
ಭಾರತೀಯ ಜನತಾ ಪಾರ್ಟಿಯಲ್ಲಿ ಬಣ ರಾಜಕಾರಣದ ಬೇಗುದಿ ಬೇಯುತ್ತಿದ್ದು, ರಾಜ್ಯ ಬಿಜೆಪಿ ಭಿನ್ನಮತೀಯ ಚಟುವಟಿಕೆಗಳಿಗೆ ತೆರೆ ಬೀಳುವ ನೀರಿಕ್ಷೆ ಎದುರಾಗಿದೆ. ದೆಹಲಿ ಚುನಾವಣೆಯಲ್ಲಿ ಗೆದ್ದು ಬೀಗಿರುವ ಬೀಜೆಪಿ, ಇತರೆ ರಾಜ್ಯಗಳ ಸಮಸ್ಯೆ ಬಗ್ಗೆ ಗಮನಹರಿಸುವಂತಿದೆ. ಹಾಲಿ ರಾಜ್ಯಾಧ್ಯಕ್ಷರ ಬದಲಾವಣೆಗೆ ಬಿಜೆಪಿ ಭಿನ್ನಮತೀಯ ಬಳಗ ನಿರಂತರವಾಗಿ ಹೋರಾಟ ಮಾಡ್ತಿದ್ದು, ಇದೀಗ ಅಂತಿಮ ಹಂತಕ್ಕೆ ಬಂದು ನಿಂತಿದೆ. ಬಸನಗೌಡ ಪಾಟೀಲ ಯತ್ನಾಳ್ ಟೀಂ ಜೊತೆ ವಿಜಯೇಂದ್ರಗೂ ದೆಹಲಿ ವರಿಷ್ಠರು ಬುಲಾವ್ ಕೊಟ್ಟಿದ್ದಾರೆ.
ದಾವಣಗೆರೆಯ ರಾಜನಹಳ್ಳಿಯಲ್ಲಿ ನಡೆಯುತ್ತಿದ್ದ ವಾಲ್ಮೀಕಿ ಜಾತ್ರೆಗೆ ಹೊರಟಿದ್ದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅರ್ಧದಾರಿಯಿಂದ ವಾಪಸ್ ಆಗಿದ್ದಾರೆ. ನೆಲಮಂಗಲ ಬಳಿ ಹೋಗುವಾಗ ಹೈಕಮಾಂಡ್ ನಾಯಕರಿಂದ ಬುಲಾವ್ ಬಂದಿದ್ದು, ದಾವಣಗೆರೆ ಪ್ರವಾಸ ಮೊಟಕು ಮಾಡಿ ಬೆಂಗಳೂರಿಗೆ ವಾಪಸ್ ಆಗಿದ್ದರು. ಬೆಂಗಳೂರಿಗೆ ಬಂದ ಬಳಿಕ ಪತ್ನಿ ಸಮೇತವಾಗಿ ವಿಜಯೇಂದ್ರ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಎರಡ್ಮೂರು ದಿನಕ್ಕೆ ಆಗುವಷ್ಟು ಲಗೇಜ್ ಸಮೇತ ದೆಹಲಿಗೆ ತೆರಳಿದ್ದು, ದೆಹಲಿಯಲ್ಲಿ ಬಿಜೆಪಿ ನಾಯಕರನ್ನ ಭೇಟಿಯಾಗಿ, ಎಲ್ಲಾ ಸಮಸ್ಯೆಗಳನ್ನು ನಿವಾರಿಸಿಕೊಂಡು ಬರುವ ನಿರ್ಧಾರ ಮಾಡಿದ್ದಾರೆ.

ಕಳೆದ ವಾರ ದೆಹಲಿಯ ಬೀದಿ ಬೀದಿ ಸುತ್ತಾಡಿ ವರಿಷ್ಠರನ್ನ ಭೇಟಿ ಮಾಡಲು ಸಾಧ್ಯವಾಗದೆ ವಾಪಸ್ ಆಗಿದ್ದ ಯತ್ನಾಳ್ ಬಣ ಇದೀಗ ಮತ್ತೆ ದೆಹಲಿಗೆ ಭೇಟಿ ನೀಡಿದೆ. ರಾಜ್ಯಾಧ್ಯಕ್ಷರ ಬದಲಾವಣೆಗೆ ಪಟ್ಟು ಹಿಡಿದಿರುವ ಯತ್ನಾಳ್ ಟೀಮ. ರಾಜ್ಯಾಧ್ಯಕ್ಷರ ಆಯ್ಕೆಗೆ ಎಲೆಕ್ಷನ್ ನಡೆಸಿ ಅಂತ ಮನವಿ ಕೊಟ್ಟಿದೆ. ಇದೀಗ ಯತ್ನಾಳ್ ಬಣವೂ ದೆಹಲಿ ಪ್ರವಾಸ ಕೈಗೊಂಡಿದ್ದು, ದೆಹಲಿಗೆ ತೆರಳೋ ಮುನ್ನ ದಾವಣಗೆರೆಯ ರಾಜನಹಳ್ಳಿ ವಾಲ್ಮೀಕಿ ಜಾತ್ರೆಯಲ್ಲಿ ಪ್ರತ್ಯೇಕವಾಗಿ ಸಭೆ ಮಾಡಿದ್ದಾರೆ. ದೆಹಲಿಯಲ್ಲಿ ವರಿಷ್ಠರ ಎದುರು ಏನೆಲ್ಲಾ ದೂರುಗಳನ್ನು ಕೊಡಬೇಕು ಅನ್ನೋ ಬಗ್ಗೆ ಚರ್ಚೆ ಮಾಡಿದ್ದಾರೆ ಎನ್ನಲಾಗಿದೆ.