ಮಂಗಳೂರು ವಿಶ್ವವಿದ್ಯಾನಿಲಯದ (MU) ಉಪಕುಲತಿಗಳಾದ ಪ್ರೊ. ಪಿಎಸ್ ಯಡಿಪಡಿತ್ತಾಯ ಅವರು ಹಿಜಾಬ್ ಧರಿಸಿ ಬರುವ ವಿದ್ಯಾರ್ಥಿನಿಯರಿಗೆ ಟಿ.ಸಿ ವಿತರಿಸಬಹುದು ಎಂದು ಇದೇ ಮೇಯಲ್ಲಿ ಪ್ರಕಟಣೆಯನ್ನು ಹೊರಡಿಸಿದ್ದರು. ಈ ಸಂಬಂಧ ಎರಡನೇ, ಮೂರನೇ, ನಾಲ್ಕನೇ ಮತ್ತು ಐದನೇ ಸೆಮಿಸ್ಟರ್ ನಲ್ಲಿ MU ಗೆ ಸಂಯೋಜಿತ ಕಾಲೇಜುಗಳಲ್ಲಿ ಓದುತ್ತಿದ್ದ 16% ರಷ್ಟು ಮುಸ್ಲಿಂ ವಿದ್ಯಾರ್ಥಿನಿಯರು ತಮ್ಮ TC ಗಳನ್ನು ಪಡೆದಿದ್ದಾರೆ ಎನ್ನಲಾಗಿದೆ.
ಆರ್ಟಿಐ ಅಡಿಯಲ್ಲಿ ಪಡೆದ ಮಾಹಿತಿಯ ಪ್ರಕಾರ, ದಕ್ಷಿನ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಮತ್ತು ಸಂಯೋಜಿತ ಕಾಲೇಜುಗಳಲ್ಲಿ 2020-21 ಮತ್ತು 2021-22ರಲ್ಲಿ ಪ್ರವೇಶ ಪಡೆದುಕೊಂಡ 900 ಮುಸ್ಲಿಂ ವಿದ್ಯಾರ್ಥಿನಿಯರಲ್ಲಿ 145 ವಿದ್ಯಾರ್ಥಿನಿಯರು ತಮ್ಮ ವರ್ಗಾವಣೆ ಪತ್ರ ಪಡೆದುಕೊಂಡಿದ್ದಾರೆ ಎಂದು ಡೆಕ್ಕನ್ ಹೆರಾಲ್ಡ್ ಆರ್‌ಟಿಐ ಮೂಕ ಸಲ್ಲಿಸಿದ್ದ ಅರ್ಜಿಗೆ ಪ್ರತಿಕ್ರಿಯೆಯಾಗಿ ಉತ್ತರ ಬಂದಿದೆ.
ಹೀಗೆ ಟಿಸಿ ಪಡೆದುಕೊಂಡ ಹಲವರು ಹಿಜಾಬ್‌ಗೆ ಅನುಮತಿ ಇರುವ ಕಾಲೇಜಲ್ಲಿ ಪ್ರವೇಶ ಪಡೆದಿದ್ದಾರೆ. ಇನ್‌ನು ಕೆಲವರು ಶುಲ್ಕವನ್ನು ಭರಿಸಲಾಗದೆ ಶಿಕ್ಷಣ ಅರ್ಧಕ್ಕೆ ನಿಲ್ಲಿಸಿದ್ದಾರೆ. ಕೊಡಗು ಜಿಲ್ಲೆಯಲ್ಲೂ ಮಂಗಳೂರು ವಿಸ್ವಿದ್ಯಾನಿಲಯದ ಸಂಯೋಜಿತ ಕಾಲೇಜುಗಳಿದ್ದು ಎಲ್ಲಾ 113 ಮುಸ್ಲಿಂ ವಿದ್ಯಾರ್ಥಿನಿಯರು ತಮ್ಮದೇ ಕಾಲೇಜುಗಳಲ್ಲಿ ಅಧ್ಯಯನ ಮುಂದುವರಿಸಿದ್ದಾರೆ.
ಟಿಸಿ ಕೋರಿರುವ ಮುಸ್ಲಿಮ್ ವಿದ್ಯಾರ್ಥಿಗಳ ಸಂಖ್ಯೆಯು ಸರ್ಕಾರಿ ಕಾಲೇಜುಗಳಲ್ಲಿ 34%ರಷ್ಟಿದ್ದರೆ ಈ ಪ್ರಮಾಣ ಖಾಸಗಿ ಕಾಲೇಜುಗಳಲ್ಲಿ ಕೇವಲ 8%.ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ್ಲಿ 39 ಸರಕಾರಿ ಮತ್ತು 36 ಅನುದಾನಿತ ಕಾಲೇಜುಗಳಿವೆ. ಹಾಗೆಯೇ ಕೊಡಗಿನಲ್ಲಿ ಒಟ್ಟು ಹತ್ತು ಕಾಲೇಜುಗಳಿವೆ. ದಕ್ಷಿಣ ಕನ್ನಡ ಜಿಲ್ಲೆಗೆ (13%) ಹೋಲಿಸಿದರೆ ಟಿ.ಸಿ ಕೋರಿ ಅರ್ಜಿ ಸಲ್ಲಿಸಿರುವ ಶೇಕಡಾ ಪ್ರಮಾಣ ಉಡುಪಿ ಜಿಲ್ಲೆಯಲ್ಲಿ (14%) ಹೆಚ್ಚು. ಮಂಗಳೂರಿನ ರಥ ಬೀದಿಯಲ್ಲಿರುವ ಸರ್ಕಾರಿ ಕಾಲೇಜಿನಲ್ಲಿ ಅತಿ ಹೆಚ್ಚು ವಿದ್ಯಾರ್ಥಿನಿಯರು ಟಿ.ಸಿ ಪಡೆದಿದ್ದಾರೆ. ಆರ್‌ಟಿಐ ಪ್ರಕಾರ 51 ಮುಸ್ಲಿಂ ವಿದ್ಯಾರ್ಥಿನಿಯರಲ್ಲಿ 35 ರಷ್ಟು ವಿದ್ಯಾರ್ಥಿನಿಯರು ಕಾಲೇಜು ತೊರೆದಿದ್ದಾರೆ.
ಮೊದಲ, ಮೂರನೇ ಮತ್ತು ಐದನೇ ಸೆಮಿಸ್ಟರ್ ಪೂರ್ಣಗೊಳಿಸಿ ಎರಡನೆಯ, ನಾಲ್ಕನೆಯೆ ಮತ್ತು ಆರನೇ ಸೆಮಿಸ್ಟರ್‌ನಲ್ಲಿ ಇರಬೇಕಾಗಿದ್ದ ವಿದ್ಯಾರ್ಥಿನಿಯರು ಹಳೆಯಂಗಡಿ ಸರ್ಕಾರಿ ಕಾಲೇಜಿನಿಂದ ಟಿ.ಸಿಪಡೆದಿದ್ದಾರೆ. ಈ ಬಗ್ಗೆ ಡೆಕ್ಕನ್ ಹೆರಾಲ್ಡ್ ಜೊತೆ ಮಾತಾನಾಡಿರುವ ಕಾಲೇಜು ಪ್ರಿನ್ಸಿಪಾಲ್ ಶ್ರೀಧರ್ ಅವರು ಕೆಲವು ವಿದ್ಯಾರ್ಥಿನಿಯರು ತರಗತಿಗಳನ್ನು ಹಾಜರಾಗುವ ತಮ್ಮ ಮನವಿಗಳನ್ನು ತಿರಸ್ಕರಿಸಿರುವುದಲ್ಲದೆ ಟಿ.ಸಿಯನ್ನು ಸಹ ಪಡೆದುಕೊಂಡಿಲ್ಲ ಎಂದಿದ್ದಾರೆ.
ಉಪ್ಪಿನಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲೂ ಹಿಜಾಬ್ ವಿವಾದ ತಲೆದೋರಿತ್ತು. ಆರ್ಟಿಐ ಪ್ರಶ್ನೆಗೆ ಉತ್ತರವಾಗಿ ಬಂದ ಮಾಹಿತಿಯ ಪ್ರಕಾರ ಯಾವುದೇ ವಿದ್ಯಾರ್ಥಿನಿಯರು ಟಿ.ಸಿ ಪಡೆದಿಲ್ಲ. ಆದರೆ ಅಲ್ಲಿನ ಪ್ರಾಂಶುಪಾಲರಾದ ಪ್ರೊಫೆಸರ್ ಶೇಖರ್ ಅವರು ಇಬ್ಬರು ವಿದ್ಯಾರ್ಥಿನಿಯರು ಕಾಲೇಜಿನಿಂದ ಹೊರ ಹೋಗಿದ್ದಾರೆ ಎಂದಿದ್ದಾರೆ.
ಹಿಜಾಬ್ ವಿವಾದದ ಮೂಲ ಕಿಡಿ ಹೊತ್ತಿಸಿದ ಅಜ್ಜರಕಾಡಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ಒಂಬತ್ತು ವಿದ್ಯಾರ್ಥಿನಿಯರು ಟಿಸಿ ಪಡೆದಿದ್ದು ಇದು ಉಡುಪಿ ಜಿಲ್ಲೆಯಲ್ಲಿ ಅತ್ಯಧಿಕವಾಗಿದೆ. ಖಾಸಗಿ ಕಾಲೇಜುಗಳಾದ ಉಜಿರೆಯ ಎಸ್‌ಡಿಎಂನಲ್ಲಿ 11 ಮತ್ತು ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಲ್ಲಿ 13 ವಿದ್ಯಾರ್ಥಿನಿಯರು ಟಿ.ಸಿ ಪಡೆದಿದ್ದಾರೆ.

ಆದರೆ ಈ ಅಂಕಿ ಸಂಖ್ಯೆಗಳನ್ನು ಒಪ್ಪದ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (ಸಿಎಫ್ಐ)ದ ದ.ಕ ಜಿಲ್ಲೆಯ ಅಧ್ಯಕ್ಷರಾಗಿರುವ ಅತಾವುಲ್ಲಾ ಪುಂಜಾಲ್‌ಕಟ್ಟೆ ಅವರು ಡ್ರಾಪ್ಔಟ್ಗಳ ಶೇಕಡಾವಾರು ಪ್ರಮಾಣ ಇನ್ನಷ್ಟು ಹೆಚ್ಚಿದೆ ಎಂದು ಹೇಳುತ್ತಾರೆ.
ಟಿಸಿ ಪಡೆದ ನಂತರ ಏನು?
ಮಂಗಳೂರಿನಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ ‘ಗರ್ಲ್ಸ್ ಕಾನ್ಫರೆನ್ಸ್’ ನಲ್ಲಿ ಮಾತಾಡಿದ್ದ ಹಿಬಾ ಶೇಖ್ ತಾನು ಬೇರೊಂದು ಕಾಲೇಜಲ್ಲಿ ಪ್ರವೇಶ ಪಡೆಯಲು ಯೋಚಿಸುತ್ತಿದ್ದೇನೆ ಎಂದಿದ್ದರು. ಅವರು ರಥಬೀದಿಯಲ್ಲಿರುವ ಸರ್ಕಾರಿ ಕಾಲೇಜಿನಲ್ಲಿ ಎರಡನೆಯ ವರ್ಷದ ಬಿಎಸ್ಸಿ ಓದುತ್ತಿದ್ದರು. ಬಲ್ಮಠದ ಯುನಿವರ್ಸಿಟಿ ಕಾಲೇಜಿನಲ್ಲಿ ಐದನೇ ಸೆಮಿಸ್ಟರ್ ಪೂರ್ತಿ ಗೊಳಿಸಿರುವ ಗೌಸಿಯಾ ತಾನು ಖಾಸಗಿ ಕಾಲೇಜೊಂದರಲ್ಲಿ ಪ್ರವೇಶ ಪಡೆದಿದ್ದೇನೆ ಎಂದಿದ್ದಾರೆ.
ಮಂಗಳೂರು ವಿ.ವಿಯ ಉಪಕುಲಪತಿಗಳಾದ ಯಡಪಡಿತ್ತಾಯರು “ಅನೇಕ ಮುಸ್ಲಿಂ ವಿದ್ಯಾರ್ಥಿನಿಯರು ಬೇರೆ ಕಾಲೇಜುಗಳಲ್ಲಿ ಪ್ರವೇಶ ದೊರಕಿಸಿಕೊಡುವಂತೆ ನನ್ನನ್ನು ಸಂಪರ್ಕಿಸಿದ್ದರು. ಆದರೆ ಇವು ಪರಿಹರಿಸಲಾಗದ ಸಮಸ್ಯೆಗಳಾಗಿರುವುದರಿಂದ ಕರ್ನಾಟಕ ರಾಜ್ಯ ಓಪನ್ ಯುನಿವರ್ಸಿಟಿ (ಕೆಎಸ್ಒ) ಯನ್ನು ಸಂಪರ್ಕಿಸಲು ನಾನು ಅವರನ್ನು ನಿರ್ದೇಶಿಸಿದ್ದೇನೆ. ಅಲ್ಲದೆ ಶಿಕ್ಷಣವು ಧರ್ಮಕ್ಕಿಂತ ಹೆಚ್ಚು ಮುಖ್ಯವಾದುದು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದ್ದೇನೆ ” ಎಂದು ಹೇಳಿದ್ದಾರೆ.
ಬೆಂಗಳೂರು ಮೂಲದ ಮನಶ್ಶಾಸ್ತ್ರಜ್ಞರಾದ ರುಕ್ಸಾನಾ ಹಾಸನ್ ಅವರು “ಮುಸ್ಲಿಂ ವಿದ್ಯಾರ್ಥಿನಿಯರು ಈ ಬಗ್ಗೆ ಹೆಚ್ಚು ಭಾವುಕರಾಗದೆ ಶಿಕ್ಷಣವನ್ನು ಮುಂದುವರೆಸಬೇಕು” ಎಂದು ಒತ್ತಾಯಿಸಿದ್ದಾರೆ. ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ (ಟಿಆರ್ಎಫ್) ಅಧ್ಯಕ್ಷ ರಿಯಾಜ್ ಅಹ್ಮದ್ ಅವರು ದಕ್ಷಿಣ ಕನ್ನಡ ಜಿಲ್ಲೆಯ ಅನೇಕ ವಿದ್ಯಾರ್ಥಿನಿಯರು ಸಮುದಾಯದ ಸಹಕಾರದೊಂದಿಗೆ ಬೇರೆ ಕಾಲೇಜು ಸೇರಿಕೊಂಡು ತಮ್ಮ ವಿದ್ಯಾಭ್ಯಾಸ ಮುಂದುವರೆಸುತ್ತಿದ್ದಾರೆ ಎಂದಿದ್ದಾರೆ.