ಬೆಂಗಳೂರು: ಸಿಲಿಕಾನ್ ಸಿಟಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIA) ಕಸ್ಟಮ್ಸ್ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ದುಬೈನಿಂದ ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ. ಆರೋಪಿಯಿಂದ ಸುಮಾರು ₹1.37 ಕೋಟಿ ಮೌಲ್ಯದ 899.50 ಗ್ರಾಂ (24 ಕ್ಯಾರೆಟ್) ಚಿನ್ನ ವಶಪಡಿಸಿಕೊಳ್ಳಲಾಗಿದೆ.ದುಬೈನಿಂದ ಬೆಂಗಳೂರಿಗೆ ಬಂದಿದ್ದ ಪ್ರಯಾಣಿಕನ ವರ್ತನೆ ಅನುಮಾನಾಸ್ಪದವಾಗಿದ್ದರಿಂದ ಕಸ್ಟಮ್ಸ್ ಅಧಿಕಾರಿಗಳು ಆತನನ್ನು ತಡೆದು ಪರಿಶೀಲನೆ ನಡೆಸಿದರು.
ಈ ವೇಳೆ ಚಿನ್ನ ಕಳ್ಳಸಾಗಣೆಗೆ ಬಳಸಿದ್ದ ಹೊಸ ತಂತ್ರ ಬೆಳಕಿಗೆ ಬಂದಿದೆ.ಆರೋಪಿ ಶುದ್ಧ ಚಿನ್ನವನ್ನು ಪೇಸ್ಟ್ ರೂಪಕ್ಕೆ ಪರಿವರ್ತಿಸಿ ನಾಲ್ಕು ಸಣ್ಣ ಕ್ಯಾಪ್ಸುಲ್‌ಗಳಲ್ಲಿ ತುಂಬಿ, ಅವುಗಳನ್ನು ತನ್ನ ಗುದನಾಳದಲ್ಲಿ ಅಡಗಿಸಿಕೊಂಡು ಸಾಗಿಸುತ್ತಿದ್ದ ಎನ್ನುವುದು ತನಿಖೆಯಲ್ಲಿ ಪತ್ತೆಯಾಗಿದೆ.ವೈದ್ಯಕೀಯ ಪರೀಕ್ಷೆ ಮತ್ತು ಪರಿಶೀಲನೆಯ ಬಳಿಕ ಆರೋಪಿಯ ದೇಹದಿಂದ ನಾಲ್ಕು ಕ್ಯಾಪ್ಸುಲ್‌ಗಳನ್ನು ಹೊರತೆಗೆದು ಪರೀಕ್ಷಿಸಿದಾಗ, ಅವುಗಳಲ್ಲಿ ಒಟ್ಟು 899.50 ಗ್ರಾಂ ತೂಕದ ಚಿನ್ನ ಇರುವುದನ್ನು ಅಧಿಕಾರಿಗಳು ದೃಢಪಡಿಸಿದ್ದಾರೆ. ಜಪ್ತಿ ಮಾಡಿದ ಚಿನ್ನದ ಮೌಲ್ಯವನ್ನು ಸುಮಾರು ₹1.37 ಕೋಟಿ ಎಂದು ಅಂದಾಜಿಸಲಾಗಿದೆ.
ಪ್ರಕರಣ ದಾಖಲಿಸಿಕೊಂಡಿರುವ ಕಸ್ಟಮ್ಸ್ ಅಧಿಕಾರಿಗಳು, ಈ ಚಿನ್ನದ ಕಳ್ಳಸಾಗಣೆ ಜಾಲದ ಹಿಂದಿರುವ ಪ್ರಮುಖ ವ್ಯಕ್ತಿಗಳು ಯಾರು ಹಾಗೂ ಬೆಂಗಳೂರಿನಲ್ಲಿ ಈ ಚಿನ್ನವನ್ನು ಯಾರಿಗೆ ತಲುಪಿಸುವ ಉದ್ದೇಶ ಇತ್ತು ಎಂಬುದರ ಕುರಿತು ತನಿಖೆಯನ್ನು ಮುಂದುವರಿಸಿದ್ದಾರೆ.






