ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಎರಡು ಪ್ರಮುಖ ಸಮುದಾಯಗಳಾದ ಲಿಂಗಾಯತರು ಹಾಗು ಒಕ್ಕಲಿಗರನ್ನು ಓಲೈಸಲು ಎಲ್ಲಾ ಪಕ್ಷಗಳು ತಾಮುಂದು ನಾಮುಂದು ಎಂದು ಪೈಪೋಟಿ ನಡೆಸುತ್ತಿರುವುದು ಎಲ್ಲರಿಗೂ ಗೊತ್ತಿರೋ ಸಂಗತಿ. ಆದರೆ ಬಿಜೆಪಿ ಪಕ್ಷದಿಂದ ಈ ಬಾರಿ ಲಿಂಗಾಯತರು ದೂರ ಆಗುತ್ತಿದ್ದಾರೆ ಅನ್ನೋ ಸುಳಿವು ಸಿಕ್ಕಿದ್ದು, ಇದೇ ಕಾರಣಕ್ಕೆ ಬಿಜೆಪಿ ಲಿಂಗಾಯತರನ್ನು ಓಲೈಸುವ ಕೆಲಸ ಮಾಡುತ್ತಿದೆ. ಸೋಮವಾರ ಹಾಸನದಲ್ಲಿ ಪ್ರಚಾರ ನಡೆಸಿದ ಕೇಂದ್ರ ಗೃಹ ಸಚಿವ ಅಮಿತ್ ಷಾ, ಲಿಂಗಾಯತ ಸಮುದಾಯ ಬಿಜೆಪಿ ಪಕ್ಷದ ಪರವಾಗಿದೆ. ಯಡಿಯೂರಪ್ಪನವರ ಬಳಿಕ ಲಿಂಗಾಯತ ಸಮುದಾಯಕ್ಕೆ ಆದ್ಯತೆ ನೀಡಲಾಗಿದೆ. ಹಾಲಿ ಸಿಎಂ ಬಸವರಾಜ ಬೊಮ್ಮಾಯಿ ಲಿಂಗಾಯತ ಸಮುದಾಯದವರು. ವೀರಶೈವ ಲಿಂಗಾಯತರು ಬಿಜೆಪಿಯನ್ನ ಕೈ ಬಿಡಲ್ಲ. ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ ಹೋದರೂ ಬಿಜೆಪಿಯಲ್ಲಿ ಸಮರ್ಥ ಲಿಂಗಾಯತ ನಾಯಕರು ಇದ್ದಾರೆ ಎಂದಿದ್ದರು. ಲಿಂಗಾಯತರಿಗೆ ಬಿಜೆಪಿಯಲ್ಲಿ ಹೆಚ್ಚಿನ ಆದ್ಯತೆ ಎಂದಿದ್ದರು.
ಶಕ್ತಿಕೇಂದ್ರ ಬೆಂಗಳೂರಿನಲ್ಲಿ ಲಿಂಗಾಯತ ಸಮುದಾಯ ಕಡೆಗಣನೆ..!!

ರಾಜ್ಯದಲ್ಲಿ ಲಿಂಗಾಯತ ಸಮುದಾಯ ಓಲೈಕೆ ಮಾಡಲು ಸಿದ್ದರಾಮಯ್ಯ ಹೇಳಿಯನ್ನು ತಮಗೆ ಬೇಕಾದ ಹಾಗೆ ಎಡಿಟ್ ಮಾಡಿಕೊಂಡು ಪೋಸ್ಟ್ ಮಾಡಿದ್ದ ಬಿಜೆಪಿ, ರಾಜ್ಯ ರಾಜಧಾನಿ ಬೆಂಗಳೂರು ಹಾಗು ಬೆಂಗಳೂರು ಗ್ರಾಮಾಂತರದಲ್ಲಿ ಒಂದೇ ಒಂದು ಕ್ಷೇತ್ರದಲ್ಲೂ ಲಿಂಗಾಯತರಿಗಿಲ್ಲ ಲಿಂಗಾಯತರಿಗೆ ಪ್ರಾತಿನಿಧ್ಯ ನೀಡಿಲ್ಲ. ಇದೇ ಕಾರಣಕ್ಕಾಗಿ ನೋಟಾ ಮತದಾನ ಮಾಡುವ ಬಗ್ಗೆ ಲಿಂಗಾಯತ ಸಮುದಾಯದ ವಾಟ್ಸ್ ಆ್ಯಪ್ ಗ್ರೂಪ್‌ಗಳಲ್ಲಿ ಗಂಭೀರ ಚರ್ಚೆ ಶುರುವಾಗಿದೆ. ರಾಷ್ಟ್ರೀಯ ಬಸವತತ್ವ ಪರಿಷತ್, ಬಸವ ಸಮಿತಿ, ಯುವ ಬಸವ ಲಿಂಗಾಯತ ಸಂಘಟನೆಯ ಸದಸ್ಯರು ನೋಟಾ ಮತದಾನದ ಬಗ್ಗೆ ನಿರ್ಧಾರದ ತೆಗೆದುಕೊಳ್ಳಲು ಸಭೆ ಕರೆಯಲಾಗಿದೆ. ಇನ್ನೆರಡು ದಿನದಲ್ಲಿ ಲಿಂಗಾಯತ ಸಂಘಟನೆಗಳು ಸಭೆ ನಡೆಸಿ ಅಂತಿಮ ನಿರ್ಧಾರವನ್ನು ಸಮುದಾಯಕ್ಕೆ ತಿಳಿಸಲಿದ್ದಾರೆ ಎನ್ನಲಾಗಿದೆ.

32 ಕ್ಷೇತ್ರದಲ್ಲಿ ಸಿಕ್ಕಿಲ್ಲ ಒಂದೇ ಒಂದು ಕ್ಷೇತ್ರ..!
ಬೆಂಗಳೂರಿನ 28 ಕ್ಷೇತ್ರ ಬೆಂಗಳೂರು ಗ್ರಾಮಾಂತರದಲ್ಲಿ 4 ಕ್ಷೇತ್ರಗಳಿದ್ದು ಒಟ್ಟು 32 ಕ್ಷೇತ್ರಗಳ ಪೈಕಿ 5 ಕ್ಷೇತ್ರಗಳಲ್ಲಿ ಲಿಂಗಾಯತ ಮತದಾರರೇ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಬೆಂಗಳೂರಿನ ರಾಜಾಜಿನಗರದಲ್ಲಿ 45 ಸಾವಿರಕ್ಕೂ ಹೆಚ್ಚು ಮತದಾರರಿದ್ದರೂ ಟಿಕೆಟ್ ಸಿಕ್ಕಿಲ್ಲ. ಇನ್ನುಳಿದಂತೆ ಗೋವಿಂದರಾಜ ನಗರ, ಮಹಾಲಕ್ಷ್ಮಿ ಲೇಔಟ್, ಜಯನಗರ, ಯಶವನಂತಪುರ ಕ್ಷೇತ್ರದಲ್ಲಿಯೂ 20 ಸಾವಿರಕ್ಕೂ ಹೆಚ್ಚು ವೀರಶೈವ ಲಿಂಗಾಯತ ಮತದಾರರು ಇದ್ದಾರೆ. ಬೆಂಗಳೂರು ಹಾಗು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ವೀರಶೈವ ಲಿಂಗಾಯತ ಸಮುದಾಯದ ನಾಯಕರನ್ನು ತುಳಿಯುವ ಕೆಲಸ ಆಗ್ತಿದೆ ಎಂದು ರಾಷ್ಟ್ರೀಯ ಬಸವತತ್ವ ಪರಿಷತ್ ಅಧ್ಯಕ್ಷ ಅರುಣ್ ಕುಮಾರ್ ಡಿ.ಟಿ ಆಕ್ರೋಶ ಹೊರಹಾಕಿದ್ದಾರೆ. ಗೋವಿಂದರಾಜನಗರಲದಲ್ಲಿ ಸಚಿವ ವಿ ಸೋಮಣ್ಣ ಲಿಂಗಾಯತ ಸಮಯದಾಯ ನಾಯಕನಾಗಿ ಗೆಲುವು ಕಂಡಿದ್ದರೂ ಬಿಜೆಪಿ ಹೈಕಮಾಂಡ್ ಉದ್ದೇಶಪೂರ್ವಕವಾಗಿ ಚಾಮರಾಜನಗರ ಹಾಗು ವರುಣಾ ಕ್ಷೇತ್ರದಿಂದ ಅಖಾಡಕ್ಕೆ ಇಳಿಸಿದೆ. ಎರಡೂ ಕಡೆಯಲ್ಲೂ ಸೋಲುವ ಸಾಧ್ಯತೆ ಇದೆ ಎನ್ನುವ ಚರ್ಚೆ ನಡೆದಿದೆ.
ಬೆಂಗಳೂರಿನಲ್ಲಿ ಅನ್ಯರಾಜ್ಯದವರು, ರೆಡ್ಡಿ, ನಾಯ್ಡುಗಳ ಅಬ್ಬರ

ಬೆಂಗಳೂರು, ಬೆಂಗಳೂರು ಗ್ರಾಮಾಂತರದಲ್ಲಿ ಲಿಂಗಾಯತರ ಕಡೆಗಣನೆ ಕೇವಲ ಬಿಜೆಪಿಯಲ್ಲಿ ಮಾತ್ರವಲ್ಲಿ ಕಾಂಗ್ರೆಸ್, ಜೆಡಿಎಸ್‌ನಿಂದಲೂ ಯಾರೊಬ್ಬರೂ ನೀಡಿಲ್ಲ. ಆದರೆ ಈಗಾಗಲೇ ಲಿಂಗಾಯತ ನಾಯಕರು ಗೆದ್ದು ಸಚಿವರಾಗಿದ್ದರೂ ಅವರನ್ನು ಬೆಂಗಳೂರಿನಿಂದ ಆಚೆಗೆ ತಳ್ಳುವ ಪ್ರಯತ್ನ ಮಾಡಲಾಗಿದೆ. ಇನ್ನು ಕಳೆದ ಮೂರೂವರೆ ವರ್ಷದ ಹಿಂದೆ ಬೆಂಗಳೂರು ಉಸ್ತುವಾಗಿ ವಿಚಾರದಲ್ಲಿ ಸೋಮಣ್ಣ ಅವರನ್ನು ನಿರ್ಲಕ್ಷ್ಯ ಮಾಡಲಾಗಿತ್ತು. ಇನ್ನು ಬೆಂಗಳೂರಿನಲ್ಲಿ ಕನ್ನಡಿಗ ಅಭ್ಯರ್ಥಿಗಳೇ ಕಾಣದಂತೆ ರೆಡ್ಡಿಗಾರು, ನಾಯ್ಡು ಸಮುದಾಯದ ಅಭ್ಯರ್ಥಿಗಳ ಅಬ್ಬರವೇ ಹೆಚ್ಚಾಗಿದೆ ಎನ್ನುವ ಚರ್ಚೆ ಕೂಡ ಸೋಷಿಯಲ್ ಮೀಡಿಯಾದಲ್ಲಿ ಜೋರಾಗಿ ಚರ್ಚೆ ಹುಟ್ಟು ಹಾಕಿದೆ. ನಾವು ಲಿಂಗಾಯತರಿಗೇ ಹೆಚ್ಚಿನ ಮಾನ್ಯತೆ ಕೊಡುವುದು ಎಂದು ಹೇಳಿಕೊಳ್ಳುವ ಬಿಜೆಪಿಯಲ್ಲೂ ಟಿಕೆಟ್ ಸಿಕ್ಕಿಲ್ಲ ಅನ್ನೋದು ಲಿಂಗಾಯತ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದೆ ಎನ್ನಬಹುದು. ಆದರೂ ಟಿಕೆಟ್ ಹಂಚಿಕೆ ವೇಳೆ ಮೌನವಾಗಿದ್ದು, ಈಗ ಪ್ರಶ್ನೆ ಮಾಡಿದರೆ ಪ್ರಯೋಜನ ಇಲ್ಲ. ಈ ಬಾರಿ ನೋಟಾ ಹಾಕುವ ಬದಲು ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ ಒಳ್ಳೇದು.
ಕೃಷ್ಣಮಣಿ