ಬೆಂಗಳೂರು: ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿರುದ್ಧದ ಸಿಬಿಐ ತನಿಖೆಗೆ ಫೆ.24ರವರೆಗೂ ಮಧ್ಯಂತರ ತಡೆ ನೀಡಿ ಉಚ್ಚ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.
ಈ ಸಂಬಂಧ ಡಿ.ಕೆ.ಶಿವಕುಮಾರ್ ಸಲ್ಲಿಸಿರುವ ರಿಟ್ ಅರ್ಜಿಯನ್ನು, ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣ’ಗಳ ವಿಚಾರಣೆ ನಡೆಸುವ ಹೈಕೋರ್ಟ್’ನ ವಿಶೇಷ ನ್ಯಾಯಪೀಠದ ನ್ಯಾಯಮೂರ್ತಿ ಕೆ.ನಟರಾಜನ್ ಶುಕ್ರವಾರ ವಿಚಾರಣೆ ನಡೆಸಿದರು.

ತನಿಖಾಧಿಕಾರಿ ಫೆ.24ರೊಳಗೆ ತನಿಖೆಯ ಪ್ರಗತಿ ವರದಿ ಸಲ್ಲಿಸಲಿ, ಅಲ್ಲಿಯವರೆಗೂ ಸಿಬಿಐ ತನಿಖೆ ಮುಂದುವರೆಸದಂತೆ ಸೂಚಿಸಿ ವಿಚಾರಣೆಯನ್ನು ಇದೇ 24ಕ್ಕೆ ಮುಂದೂಡಿತು.
ಈ ಪ್ರಕರಣದಲ್ಲಿ ಸಿಬಿಐ ತನಿಖೆಗೆ ತಡೆ ಕೋರಿ ಡಿಕೆ ಶಿವಕುಮಾರ್ ಹೈಕೋರ್ಟ್’ಗೆ ಅರ್ಜಿ ಸಲ್ಲಿಸಿದ್ದರು.
ಸಿಬಿಐ ಅಧಿಕಾರಿಗಳು ಪದೇ ಪದೇ ನೋಟಿಸ್ ನೀಡುತ್ತಿದ್ದಾರೆ. ಹೆಂಡತಿ, ಮಗಳಿಗೆ ನೋಟಿಸ್ ನೀಡುವ ಮೂಲಕ ಮಾನಸಿಕ ಒತ್ತಡ ಹೇರುತ್ತಿದ್ದಾರೆ ಎಂದು ಶಿವಕುಮಾರ್ ಪರ ಹಿರಿಯ ವಕೀಲ ಸಿ.ಎಚ್.ಜಾಧವ್ ದೂರಿದರು.