
ಕಳೆದ 2 ವರ್ಷಗಳಿಂದ ಜನಾಂಗೀಯ ದ್ವೇಷದಲ್ಲಿ ಮುಳುಗಿದ್ದ ಮಣಿಪುರದಲ್ಲಿ ಸರ್ಕಾರವೇ ಬಲಿಯಾಗಿದೆ. ಅಗ್ನಿಯಲ್ಲಿ ಬೆಂದು ಹೋಗಿದ್ದ ಈಶಾನ್ಯ ರಾಜ್ಯ ಮಣಿಪುರದಲ್ಲಿ ರಾಜಕೀಯ ಬಿರುಗಾಳಿ ಎದ್ದಿದೆ. ಮೈತೇಯಿ ಹಾಗೂ ಕುಕಿ ಸಮುದಾಯದ ನಡುವಿನ ಜನಾಂಗೀಯ ಘರ್ಷಣೆಗಳಿಂದ ಟೀಕೆಗೆ ಗುರಿಯಾಗಿದ್ದ ಮಣಿಪುರ ಸಿಎಂ ರಾಜೀನಾಮೆ ನೀಡಿದ್ದಾರೆ. ಕಾಂಗ್ರೆಸ್ ಹಾಗು ಇಡೀ ದೇಶದ ಕೆಂಗಣ್ಣಿಗೆ ಗುರಿಯಾಗಿದ್ದ ಬಿಜೆಪಿ ಸರ್ಕಾರದಲ್ಲಿ ಸಿಎಂ ಆಗಿದ್ದ ಬಿರೆನ್ ಸಿಂಗ್ ರಾಜೀನಾಮೆ ಸಲ್ಲಿಸಿದ್ದಾರೆ.

ಸಿಎಂ ಬಿರೇನ್ ಸಿಂಗ್ ಇಂಫಾಲದ ರಾಜಭವನಕ್ಕೆ ಸಂಗಡಿಗರ ಜೊತೆಗೆ ಬಂದಿದ್ದ ಬಿರೇನ್ ಸಿಂಗ್ ರಾಜೀನಾಮೆ ಪತ್ರ ನೀಡಿದ್ದಾರೆ. ಮಣಿಪುರ ಜನರ ಸೇವೆ ಮಾಡಲು ಅವಕಾಶ ಸಿಕ್ಕಿದ್ದಕ್ಕೆ ಧನ್ಯವಾದ. ಮಣಿಪುರ ಅಭಿವೃದ್ಧಿ ಹಾಗು ಮಣಿಪುರ ಜನರಿಗಾಗಿ ಕೇಂದ್ರ ಸರ್ಕಾರ ಮಾಡಿದ ಅಭಿವೃದ್ಧಿ ಕಾರ್ಯಗಳಿಗೆ ಧನ್ಯವಾದ ಸಲ್ಲಿಸುತ್ತೇನೆ. ಮುಂದೆಯೂ ಕೇಂದ್ರ ಸರ್ಕಾರದಿಂದ ಇದೇ ಸಹಕಾರ ಸಿಗಲಿ ಎಂಬುದು ನನ್ನ ಆಶಯ ಎಂದಿದ್ದಾರೆ. ಕೆಲವೊಂದು ಪ್ರಮುಖ ವಿಚಾರಗಳ ಬಗ್ಗೆ ಕೇಂದ್ರ ಸರ್ಕಾರ ಗಮನ ಹರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಮಣಿಪುರ ಗಡಿಯಲ್ಲಿ ಶಾಂತಿ ನಿರ್ಮಾಣ ಆಗಬೇಕು, ಅಕ್ರಮ ವಲಸಿಗರನ್ನು ತಡೆಯಲು ಕಣ ಕ್ರಮ ಆಗಬೇಕು. ಡ್ರಗ್ಸ್ ಭಯೋತ್ಪಾದನೆಗೆ ಬ್ರೇಕ್ ಹಾಕಬೇಕು. ಬುಡಕಟ್ಟು ಜನರು ಸ್ವತಂತ್ರವಾಗಿ ಓಡಾಡುವಂತೆ ಆಗಬೇಕು. ಗಡಿಯಲ್ಲಿ ಅಭಿವೃದ್ಧಿ ಕೆಲಸಗಳು ಚುರುಕಾಗಬೇಕು ಎಂದು ಒತ್ತಾಯ ಮಾಡಿದ್ದಾರೆ. ರಾಜೀನಾಮೆಗೂ ಮುನ್ನ ಬೆಳಗ್ಗೆ ನವದೆಹಲಿಗೆ ತೆರಳಿದ್ದ ಬಿರೇನ್ ಸಿಂಗ್ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದರು. ಆ ಬಳಿಕ 20 ಶಾಸಕರೊಂದಿಗೆ ರಾಜಭವನಕ್ಕೆ ತೆರಳಿ ರಾಜೀನಾಮೆ ಸಲ್ಲಿಸಿದ್ದಾರೆ.

ಮಣಿಪುರ ಸಿಎಂ ಬಿರೇನ್ ಸಿಂಗ್ ವಿರುದ್ಧ ಆಡಳಿತಾರೂಢ ಸರ್ಕಾರದ 12-13 ಶಾಸಕರು ಈಗಾಗಲೇ ರೆಬೆಲ್ ಆಗಿದ್ದಾರೆ. ರೆಬೆಲ್ ಆಗಿರುವ ಶಾಸಕರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಲಾಗಿತ್ತು. ಅನರ್ಹತೆ ಪ್ರಶ್ನಿಸಿದ್ದ ಬಗ್ಗೆ ವಿಚಾರಣೆ ನಡೆಸಿದ್ದ ಸ್ಪೀಕರ್ ನೇತೃತ್ವದ ಸಮಿತಿ, ತೀರ್ಪನ್ನು ಕಾಯ್ದಿರಿಸಿದೆ. ಈ ಮಧ್ಯೆಯೇ ನಾಳೆಯಿಂದ ಬಜೆಟ್ ಅಧಿವೇಶನ ಶುರುವಾಗಲಿದ್ದು, ನಾಳೆಯೇ ಅಧಿವೇಶನದಲ್ಲಿ ಸಿಎಂ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆಗೆ ಕಾಂಗ್ರೆಸ್ ಸಿದ್ಧತೆ ನಡೆಸಿತ್ತು. ಈ ನಡುವೆ ರಾಜೀನಾಮೆ ನೀಡಿದ್ದಾರೆ.

ಮಣಿಪುರ ವಿಧಾನಸಭೆಯಲ್ಲಿ ಒಟ್ಟು 60 ಸ್ಥಾನಗಳಿದ್ದು, ಅಧಿಕಾರ ಹಿಡಿಯಲು 31 ಸ್ಥಾನಗಳ ಅವಶ್ಯಕತೆ ಇದೆ. ಬಿಜೆಪಿ 32, ಜೆಡಿಯು 5, ಎನ್ಪಿಪಿ 7, ಕೆಪಿಎ 2 ಸೇರಿದಂತೆ ಎನ್ಡಿಎ ಒಕ್ಕೂಟಕ್ಕೆ 46 ಶಾಸಕರ ಬೆಂಬಲವಿದೆ. ಕಾಂಗ್ರೆಸ್ನ 5 ಶಾಸಕರಿದ್ದು, ಇತರರು 3 ಮಂದಿ, ಜೆಡಿಯು ಶಾಸಕರು ಒಬ್ಬರಿದ್ದಾರೆ. ಒಂದು ಸ್ಥಾನ ಖಾಲಿ ಉಳಿದಿದೆ. ಆಡಳಿತಾರೂಢ ಶಾಸಕರೇ ಸಿಎಂ ವಿರುದ್ಧ ದಂಗೆ ಎದ್ದಿರುವ ಕಾರಣಕ್ಕೆ ಸಂಖ್ಯಾಬಲವಿದ್ದರೂ, ಅವಿಶ್ವಾಸ ಗೆಲ್ಲುವ ವಿಶ್ವಾಸ ಬಿರೇನ್ ಸಿಂಗ್ಗೆ ಇಲ್ಲ. ಹೀಗಾಗಿ ರಾಜೀನಾಮೆ ನೀಡಿದ್ದಾರೆ.