• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, May 28, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಸಿಎಂ ಸಿದ್ದರಾಮಯ್ಯ ಬಜೆಟ್‌ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ..

Any Mind by Any Mind
July 7, 2023
in ಕರ್ನಾಟಕ, ರಾಜಕೀಯ
0
ಸಿಎಂ ಸಿದ್ದರಾಮಯ್ಯ ಬಜೆಟ್‌ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ..
Share on WhatsAppShare on FacebookShare on Telegram

ಸಿಎಂ ಸಿದ್ದರಾಮಯ್ಯ ಐತಿಹಾಸಿಕ 14ನೇ ಬಜೆಟ್‌ ಮಂಡನೆ ಮಾಡಿದ್ದು, ಈ ಬಾರಿ ಹಲವು ಕ್ಷೇತ್ರಗಳಿಗೆ ವಿವಿಧ ಕೊಡುಗೆಯನ್ನ ನೀಡಲಾಗಿದೆ. ಈ ಕೊಡುಗೆ ಈಗ ಜನರ ಮೇಲೆ ತೆರಿಗೆ ರೂಪದ ಹೊರೆಯಾಗಿದೆ ಎಂದು ಹಲವರು ಅಭಿಪ್ರಯಾವನ್ನ ವ್ಯಕ್ತ ಪಡಿಸುತ್ತಿದ್ದರೆ ಮತ್ತೆ ಒಂದಷ್ಟು ಮಂದಿ ಈ ಬಜೆಟ್‌ ಜನ ಪರವಾದ ಬಜೆಟ್‌ ಎಂದು ವಾದ ಮಂಡನೆ ಮಾಡುತ್ತಿದ್ದಾರೆ.

ADVERTISEMENT

ಇಂದು ಸಿಎಂ ಸಿದ್ದರಾಮಯ್ಯ ಮಂಡಿಸಿದ ಬಜೆಟ್‌ ಕುರಿತ ಸಂಪೂರ್ಣವಾದ ಮಾಹಿತಿ ಇಲ್ಲಿದೆ

1.            ನಾನು 2023-24ನೇ ಸಾಲಿನ ಆಯವ್ಯಯವನ್ನು ಈ ಸದನದ ಮುಂದೆ ಮಂಡಿಸುತ್ತಿದ್ದೇನೆ.

2.            ಅಭಿವೃದ್ಧಿ ಹಾಗೂ ಸಾಮಾಜಿಕ ನ್ಯಾಯವನ್ನು ಒಟ್ಟೊಟ್ಟಿಗೆ ಕೊಂಡೊಯ್ಯುವಲ್ಲಿ ಈ ದೇಶದಲ್ಲಿ ಶತಶತಮಾನಗಳಿಂದ ಯಾವುದಾದರೊಂದು ನಾಡು ಶ್ರಮಿಸಿದ್ದರೆ ಅದು ಕರ್ನಾಟಕ ಎಂದು ಹೇಳಲು ನನಗೆ ಹೆಮ್ಮೆಯಿದೆ. ಬಸವಣ್ಣನವರಿಂದ ಹಿಡಿದು ನಾಲ್ವಡಿ ಕೃಷ್ಣರಾಜ ಒಡೆಯರ್‌ರವರೆಗೆ ಈ ನಮ್ಮ ನಾಡಿನಲ್ಲಿ ಅಭಿವೃದ್ಧಿ ಹಾಗೂ ಸಾಮಾಜಿಕ ನ್ಯಾಯದ ತೇರನ್ನು ಜೊತೆಜೊತೆಗೇ ಎಳೆಯಲಾಗಿದೆ. ಈ ಘನ ಪರಂಪರೆಯನ್ನು ನಾನು ಎಂದಿನಂತೆ ಈ ಬಾರಿಯೂ ಮುಂದುವರೆಸಲು ಶ್ರಮಿಸಿದ್ದೇನೆ.

3.            ಇದು ನಾನು ಮಂಡಿಸುತ್ತಿರುವ ಹದಿನಾಲ್ಕನೆಯ ಆಯವ್ಯಯ ಪತ್ರ. ಮುಖ್ಯಮಂತ್ರಿಯಾಗಿ, ವಿತ್ತೀಯ ಹೊಣೆಯನ್ನು ಹೊತ್ತು ಮಂಡಿಸುತ್ತಿರುವ ಏಳನೆಯ ಬಜೆಟ್‌. ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಆರು ಆಯವ್ಯಯ ಪತ್ರಗಳನ್ನು ಮಂಡಿಸಿದ್ದೆ. ನನ್ನ ಇಷ್ಟೂ ಆಯವ್ಯಯ ಪತ್ರಗಳ ಹಿಂದೆ ಯಾವ ಕಲ್ಯಾಣ ರಾಜ್ಯದ ಕನಸನ್ನು ಸಾಕಾರಗೊಳಿಸಲು ಈ ನಾಡಿನ ಶ್ರೇಷ್ಠ ಮನಸ್ಸುಗಳು ಬಯಸಿದ್ದವೋ ಅದನ್ನು ಈಡೇರಿಸಲೇಬೇಕೆನ್ನುವ ಉದ್ದೇಶ, ಬದ್ಧತೆಗಳು ಸ್ಪಷ್ಟವಾಗಿವೆ. ನಮ್ಮ ಪಕ್ಷದ ಧ್ಯೇಯೋದ್ದೇಶವೂ ಸಹ ಇದುವೇ ಆಗಿದೆ.

4.            ನನ್ನ ಹಿಂದಿನ ಎಲ್ಲ ಆಯವ್ಯಯಗಳಲ್ಲಿ ʻಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳುʼ ಎಂಬ ಮೂಲಮಂತ್ರದ, ಕರ್ನಾಟಕ ಮಾದರಿಯ ಆಡಳಿತವನ್ನು ನೀಡುವ ಪ್ರಯತ್ನ ಮಾಡುತ್ತಾ ಬಂದಿದ್ದೆ. ಪ್ರಸ್ತುತ ಮಂಡಿಸುತ್ತಿರುವ ಆಯವ್ಯಯ ಪತ್ರದಲ್ಲಿ ಈ ಮಾದರಿಯನ್ನು ಇನ್ನಷ್ಟು ಆಳವಾಗಿಸುವ, ವಿಸ್ತಾರವಾಗಿಸುವ ಪ್ರಯತ್ನವಿದೆ.

 ʻಯಾವ ಕಾಲದ ಶಾಸ್ತ್ರವೇನು ಹೇಳಿದರೇನು,

ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು?ʼ

–              ರಾಷ್ಟ್ರಕವಿ ಕುವೆಂಪು

5.            ಈ ಬಾರಿ ಕರ್ನಾಟಕದ ಜನತೆ ತಮ್ಮ ಮನದಿಂಗಿತವನ್ನು ಗಟ್ಟಿಯಾಗಿ, ಸಂತೋಷದಿಂದ, ಪ್ರಾಮಾಣಿಕವಾಗಿ ಹೇಳಿದ್ದಾರೆ. ಈ ನಾಡಿನ ಜನತೆ ಗಟ್ಟಿ ದನಿಯಲ್ಲಿ ಮಹತ್ವಪೂರ್ಣ ಸಂದೇಶವನ್ನು ಇಡೀ ದೇಶಕ್ಕೆ ಸ್ಪಷ್ಟವಾಗಿ ನೀಡಿದ್ದಾರೆ. ದುಡಿಮೆಯ ಗೌರವ ಎತ್ತಿ ಹಿಡಿಯುವ ತುಡಿತ, ಎಲ್ಲರ ಒಳಿತಿಗೆ ದುಡಿಯುವ ಕನಸು, ಮುಕ್ತ ವಾತಾವರಣದಲ್ಲಿ ಬದುಕುವ ಭರವಸೆ, ಸಾಮಾಜಿಕ ನ್ಯಾಯ ಹಾಗೂ ಸಮತೆ, ಸಮಾನತೆಯ ಮೇಲಿನ ಹಕ್ಕಿನ ಪ್ರತಿಪಾದನೆಯು ಕನ್ನಡಿಗರ ಅಪೇಕ್ಷೆಗಳ ಅಭಿವ್ಯಕ್ತಿಯಾಗಿದೆ. ಕುಟುಂಬ ಪೋಷಣೆ, ಸಾಮಾಜಿಕ ಸಾಮರಸ್ಯ ಹಾಗೂ ಆರ್ಥಿಕ ಸಮೃದ್ಧಿಯ ಆಶಯದೊಂದಿಗೆ ಸಮಾಜ ನಿರ್ಮಾಣ ಸಾಮಾನ್ಯ ಕನ್ನಡಿಗರ ಬದುಕಿನ ಹಾದಿಯಾಗಿದೆ.

6.            ಕರ್ನಾಟಕದ ಜನತೆಯ ಮುಂದೆ 2023-24ನೇ ಸಾಲಿನ ಆಯವ್ಯಯವನ್ನು ಮಂಡಿಸುವ ಈ ಸಂದರ್ಭದಲ್ಲಿ ಸರ್ಕಾರದ ಮೂಲ ಧ್ಯೇಯೋದ್ದೇಶಗಳನ್ನು ಜನರ ಮುಂದೆ ಪ್ರಸ್ತಾಪಿಸಲು ಬಯಸುತ್ತೇನೆ. ರಾಜ್ಯದ ಮಾನವ ಹಾಗೂ ಆರ್ಥಿಕ ಸಂಪನ್ಮೂಲಗಳ ಅತ್ಯುತ್ತಮ ನಿರ್ವಹಣೆ ಮತ್ತು ಆ ಮೂಲಕ ದಕ್ಷ ಆಡಳಿತ ಹಾಗೂ ಹಣಕಾಸಿನ ಸ್ಥಿರತೆಯನ್ನು ಸಾಧಿಸುವುದು ನಮ್ಮ ಸರ್ಕಾರದ ಗುರಿಯಾಗಿದೆ. ಇದರಲ್ಲಿ ಪ್ರಮುಖವಾಗಿ ಕಾನೂನು ಸುವ್ಯವಸ್ಥೆ ಕಾಪಾಡುವುದು, ಸಾಮಾಜಿಕ ಸೇವೆ, ಮೂಲಸೌಕರ್ಯ ಒದಗಿಸುವುದು, ಸಮಾಜದ ದುರ್ಬಲ ವರ್ಗಗಳ ಕಲ್ಯಾಣ, ಪರಿಸರ ಸಂರಕ್ಷಣೆ, ಆರ್ಥಿಕ ಅಭಿವೃದ್ಧಿಗೆ ಉತ್ತೇಜನ, ರೈತರ ಏಳಿಗೆ, ಸಂಪನ್ಮೂಲಗಳ ನ್ಯಾಯಯುತ ಹಂಚಿಕೆ ಮತ್ತು ಸಮಾನ ಅವಕಾಶಗಳ ಸೃಜನೆ ಮಾಡುವುದು ನಮ್ಮ ಆದ್ಯತೆಯಾಗಿರುತ್ತದೆ. 

7.            ಈ ಸಂದರ್ಭದಲ್ಲಿ ಗಿರೀಶ್‌ ಕಾರ್ನಾಡರ ಯಯಾತಿ ನಾಟಕದ ಈ ಸಾಲುಗಳು ನನಗೆ ನೆನಪಾಗುತ್ತವೆ: ʻಬೆಳಕಿಲ್ಲದ ಹಾದಿಯಲ್ಲಿ ನಡೆಯಬಹುದು ಪುರು, ಆದರೆ ಕನಸುಗಳಿಲ್ಲದ ಹಾದಿಯಲ್ಲಿ ನಡೆಯಲಿ ಹೇಗೆ?ʼ ಉತ್ತಮ ಆಡಳಿತ ಇಲ್ಲವಾದರೆ ನ್ಯಾಯವಿರದು; ದೂರದೃಷ್ಟಿಯಿರದು; ಗುರಿಯಿರದು; ಕರ್ನಾಟಕದ ಜನತೆಗಾಗಿ ಕನಸುಗಳೇ ಇರಲಾರವು.  

8.            ಹೌದು, ರಾಜ್ಯವು ಅಂಧಕಾರ, ಅನ್ಯಾಯದಿಂದ ತತ್ತರಿಸಿತ್ತು. ಒಂದೆಡೆ ಪಟ್ಟಭದ್ರ ಹಿತಾಸಕ್ತಿಯಿಂದ ಕೂಡಿದ ಬಂಡವಾಳಶಾಹಿಗಳು ಮೆರೆದರೆ, ಇನ್ನೊಂದೆಡೆ ಜನಸಾಮಾನ್ಯರು ಮೂಕವೇದನೆ ಅನುಭವಿಸುತ್ತಿದ್ದರು. ಮಾರಕ ಸಾಂಕ್ರಾಮಿಕ ನಮ್ಮನ್ನು ಕಾಡಿದಾಗ, ದುರಾಡಳಿತ ಹಾಗೂ ಭ್ರಷ್ಟಾಚಾರ ಸಾರ್ವಜನಿಕರಿಗೆ ಎರವಾಯಿತು. 

9.            ಈ ಕತ್ತಲು ಇದೀಗ ಅಂತ್ಯ ಕಂಡಿದೆ. ರಾಜ್ಯದ ಮಹಾಜನತೆ ಈ ಬಾರಿ ಕಾಂಗ್ರೆಸ್‌ ಪಕ್ಷಕ್ಕೆ ಮತ ನೀಡಿ, ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿ, ಅವರ ದೃಢಸಂಕಲ್ಪ ಮತ್ತು ಪ್ರಜ್ಞಾವಂತಿಕೆ ಪ್ರದರ್ಶಿಸಿದ್ದಾರೆ. ರಾಜ್ಯದ  ಏಳು ಕೋಟಿ ಕನ್ನಡಿಗರ ಈ ಅಪಾರ ನಂಬಿಕೆಯನ್ನು ಎತ್ತಿಹಿಡಿಯಲು, ಉಜ್ವಲ ಭವಿಷ್ಯವನ್ನು ನಿರ್ಮಿಸಲು, ಅಂಧಕಾರದಲ್ಲಿರುವ ಇಂದಿನ ಭಾರತದಲ್ಲಿ ಲಕ್ಷಾಂತರ ಭಾರತೀಯರ ಕನಸುಗಳಿಗೆ ರೆಕ್ಕೆ ಮೂಡಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಶ್ರಮಿಸಲಿದೆ.  

10.          ನಾನು ಸಾಮಾಜಿಕ ನ್ಯಾಯ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳಲ್ಲಿ ದೃಢ ವಿಶ್ವಾಸ ಹೊಂದಿದ್ದೇನೆ. ನಮ್ಮ ಸರ್ಕಾರವು ಸಂವಿಧಾನದ ಆಶಯಗಳಂತೆ ಸಮಾಜವಾದಿ, ಜಾತ್ಯತೀತ, ಪ್ರಜಾಸತ್ತಾತ್ಮಕ ಮೌಲ್ಯಗಳ ಹಾದಿಯಲ್ಲಿ ಕೆಲಸ ಮಾಡಲಿದೆ. ಈ ಸಂದರ್ಭದಲ್ಲಿ ಡಾ.ಬಾಬಾಸಾಹೇಬ್‌ ಅಂಬೇಡ್ಕರ್‌ರವರು ಪ್ರತಿಪಾದಿಸಿರುವ ಸಾಮಾಜಿಕ ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದಲ್ಲಿ ನಂಬಿಕೆಯನ್ನು ಮರುಸ್ಥಾಪಿಸಲು ನಾವು ಬದ್ಧರಾಗಿದ್ದೇವೆ ಎಂದು ಪುನರುಚ್ಛರಿಸಲು ಇಚ್ಛಿಸುತ್ತೇನೆ. 

11.          ನಮ್ಮ ಕಾಂಗ್ರೆಸ್‌ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ರಾಜ್ಯವನ್ನು ಪ್ರಜ್ಞಾಪೂರ್ವಕವಾಗಿಯೇ ʻಸರ್ವಜನಾಂಗದ ಶಾಂತಿಯ ತೋಟʼ ಎಂದು ಉಲ್ಲೇಖಿಸಿದ್ದೇವೆ. ಏಕೆಂದರೆ ನಮಗೆ ವೈವಿಧ್ಯತೆ, ಎಲ್ಲರ ಒಳಗೊಳ್ಳುವಿಕೆಯಲ್ಲಿ ವಿಶ್ವಾಸವಿದೆಯೇ ಹೊರತು ಸರ್ವಾಧಿಕಾರಿ ಮನೋಭಾವದಲ್ಲಲ್ಲ. ನಾವು ವಿಭಿನ್ನ ಚಿಂತನೆಗಳ ಒಗ್ಗೂಡಿಸುವಿಕೆ, ಭಯಮುಕ್ತ ವಾತಾವರಣದಲ್ಲಿ ಬದುಕುವುದು ಮತ್ತು ಪರಸ್ಪರ ಅವಲಂಬನೆಯೊಂದಿಗೆ ಸಾರ್ವಜನಿಕ ಹಿತಾಸಕ್ತಿಯ ವಿಷಯಗಳ ಮೇಲೆ ಪರಿಣಾಮ ಬೀರುವ ತೀರ್ಮಾನಗಳನ್ನು ನ್ಯಾಯಯುತವಾಗಿ ಕೈಗೊಳ್ಳಲು ಬದ್ಧರಾಗಿದ್ದೇವೆ. ಭೇದ-ಭಾವ ತೋರುವುದು ಅಥವಾ ಧ್ರುವೀಕರಣ ಅಥವಾ ಸಮಾಜವನ್ನು ಒಡೆಯುವುದು ನ್ಯಾಯವಲ್ಲ. ನ್ಯಾಯವೆಂದರೆ ನಿಷ್ಪಕ್ಷಪಾತ, ನ್ಯಾಯವೆಂದರೆ ಸಹಾನುಭೂತಿ, ನ್ಯಾಯವೆಂದರೆ ಅವಕಾಶ ವಂಚಿತರಿಗೆ ಹೆಚ್ಚಿನ ಅನುಕೂಲ ಒದಗಿಸುವ ಮೂಲಕ ಆರ್ಥಿಕ ಅಸಮಾನತೆಯನ್ನು ನಿವಾರಿಸುವುದು. 

12.          ನಮ್ಮ ಸರ್ಕಾರವು ಬಡವರು, ದುರ್ಬಲ ವರ್ಗದವರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರು, ಹಿಂದುಳಿದ ವರ್ಗದವರು, ಅಲ್ಪಸಂಖ್ಯಾತರು, ಭೂ ರಹಿತ ಕೃಷಿ ಕಾರ್ಮಿಕರು ಮತ್ತು ಮಹಿಳೆಯರು ಸೇರಿದಂತೆ ಎಲ್ಲರಿಗೂ ಸಮಾನ ಅವಕಾಶ ಒದಗಿಸುವ ಮೂಲಕ ಎಲ್ಲರ ಕ್ಷೇಮಾಭಿವೃದ್ಧಿಯನ್ನು ಖಾತರಿಪಡಿಸಲು ಬದ್ಧವಾಗಿದೆ. ನಾವು ಒಪ್ಪಂದ ಹಾಗೂ ಅನುಕೂಲಸಿಂಧು ರಾಜಕಾರಣವನ್ನು ಧಿಕ್ಕರಿಸಿ, ಸಂಪೂರ್ಣ ಬಹುಮತವನ್ನು ನೀಡಿರುವ ಶ್ರೀಸಾಮಾನ್ಯರ ತೀರ್ಮಾನವನ್ನು ತಲೆಬಾಗಿಸಿ ಸ್ವೀಕರಿಸುತ್ತೇವೆ. ಹಿಂದಿನ ಸರ್ಕಾರ ಗಣನೀಯವಾಗಿ ನೀಡಿರುವ ಕೊಡುಗೆಯಾದ ಭ್ರಷ್ಟಾಚಾರವನ್ನು ಸಂಪೂರ್ಣವಾಗಿ ನಿಗ್ರಹಿಸಲು ನಮ್ಮ ಸರ್ಕಾರ ಶ್ರಮಿಸಲಿದೆ.  

13.          ಆಯವ್ಯಯವೆನ್ನುವುದು ಹಣಕಾಸಿನ ನಿರ್ವಹಣೆಯ ಕಸರತ್ತು ಮಾತ್ರವೇ ಅಲ್ಲ. ನಮ್ಮ ಆದ್ಯತೆಗಳನ್ನು, ಗುರಿಗಳನ್ನು ನಿಚ್ಚಳವಾಗಿಸಿಕೊಳ್ಳುವ, ಸಾಕಾರಗೊಳಿಸಿಕೊಳ್ಳುವ ಸಾಧನ.

2023-24 ರ ಆಯವ್ಯಯವನ್ನು ರೂಪಿಸುವಾಗ ರಾಜ್ಯ ಸರ್ಕಾರವು ಬೇಡಿಕೆಗಳನ್ನು ವಾಸ್ತವಗಳೊಂದಿಗೆ ಹಾಗೂ ಸುಸ್ಥಿರ ಅಭಿವೃದ್ಧಿಯೊಂದಿಗೆ ಸಮನ್ವಯಗೊಳಿಸುವ ಮೂಲಕ ವಸ್ತುಸ್ಥಿತಿ ಆಧಾರಿತ, ಫಲಿತಾಂಶ ಕೇಂದ್ರಿತ, ಜನಪರ ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸಲು ಪ್ರಜ್ಞಾಪೂರ್ವಕವಾಗಿ ತೀರ್ಮಾನಿಸಿದೆ.  

14.          ಕಳೆದ ಕೆಲ ವರ್ಷಗಳಲ್ಲಿ ನೋಟು ರದ್ದತಿ, ಕೋವಿಡ್‌ ಸಾಂಕ್ರಾಮಿಕತೆ, ರಾಜಕೀಯ ಅಸ್ಥಿರತೆ, ಅನಿಯಂತ್ರಿತ ಬೆಲೆ ಏರಿಕೆ, ಅಭಿವೃದ್ಧಿಯ ಮುನ್ನೋಟದ ಕೊರತೆಯಿಂದಾಗಿ ರಾಜ್ಯದ ಜನತೆ ತತ್ತರಿಸಿ ಹೋಗಿದ್ದಾರೆ. ಹಾಗಾಗಿ, ಈ ಬಾರಿ ನಾವು ರಾಜ್ಯದ ಜನತೆಯನ್ನು ಈ ಸಂಕಷ್ಟಗಳ ಸುಳಿಯಿಂದ ಹೊರಗೆ ತರಲು, ಅವರ ಮೇಲಿನ ಹೊರೆಗಳನ್ನು ಇಳಿಸಲು ಮೊದಲಿಗೇ ಗ್ಯಾರಂಟಿ ಯೋಜನೆಗಳನ್ನು ರೂಪಿಸಿ ನಮ್ಮ ಆದ್ಯತೆಗಳನ್ನು ಸ್ಪಷ್ಟಪಡಿಸಿದ್ದೇವೆ.

ʻನಡೆಯದ ಹಾದಿಯಲ್ಲಿ ಎಡವಿದೆನೆಂದರೆ ಒಪ್ಪುವುದೆ ಅಯ್ಯಾ?

ಕಾಣದ ಮುಖದ ಕುಂದನೆಣಿಸಿದರೆ ಒಪ್ಪುವುದೆ ಅಯ್ಯಾ?

ಉಣ್ಣದ ಅಡಿಗೆಯ ರುಚಿಯ ಟೀಕಿಸಿದರೆ ಒಪ್ಪುವುದೆ ಅಯ್ಯಾ?

ನೋಡದುದನ್ನು ನೋಡಿದಂತೆ ವರ್ಣಿಸಿದರೆ ಒಪ್ಪುವುದೆ ಅಯ್ಯಾ?ʼ

                        –  ಸಿದ್ದಯ್ಯ ಪುರಾಣಿಕ

15.          ಮಾನ್ಯರೇ, ನಾನು ನನ್ನ ಆಯವ್ಯಯ ಪ್ರಸ್ತಾವನೆ ಪ್ರಾರಂಭಿಸುವ ಮೊದಲು ನಮ್ಮ ಐದು ಗ್ಯಾರಂಟಿಗಳ ಬಗ್ಗೆ ಟೀಕೆ ಟಿಪ್ಪಣಿ ಮಾಡುವುದು, ಇಲ್ಲ ಸಲ್ಲದ ಸುಳ್ಳು ಸುದ್ದಿಗಳನ್ನು ಹಬ್ಬಿಸುವುದು, ಜನರಲ್ಲಿ ಗೊಂದಲ ಮೂಡಿಸುವುದು, ಇಂತಹ ಕೆಲಸ ಮಾಡುತ್ತಿರುವ ವಿರೋಧ ಪಕ್ಷದವರಿಗೆ ಒಂದೇ ಒಂದು ಮಾತು ಹೇಳಲು ಬಯಸುತ್ತೇನೆ. ಗ್ಯಾರಂಟಿ ಯೋಜನೆಗಳನ್ನು ಕೇವಲ ಬಿಟ್ಟಿ ಕೊಡುಗೆಗಳೆಂದು ಆಡಿಕೊಳ್ಳುವವರು ಒಮ್ಮೆ ನಮ್ಮ ಬಡವರ, ಶ್ರಮಿಕರ ಬದುಕನ್ನು ಗಮನಿಸಬೇಕಾಗಿದೆ. ತಾವು ವಿರೋಧ ಪಕ್ಷದ ಜವಾಬ್ದಾರಿಯನ್ನು ನಿರ್ವಹಿಸಿ;  ಆದರೆ ಶ್ರೀಸಾಮಾನ್ಯರ ವಿವೇಚನೆಗೆ ಅಪಮಾನ ಮಾಡಬೇಡಿ ಎಂದು ವಿನಂತಿ ಮಾಡಿಕೊಳ್ಳುತ್ತೇನೆ. ಜನರು ಬುದ್ಧಿವಂತರು; ಜನರು ಪ್ರಜ್ಞಾವಂತರು. ಇಂತಹ ತರ್ಕರಹಿತ ಆಲೋಚನೆಗಳನ್ನು ನಂಬುವುದಿಲ್ಲ. ವಾಸ್ತವವೆಂದರೆ, ಜನ ನಿಮ್ಮಿಂದ ಬೇಸತ್ತು ಇಷ್ಟೊಂದು ಭಾರಿ ಬಹುಮತದಿಂದ ನಮ್ಮನ್ನು ಆರಿಸಿ

ವಿಧಾನ ಸೌಧಕ್ಕೆ ಕಳುಹಿಸಿದ್ದಾರೆ.

16.          ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ ಪಕ್ಷವು ಕರ್ನಾಟಕದ ಜನತೆಗೆ

೫ ಗ್ಯಾರಂಟಿಗಳ ಭರವಸೆ ನೀಡಿದೆ. ಅಧಿಕಾರಕ್ಕೆ ಬಂದ ಕೂಡಲೇ ನಮ್ಮ ಸರ್ಕಾರ ಈ ಗ್ಯಾರಂಟಿ ಯೋಜನೆಗಳ ಜಾರಿಗೆ ತಾತ್ವಿಕ ಅನುಮೋದನೆ ನೀಡಿತು. ಈಗಾಗಲೇ ನಾವು ಮಹಿಳೆಯರಿಗೆ ಉಚಿತ ಸಾರಿಗೆ ಸೌಲಭ್ಯ ನೀಡುವ ಮೂಲಕ ಅವರ ಕನಸುಗಳಿಗೆ ರೆಕ್ಕೆ ಮೂಡಿಸುವ

ಶಕ್ತಿ ಯೋಜನೆಯನ್ನು ಜಾರಿಗೊಳಿಸಿದ್ದೇವೆ.  ಈಗಾಗಲೇ ಗೃಹಜ್ಯೋತಿ ಯೋಜನೆಗೆ ನೋಂದಣಿ ಪ್ರಕ್ರಿಯೆ ಪ್ರಾರಂಭಿಸಲಾಗಿದ್ದು,

ಗೃಹಲಕ್ಷ್ಮಿ ಯೋಜನೆಯ ನೋಂದಣಿ ಪ್ರಕ್ರಿಯೆಯನ್ನು ಶೀಘ್ರವೇ ಪ್ರಾರಂಭಿಸಲಾಗುವುದು. ಗೃಹಜ್ಯೋತಿ ಯೋಜನೆಯನ್ನು ಜುಲೈ ತಿಂಗಳಿನಿಂದ ಹಾಗೂ ಗೃಹಲಕ್ಷ್ಮಿ ಯೋಜನೆಯನ್ನು ಆಗಸ್ಟ್‌ ತಿಂಗಳಿನಲ್ಲಿ ಜಾರಿಗೆ ತರುತ್ತೇವೆ. ಯುವನಿಧಿ ಯೋಜನೆಯು 2023ರಲ್ಲಿ ಪದವಿ ಪಡೆದ ಯುವಜನರಿಗಾಗಿ ಜಾರಿಗೆ ಬರಲಿದೆ. ಅನ್ನಭಾಗ್ಯದಡಿ ಪ್ರತಿ ಫಲಾನುಭವಿಗೆ ಕೇಂದ್ರ ಸರ್ಕಾರದಿಂದ ಒದಗಿಸುತ್ತಿರುವ ಐದು ಕೆ.ಜಿ ಅಕ್ಕಿಯ ಜೊತೆಗೆ ರಾಜ್ಯ ಸರ್ಕಾರದಿಂದ ಒದಗಿಸುವ ಹೆಚ್ಚುವರಿ ಐದು ಕೆ.ಜಿ. ಸೇರಿದಂತೆ ಒಟ್ಟಾರೆ ೧೦ ಕೆ.ಜಿ ಆಹಾರ ಧಾನ್ಯವನ್ನು ಪ್ರತಿ ತಿಂಗಳು ವಿತರಿಸಲು ನಾವು ಬದ್ಧರಾಗಿದ್ದೇವೆ.

17.          ನಾವು ಗ್ಯಾರಂಟಿ ಯೋಜನೆಗಳನ್ನು ಯಾಕೆ ಘೋಷಿಸಿದ್ದೇವೆ? ಹಾಗೂ ಯಾಕೆ ಜಾರಿಗೊಳಿಸುತ್ತಿದ್ದೇವೆ? ಅವು ಬಿಟ್ಟಿ ಕೊಡುಗೆಗಳಲ್ಲ. ಈ ಸಂದರ್ಭದಲ್ಲಿ ಬಾಬಾಸಾಹೇಬ್ ಡಾ. ಬಿ. ಆರ್.‌ ಅಂಬೇಡ್ಕರ್‌ ಅವರ ಚಿಂತನೆಯನ್ನು ಸ್ಮರಿಸುತ್ತೇನೆ.

ʻಭದ್ರತೆಯ ಖಾತರಿ ಕೊಡದ ಆರ್ಥಿಕ ಯೋಜನೆಯಿಂದ ಯಾವ ಉಪಯೋಗವೂ ಇಲ್ಲ. ಯೋಜನೆ ಒಪ್ಪಿತವಾಗಬೇಕಾದರೆ, ಅದು ಮಿತವ್ಯಯದ್ದು ಮತ್ತು ಸುಭದ್ರವು ಆಗಿರಬೇಕು. ಅದು ಮಿತವ್ಯಯದ್ದು ಆಗಿರದಿದ್ದರೆ, ಬಹುಶ: ನಡೆದೀತು. ಆದರೆ, ಸುಭದ್ರವಾಗಿಲ್ಲದಿದ್ದರೆ, ಖಂಡಿತ ನಡೆಯುವುದಿಲ್ಲʼ.

ಮುಕ್ತ ಮಾರುಕಟ್ಟೆಯ ಈ ಯುಗದಲ್ಲಿ ಬಂಡವಾಳ ಹೂಡಿಕೆಯನ್ನು ವ್ಯಾಪಕವಾಗಿ ಆಕರ್ಷಿಸುವುದು, ಉದ್ಯೋಗಸಹಿತ ಬೆಳವಣಿಗೆಯನ್ನು ಸಾಕಾರಗೊಳಿಸುವುದು ಎಷ್ಟು ಮುಖ್ಯವೋ ಅಷ್ಟೇ ಮುಖ್ಯವಾದದ್ದು ಸಂಪತ್ತಿನ ವ್ಯಾಪಕ ಅಸಮಾನ ಹಂಚಿಕೆಯು ಸೃಷ್ಟಿಸುವ ಬೃಹತ್ ಕಂದರವು ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮ ಬೀರದಂತೆ ನೋಡಿಕೊಳ್ಳುವುದಾಗಿದೆ. ಅಭಿವೃದ್ಧಿಯ ಫಲವನ್ನು ಬಡವರು, ಶೋಷಿತರು ಹಾಗೂ ದುರ್ಬಲ ವರ್ಗದವರಿಗೆ ಹಂಚುವ ನಮ್ಮ ಪ್ರಯತ್ನವಾಗಿದೆ. ಅಭಿವೃದ್ಧಿಯ ಸಾಹಿತ್ಯದಲ್ಲಿ ಆರ್ಥಿಕ ಪ್ರಗತಿಯ ಫಲಗಳು ಬಡವರಿಗೆ ಸಹಜವಾಗಿ ಹರಿದುಬರುತ್ತದೆ (trickle down theory) ಎಂಬ ನಂಬಿಕೆ ಹುಸಿಯಾದ ಸಂದರ್ಭದಲ್ಲಿ ಬಡವರಿಗೆ ಅದರಲ್ಲೂ ವಿಶೇಷವಾಗಿ ಮಹಿಳೆಯರಿಗೆ ಬೇಷರತ್ತಾಗಿ ನಗದು ವರ್ಗಾವಣೆ ಮಾಡುವುದು ಮಹಿಳಾ ಸಬಲೀಕರಣ ಹಾಗೂ ಅವರ ಖರೀದಿಸುವ ಸಾಮರ್ಥ್ಯ ಹೆಚ್ಚಿಸುವ ಪರಿಣಾಮಕಾರಿ ಮಾರ್ಗವೆಂಬುದು ಸಾಬೀತಾಗಿದೆ.

18.          ಗೃಹಲಕ್ಷ್ಮಿ ಹಾಗೂ ಗೃಹಜ್ಯೋತಿ ಯೋಜನೆಗಳು ಕೇಂದ್ರ ಸರ್ಕಾರದ ವೈಫಲ್ಯದಿಂದ ಅನಿಯಂತ್ರಿತ ಬೆಲೆ ಏರಿಕೆಯಿಂದ ತತ್ತರಿಸುವ ಕುಟುಂಬಗಳಿಗೆ ತುಸು ನಿರಾಳತೆ ತಂದುಕೊಡುತ್ತವೆ. ಮಹಿಳೆಯರ ಓಡಾಟಕ್ಕೆ ಬೆಂಬಲ ನೀಡುವ ಶಕ್ತಿ ಯೋಜನೆಯು ಅವರಿಗೆ ಹಣ ಉಳಿತಾಯ ಮಾಡುವುದರೊಂದಿಗೆ ಮನೆಯಿಂದ ದೂರದ ಸ್ಥಳಗಳಲ್ಲಿಯೂ ಉದ್ಯೋಗ ಕಂಡುಕೊಳ್ಳಲು ನೆರವಾಗುತ್ತದೆ. ಅನ್ನಭಾಗ್ಯವು ಯಾರೂ ಹಸಿದುಕೊಂಡಿರಬಾರದೆಂಬುದನ್ನು ಖಾತರಿ ಪಡಿಸಿದರೆ, ಯುವನಿಧಿ, ಉದ್ಯೋಗಾಕಾಂಕ್ಷಿ ಯುವ ಜನರಿಗೆ ಮಾನಸಿಕ ಸ್ಥೈರ್ಯ ನೀಡುತ್ತದೆ.

19.          ನಮ್ಮ ಐದು ಗ್ಯಾರಂಟಿ ಯೋಜನೆಗಳಿಂದಾಗಿ ಒಂದು ವರ್ಷದಲ್ಲಿ ಸುಮಾರು 52,000 ಕೋಟಿ ರೂ.ಗಳನ್ನು ಅಂದಾಜು 1.30 ಕೋಟಿ ಕುಟುಂಬಗಳಿಗೆ ತಲುಪಿಸುವುದರಿಂದ ಪ್ರತೀ ಕುಟುಂಬಕ್ಕೆ ಮಾಸಿಕ 4,000 ರಿಂದ 5,000 ರೂ.ಗಳಷ್ಟು, ಅಂದರೆ, ವಾರ್ಷಿಕವಾಗಿ ಸರಾಸರಿ 48,000 ದಿಂದ 60,000 ರೂ.ಗಳಷ್ಟು ಹೆಚ್ಚುವರಿ ಆರ್ಥಿಕ ನೆರವು ನೀಡಿದಂತಾಗುತ್ತದೆ. ಇದು ಸಾರ್ವತ್ರಿಕ ಮೂಲ ಆದಾಯ (Universal basic income) ಎಂಬ ಪರಿಕಲ್ಪನೆಯನ್ನು ದೇಶದಲ್ಲಿಯೇ ಪ್ರಥಮ ಬಾರಿಗೆ ಅನುಷ್ಠಾನಗೊಳಿಸಿ ಅಭಿವೃದ್ಧಿಯ ಹೊಸ ಮಾದರಿಯನ್ನು ರೂಪಿಸುವ ಉದ್ದೇಶ ಹೊಂದಿದೆ.

20.          ಬಡವರ ಕೈಗೆ ಹೆಚ್ಚಿನ ಹಣ ನೀಡುವುದರ ಹಿಂದಿರುವ ಪ್ರಬಲ ಆರ್ಥಿಕ ತರ್ಕವನ್ನು ಸದನದ ಗೌರವಾನ್ವಿತ ಸದಸ್ಯರು ಗಮನಿಸಬಹುದಾಗಿದೆ. ಜಿ.ಎಸ್‌.ಟಿ. ಯ ಬಹುಪಾಲು ಮೊತ್ತವು ಸಮಾಜದ ತಳಹಂತದ ಶೇ.60 ರಷ್ಟು ಜನರಿಂದ ಸಂಗ್ರಹವಾಗುತ್ತಿದ್ದರೂ ಆರ್ಥಿಕ ವ್ಯವಸ್ಥೆಯ ಹೆಚ್ಚಿನ ಲಾಭವು ಸಮಾಜದ ಮೇಲ್ಮಟ್ಟದ ಶೇ.10 ರಷ್ಟು ಜನರಿಗೆ ತಲುಪುತ್ತಿದೆ. ಆದ್ದರಿಂದ ಬಡವರಿಗೆ ಸಂಪತ್ತನ್ನು ಮರುಹಂಚಿಕೆ ಮಾಡುವ ನೀತಿಗಳನ್ನು ಜನಪರ ಸರ್ಕಾರಗಳು ಅನುಸರಿಸಬೇಕು. ನಮ್ಮ ಗ್ಯಾರಂಟಿ ಯೋಜನೆಗಳು ಈ ಕೆಲಸವನ್ನು ಮಾಡುತ್ತವೆ.

21.          ʻನಡೆಯ ಚೆನ್ನ ನುಡಿದು ತೋರಿ, ನುಡಿಯ ಚೆನ್ನ ನಡೆದು ತೋರಿʼ ಎಂಬ ಬಸವಣ್ಣನವರ ವಚನದಂತೆ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಚಾಲನೆ ನೀಡುವ ಮೂಲಕ ನುಡಿದಂತೆ ನಡೆಯುವ ನಮ್ಮ ಸರ್ಕಾರದ ಬದ್ಧತೆಯನ್ನು ಮತ್ತೊಮ್ಮೆ ಪ್ರದರ್ಶಿಸಿದ್ದೇವೆ.  

22.          ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ರಾಜ್ಯದ ಜನತೆ ಸಾಕಷ್ಟು ಸಂಕಷ್ಟಗಳನ್ನು ಎದುರಿಸಿದೆ. ಕೋವಿಡ್‌ 19 ರಿಂದಾಗಿ ಹಾಗೂ ಈ ಸಾಂಕ್ರಾಮಿಕದ ಸಂದರ್ಭದಲ್ಲಿ ಹಿಂದಿನ ಸರ್ಕಾರದ ಸಂವೇದನಾರಹಿತ ಕಾರ್ಯನಿರ್ವಹಣೆಯ ಪರಿಣಾಮ, ಒಪ್ಪತ್ತಿನ ಊಟಕ್ಕೂ ಸಂಚಕಾರ ಒದಗಿದ್ದು ಸುಳ್ಳಲ್ಲ. ದುಡಿಯುವ ಕೈಗಳಿಗೆ ಕೆಲಸ ತಪ್ಪಿದ್ದೂ ನೋಡಿದ್ದೇವೆ. ಉದ್ಯಮಗಳು ಮುಚ್ಚಿದ್ದರಿಂದ ಸಾವಿರಾರು ಕಾರ್ಮಿಕರು ನೌಕರಿ ಕಳೆದುಕೊಂಡು ಬೀದಿ ಪಾಲಾಗಬೇಕಾಯಿತು. ತಮ್ಮ ಅರ್ಹತೆಗಿಂತ ಕಡಿಮೆ ಮಟ್ಟದ ನೌಕರಿ ನೆಚ್ಚಿಕೊಂಡವರು ಅದೆಷ್ಟೋ? ಒಂದೆಡೆ ಸಾಂಕ್ರಾಮಿಕದ ಭೀತಿ; ಮತ್ತೊಂದೆಡೆ ಹೊಟ್ಟೆಪಾಡಿನ ಚಿಂತೆ. ಸಂಕಷ್ಟಗಳ ಸರಮಾಲೆಗೆ ಬೆಲೆ ಏರಿಕೆಯ ಸೇರ್ಪಡೆಯಿಂದ, ಬಡಜನರ ಗಾಯದ ಮೇಲೆ ಬರೆ ಎಳೆದಂತಾಗಿತ್ತು. ಸಾಮಾನ್ಯ ವರ್ಗದ ಜನರ ಬದುಕು ಮೂರಾಬಟ್ಟೆಯಾಗಿ ಸಂಕಟ ಅನುಭವಿಸಿದ್ದು ನಾವೆಲ್ಲರೂ ಕಂಡಿದ್ದೇವೆ.   

23.          ನಮ್ಮ ಗ್ಯಾರಂಟಿ ಯೋಜನೆಗಳಿಗೆ ಅಗತ್ಯವಿರುವ ಸಂಪನ್ಮೂಲವನ್ನು ನಮ್ಮ ಸರ್ಕಾರವು ಜನರಿಗೆ ಹೆಚ್ಚಿನ ಹೊರೆಯಾಗದಂತೆ ಹೊಂದಿಸಲಿದೆ.

ಈ ನಿಟ್ಟಿನಲ್ಲಿ ತೆರಿಗೆ ಸಂಗ್ರಹ ವ್ಯವಸ್ಥೆಯಲ್ಲಿ ಸುಧಾರಣೆ ಹಾಗೂ ತೆರಿಗೆ ಸೋರಿಕೆಯನ್ನು ತಡೆಗಟ್ಟುವುದರ ಜೊತೆಗೆ ಸರ್ಕಾರದ ಅನಗತ್ಯ ದುಂದುವೆಚ್ಚಗಳಿಗೆ ಕಡಿವಾಣ ಹಾಕಲು ಕ್ರಮ ವಹಿಸಲಾಗುವುದು. ವಿತ್ತೀಯ ಸಂಪನ್ಮೂಲಗಳು ಹಾಗೂ ಆಡಳಿತದ ದಕ್ಷ ನಿರ್ವಹಣೆ ಒಂದು ಕಲೆ ಮತ್ತು ವಿಜ್ಞಾನ; ಕೇವಲ ಸಾಮಾಜಿಕ ಜಾಲತಾಣಗಳ ಸಂದೇಶವಲ್ಲ ಎಂಬುದನ್ನು ಅರಿತರೆ ಒಳ್ಳೆಯದು. ಈ ಯೋಜನೆಗಳು ಅರ್ಹರಿಗೆ ನೇರವಾಗಿ ತಲುಪುವುದರಿಂದ ಹಾಗೂ ಬವಣೆಗಳ ಭಾರದಿಂದ ಏದುಸಿರು ಬಿಡುತ್ತಿರುವ ಬಡವರ ಬದುಕಿನಲ್ಲಿ ಪ್ರಾಣವಾಯುವಿನಂತೆ ಕೆಲಸ ಮಾಡುವುದೆಂಬ ಆಶಯದೊಂದಿಗೆ ಇವುಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ನಮ್ಮ ಸರ್ಕಾರ ಬದ್ಧವಾಗಿದೆ.

ರಾಜ್ಯದ ಅರ್ಥವ್ಯವಸ್ಥೆ

24.          ರಾಜ್ಯದ ಅರ್ಥವ್ಯವಸ್ಥೆಯು ಹಿಂದಿನ ಸರ್ಕಾರದ ಅವಧಿಯಲ್ಲಿ ಹದಗೆಟ್ಟಿರುತ್ತದೆ. ಕೇಂದ್ರ ಸಾಂಖ್ಯಿಕ ಕಛೇರಿಯು ಬಿಡುಗಡೆ ಮಾಡಿರುವ ಮುಂಗಡ ಅಂದಾಜುಗಳ ಪ್ರಕಾರ ರಾಜ್ಯದ ಜಿ.ಎಸ್.ಡಿ.ಪಿ ಯು 2022-23ರಲ್ಲಿ ಶೇ. 7.9 ರಷ್ಟು ಬೆಳವಣಿಗೆ ದಾಖಲಿಸಿದೆ. 2021-22 ರಲ್ಲಿ ರಾಜ್ಯದ ಜಿ.ಎಸ್.ಡಿ.ಪಿ ಬೆಳವಣಿಗೆಯು ಶೇ.11 ರಷ್ಟು ದಾಖಲಾಗಿತ್ತು. 2022-23ರ ವಲಯವಾರು ಬೆಳವಣಿಗೆಯನ್ನು ಗಮನಿಸಿದರೆ, ಕೃಷಿ, ಕೈಗಾರಿಕೆ ಮತ್ತು ಸೇವಾ ವಲಯಗಳಲ್ಲಿನ ಬೆಳವಣಿಗೆಯು ಶೇ. 5.5, 5.1 ಮತ್ತು 9.2 ರಷ್ಟು ಬೆಳವಣಿಗೆಯನ್ನು ದಾಖಲಿಸಿರುತ್ತದೆ.   

25.          ನಮ್ಮ ಸರ್ಕಾರದ ಹಿಂದಿನ ಅವಧಿಯಲ್ಲಿ ಅಂದರೆ, 2013-14 ರಿಂದ 2017-18ರವರೆಗೆ ಕೈಗಾರಿಕಾ ವಲಯದಲ್ಲಿ ಶೇ. 8.70 ರಷ್ಟು ಬೆಳವಣಿಗೆ (CAGR) ಹಾಗೂ ಸೇವಾ ವಲಯದಲ್ಲಿ ಶೇ. 9.69 ರಷ್ಟು ಬೆಳವಣಿಗೆ (CAGR) ದಾಖಲಾಗಿರುತ್ತದೆ. ಆದರೆ, 2019-20 ರಿಂದ

2022-23ರ ವರೆಗೆ ಕೈಗಾರಿಕಾ ವಲಯದಲ್ಲಿ ಶೇ. 3.86 ರಷ್ಟು ಬೆಳವಣಿಗೆ (CAGR) ಹಾಗೂ ಸೇವಾ ವಲಯದಲ್ಲಿ ಶೇ. 4.25 ರಷ್ಟು ಬೆಳವಣಿಗೆ (CAGR) ದಾಖಲಾಗಿದ್ದು, ಇದು ಕೋವಿಡ್‌ನಿಂದ ತತ್ತರಿಸಿದ ರಾಜ್ಯದ ಆರ್ಥಿಕತೆಯನ್ನು ಪುನಶ್ಚೇತನಗೊಳಿಸಲು ಈ ಹಿಂದಿದ್ದ ಸರ್ಕಾರವು ವಿಫಲವಾಗಿರುವುದನ್ನು ಎತ್ತಿ ತೋರಿಸುತ್ತದೆ.   

26.          2022-23ರಲ್ಲಿ ಅಗತ್ಯ ವಸ್ತುಗಳ ಬೆಲೆ ಹೆಚ್ಚಳ ಮತ್ತು ತೈಲ ಬೆಲೆಯ ಏರಿಕೆಯನ್ನು ತಡೆಯುವಲ್ಲಿ ಕೇಂದ್ರ ಸರ್ಕಾರವು ವಿಫಲವಾಗಿದೆ. ತೀವ್ರ ಹಣದುಬ್ಬರದಿಂದ ಜನ ಸಾಮಾನ್ಯರು ಕಂಗಾಲಾಗಿದ್ದು, ಅವರನ್ನು ಇಂತಹ ಪ್ರತಿಕೂಲ ವಾತಾವರಣದಿಂದ ರಕ್ಷಿಸುವುದೇ ನಮ್ಮ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಿಗೆ ಪ್ರೇರಣೆಯಾಗಿದೆ.

27.          2021-22 ರಲ್ಲಿ ರಾಜ್ಯಕ್ಕೆ 22 ಬಿಲಿಯನ್‌ ಡಾಲರ್‌ ವಿದೇಶಿ ಬಂಡವಾಳ ಹೂಡಿಕೆ ಹರಿದು ಬಂದಿದ್ದು, 2022-23ರಲ್ಲಿ ಇದು 10 ಬಿಲಿಯನ್‌ ಡಾಲರ್‌ಗೆ ಇಳಿದಿದೆ. ರಾಜ್ಯಕ್ಕೆ ಹೆಚ್ಚು ವಿದೇಶಿ ಬಂಡವಾಳ ಹೂಡಿಕೆಯನ್ನು ಸೆಳೆಯಲು ಬೇಕಾದ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ನಮ್ಮ ಸರ್ಕಾರವು ಬದ್ಧವಾಗಿದೆ.

ರಾಜ್ಯದ ಹಣಕಾಸು ಪರಿಸ್ಥಿತಿ

28.          ಹಿಂದಿನ ಸರ್ಕಾರವು ವಿತ್ತೀಯ ಶಿಸ್ತಿನ ನೀತಿಗಳನ್ನು ಗಾಳಿಗೆ ತೂರಿ ಪ್ರಮುಖ ಇಲಾಖೆಗಳಲ್ಲಿ ಬಾರಿ ಸಂಖ್ಯೆಯ ಕಾಮಗಾರಿಗಳಿಗೆ ಮಂಜೂರಾತಿ ನೀಡಿರುತ್ತದೆ. ಹಿಂದಿನ ಸರ್ಕಾರವು ತನ್ನ ಅಧಿಕಾರಾವಧಿಯಲ್ಲಿ ಒಟ್ಟಾರೆ 94,933 ಕೋಟಿ ರೂ.ಗಳ ಮೊತ್ತದ ಕಾಮಗಾರಿಗಳನ್ನು ಜಲಸಂಪನ್ಮೂಲ, ನಗರಾಭಿವೃದ್ಧಿ, ಲೋಕೋಪಯೋಗಿ ಮತ್ತು ಇತರೆ ಇಲಾಖೆಗಳಲ್ಲಿ ಅನುಮೋದಿಸಿರುತ್ತದೆ. ಈ ಮೇಲ್ಕಂಡ ಇಲಾಖೆಗಳಿಗೆ 2022-23ರ ಆಯವ್ಯಯದಲ್ಲಿ ಕೇವಲ 33,616 ಕೋಟಿ ರೂ.ಗಳ ಅನುದಾನವನ್ನು ನೀಡಿದ್ದರೂ ಹಾಗೂ 2021-22ರ ಅಂತ್ಯಕ್ಕೆ 2,05,986 ಕೋಟಿ ರೂ.ಗಳಷ್ಟು ಮೊತ್ತದ ಬಾಕಿ ಕಾಮಗಾರಿಗಳಿದ್ದರೂ ಸಹ ಹಿಂದಿನ ಸರ್ಕಾರವು ಇದನ್ನು ಲೆಕ್ಕಿಸದೇ 49,116 ಕೋಟಿ ರೂ.ಗಳ ಮೊತ್ತದ ಕಾಮಗಾರಿಗಳನ್ನು ವಿವೇಚನಾರಹಿತವಾಗಿ ಅನುಮೋದಿಸಿರುತ್ತದೆ.  2022-23ರ ಅಂತ್ಯಕ್ಕೆ ಬಾಕಿ ಉಳಿಸಿರುವ ಕಾಮಗಾರಿಗಳ ಒಟ್ಟು ಮೊತ್ತವು 2,55,102 ಕೋಟಿ ರೂ.ಗಳಾಗಿದ್ದು, ಇದನ್ನು ಪೂರ್ಣಗೊಳಿಸಲು ಕನಿಷ್ಟ ಆರು ವರ್ಷಗಳು ಬೇಕಾಗಿದ್ದು, ನಮ್ಮ ಸರ್ಕಾರಕ್ಕೆ ಹೊಸ ಯೋಜನೆಗಳನ್ನು ಹಮ್ಮಿಕೊಳ್ಳುವುದು ಸವಾಲಾಗಿ ಪರಿಣಮಿಸಿದೆ.   

29.          ಕರ್ನಾಟಕ ರಾಜ್ಯವು ಆರ್ಥಿಕ ಶಿಸ್ತನ್ನು ಪಾಲಿಸುವ ರಾಜ್ಯವೆಂದೇ ಹೆಸರಾಗಿದೆ. ಆದರೆ ಹಿಂದಿನ ಸರ್ಕಾರವು ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ನಿರ್ವಹಿಸುವಲ್ಲಿ ಸೋತಿದೆ. ರಾಜ್ಯದ ಒಟ್ಟು ಹೊಣೆಗಾರಿಕೆಗಳು 2017-18ರ ಅಂತ್ಯಕ್ಕೆ 2,45,737 ಕೋಟಿ ರೂ.ಗಳಷ್ಟಿದ್ದು, 2022-23ರ ಅಂತ್ಯಕ್ಕೆ 5,16,788 ಕೋಟಿ ರೂ.ಗಳಿಗೆ ಹೆಚ್ಚಳವಾಗಿದೆ ಹಾಗೂ ರಾಜ್ಯ ಸರ್ಕಾರದ ಸಾಲದ ಮೇಲಿನ ಬಡ್ಡಿ ಪಾವತಿಯು 2017-18ರಲ್ಲಿ ರಾಜಸ್ವ ಸ್ವೀಕೃತಿಗಳ ಶೇ.9.5 ರಷ್ಟಿದ್ದರೆ, 2023-24ರಲ್ಲಿ ರಾಜಸ್ವ ಸ್ವೀಕೃತಿಯ ಶೇ.15.06 ಕ್ಕೆ ಹೆಚ್ಚಳವಾಗಿರುತ್ತದೆ.     

30.          ತೆರಿಗೆ ಸಂಗ್ರಹಣೆಯಲ್ಲಿ ಕರ್ನಾಟಕವು ಪ್ರಮುಖ ರಾಜ್ಯವಾಗಿದ್ದರೂ ಸಹ ಕೇಂದ್ರ ಸರ್ಕಾರ ಹಂಚಿಕೆ ಮಾಡುವ ಒಟ್ಟು ತೆರಿಗೆಯಲ್ಲಿ ಶೇ. 3.65 ರಷ್ಟು ಮಾತ್ರ ರಾಜ್ಯಕ್ಕೆ ನೀಡಲಾಗುತ್ತಿದೆ. ಇತರೆ ರಾಜ್ಯಗಳಿಗೆ ಹೋಲಿಸಿದರೆ 15ನೇ ಹಣಕಾಸು ಆಯೋಗದ ಶಿಫಾರಸ್ಸಿನಿಂದಾಗಿ ನಮ್ಮ ರಾಜ್ಯಕ್ಕೆ ಅತೀ ಹೆಚ್ಚು ನಷ್ಟವಾಗಿದ್ದು, ಇದು ಹೆಚ್ಚು ತೆರಿಗೆ ಸಂಗ್ರಹಿಸುವ ರಾಜ್ಯಕ್ಕೆ ದ್ರೋಹ ಬಗೆದಂತಾಗಿದೆ.  ಇದರಿಂದಾಗಿ 2023-24ರ ಆರ್ಥಿಕ ವರ್ಷದಲ್ಲಿ 10,858 ಕೋಟಿ ರೂ.ಗಳಷ್ಟು ತೆರಿಗೆ ಪಾಲು ಕಡಿಮೆಯಾಗಿರುತ್ತದೆ ಹಾಗೂ ಕಳೆದ ಮೂರು ವರ್ಷಗಳಲ್ಲಿ ರಾಜ್ಯಕ್ಕೆ ಒಟ್ಟಾರೆ 26,140 ಕೋಟಿ ರೂ.ಗಳ ನಷ್ಟವಾಗಿರುತ್ತದೆ. ೧೫ನೇ ಹಣಕಾಸು ಆಯೋಗವು ತನ್ನ ವರದಿಯನ್ನು ಸಲ್ಲಿಸುವಾಗ ಕೇಂದ್ರದಲ್ಲಿ ತಮ್ಮ ಪಕ್ಷವೇ ಅಧಿಕಾರದಲ್ಲಿದ್ದರೂ ಸಹ ಹಿಂದಿನ ಸರ್ಕಾರವು ರಾಜ್ಯ ವಿರೋಧಿಯಾಗಿರುವ ಆಯೋಗದ ವರದಿಯನ್ನು ಒಪ್ಪಿಕೊಳ್ಳದಿರುವಂತೆ, ಒತ್ತಡವನ್ನು ತರದೆ ಮೂಕ ಪ್ರೇಕ್ಷಕರಾಗಿದ್ದು, ರಾಜ್ಯದ ಹಿತಾಸಕ್ತಿಯನ್ನು ಕಾಪಾಡುವಲ್ಲಿ ವಿಫಲವಾಗಿದೆ.      

31.          2019-20ಕ್ಕೆ ಹೋಲಿಸಿದರೆ 2020-21ರಲ್ಲಿ ನಮ್ಮ ರಾಜ್ಯದ ತೆರಿಗೆ ಪಾಲು ಕಡಿಮೆಯಾದ್ದರಿಂದ 15ನೇ ಹಣಕಾಸು ಆಯೋಗವು

2020-21ಕ್ಕೆ ಅನ್ವಯವಾಗುವಂತೆ ನಮ್ಮ ರಾಜ್ಯಕ್ಕೆ 5,495 ಕೋಟಿ ರೂ.ಗಳ ವಿಶೇಷ ಅನುದಾನವನ್ನು ನೀಡುವಂತೆ ಮಧ್ಯಂತರ ವರದಿಯಲ್ಲಿ ಶಿಫಾರಸ್ಸು ಮಾಡಿರುತ್ತದೆ. ಆದರೆ, ಕೇಂದ್ರ ಸರ್ಕಾರವು, ಹಣಕಾಸು ಆಯೋಗವು ಶಿಫಾರಸ್ಸು ಮಾಡಿದ ಈ ವಿಶೇಷ ಅನುದಾನವನ್ನು ನಮ್ಮ ರಾಜ್ಯಕ್ಕೆ ನೀಡಿರುವುದಿಲ್ಲ. ಅಲ್ಲದೆ,

15ನೇ ಹಣಕಾಸು ಆಯೋಗವು ತನ್ನ ಅಂತಿಮ ವರದಿಯಲ್ಲಿ ರಾಜ್ಯ ಕೇಂದ್ರಿತ ಕಾಮಗಾರಿಗಳ/ಯೋಜನೆಗಳಿಗೆ ಅನುದಾನವನ್ನು ಶಿಫಾರಸ್ಸು ಮಾಡಿರುತ್ತದೆ. ನಮ್ಮ ರಾಜ್ಯಕ್ಕೆ 3,000 ಕೋಟಿ ರೂ.ಗಳ ಅನುದಾನವನ್ನು ಕೆರೆಗಳ ಸಮಗ್ರ ಅಭಿವೃದ್ಧಿಗಾಗಿ ಮತ್ತು 3,000 ಕೋಟಿ ರೂ.ಗಳನ್ನು ಬೆಂಗಳೂರು ನಗರದ ಪೆರಿಫೆರಲ್ ರಿಂಗ್‌ ರಸ್ತೆಗಾಗಿ ಎಂದು ರಾಜ್ಯ-ಕೇಂದ್ರಿತ ಅನುದಾನವನ್ನು ಶಿಫಾರಸ್ಸು ಮಾಡಿರುತ್ತದೆ. ಆದರೆ, ಕೇಂದ್ರ ಸರ್ಕಾರವು ಈ ಅನುದಾನವನ್ನು ನಮ್ಮ ರಾಜ್ಯಕ್ಕೆ ನೀಡಿರುವುದಿಲ್ಲ. ಕೇಂದ್ರದ ವಿತ್ತ ಮಂತ್ರಿಯವರು ನಮ್ಮ ರಾಜ್ಯದಿಂದಲೇ ಆಯ್ಕೆಯಾಗಿದ್ದರೂ, ನಮ್ಮದು ಡಬಲ್‌ ಇಂಜಿನ್‌ ಎಂದು ಹೇಳಿಕೊಳ್ಳುವ ಸರ್ಕಾರವಿದ್ದರೂ ಸಹ, ಕೇಂದ್ರದಿಂದ ಈ ಅನುದಾನವನ್ನು ಪಡೆಯುವಲ್ಲಿ ಹಿಂದಿನ ಸರ್ಕಾರವು ಅಸಮರ್ಥವಾಗಿರುತ್ತದೆ.   

32.          ರಾಜ್ಯದಲ್ಲಿ ಜಿ.ಎಸ್.ಟಿ. ತೆರಿಗೆಯನ್ನು ಜಾರಿಗೆ ತರುವ ಸಮಯದಲ್ಲಿ ಕೇಂದ್ರ ಸರ್ಕಾರವು ರಾಜ್ಯದ ಜಿ.ಎಸ್.ಟಿ ತೆರಿಗೆಯು ವರ್ಷವಾರು ಶೇ.14 ರಷ್ಟು ಬೆಳವಣಿಗೆಯಾಗಲಿದೆ ಎಂದು ಭರವಸೆ ನೀಡಿತ್ತು. ಆದರೆ ಕಳೆದ ಐದು ವರ್ಷಗಳ ರಾಜ್ಯದ ಜಿ.ಎಸ್.‌ಟಿ ತೆರಿಗೆ ಸಂಗ್ರಹಣೆಯನ್ನು ಗಮನಿಸಿದರೆ ಕೇಂದ್ರ ಸರ್ಕಾರದ ಭರವಸೆ ಹುಸಿಯಾಗಿರುವುದು ಸಾಬೀತಾಗಿದೆ. ಅಲ್ಲದೇ, ಕೇಂದ್ರ ಸರ್ಕಾರವು ರಾಜ್ಯಗಳಿಗೆ ನೀಡುತ್ತಿದ್ದ ಜಿ.ಎಸ್.ಟಿ. ಪರಿಹಾರವನ್ನು 2022 ಜುಲೈನಿಂದ ಸ್ಥಗಿತಗೊಳಿಸಿರುತ್ತದೆ. ಇದರಿಂದಾಗಿ 2023-24ರ ಆರ್ಥಿಕ ವರ್ಷದಲ್ಲಿಯೇ ಸುಮಾರು 26,954 ಕೋಟಿ ರೂ.ಗಳಷ್ಟು ಜಿ.ಎಸ್.ಟಿ. ಕೊರತೆ ಉಂಟಾಗಿ ರಾಜ್ಯದ ಆರ್ಥಿಕ ಪರಿಸ್ಥಿತಿಗೆ ಇದು ಬಹುದೊಡ್ಡ ಆಘಾತ ಉಂಟು ಮಾಡಿದೆ.   

33.          ಕೇಂದ್ರ ಸರ್ಕಾರ ವಿಧಿಸುವ ಸೆಸ್‌ (Cess) ಮತ್ತು ಸರ್‌ಚಾರ್ಜ್‌ (Surcharge) ರಾಜ್ಯಗಳಿಗೆ ಹಂಚಿಕೆ ಮಾಡದೆ ತನ್ನ ಬಳಿಯೇ ಉಳಿಸಿಕೊಳ್ಳುತ್ತದೆ. ತೆರಿಗೆಗಳ ಮೇಲೆ ವಿಧಿಸುವ ಸೆಸ್‌ ಮತ್ತು ಸರ್‌ಚಾರ್ಜ್‌ ಹೆಚ್ಚುತ್ತಿರುವುದರಿಂದ ರಾಜ್ಯಗಳಿಗೆ ಸಂದಾಯವಾಗುವ ತೆರಿಗೆ ಪಾಲು ಕಡಿಮೆಯಾಗಿರುತ್ತದೆ. 2022-23ರಲ್ಲಿ ಎಲ್ಲಾ ರಾಜ್ಯಗಳಿಂದ ಒಟ್ಟು 5,20,570 ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರವು ಸೆಸ್‌ ಮತ್ತು ಸರ್‌ಚಾರ್ಜ್‌ ಮೂಲಕ ಸಂಗ್ರಹಿಸಿರುವುದರಿಂದ ನಮ್ಮ ರಾಜ್ಯಕ್ಕೆ ಸುಮಾರು 7,780 ಕೋಟಿ ರೂ.ಗಳಷ್ಟು ನಷ್ಟವಾಗಿರುತ್ತದೆ. ನಮ್ಮ ಸರ್ಕಾರವು ಕೇಂದ್ರದ ಈ ನಡೆಯನ್ನು ಬಲವಾಗಿ ವಿರೋಧಿಸುತ್ತದೆ.    

34.          ಕೇಂದ್ರ ಸರ್ಕಾರವು, ಕೇಂದ್ರ ಪುರಸ್ಕೃತ ಯೋಜನೆಗಳ ಅನುಷ್ಠಾನಕ್ಕಾಗಿ ರಾಜ್ಯಕ್ಕೆ ನೀಡುವ ಸಹಾಯಾನುದಾನವನ್ನು ಕಡಿಮೆ ಮಾಡುತ್ತಾ ಬಂದಿದೆ. ಕೇಂದ್ರದ ಪಾಲು ಕಡಿಮೆಯಾಗಿರುವುದರಿಂದ ರಾಜ್ಯದ ಜನರ ಹಿತದೃಷ್ಟಿಯಿಂದ ಕೇಂದ್ರ ಪುರಸ್ಕೃತ ಯೋಜನೆಗಳಲ್ಲಿ ರಾಜ್ಯದ ಪಾಲನ್ನು ಹೆಚ್ಚಿಸುವ ಅನಿವಾರ್ಯತೆ ಉಂಟಾಗಿದೆ ಹಾಗೂ ಇದರಿಂದಾಗಿ ರಾಜ್ಯದ ಹೊಸ ಯೋಜನೆಗಳಿಗೆ ಅನುದಾನದ ತೀವ್ರ ಕೊರತೆ ತಲೆದೋರಿದೆ.    

35.          ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳಲ್ಲಿ ಕೇಂದ್ರ ಸರ್ಕಾರವು ರಾಜ್ಯದ 14.13 ಲಕ್ಷ ಫಲಾನುಭವಿಗಳಿಗೆ ಮಾತ್ರ ಪಿಂಚಣಿಯನ್ನು ನೀಡುತ್ತಿದ್ದು, ರಾಜ್ಯ ಸರ್ಕಾರವು ತನ್ನ ಸ್ವಂತ ಸಂಪನ್ಮೂಲಗಳಿಂದ ಹೆಚ್ಚುವರಿ 64.21 ಲಕ್ಷ ಫಲಾನುಭವಿಗಳಿಗೆ ಪಿಂಚಣಿಯನ್ನು ನೀಡುತ್ತಿದೆ. 2022-23 ರಲ್ಲಿ ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳಿಗೆ ಕೇಂದ್ರ ಸರ್ಕಾರ ಕೇವಲ 447 ಕೋಟಿ ರೂ. ನೀಡಿದರೆ, ರಾಜ್ಯ ಸರ್ಕಾರವು 8,636 ಕೋಟಿ ರೂ.ಗಳನ್ನು ನೀಡಿರುತ್ತದೆ. ಅಂದರೆ, ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳಿಗೆ ಕೇಂದ್ರ ಸರ್ಕಾರವು ಕೇವಲ ಶೇ.4.9 ರಷ್ಟು ಅನುದಾನ ನೀಡಿದರೆ ಬಾಕಿ ಶೇ.95.1 ರಷ್ಟು ಅನುದಾನವನ್ನು ರಾಜ್ಯ ಸರ್ಕಾರ ನೀಡುತ್ತಿದೆ.   

36.          ಹಿಂದಿನ ಸರ್ಕಾರವು ಬದ್ಧ ವೆಚ್ಚಗಳಿಗೆ ಕಡಿವಾಣ ಹಾಕಿ ಜನಕಲ್ಯಾಣ ಕಾರ್ಯಕ್ರಮಗಳಿಗೆ ಸಂಪನ್ಮೂಲ ಕ್ರೋಢೀಕರಿಸಲು ವಿಫಲವಾಗಿರುತ್ತದೆ. ಆಯವ್ಯಯ ಗಾತ್ರವು 2018-19 ರಿಂದ 2023-24ರವರೆಗೆ ಶೇ.50ರಷ್ಟು ಹೆಚ್ಚಳವಾಗಿರುತ್ತದೆ. ಆದರೆ, ಬದ್ಧ ವೆಚ್ಚಗಳಾದ ವೇತನ, ಬಡ್ಡಿ ಪಾವತಿ ಮತ್ತು ಪಿಂಚಣಿ ವೆಚ್ಚಗಳು ಈ ಐದು ವರ್ಷಗಳಲ್ಲಿ ಶೇ.81ರಷ್ಟು ಹೆಚ್ಚಾಗಿರುತ್ತದೆ.    

37.          ರಾಜ್ಯದ ಆರ್ಥಿಕತೆಯ ಬೆನ್ನೆಲುಬಾದ ವಿದ್ಯುಚ್ಛಕ್ತಿ ವಲಯವನ್ನು ಮುತುವರ್ಜಿಯಿಂದ ನಿರ್ವಹಿಸಿ ಸದೃಢಗೊಳಿಸುವ ಬದಲು ಹಿಂದಿನ ಸರ್ಕಾರವು ವಿದ್ಯುಚ್ಛಕ್ತಿ ವಲಯವನ್ನು ತೀವ್ರ ಸಂಕಷ್ಟಕ್ಕೆ ನೂಕಿದೆ. ದಿನಾಂಕ: 31.03.2018ರ ಅಂತ್ಯಕ್ಕೆ ವಿದ್ಯುತ್‌ ಉತ್ಪಾದಕ, ಪ್ರಸರಣ ಮತ್ತು ಸರಬರಾಜು ಕಂಪನಿಗಳ ಒಟ್ಟಾರೆ ಸಾಲದ ಬಾಕಿ ಮೊತ್ತವು 51,087 ಕೋಟಿ ರೂ.ಗಳಿದ್ದು,  ಹಿಂದಿನ ಸರ್ಕಾರವು ದಿನಾಂಕ: 31.03.2023 ರ ಅಂತ್ಯಕ್ಕೆ ಒಟ್ಟು 91,911 ಕೋಟಿ ರೂ.ಗಳ ಸಾಲದ ಬಾಕಿ ಉಳಿಸಿರುತ್ತದೆ. ಜೊತೆಗೆ ವಿದ್ಯುತ್‌ ಸರಬರಾಜು ಕಂಪನಿಗಳ ಸಂಚಿತ ನಷ್ಟ (Cumulative loss) ದಿನಾಂಕ: 31.03.2018ರ ಅಂತ್ಯಕ್ಕೆ 4,725 ಕೋಟಿ ರೂ.ಗಳಿದ್ದು, ದಿನಾಂಕ: 31.03.2023ರ ಅಂತ್ಯಕ್ಕೆ 17,056 ಕೋಟಿ ರೂ.ಗಳಿಗೆ ಹೆಚ್ಚಾಗಿದ್ದು, ಹಿಂದಿನ ಸರ್ಕಾರದ ದುರಾಡಳಿತಕ್ಕೆ ಇದು ನಿದರ್ಶನವಾಗಿದೆ.    

38.          ಹಿಂದಿನ ಸರ್ಕಾರದಿಂದ ರಾಜ್ಯದ ಆರ್ಥಿಕತೆಯು ಕತ್ತಲೆಯಲ್ಲಿ ಮುಳುಗಿದ್ದರೂ, ರಾಜ್ಯದ ಆರ್ಥಿಕತೆಯನ್ನು ಪುನಶ್ಚೇತನಗೊಳಿಸಲು ದೃಢ ನಿಲುವನ್ನು ತೆಗೆದುಕೊಳ್ಳಲು ನಾನು ಯಾವುದೇ ಕಾರಣಕ್ಕೂ ಹಿಂಜರಿಯುವುದಿಲ್ಲ. ರಾಜ್ಯದ ಜನತೆಯು ನಮ್ಮ ಸರ್ಕಾರದ ಮೇಲೆ ನಂಬಿಕೆಯನ್ನಿರಿಸಿ ಸ್ಪಷ್ಟ ಬಹುಮತವನ್ನು ನೀಡಿರುತ್ತಾರೆ. ಜನರ ಆಶೋತ್ತರಗಳನ್ನು ಈಡೇರಿಸಲು ನಾನು ಕಂಕಣಬದ್ಧನಾಗಿರುತ್ತೇನೆ.  ನಮ್ಮ ಸರ್ಕಾರವು ಎಲ್ಲಾ ಐದು ಗ್ಯಾರಂಟಿಗಳನ್ನು ಪೂರೈಸಲು, ಅಗತ್ಯವಿರುವ ಆದಾಯವನ್ನು ಸೃಜಿಸಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ. ಪ್ರಸಕ್ತ ಸಾಲಿನಲ್ಲಿ ಬಂಡವಾಳ ಹೂಡಿಕೆ ಹಾಗೂ ನೇರ ನಗದು ವರ್ಗಾವಣೆಯಿಂದ ರಾಜ್ಯದ ಆರ್ಥಿಕತೆಯನ್ನು ಉತ್ತೇಜಿಸಿ, ದೊಡ್ಡ ಪ್ರಮಾಣದ ಉದ್ಯೋಗ ಸೃಷ್ಟಿಗೆ ಸ್ಪಷ್ಟ ಯೋಜನೆಗಳನ್ನು ರೂಪಿಸಲಾಗುವುದು.

Tags: DKShivakumarKarantakakarnataka budget-2023siddaramaiah
Previous Post

ಪಕ್ಷದ ಶಿಸ್ತು ಪಾಲಿಸದವರ ವಿರುದ್ಧ ಕಠಿಣ ಕ್ರಮ; ರಾಜಸ್ಥಾನ ಕಾಂಗ್ರೆಸ್ ನಾಯಕರಿಗೆ ಹೈಕಮಾಂಡ್ ಎಚ್ಚರಿಕೆ

Next Post

ಶಿಕ್ಷಣ ಕ್ಷೇತ್ರಕ್ಕೆ ಸಿಎಂ ಸಿದ್ದರಾಮಯ್ಯರಿಂದ ಭರ್ಜರಿ ಕೊಡುಗೆ

Related Posts

ಸಿಎಂ ನಿವಾಸದಲ್ಲಿ ಉಪಹಾರ ರಾಜಕೀಯ: ಡಿಕೆಶಿ-ಸಿದ್ದರಾಮಯ್ಯ ಭೇಟಿ ಕುತೂಹಲ
ಕರ್ನಾಟಕ

ಸಿಎಂ ನಿವಾಸದಲ್ಲಿ ಉಪಹಾರ ರಾಜಕೀಯ: ಡಿಕೆಶಿ-ಸಿದ್ದರಾಮಯ್ಯ ಭೇಟಿ ಕುತೂಹಲ

by ಪ್ರತಿಧ್ವನಿ
May 28, 2026
0

ಕರ್ನಾಟಕ ರಾಜಕೀಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಚರ್ಚೆಗಳು ತೀವ್ರಗೊಂಡಿರುವ ನಡುವೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಬೆಳಿಗ್ಗೆ ಸಚಿವರಿಗಾಗಿ ವಿಶೇಷ ಉಪಹಾರ ಕೂಟ ಏರ್ಪಡಿಸಿದ್ದು, ರಾಜಕೀಯ ವಲಯದಲ್ಲಿ ಹೊಸ...

Read moreDetails
ಸಿದ್ದರಾಮಯ್ಯ ರಾಜೀನಾಮೆ ಸುದ್ದಿಗೆ ಬಿಜೆಪಿ ನಾಯಕರು‌ ಹೇಳಿದ್ದೇನು ?

ಸಿದ್ದರಾಮಯ್ಯ ರಾಜೀನಾಮೆ ಸುದ್ದಿಗೆ ಬಿಜೆಪಿ ನಾಯಕರು‌ ಹೇಳಿದ್ದೇನು ?

May 28, 2026
ಸಿಎಂ ರಾಜೀನಾಮೆಗೂ ಮುನ್ನ ರಾಜ್ಯಪಾಲರ ದಿಢೀರ್ ಮುಂಬೈ ಪ್ರವಾಸ! ರಾಜ್ಯ ರಾಜಕಾರಣದಲ್ಲಿ ಭಾರಿ ಕುತೂಹಲ

ಸಿಎಂ ರಾಜೀನಾಮೆಗೂ ಮುನ್ನ ರಾಜ್ಯಪಾಲರ ದಿಢೀರ್ ಮುಂಬೈ ಪ್ರವಾಸ! ರಾಜ್ಯ ರಾಜಕಾರಣದಲ್ಲಿ ಭಾರಿ ಕುತೂಹಲ

May 28, 2026
ಬೈಜೂಸ್ ಸಂಸ್ಥಾಪಕ ಬೈಜು ರವೀಂದ್ರನ್‌ಗೆ 6 ತಿಂಗಳ ಜೈಲು ಶಿಕ್ಷೆ! ಮಾಡಿದ ಅಪರಾಧ ಏನು ?

ಸಿಎಂ ಬದಲಾವಣೆ ಸದ್ಯಕ್ಕಿಲ್ಲ: ಸುರ್ಜೇವಾಲಾ ಸ್ಪಷ್ಟನೆ!

May 27, 2026
ನುಡಿದಂತೆ ನಡೆದ ಹೆಮ್ಮೆ ನಮಗಿದೆ : ರಾಜೀನಾಮೆಯ ಸುಳಿವು ನೀಡಿತಾ ಸಿದ್ದರಾಮಯ್ಯ ಪೋಸ್ಟ್‌..? :

ನುಡಿದಂತೆ ನಡೆದ ಹೆಮ್ಮೆ ನಮಗಿದೆ : ರಾಜೀನಾಮೆಯ ಸುಳಿವು ನೀಡಿತಾ ಸಿದ್ದರಾಮಯ್ಯ ಪೋಸ್ಟ್‌..? :

May 27, 2026
Next Post
ಶಿಕ್ಷಣ ಕ್ಷೇತ್ರಕ್ಕೆ ಸಿಎಂ ಸಿದ್ದರಾಮಯ್ಯರಿಂದ ಭರ್ಜರಿ ಕೊಡುಗೆ

ಶಿಕ್ಷಣ ಕ್ಷೇತ್ರಕ್ಕೆ ಸಿಎಂ ಸಿದ್ದರಾಮಯ್ಯರಿಂದ ಭರ್ಜರಿ ಕೊಡುಗೆ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada