ಬೆಂಗಳೂರಿನಲ್ಲಿ ಮಂಗಳವಾರ ರಾತ್ರಿ ಸುರಿದ ಭಾರೀ ಮಳೆಯಿಂದ ನಗರದ ಬಹುತೇಕ ರಸ್ತೆಗಳು ಕೆರೆಯಂತಾಗಿದ್ದು ವಾಹನ ಸವಾರರು ಪರದಾಡುವಂತಾಯಿತು.
ಮಂಗಳವಾರ ರಾತ್ರಿ ಸುಮಾರು 8 ಗಂಟೆಗೆ ಗುಡುಗು-ಸಿಡಿಲಿನಿಂದ ಶುರುವಾದ ಮಳೆ ರಾತ್ರಿ 12 ಗಂಟೆಯಾದರೂ ಸುರಿಯಿತು. ಇದರಿಂದ ನಗರದ ಬಹುತೇಕ ಪ್ರದೇಶಗಳು ನೀರಿನಿಂದ ಆವೃತ್ತಗೊಂಡಿದ್ದು, ತಗ್ಗು ಪ್ರದೇಶದ ಮನೆ ಹಾಗೂ ಕಟ್ಟಡದೊಳಗೆ ನೀರು ನುಗ್ಗಿ ಅಸ್ತವ್ಯಸ್ತಗೊಂಡಿತು.
ಮೆಜೆಸ್ಟಿಕ್, ಮಾರುಕಟ್ಟೆ, ಶಾಂತಿನಗರ, ವಿಜಯನಗರ, ಚಾಮರಾಜಪೇಟೆ, ನಾಗರಬಾವಿ, ಕೆಂಗೇರಿ ಸೇರಿದಂತೆ ನಗರದ ಬಹುತೇಕ ಬಡಾವಣೆಗಳು ಜಲಾವೃತಗೊಂಡಿದ್ದವು.
ಕಳೆದ ಕೆಲವು ದಿನಗಳಿಂದ ನಗರದಲ್ಲಿ ಸಂಜೆ ಭಾರೀ ಮಳೆಯಾಗುತ್ತಿದ್ದು, ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ನಗರದಲ್ಲಿ ಇನ್ನು 5 ದಿನ ಮಳೆಯಾಗುವ ಸಾಧ್ಯತೆ ಇದೆ.