ಭಾರತದಂತಹ ಬಹು-ಜನಾಂಗೀಯ ರಾಜಕೀಯಕ್ಕೆ ಸಹಿಷ್ಣುತೆಯೇ ಮೂಲಧಾತುವಾಗಿದೆ, ಅದರ ನಿರಾಕರಣೆಯು ಪ್ರಜಾಪ್ರಭುತ್ವದ ಆದರ್ಶವನ್ನು ಶೂನ್ಯ ಮತ್ತು ಅರ್ಥಹೀನಗೊಳಿಸುತ್ತದೆ. ಆದರೆ ಕರ್ನಾಟಕದಲ್ಲಿ ಈಗ ಬಿರುಸಾಗಿ ನಡೆಯುತ್ತಿರುವ ಹಿಜಾಬ್ ಚರ್ಚೆಯಲ್ಲಿ ಮುಖ್ಯ ವಿಚಾರವಾಗಬೇಕಿದ್ದ ಸಹಿಷ್ಣುತೆಯ ಕಲ್ಪನೆಯು ಎಲ್ಲೂ ಚರ್ಚೆಗೆ ಬರದೆ ತಪ್ಪಿಸಿಕೊಂಡಿದೆ.
ಒಬ್ಬ ವ್ಯಕ್ತಿಯ ಅಥವಾ ಒಂದು ಸಮುದಾಯದ ಕ್ರಿಯೆಗಳು ಯಾರಿಗೂ ಹಾನಿಯುಂಟು ಮಾಡದ ಹೊರತು ಆಡಳಿತವು ಮಧ್ಯ ಪ್ರವೇಶಿಸುವಂತಿಲ್ಲ ಮತ್ತು ‘ಸಾಮಾಜಿಕ ಅಸಮ್ಮತಿ ಅಥವಾ ಇಷ್ಟವಿಲ್ಲದಿರುವಿಕೆ’ ಸರ್ಕಾರದ ಮಧ್ಯಪ್ರವೇಶಕ್ಕೆ ಕಾರಣವಾಗಬಾರದು ಎನ್ನುತ್ತದೆ ಸಹಿಷ್ಣುತೆಯ ಮೂಲ ತತ್ವ.
ಸಹಿಷ್ಣುತೆಯು ಅತ್ಯಂತ ವಿಸ್ತಾರವಾದ ಕಲ್ಪನೆಯಾಗಿದ್ದು ‘ಹಾನಿ’ ಎನ್ನುವುದನ್ನು ತೀರಾ ಕ್ಷುಲ್ಲಕವಾಗಿ ಪರಿಗಣಿಸುತ್ತದೆ. ಆದರೆ ಸರ್ಕಾರವು ಆಗಾಗ್ಗೆ ‘ಸಾರ್ವಜನಿಕ ಸುವ್ಯವಸ್ಥೆ ಗೆ ಹಾನಿ’ ಎಂಬ ವಿಚಾರವನ್ನು ಮುಂದಿಟ್ಟುಕೊಂಡು ಆಚರಣೆಗಳು ಮತ್ತು ನಂಬಿಕೆಗಳ ಮೇಲೆ ದಾಳಿ ಮಾಡುತ್ತದೆ. ವಾಸ್ತವದ ನೆಲೆಗಟ್ಟಿನಲ್ಲಿ ಆಗುವ ಬಲವಾದ ಹಾನಿಯನ್ನ ಪರಿಗಣಿಸಬೇಕೇ ಹೊರತು ಹಾನಿಯಾಗಬಹುದು ಎಂದು ಊಹಿಸಿಕೊಂಡು ಆಚರಣೆಗಳ ಮಧ್ಯಪ್ರದೇಶ ಮಾಡಬಾರದು ಎನ್ನುವುದು ಸಹಿಷ್ಣುತೆಯ ಪ್ರಾಥಮಿಕ ಸಿದ್ಧಾಂತವಾಗಿದೆ
Cost-benefit ವಿಶ್ಲೇಷಣೆ
ಸಹಿಷ್ಣು ಸಮಾಜ ಮತ್ತು ರಾಜಕೀಯಕ್ಕಾಗಿ, ಆಚರಣೆಯನ್ನು ನಿಷೇಧಿಸುವ ಮೊದಲು, ನಿರ್ದಿಷ್ಟ ಅಭ್ಯಾಸದ ವಿರುದ್ಧ ಎತ್ತಿರುವ ಆಕ್ಷೇಪಣೆಗಳು ನಿಜವಾಗಿಯೇ ಮತ್ತು ವಸ್ತುನಿಷ್ಠವಾಗಿದೆಯೇ ಎಂದು ವಿಶ್ಲೇಷಣೆ ಮಾಡಬೇಕಿರುವುದು ವಿವೇಕಯುತ ನಡೆಯಾಗಿರುತ್ತದೆ ಮತ್ತು ವಿವಾದಗಳ ನ್ಯಾಯಯುತ ಪರಿಹಾರಕ್ಕಾಗಿ ಈ ಎಚ್ಚರಿಕೆ ಆಳುವ ಪಕ್ಷಗಳಿಗೆ ಅತ್ಯಂತ ಅವಶ್ಯಕ.
ಇದಕ್ಕಾಗಿ ನಾವು ಸಹಿಷ್ಣುತೆಯ ಹಳೆಯ ಕಲ್ಪನೆಯನ್ನು ಆಧುನಿಕ ಪರಿಕಲ್ಪನೆಯಿಂದ ಪ್ರತ್ಯೇಕಿಸುವುದು ಅತಿ ಮುಖ್ಯ. ಯಾಕೆಂದರೆ ಹಿಂದೆ ರಾಜರು ಕೆಲವು ಸಹಿಷ್ಣುತೆಯ ಕ್ರಿಯೆಗಳನ್ನು ಪ್ರೋತ್ಸಾಹಿಸಿದ್ದರೂ ಅದು ಈಗಿನಂತೆ ‘ಹಕ್ಕು’ ಎಂಬ ಕಲ್ಪನೆಯಡಿಯಲ್ಲಿ ಬರುವುದಿಲ್ಲ ಬದಲಾಗಿ ಅವರ ವೈಯಕ್ತಿಕ ಸೌಜನ್ಯ, ಉಪಕಾರ ಮತ್ತು ಪ್ರೋತ್ಸಾಹದ ಕ್ರಿಯೆಯಾಗಿ ಮಾತ್ರ ಕಾಣಿಸುತ್ತದೆ. ಮತ್ತು ಆ ಉದಾರತೆಗೆ ಮಿತಿಗಳೂ ಇದ್ದವು ಎಂಬುವುದನ್ನು ನಾವು ಮರೆಯಬಾರದು.
ಉದಾಹರಣೆಗೆ ಗುಜರಾತಿನ ಸಂಜನ್‌ನ ಸ್ಥಳೀಯ ರಾಜ ಜಡಿ ರಾಣಾ ತನ್ನ ರಾಜ್ಯದಲ್ಲಿ ಆಶ್ರಯ ಪಡೆದ ಝೋರಾಸ್ಟ್ರಿಯನ್‌ಗಳಿಗೆ ತಮ್ಮ ನಂಬಿಕೆಯನ್ನು ಖಾಸಗಿಯಾಗಿ ಆಚರಿಸಲು ಷರತ್ತುಬದ್ಧ ಅನುಮತಿಯನ್ನು ನೀಡಿದ್ದ. ಇದು ವಿಸ್ತಾರವಾದ ಸಹಿಷ್ಣುತೆಯ ಅಡಿಯಲ್ಲಿ ಬರದೆ ಆಡಳಿತಗಾರನ ಸಹಿಷ್ಣುತೆ ಅಥವಾ ಉದಾತ್ತತೆಯ ಕ್ರಿಯೆ ಎಂದು ಕರೆಯಬಹುದು.
ಅಂತೆಯೇ, ಒಟ್ಟೋಮನ್ ತುರ್ಕಿಯರ ಆಡಳಿತದಲ್ಲೂ , ಧಾರ್ಮಿಕ ಸ್ವಾತಂತ್ರ್ಯ ಮತ್ತು ವೈಯಕ್ತಿಕ ಕಾನೂನುಗಳ ರೂಪದಲ್ಲಿ ಸಾಂಸ್ಕೃತಿಕ ಸ್ವಾಯತ್ತತೆಯನ್ನು ದಮ್ಮಿಗಳು ಅಥವಾ ಅಲ್ಲಿನ ಧಾರ್ಮಿಕ ಅಲ್ಪಸಂಖ್ಯಾತರಿಗೆ ನೀಡಲಾಯಿತು. ಆದರೆ ಇದು ರಾಜಕೀಯ ಹಕ್ಕನ್ನು ನೀಡಲಿಲ್ಲ.
ಸಹಿಷ್ಣುತೆಯ ಕಲ್ಪನೆಯು ಹಿಂದೆಯೂ ಚಾಲ್ತಿಯಲ್ಲಿತ್ತು, ಆದರೆ ಅಂತರ್ಗತವಾಗಿ ಸೀಮಿತವಾಗಿತ್ತು, ಮುಖ್ಯವಾಗಿ ನಂಬಿಕೆ ಮತ್ತು ಕನ್ವಿಕ್ಷನ್ ವಿಷಯಗಳಿಗೆ ಸೀಮಿತವಾಗಿತ್ತು ಎನ್ನುವುದಕ್ಕೆ ಇವೆಲ್ಲಾ ಉತ್ತಮ ಉದಾಹರಣೆ. ಮತ್ತು ಇವೆಲ್ಲವೂ ಜಾತ್ಯಾತೀತ ತತ್ವಗಳಿಗೆ ಅನುಗುಣವಾಗಿತ್ತು ಎಂದು ಹೇಳಲಾಗುವುದಿಲ್ಲ.
ಸಾಂವಿಧಾನಿಕ ಸ್ವಾತಂತ್ರ್ಯಗಳು
ಆದರೆ ಆಧುನಿಕ ಭಾರತೀಯ ಸಂವಿಧಾನವು ಸಹಿಷ್ಣುತೆಯ ಸೀಮಿತ ಸ್ವರೂಪವನ್ನು ಮೀರುತ್ತದೆ ಮತ್ತು ಸಹಿಷ್ಣುತೆಯ ತತ್ವವನ್ನು ಎತ್ತಿಹಿಡಿಯುತ್ತದೆ. ಇದು ಆತ್ಮಸಾಕ್ಷಿಯ ಸ್ವಾತಂತ್ರ್ಯ ಮತ್ತು ಅವರ ಆಯ್ಕೆಯ ಧರ್ಮಗಳನ್ನು “ಪ್ರತಿಪಾದಿಸುವ ಮತ್ತು ಪ್ರಚಾರ ಮಾಡುವ” ಹಕ್ಕನ್ನು ಪ್ರತಿಪಾದಿಸುತ್ತದೆ. ಈ ಉಲ್ಲಂಘಿಸಲಾಗದ ಹಕ್ಕುಗಳ ಧಾರಕ, ವ್ಯಕ್ತಿಯೇ ಹೊರತು ಸಮುದಾಯಗಳು ಅಥವಾ ಗುಂಪುಗಳಲ್ಲ.
ನಿರ್ದಿಷ್ಟ ಧಾರ್ಮಿಕ ಆಚರಣೆಯನ್ನು ಒಪ್ಪದಿರಲು ಅಥವಾ ಸುಧಾರಣೆಗಳು ಮತ್ತು ಬದಲಾವಣೆಗಳನ್ನು ಮಾಡುವ ಹಕ್ಕನ್ನು ವ್ಯಕ್ತಿಗಳು ಹೊಂದಿದ್ದಾರೆ ಎಂದು ಇದು ಸೂಚಿಸುತ್ತದೆ. ಸಂವಿಧಾನದ ಪ್ರಕಾರ ಸಾರ್ವಜನಿಕ ಸುವ್ಯವಸ್ಥೆ, ನೈತಿಕತೆ ಮತ್ತು ಆರೋಗ್ಯ ಮಾತ್ರ ಧಾರ್ಮಿಕ ಸ್ವಾತಂತ್ರ್ಯವನ್ನು ನಿರ್ಬಂಧಿಸುವ ಸೀಮಿತ ಪರಿಸ್ಥಿತಿಗಳಾಗಿರಬೇಕು.
ಆದರೆ ನಮ್ಮಂತಹ ಸಂಕೀರ್ಣ ರಾಜಕೀಯದಲ್ಲಿ, ಸ್ವಾತಂತ್ರ್ಯದ ವ್ಯಾಖ್ಯಾನ ಮತ್ತು ಸೀಮಿತಗೊಳಿಸುವ ಪರಿಸ್ಥಿತಿಗಳೆರಡರಲ್ಲೂ ತೀವ್ರ ಎಚ್ಚರಿಕೆಯ ಅಗತ್ಯವಿರುತ್ತದೆ ಯಾಕೆಂದರೆ ಸ್ವಲ್ಪ ಎಚ್ಚರ ತಪ್ಪಿದರೂ ಇದು ಬಹುಸಂಖ್ಯಾತ ಹೇರಿಕೆ ಅಥವಾ ಅಲ್ಪಸಂಖ್ಯಾತರ ತುಷ್ಟೀಕರಣಕ್ಕೆ ಕಾರಣವಾಗಬಹುದು.
ಹಿಜಾಬ್ ಅಥವಾ ಹೆಡ್ ಸ್ಕಾರ್ಫ್‌ಗೆ ಹಲವಾರು ಆಕ್ಷೇಪಗಳಿವೆ. ಹಿಂದುತ್ವವಾದಿಗಳ ವಾದದ ತಿರುಳು ಏಕರೂಪತೆಯ ಮೇಲೆ ನಿಂತಿದೆ. ಉಡುಗೆ ಮತ್ತು ವೇಷಭೂಷಣಗಳಲ್ಲಿನ ಸಮಾನತೆಯಿಂದ ಏಕರೂಪದ ನಾಗರಿಕ ಸಂಹಿತೆಯವರೆಗೆ ಈ ವಾದದ ವ್ಯಾಪ್ತಿಯು ವಿಸ್ತಾರವಾಗಿದೆ. ಇಲ್ಲಿ ಈ ಏಕರೂಪತೆಯ ವಾದದ ಸಾಂಸ್ಕೃತಿಕ ಕಲಾಕೃತಿಗಳು ಬಹುಸಂಖ್ಯಾತ ಸಂಸ್ಕೃತಿಯ ರೂಢಿಗಳು, ನಂಬಿಕೆಗಳು ಮತ್ತು ಆಚರಣೆಗಳಿಂದ ಬಳಸಿಕೊಳ್ಳಲಾಗುತ್ತದೆ. ಏಕರೂಪ ಎನ್ನುವ ವಾದದಲ್ಲಿ ಇಲ್ಲಿನ ಧಾರ್ಮಿಕ ಅಲ್ಪಸಂಖ್ಯಾತರ ಆಚರಣೆ ಮತ್ತು ನಂಬಿಕೆಗಳಿಗೆ ಸ್ಥಾನವೇ ಇಲ್ಲ. ಭಾರತದಲ್ಲಿ, ಇಸ್ಲಾಂ ಮತ್ತು ಮುಸ್ಲಿಮರು ಪ್ರತಿ ಬಾರಿ ದ್ವೇಷಕ್ಕೀಡಾಗುತ್ತಿದ್ದರೂ , ವ್ಯಾಲೆಂಟೈನ್ಸ್ ಡೇ ಆಚರಣೆಗಳು, ಪಾಶ್ಚಿಮಾತ್ಯ ಉಡುಪು ಮತ್ತು ಕ್ಯಾಥೋಲಿಕ್ ಶಾಲೆಗಳಲ್ಲಿನ ಡ್ರೆಸ್ ಕೋಡ್‌ಗಳ ವಿರುದ್ಧವೂ ಪ್ರತಿಭಟನೆಗಳು ನಡೆಯುತ್ತಿರುತ್ತವೆ.
ಪ್ರಗತಿಪರತೆಯ ಕುರುಡುತನ
ಜಾತ್ಯತೀತ ಆಧುನಿಕತಾವಾದಿಗಳ ಒಂದು ವಿಭಾಗಕ್ಕೆ ಸಾಂಪ್ರದಾಯಿಕ ಪದ್ಧತಿಗಳು ಮತ್ತು ಆಚರಣೆಗಳು ಅಸಹ್ಯಕರವಾಗಿ ತೋರುತ್ತವೆ ಮತ್ತು ಅವರ ಅಭಿರುಚಿಗೆ ಹೊಂದಿಕೆಯಾಗುವುದಿಲ್ಲ. ಇಂತಹ ಆಧುನಿಕತಾವಾದಿ ಸ್ತ್ರೀವಾದಿಗಳು ಹಿಜಾಬ್ ನಿಷೇಧವನ್ನು ಬೆಂಬಲಿಸಿದ್ದಾರೆ ಅಥವಾ ಹಿಜಾಬ್ ನಿಷೇಧ ವಿರೋಧಿ ಪ್ರತಿಭಟನೆಗಳಿಗೆ ಬೆಂಬಲ ನೀಡಲು ನಿರಾಕರಿಸಿದ್ದಾರೆ.
ಉದಾರವಾದಿ ಸ್ತ್ರೀವಾದಿಗಳು ಸಾಮಾನ್ಯವಾಗಿ ಉಡುಗೆ, ವೃತ್ತಿ, ಸಂಗಾತಿಯ ಆಯ್ಕೆ ಮುಂತಾದ ವಿಚಾರಗಳಲ್ಲಿ ಮಹಿಳೆಯರ ಆಯ್ಕೆಗೆ ಹೆಚ್ಚಿನ ಮಹತ್ವ ಕೊಡುತ್ತಾರೆ. ಆದರೆ ಹಿಜಾಬ್ ಧರಿಸುತ್ತೇವೆ ಎನ್ನುವ ಹೆಣ್ಣುಮಕ್ಕಳ ಆಯ್ಕೆಯ ಸ್ವಾತಂತ್ರ್ಯವನ್ನು ಮಾತ್ರ ನಿರಾಕರಿಸುತ್ತಿದ್ದಾರೆ. ಇಲ್ಲಿನ ಸ್ತ್ರೀವಾದಿಗಳ ನಿಲುವು ಒಂದು ಸ್ಥಾಪಿತ ವಿಧಾನಕ್ಕೆ ಮಾತ್ರ ಅಂಟಿಕೊಂಡಿದ್ದು ಅದರಾಚೆಯ ಸ್ವಾತಂತ್ರ್ಯದ ಕಲ್ಪನೆಯೇ ಈ ವಾದಕ್ಕಿಲ್ಲ.
ಮತ್ತೊಂದು ‘ಲಿಬರಲ್’ ವಾದವು ಸಮವಸ್ತ್ರವು ಶಾಲೆಗಳ ವಿಶೇಷ ಹಕ್ಕು ಮತ್ತು ಒಂದು ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ನಡುವಿನ ಆದಾಯ ಗುಂಪುಗಳ ವ್ಯತ್ಯಾಸವನ್ನು ನಿವಾರಿಸುವುದು ಇದರ ಹಿಂದಿನ ಉದ್ದೇಶವಾಗಿದೆ ಎನ್ನುತ್ತದೆ. ಆದರೆ ಶಾಲೆಗಳನ್ನು ಈಗಾಗಲೇ ಸರ್ಕಾರಿ, ಖಾಸಗಿ, ಹೆಚ್ಚು ಫೀಸ್ ಕಟ್ಟಬೇಕಿರುವ ಶಾಲೆ ಎಂದೆಲ್ಲಾ ವರ್ಗೀಕರಿಸಲಾಗಿದ್ದು ಬಡವರ ಮಕ್ಕಳು ಅನಿವಾರ್ಯವಾಗಿ ಸರ್ಕಾರಿ ಶಾಲೆಗಳನ್ನು ಆಯ್ದುಕೊಳ್ಳುತ್ತಿದ್ದಾರೆ. ಮೂಲಭೂತವಾಗಿ ಈ ವಾದದ ಆಂತರಿಕ ತರ್ಕವು ಇಲ್ಲೇ ಬಿದ್ದು ಹೋಗುತ್ತದೆ, ಅಸಮಾನತೆಯನ್ನು ತಗ್ಗಿಸುತ್ತವೆ ಎಂದು ಹೇಳಲಾಗುವ ಶಾಲೆಗಳು ನಿಜಕ್ಕೂ ಇಲ್ಲಿ ಅಸಮಾನತೆಯನ್ನು ಪುನರುತ್ಪಾದಿಸುತ್ತಿವೆ.
ಅಲ್ಲದೆ, ಹಿಜಾಬ್ ಅಥವಾ ಟರ್ಬನ್‌ನ ಪ್ರತಿಪಾದಕರು ಸಮವಸ್ತ್ರದ ವಿರುದ್ಧ ತಮ್ಮ ವಾದವನ್ನು ಮಂಡಿಸುವುದಿಲ್ಲ, ಆದರೆ ಅದರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ. ಆದರೆ ‘ಸಮಾನತೆ’ ಎನ್ನುವ ವಾದವು ಇಲ್ಲಿ ಸ್ಥಳೀಯ ಆದ್ಯತೆಗಳು, ವೈವಿಧ್ಯತೆಯನ್ನು ಪರಿಗಣಿಸದೆ ಬಹುಸಂಖ್ಯಾತರ ಉಡುಪನ್ನು ಏಕರೂಪವಾಗಿ ಹೇರುತ್ತದೆ.
ಅತ್ಯಗತ್ಯ ಆಚರಣೆಗಳು ಮತ್ತು ಕಾನೂನು
ಒಂದೆಡೆ ಪ್ರಗತಿಪರರು ಹಿಜಾಬ್ ಇಸ್ಲಾಮಿಕ್ ಆಚರಣೆಯಲ್ಲ ಎಂದು ವಾದಿಸಿದರೆ ಮತ್ತೊಂದೆಡೆ ಹಿಜಾಬ್ ಪರ ಇರುವವರು ಹಿಜಾಬ್ ನಮ್ಮ ಧರ್ಮದ ಅತ್ಯಗತ್ಯ ಭಾಗವೆಂದು ವಾದಿಸುತ್ತಿದ್ದಾರೆ. ಸಮಸ್ಯೆಯೆಂದರೆ ಆಧುನಿಕ ನ್ಯಾಯಾಲಯಗಳು ಇದುವರೆಗೆ ನೀಡಿದ ಎಲ್ಲಾ ತೀರ್ಪುಗಳು ಯಾವುದೇ ಒಂದು ಧರ್ಮದ ಅತ್ಯಗತ್ಯ ಭಾಗದಂತಿರುವ ಆಚರಣೆಗಳಿಗೆ ಮಾತ್ರ ಸಾಂವಿಧಾನಿಕ ರಕ್ಷಣೆ ನೀಡಿವೆ. ಇದರರ್ಥ ಹಿಜಾಬ್‌ನ್ನು ಇಸ್ಲಾಮಿ ಆಚರಣೆಯ ಅತ್ಯಗತ್ಯ ಭಾಗವೆಂದು ನಿರೂಪಿಸಿದರೆ ಮಾತ್ರ ಸಾಂವಿಧಾನಿಕ ರಕ್ಷಣೆ ದೊರೆಯಬಹುದು.
ಆದರೆ ಕರ್ನಾಟಕದ ಮುಸ್ಲಿಂ ಹುಡುಗಿಯರು ಎತ್ತಿರುವ ಹಿಜಾಬ್ ಪ್ರಶ್ನೆಯು ಅತ್ಯಂತ ಸಂಕೀರ್ಣವಾಗಿದೆ. ಇದು ಏಕರೂಪತೆ ಮತ್ತು ಸಾರ್ವತ್ರಿಕತೆ, ಮಹಿಳಾ ವಿಮೋಚನೆ ಮತ್ತು ಅವರ ಗುಲಾಮಗಿರಿ, ಜಾತ್ಯತೀತತೆ ಮತ್ತು ಏಕ ಸಂಸ್ಕೃತಿ, ಆಯ್ಕೆಯ ಹಕ್ಕು ಮತ್ತು ಹೇರಿಕೆಯ ಕುರಿತು ದೊಡ್ಡ ಚರ್ಚೆಯನ್ನು ಹುಟ್ಟುಹಾಕುತ್ತದೆ.
ಸಹಿಷ್ಣುತೆಯ ಸಿದ್ಧಾಂತವು ಪ್ರತಿಪಾದಿಸುವ ‘ಹಾನಿ ಪರೀಕ್ಷೆ’ ಭಾರತದಂತಹ ಬಹುತ್ವದ ದೇಶಕ್ಕೆ ಅತ್ಯಗತ್ಯವಾಗಿದೆ. ಹಾನಿಯ ಊಹೆ ಮತ್ತು ವಾಸ್ತವದ ಹಾನಿ ಎರಡೂ ಬೇರೆಬೇರೆಯಾಗಿದ್ದು ಮೊದಲನೆಯದು ಯುಟೋಪಿಯನ್ ಕಲ್ಪನೆಯ ವಿಮೋಚನೆಯನ್ನು ಪ್ರಚುರಪಡಿಸುತ್ತದೆ. ವಾಸ್ತವದಲ್ಲಿ ಹಿಜಾಬ್,ಗಡ್ಡ, ಸ್ಕಲ್ ಕ್ಯಾಪ್, ಟರ್ಬನ್, ಸಿಂಧೂರ ಇವು ಯಾವುವೂ ನಿರ್ದಿಷ್ಟ ಹಾನಿಯನ್ನುಂಟು ಮಾಡುವುದಿಲ್ಲ. ಆದರೆ ಇವೆಲ್ಲವುಗಳ ನಿರಾಕರಣೆಯು ಶಿಕ್ಷಣದ ಹಕ್ಕನ್ನು ಕಸಿಯುವ, ವೃತ್ತಿಯನ್ನು ಮುಂದುವರೆಸುವುದನ್ನು ನಿಲ್ಲಿಸುವ, ಸಾರ್ವಜನಿಕ ಸೇವೆಗಳನ್ನು ಪಡೆದುಕೊಳ್ಳುವ ಸಾಧ್ಯತೆಗಳನ್ನು ನಿರಾಕರಿಸಬಹುದು.
ಸಾರ್ವಜನಿಕ ಸುವ್ಯವಸ್ಥೆ ಕಾಪಾಡುವುದು ಮತ್ತು ಸಹಜತೆಯನ್ನು ಪುನರ್ಸ್ಥಾಪಿಸುವ ಹೆಸರಲ್ಲಿ ತಮ್ಮ ದೇಹ ಮತ್ತು ವ್ಯಕ್ತಿತ್ವದ ಮೇಲೆ ತನ್ನದೇ ಅಧಿಕಾರವನ್ನು ಹೊಂದಿರುವವರ ಗುರುತುಗಳ್ನು ಹಿಂಸಾತ್ಮಕವಾಗಿ ಅಳಿಸಲೆತ್ನಿಸಲಾಗುತ್ತಿದೆ. ಇದಕ್ಕೆ ಪ್ರಗತಿಪರರೂ ಸಿದ್ಧಾಂತದ ಹೆಸರಲ್ಲಿ ಜೊತೆಗೂಡುತ್ತಿದ್ದಾರೆ. ಆದರೆ ವೈವಿದ್ಯಮಯವಾಗಿರುವ ಮತ್ತು ಸಾಂಸ್ಕೃತಿಕವಾಗಿ ಆಳವಾಗಿ ವಿಭಜಿಸಲ್ಪಟ್ಟ ಸಮಾಜದಲ್ಲಿ ಏಕೀಕರಣವು ಒಂದು ಸವಾಲಾಗಿದ್ದು ಸಹಿಷ್ಣುತೆಯೊಂದೇ ಬಹುತ್ವದ ಭಾರತವನ್ನು ಬಹುಕಾಲ ಸುಸ್ಥಿತಿಯಲ್ಲಿ ಇರಿಸಬಹುದು ಎಂಬುವುದನ್ನು ಮರೆಯಬಾರದು.
ಮೂಲ : ತನ್ವೀರ್ ಫಜಲ್, ಸ್ಕ್ರೋಲ್.ಇನ್
(ತನ್ವೀರ್ ಫಜಲ್ ಅವರು ಹೈದರಾಬಾದ್ ವಿಶ್ವವಿದ್ಯಾಲಯದಲ್ಲಿ ಸಮಾಜಶಾಸ್ತ್ರದ ಪ್ರಾಧ್ಯಾಪಕರಾಗಿದ್ದಾರೆ.)