ರಾಜ್ಯ ರಾಜಕಾರಣದಲ್ಲಿ ಭಾರೀ ಹೈಡ್ರಾಮಾ ಮತ್ತು ತೀವ್ರ ರಾಜಕೀಯ ಬೆಳವಣಿಗೆಗಳು ನಡೆಯುತ್ತಿರುವ ನಡುವೆಯೇ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರ ದಿಢೀರ್ ಮುಂಬೈ ಪ್ರವಾಸ ಹೊಸ ಸಂಚಲನಕ್ಕೆ ಕಾರಣವಾಗಿದೆ. ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಲು ಸಜ್ಜಾಗಿರುವ ಸಿಎಂ ಸಿದ್ದರಾಮಯ್ಯ ಅವರು ಇಂದು (ಗುರುವಾರ) ರಾಜ್ಯಪಾಲರನ್ನು ಭೇಟಿ ಮಾಡಲು ಸಮಯ ಕೋರಿದ್ದ ಸಂದರ್ಭದಲ್ಲೇ, ಗವರ್ನರ್ ಮಧ್ಯರಾತ್ರಿಯೇ ಮುಂಬೈಗೆ ತೆರಳಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.

ಮೂಲಗಳ ಪ್ರಕಾರ, ರಾಜ್ಯಪಾಲರ ಆಪ್ತ ಸಂಬಂಧಿಕರೊಬ್ಬರು (ಪತ್ನಿ) ಗಂಭೀರ ಅನಾರೋಗ್ಯದಿಂದ ಬಳಲುತ್ತಿದ್ದು, ಅವರನ್ನು ಭೇಟಿ ಮಾಡಲು ತುರ್ತಾಗಿ ಮುಂಬೈಗೆ ತೆರಳಿದ್ದಾರೆ ಎನ್ನಲಾಗಿದೆ. ಬುಧವಾರ ರಾತ್ರಿ ಸುಮಾರು 11:45ರ ವೇಳೆಗೆ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅವರು ವಿಮಾನ ಹತ್ತಿದ್ದಾರೆ ಎಂದು ತಿಳಿದುಬಂದಿದೆ.

ಇದಕ್ಕೂ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆ ಸಂಬಂಧ ರಾಜ್ಯಪಾಲರ ಭೇಟಿಗೆ ಈಗಾಗಲೇ ಎರಡು ಸಮಯಗಳನ್ನು ನಿಗದಿಪಡಿಸಲಾಗಿತ್ತು. ಮೊದಲಿಗೆ ಗುರುವಾರ ಬೆಳಗ್ಗೆ 11:30ಕ್ಕೆ ಹಾಗೂ ಬಳಿಕ ಮಧ್ಯಾಹ್ನ 3 ಗಂಟೆಯ ನಂತರ ಭೇಟಿಗೆ ಅವಕಾಶ ನೀಡಲಾಗಿತ್ತು. ಆದರೆ, ರಾಜೀನಾಮೆ ಪ್ರಕ್ರಿಯೆಗೆ ಕೆಲವೇ ಗಂಟೆಗಳು ಬಾಕಿ ಇರುವಾಗ ರಾಜ್ಯಪಾಲರು ರಾಜಧಾನಿ ತೊರೆದಿರುವುದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ರಾಜ್ಯಪಾಲರು ಇಂದು ಮಧ್ಯಾಹ್ನದೊಳಗೆ ಬೆಂಗಳೂರಿಗೆ ಮರಳುವ ಸಾಧ್ಯತೆ ಇದ್ದು, ಅವರು ವಾಪಸ್ಸಾದರೆ ಮಧ್ಯಾಹ್ನ 3 ಗಂಟೆಯ ಬಳಿಕ ಸಿಎಂ ಸಿದ್ದರಾಮಯ್ಯ ಅಧಿಕೃತವಾಗಿ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ಸಲ್ಲಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಇದೀಗ ರಾಜ್ಯಪಾಲರ ಈ ದಿಢೀರ್ ಮುಂಬೈ ಪ್ರವಾಸ ಕೇವಲ ಕೌಟುಂಬಿಕ ಕಾರಣಕ್ಕಾಗಿಯೇನಾ? ಅಥವಾ ಇದರ ಹಿಂದೆ ಮತ್ತಾವುದೇ ರಾಜಕೀಯ ಲೆಕ್ಕಾಚಾರ ಅಡಗಿದೆಯಾ? ಎಂಬ ಪ್ರಶ್ನೆಗಳು ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿವೆ.






