ಚೀನಾ ದೇಶ ಕೆಲವಾರು ತಿಂಗಳುಗಳಿಂದಲೂ ಲಡಾಖ್ ಗಡಿಭಾಗದಲ್ಲಿ ಪ್ರಮುಖ ಸ್ಥಳಗಳನ್ನ ಅತಿಕ್ರಮಿಸಿಕೊಳ್ಳಲು ನಿರಂತರ ಪ್ರಯತ್ನ ಮಾಡುತ್ತಿದೆ. ಇದಕ್ಕೆ ಹಿಂದಿನಿಂದಲೂ ಭಾರತೀಯ ಸೈನಿಕರು ತೀವ್ರ ಪ್ರತಿರೋಧ ಒಡ್ಡುತ್ತಲೇ ಇದ್ದಾರೆ.
ತತ್ಪರಿಣಾಮವಾಗಿ ಒಂದೆರಡು ಬಾರಿ ಎರಡೂ ಕಡೆಯ ಸೈನಿಕರ ಮಧ್ಯೆ ಸಂಘರ್ಷಗಳು ನಡೆದಿವೆ. ಹಿಂದಿನ ಗಡಿಒಪ್ಪಂದಗಳ ನಿಯಮದಂತೆ ಸಂಘರ್ಷದಲ್ಲಿ ಗುಂಡಿನ ಬಳಕೆಯಾಗದಿದ್ದರೂ ಚೀನೀ ಸೈನಿಕರು ಹರಿತವಾದ ಆಯುಧಗಳನ್ನ ಬಳಸಿ ಭಾರತೀಯ ಸೇನೆಯ ಮೇಲೆ ಹಲ್ಲೆಯೂ ಮಾಡಿದ್ದರು. ಇಂಥ ಒಂದು ಘರ್ಷಣೆಯಲ್ಲಿ ಭಾರತದ 20 ಸೈನಿಕರು ಬಲಿಯಾಗಿದ್ದರು. ಆ ಸಂಘರ್ಷದಲ್ಲಿ ಚೀನಾದ ಅನೇಕ ಸೈನಿಕರೂ ಕೂಡ ಮೃತಪಟ್ಟಿರುವ ಅನಧಿಕೃತ ಮಾಹಿತಿ ಇದೆ.
ಭಾರತದ ಗಡಿಭಾಗದಲ್ಲಿ ನಿರಂತರವಾಗಿ ತಂಟೆ ಮಾಡುತ್ತಿರುವ ಚೀನಾ ದೇಶ ಸಾಕಷ್ಟು ಪ್ರದೇಶಗಳನ್ನ ಅತಿಕ್ರಮಿಸಿಕೊಂಡಿದೆ. ಲಡಾಖ್ ಮತ್ತು ಅರುಣಾಚಲ ಪ್ರದೇಶದ ಗಡಿಭಾಗದಲ್ಲಿ ಸುಮಾರು 1,28,000 ಚದರ ಕಿಲೋಮೀಟರ್ನಷ್ಟು ಭೂಭಾಗವನ್ನು ಅಕ್ರಮವಾಗಿ ವಶದಲ್ಲಿರಿಸಿಕೊಂಡಿದೆ. ಪೂರ್ವ ವಲಯದ ಅರುಣಾಚಲ ಪ್ರದೇಶ ಗಡಿಭಾಗದಲ್ಲಿ ಚೀನಾ 90 ಸಾವಿರ ಚದರ ಕಿಮೀ ಪ್ರದೇಶವನ್ನು ಅತಿಕ್ರಮಣ ಮಾಡಿದೆ. ಲಡಾಖ್ನಲ್ಲಿ ಭಾರತಕ್ಕೆ ಸೇರಿದ 38 ಸಾವಿರ ಚದರ ಕಿಲೋಮೀಟರ್ ಭಾಗವನ್ನು ಆಕ್ರಮಿಸಿಕೊಂಡಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.
ಚೀನಾ ಲಡಾಖ್ ಮತ್ತು ಅರುಣಾಚಲ ಪ್ರದೇಶಗಳಲ್ಲಿ ಮಾಡಿರುವ 1.28 ಲಕ್ಷ ಚದರ ಕಿಮೀ ಸ್ಥಳದ ಅತಿಕ್ರಮಣ ಸಾಮಾನ್ಯವಲ್ಲ. ಇದು ಕರ್ನಾಟಕದ ಮುಕ್ಕಾಗಲು ಭಾಗದ ಪ್ರದೇಶಕ್ಕೆ ಸಮ. ಹೀಗಿರುವಾಗಲೇ ಗಡಿ ಭಾಗದಲ್ಲಿ ಚೀನಾದ ಮೇಲೆ ಹದ್ದಿನ ಕಣ್ಣಿಡಲು ಭಾರತ ಮುಂದಾಗಿದೆ. ಭಾರತ ವಾಸ್ತವ ನಿಯಂತ್ರಣ ರೇಖೆಯ ಬಳಿ ಅತ್ಯಾಧುನಿಕ ಡ್ರೋಣ್ ಗಳನ್ನು ಬಳಕೆ ಮಾಡಲು ಮುಂದಾಗಿದೆ.

ಚೀನಾ ಮೊದಲಿನಿಂದಲೂ ನೆರೆಯ ರಾಷ್ಟ್ರಗಳ ಮೇಲೆ ಅಧಿಪತ್ಯ ಸಾಧಿಸಲು ಪ್ರಯತ್ನ ಮಾಡುತ್ತಲೇ ಇರುತ್ತದೆ. ಹಾಗೆಯೇ ಸದ್ಯ ಭಾರತದ ಅರುಣಾಚಲ ಪ್ರದೇಶ ಗಡಿ ಬಳಿಯೂ ಭೂಮಿ ಅತಿಕ್ರಮಣಕ್ಕೆ ಚೀನಾ ಪ್ರಯತ್ನಿಸುತ್ತಿದೆ. ಇದಕ್ಕಾಗಿ ತರಹೇವಾರಿ ತಂತ್ರಗಳ ಪ್ರಯೋಗಕ್ಕೆ ಮುಂದಾಗಿದೆ. ಮಾನವ ರಹಿತ ವಿಮಾನಗಳನ್ನ ಗಸ್ತಿಗಾಗಿ ನೇಮಿಸಿ ಗಡಿಯಲ್ಲಿ ಕಿತಾಪತಿಗಿಳಿದಿದೆ.
ಪೂರ್ವ ಲಡಾಕ್ ಗಡಿಯ ಬಳಿಕ ಅರುಣಾಚಲ ಪ್ರದೇಶ ಗಡಿ ಬಳಿಯೂ ಭೂಮಿ ಅತಿಕ್ರಮಣಕ್ಕೆ ಚೀನಾ ಪ್ರಯತ್ನಿಸುತ್ತಿದೆ. ಇದಕ್ಕಾಗಿ ಮಾನವ ರಹಿತ ವಿಮಾನಗಳನ್ನ ಹಾರಿಬಿಟ್ಟು ನಿಗಾ ಇರಿಸಲಾರಂಭಿಸಿದೆ. ಈ ಹಿನ್ನಲೆ ಡ್ರ್ಯಾಗನ್ ರಾಷ್ಟ್ರಕ್ಕೆ ತಿರುಗೇಟು ನೀಡಲು ಭಾರತ ಗಡಿಯಲ್ಲಿ ಅತ್ಯಾಧುನಿಕ ಡ್ರೋನ್ ಕಣ್ಗಾವಲು ಹೆಚ್ಚಿಸಿದೆ. ಅರುಣಾಚಲ ಪ್ರದೇಶದ ಬಳಿ ಇರುವ ವಾಸ್ತವ ಗಡಿ ರೇಖೆಯ ಬಳಿ ಭಾರತ, ಇಸ್ರೇಲ್ ತಂತ್ರಜ್ಞಾನದ ಡ್ರೋನ್ಗಳು, ಶಸ್ತ್ರಸಜ್ಜಿತ ಧ್ರುವ ಹೆಲಿಕ್ಯಾಪ್ಟರ್ ಸೇರಿದಂತೆ ಗಡಿ ರಕ್ಷಣೆಗೆ ಬೇಕಾದ ಎಲ್ಲ ತಯಾರಿಗಳನ್ನು ಮಾಡಿಕೊಳ್ಳುತ್ತಿದೆ.
ಭಾರತ ಗಡಿಯಲ್ಲಿ ಇಸ್ರೇಲ್ ನಿರ್ಮಿತ ಶಕ್ತಿಶಾಲಿ ಹೆರಾನ್ ಡ್ರೋನ್ ನಿಯೋಜನೆ ಮಾಡಿದೆ. ಈ ಹೆರಾನ್ ಡ್ರೋನ್ ಮಧ್ಯಮ-ಎತ್ತರದ ದೀರ್ಘ-ಸಹಿಷ್ಣುತೆಯನ್ನು ಹೊಂದಿದ್ದು, ಸುಮಾರು 30,000 ಅಡಿ ಎತ್ತರದವರೆಗೂ ಕಾರ್ಯ ನಿರ್ವಹಣೆ ಮಾಡಬಲ್ಲದು. ಸೂಕ್ಷ್ಮ, ಅತಿ ಸೂಕ್ಷ್ಮ ಪ್ರದೇಶಗಳ ದೃಶ್ಯಗಳನ್ನು ಸೇನೆಗೆ ನೀಡುವಲ್ಲಿ ಸಹಕಾರಿಯಾಗಿದೆ. ಕಠಿಣಾತೀತ ಕಠಿಣ ಹವಾಮಾನದಲ್ಲೂ ಸಮರ್ಪಕ ಕಾರ್ಯಾಚರಣೆ ಮಾಡಬಲ್ಲದು. ಅಲ್ಲದೆ 24-30 ಗಂಟೆಗಳ ಕಾಲ ನಿರಂತರ ಕಾರ್ಯ ನಿರ್ವಹಿಸುವ ಸಾಮರ್ಥ್ಯ ಹೊಂದಿದೆ. ಇನ್ನು ಸಿಂಥೆಟಿಕ್ ಆರ್ಪಚರ್ ರೆಡರ್ ವಿಶೇಷ ವ್ಯವಸ್ಥೆ ಹೊಂದಿದ ಈ ಡ್ರೋನ್ ಸೆನ್ಸರ್ ಟೂ ಶೂಟರ್ ಪರಿಕಲ್ಪನೆಯಲ್ಲಿ ಕಣ್ಗಾವಲು ಹಚ್ಚಿಸಲು ನೆರವು ನೀಡುತ್ತದೆ.
ಒಂದೆಡೆ ಚೀನಾ ಅರುಣಾಚಲ ಪ್ರದೇಶದ ಗಡಿಗಳಲ್ಲಿ ಮೂಲ ಸೌಕರ್ಯಗಳನ್ನು ಹೆಚ್ಚಿಸುತ್ತಿದೆ. ರಸ್ತೆ, ಸೇತುವೆಗಳನ್ನೂ ನಿರ್ಮಿಸುತ್ತಿದೆ. ಕಪಟ ಬುದ್ಧಿಯ ಚೀನಾ ಯಾವುದೇ ಕ್ಷಣದಲ್ಲಾದ್ರು ಭಾರತದ ಮೇಲೆ ದಾಳಿ ನಡೆಸುವ ಸಾಧ್ಯತೆ ಇದೆ. ಈ ಸಮಯದಲ್ಲಿ ಚೀನಾದ ಈ ಎಲ್ಲ ಬೆಳವಣಿಗೆಗಳ ಮೇಲೆ ಕಣ್ಣಿಡುವುದು ಅತ್ಯವಶ್ಯಕವಾಗಿದೆ. ಇದಕ್ಕೆ ಈ ಡ್ರೋನ್ ಸಹಾಯ ಮಾಡಲಿದೆ.