ ಶಾಲು ವಿವಾದ ಈ ಪ್ರಕ್ರಿಯೆಯನ್ನು ಸಾಂಸ್ಥೀಕರಿಸುವ ಒಂದು ಪ್ರಯತ್ನವಷ್ಟೇ ಆಗಿದೆ.

ತಮ್ಮ ವ್ಯಾಸಂಗ ಪೂರೈಸುವ ಯುವ ಸಮುದಾಯಕ್ಕೆ ಖಾತರಿಯಾದ ನೌಕರಿ ದೊರೆಯುವ ಭರವಸೆಯೇ ಇಲ್ಲದಂತಹ ಪರಿಸ್ಥಿತಿಯಲ್ಲಿ ಭಾರತ “ಅಮೃತ ಕಾಲ”ದತ್ತ ಸಾಗುತ್ತಿದೆ. 2021ರಲ್ಲಿ ರೈಲ್ವೆ ಇಲಾಖೆಯಲ್ಲಿ 35,281 ತಾಂತ್ರಿಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು 1 ಕೋಟಿ 25 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿವೆ. ಇದು ದೇಶದಲ್ಲಿರುವ ನಿರುದ್ಯೋಗ ಸಮಸ್ಯೆಯ ಒಂದು ಝಲಕ್ ಎನ್ನಬಹುದು. ಕಾಲೇಜು ಮೆಟ್ಟಿಲು ಹತ್ತಿರುವ ಪ್ರತಿಯೊಬ್ಬ ಶಿಕ್ಷಣಾರ್ಥಿಗೂ ಈ ಪರಿವೆ, ಪರಿಜ್ಞಾನ ಮತ್ತು ಅರಿವು ಇರಬೇಕಲ್ಲವೇ ? ತಮ್ಮ ವ್ಯಾಸಂಗದ ಅವಧಿಯ ಸಮಸ್ಯೆಗಳೊಂದಿಗೇ ಭವಿಷ್ಯದ ಹಾದಿಯ ಅನಿಶ್ಚಿತತೆಯೂ ಮಕ್ಕಳನ್ನು ಕಾಡಬೇಕಲ್ಲವೇ ? ಈ ಶಿಕ್ಷಣಾರ್ಥಿಗಳಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಪ್ರಜ್ಞಾವಂತ ಸಮಾಜ ಸಾಂಘಿಕವಾಗಿ, ಸಾಂಸ್ಥಿಕವಾಗಿ, ವ್ಯಕ್ತಿಗತ ನೆಲೆಯಲ್ಲಿ ವಿಫಲವಾಗಿದೆ ಎಂದು ಹೇಳಬಹುದೇ ? ಖಚಿತವಾಗಿ ಹೌದು. ನಾವು ಮಕ್ಕಳಿಗೆ ಈ ಸಮಸ್ಯೆಗಳ ಅರಿವು ಮೂಡಿಸುವಲ್ಲಿ, ಸಮಾಜವನ್ನು ಕಾಡುತ್ತಿರುವ ಜಾತೀಯತೆ, ಮತಾಂಧತೆ, ಅಸ್ಪೃಶ್ಯತೆ, ಮಹಿಳಾ ದೌರ್ಜನ್ಯಗಳಂತಹ ಅನಿಷ್ಠಗಳ ಬಗ್ಗೆ ಜಾಗೃತಿ ಮೂಡಿಸುವಲ್ಲಿ ವಿಫಲರಾಗಿದ್ದೇವೆ.

ಹಾಗಾಗಿಯೇ ಇಂದು ಒಂದು ಹಿಜಾಬ್, ಒಂದು ಕೇಸರಿ ಶಾಲು ಶಾಲಾ ಕಾಲೇಜಿನ ಮಕ್ಕಳಿಗೆ ಬೃಹತ್ ಸವಾಲುಗಳಂತೆ ಕಾಣುತ್ತಿದೆ. ಜಾತಿ ಮತಗಳ ಹಂಗಿಲ್ಲದ ಸುಂದರ ಸಮಾಜದ ಕನಸು ಕಾಣಬೇಕಾದ ಎಳೆ ಮನಸುಗಳು ಹಿಜಾಬ್-ಶಾಲುಗಳ ರಂಗುರಂಗಿನ ಭ್ರಮಾಲೋಕದಲ್ಲಿ ವಿಹರಿಸುತ್ತಿವೆ. ಈ ವಿಹಾರಕ್ಕೆ ಪೂರಕವಾಗಿ ವರ್ತಿಸುವ ನೀತಿಭ್ರಷ್ಟ ರಾಜಕಾರಣಿಗಳ ಬೃಹತ್ ಪಡೆಯೇ ನಮ್ಮ ನಡುವೆ ಇದೆ. ಈ ಪಡೆಗಳನ್ನು ನಾವು ಗೌರವಯುತವಾಗಿ “ಜನಪ್ರತಿನಿಧಿಗಳು-ಶಾಸಕರು-ಸಂಸದರು-ನಾಯಕರು” ಎಂದು ಪರಿಗಣಿಸುತ್ತೇವೆ. ದೇಶವನ್ನು ಮತ್ತೊಂದು ಮತಾಧಾರಿತ ವಿಭಜನೆಯತ್ತ ಕೊಂಡೊಯ್ಯುವ ಮಟ್ಟಿಗೆ ಈ ನೀತಿಭ್ರಷ್ಟ ನಾಯಕರು ತಮ್ಮ ಪ್ರಚೋದನಕಾರಿ ಹೇಳಿಕೆಗಳ ಮೂಲಕ ಮಕ್ಕಳ ಮನಸುಗಳನ್ನು ಕಲುಷಿತಗೊಳಿಸುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಹಿಂದೂ-ಮುಸ್ಲಿಂ ಮತಾಂಧ ಪಡೆಗಳು, ಸಾಂಸ್ಥಿಕವಾಗಿ, ಸಾಂಘಿಕವಾಗಿ ಮಕ್ಕಳ ಮನಸಿನಲ್ಲಿ ಪ್ರತ್ಯೇಕತೆಯ ಬೀಜಗಳನ್ನು ಬಿತ್ತುವ ಮೂಲಕ ಅಸ್ಮಿತೆಯ ಚೌಕಟ್ಟುಗಳನ್ನು ನಿರ್ಮಿಸುತ್ತಿದ್ದಾರೆ.

ಈ ಮತಾಂಧತೆ, ಕೋಮುವಾದ, ಜಾತಿ ಶ್ರೇಷ್ಠತೆ ಮತ್ತು ಜಾತಿವಾದದ ಕಬಂಧ ಬಾಹುಗಳಿಂದ ಶಾಲಾ ಕಾಲೇಜು ಮಕ್ಕಳನ್ನು ವಿಮೋಚನೆಗೊಳಿಸುವತ್ತ ಪ್ರಜ್ಞಾವಂತ ಸಮಾಜ ಯೋಚಿಸಬೇಕಿದೆ. ತಮ್ಮ ತಲೆಯ ಮೇಲಿನ ಒಂದು ವಸ್ತ್ರ, ಹಿಜಾಬ್ ಗಿಂತಲೂ ತಲೆಯ ಒಳಗಿರುವ ಮಿದುಳು ಪ್ರವೇಶಿಸುವ ಬೌದ್ಧಿಕ ಸರಕು ಮುಖ್ಯ ಎನ್ನುವುದನ್ನು ಮುಸ್ಲಿಂ ಹೆಣ್ಣು ಮಕ್ಕಳು ಅರ್ಥಮಾಡಿಕೊಳ್ಳಬೇಕಿದೆ. ಹಾಗೆಯೇ ತಮ್ಮ ಕೊರಳುಗಳನ್ನು ಅಲಂಕರಿಸುವ ಕೇಸರಿಶಾಲುಗಳಿಗಿಂತಲೂ ಹೆಚ್ಚು ಅಪಾಯಕಾರಿಯಾಗಿ ಉಸಿರುಗಟ್ಟಿಸುವ ಶಿಕ್ಷಣ ನೀತಿ, ನವ ಉದಾರವಾದಿ ಆರ್ಥಿಕ ನೀತಿ ನೇಣು ಕುಣಿಕೆಯಂತೆ ತಮ್ಮನ್ನು ಆಕ್ರಮಿಸುತ್ತಿದೆ ಎಂಬ ವಾಸ್ತವವನ್ನು ಹಿಂದೂ ಬಾಲಕರು ಅರ್ಥಮಾಡಿಕೊಳ್ಳಬೇಕಿದೆ.

ಹಿಜಾಬ್ ಆಗಲೀ, ಕೇಸರಿ ಶಾಲು ಆಗಲೀ ಸಾಂವಿಧಾನಿಕ ಮೌಲ್ಯಗಳ ಮತ್ತು ವ್ಯವಸ್ಥಿತವಾಗಿ ಪ್ರಭುತ್ವದ ನೀತಿಗಳ ಮೂಲಕವೇ ಕಸಿದುಕೊಳ್ಳಲಾಗುತ್ತಿರುವ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ವ್ಯಕ್ತಿ ಸ್ವಾತಂತ್ರ್ಯಗಳ ಸಂರಕ್ಷಣೆಯ ಸಾಧನೆಗಳಾಗುವುದಿಲ್ಲ, ಮತಾಂಧ, ಆಡಳಿತ ಭ್ರಷ್ಟ, ನೀತಿ ಭ್ರಷ್ಟ ರಾಜಕೀಯ ನಾಯಕರು, ಸಂಘಟನೆಗಳು, ಸಂಸ್ಥೆಗಳು ಮತ್ತು ಪಕ್ಷಗಳು ಅಮಾಯಕ ಮಕ್ಕಳ ನಡುವೆ ವಸ್ತ್ರಗಳ ಮೂಲಕವೇ ಶಾಶ್ವತ ಬೇಲಿಗಳನ್ನು ನಿರ್ಮಿಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಈ ಕ್ಷುದ್ರ ಶಕ್ತಿಗಳ ವಿರುದ್ಧ ದನಿ ಎತ್ತಿ ಭಾರತದ ಸಂವಿಧಾನ ಪ್ರತಿಪಾದಿಸುವ ಬಹುತ್ವ ಭಾರತವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ವಿದ್ಯಾರ್ಥಿ ಸಮುದಾಯ ಮತ್ತು ಪ್ರಜ್ಞಾವಂತ ಸಮಾಜ ಮುನ್ನಡೆಯಬೇಕಿದೆ.

Tags: BJPCongress PartyCovid 19ಎಚ್ ಡಿ ಕುಮಾರಸ್ವಾಮಿಕರೋನಾಕೋವಿಡ್-19ನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯಸೌಹಾರ್ದ ಭಂಜಕ
Previous Post

ವಿಜಯ್ ಮಲ್ಯಗೆ ವಿಚಾರಣೆಗೆ ಹಾಜರಾಗಲು ಕೊನೆ ಅವಕಾಶ ಕೊಟ್ಟ ಸುಪ್ರೀಂ ಕೋರ್ಟ್

Next Post

ಬೆಂಗಳೂರು ಬುಲ್ಸ್‌ಗೆ ಇಂದು ಮಾಡು ಇಲ್ಲವೇ ಮಡಿ ಪಂದ್ಯ : ಗೆದ್ದರಷ್ಟೇ ಪ್ಲೇ ಆಫ್!

Related Posts

Top Story

ಸಿಬಿಎಸ್‌ಇ 2025: 10ನೇ ಮತ್ತು 12ನೇ ತರಗತಿ ಪರೀಕ್ಷಾ ವೇಳಾಪಟ್ಟಿ ಪ್ರಕಟ

by ಪ್ರತಿಧ್ವನಿ
January 12, 2025
0

ಕೇಂದ್ರ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ) 2025ನೇ ಸಾಲಿನ 10ನೇ ಮತ್ತು 12ನೇ ತರಗತಿಯ ಪರೀಕ್ಷೆಗಳ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಈ ಪ್ರಕಾರ, ಪರೀಕ್ಷೆಗಳು ಫೆಬ್ರವರಿ 15,...

Read moreDetails

ಹಿರಿಯ ಸಾಹಿತಿ ನಾಡೋಜಾ ನಾ. ಡಿಸೋಜಾ ನಿಧನ..

January 6, 2025

ಅಭಿಮಾನಿಗಳ ಹಾಗೂ ಚಿತ್ರತಂಡದವರ ಗೆಲುವಿನ ನಗುವನ್ನು ನೋಡಿ ನಾನು ಸಂಭ್ರಮಿಸುತ್ತಿದ್ದೇನೆ .

December 31, 2024

Central Govt: ಕೇಂದ್ರ ಸರ್ಕಾರದಿಂದ ರೈತರಿಗೆ ಸಂತಸದ ಸುದ್ದಿ.. ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಘೋಷಣೆ..!!

December 6, 2024

ಉಪೇಂದ್ರ ನಿರ್ದೇಶಿಸಿ, ನಟಿಸಿರುವ “UI” ಚಿತ್ರ ಡಿಸೆಂಬರ್ 20 ರಂದು ಬಿಡುಗಡೆ..

December 3, 2024
Next Post
ಬೆಂಗಳೂರು ಬುಲ್ಸ್‌ಗೆ ಇಂದು ಮಾಡು ಇಲ್ಲವೇ ಮಡಿ ಪಂದ್ಯ : ಗೆದ್ದರಷ್ಟೇ ಪ್ಲೇ ಆಫ್!

ಬೆಂಗಳೂರು ಬುಲ್ಸ್‌ಗೆ ಇಂದು ಮಾಡು ಇಲ್ಲವೇ ಮಡಿ ಪಂದ್ಯ : ಗೆದ್ದರಷ್ಟೇ ಪ್ಲೇ ಆಫ್!

Please login to join discussion

Recent News

Top Story

ಸದ್ಯದಲ್ಲೇ ಬಿಡುಗಡೆಯಾಗಲಿದೆ “ಕಾದಲ್ ಚಿತ್ರದ ಮೊದಲ ಹಾಡು .

by ಪ್ರತಿಧ್ವನಿ
July 25, 2025
SSLC ಪರೀಕ್ಷಾ ನಿಯಮದಲ್ಲಿ ಬದಲಾವಣೆ..! ಇನ್ಮುಂದೆ 35% ಅಲ್ಲ..33% ಗೆ ವಿದ್ಯಾರ್ಥಿಗಳು ಪಾಸ್..?
Top Story

SSLC ಪರೀಕ್ಷಾ ನಿಯಮದಲ್ಲಿ ಬದಲಾವಣೆ..! ಇನ್ಮುಂದೆ 35% ಅಲ್ಲ..33% ಗೆ ವಿದ್ಯಾರ್ಥಿಗಳು ಪಾಸ್..?

by Chetan
July 25, 2025
ಮಹಾದಾಯಿ ವಿಚಾರದಲ್ಲಿ ಕರ್ನಾಟಕಕ್ಕೆ ಘೋರ ಅನ್ಯಾಯ – ತಾಕತ್ತಿದ್ದರೆ ಸಂಸದರು ಧ್ವನಿ ಎತ್ತಿ : ವಾಟಾಳ್ ನಾಗರಾಜ್ 
Top Story

ಮಹಾದಾಯಿ ವಿಚಾರದಲ್ಲಿ ಕರ್ನಾಟಕಕ್ಕೆ ಘೋರ ಅನ್ಯಾಯ – ತಾಕತ್ತಿದ್ದರೆ ಸಂಸದರು ಧ್ವನಿ ಎತ್ತಿ : ವಾಟಾಳ್ ನಾಗರಾಜ್ 

by Chetan
July 25, 2025
ಪೇಮೆಂಟ್ ಪಡೆದು ಪ್ರೊಟೆಸ್ಟ್ ಮಾಡುವ ಕಾಂಗ್ರೆಸ್ಸಿಗರೇ..! – ಮೇಕೆದಾಟುಗೆ DMK ತಕರಾರಿಗೆ ನಿಮ್ಮ ಬದ್ಧತೆ ಏನು ..?! : ಜೆಡಿಎಸ್ ಪ್ರಶ್ನೆ 
Top Story

ಒಟ್ಟೊಟ್ಟಿಗೆ ದೆಹಲಿಗೆ ಹಾರಿದ ಸಿಎಂ & ಡಿಸಿಎಂ..! ತರಾತುರಿಯಲ್ಲಿ ಹೈಕಮಾಂಡ್ ನಾಯಕರ ಭೇಟಿ..?! 

by Chetan
July 25, 2025
ಸೆಕ್ಯುಲರಿಸಂ ಆರಂಭದಿಂದಲೇ ಸೂಚ್ಯವಾಗಿತ್ತು 1976ರಲ್ಲಿ ಸ್ಪಷ್ಟವಾಯಿತು
Top Story

ಸೆಕ್ಯುಲರಿಸಂ ಆರಂಭದಿಂದಲೇ ಸೂಚ್ಯವಾಗಿತ್ತು 1976ರಲ್ಲಿ ಸ್ಪಷ್ಟವಾಯಿತು

by ನಾ ದಿವಾಕರ
July 25, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಸದ್ಯದಲ್ಲೇ ಬಿಡುಗಡೆಯಾಗಲಿದೆ “ಕಾದಲ್ ಚಿತ್ರದ ಮೊದಲ ಹಾಡು .

July 25, 2025
SSLC ಪರೀಕ್ಷಾ ನಿಯಮದಲ್ಲಿ ಬದಲಾವಣೆ..! ಇನ್ಮುಂದೆ 35% ಅಲ್ಲ..33% ಗೆ ವಿದ್ಯಾರ್ಥಿಗಳು ಪಾಸ್..?

SSLC ಪರೀಕ್ಷಾ ನಿಯಮದಲ್ಲಿ ಬದಲಾವಣೆ..! ಇನ್ಮುಂದೆ 35% ಅಲ್ಲ..33% ಗೆ ವಿದ್ಯಾರ್ಥಿಗಳು ಪಾಸ್..?

July 25, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada