ಮಂಗಳೂರಿನಲ್ಲಿ ನಡೆದ ಸಿಎಎ ವಿರುದ್ಧದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಲು ಯಾರು ಕಾರಣರು? ನಿಜಕ್ಕೂ ಪ್ರತಿಭಟನೆ ಮಾಡುತ್ತಿದ್ದವರೇ ಹಿಂಸಾಚಾರಕ್ಕೆ ಇಳಿದರೇ? ಹಿಂಸಾಚಾರಕ್ಕೆ ಪೊಲೀಸರೇ ಪ್ರಚೋದನೆ ಮಾಡಿದರೇ? ಅಥವಾ ಪೂರ್ವನಿರ್ಧರಿದಂತೆ ಪೊಲೀಸರು ಪ್ರತಿಭಟನಾಕಾರರ ಮೇಲೆ ಲಾಠಿ ಬೀಸಿ, ಗುಂಡು ಹಾರಿಸಿದರೆ?
ಇಂತಹ ಹತ್ತು ಹಲವಾರು ಪ್ರಶ್ನೆಗಳಿಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದು ಬಿಡುಗಡೆ ಮಾಡಿರುವ ಫೋಟೋಗಳು ಮತ್ತು ದೃಶ್ಯಗಳನ್ನುಳ್ಳ ಸಿಡಿಗಳೇ ಸಮರ್ಪಕ ಉತ್ತರ ನೀಡುತ್ತವೆ. ಅಲ್ಲದೇ, ತಪ್ಪಿತಸ್ಥರು ಇವರೇ ಎಂದು ಪೊಲೀಸರೆಡೆಗೆ ಬೊಟ್ಟು ಮಾಡಿ ತೋರಿಸುತ್ತಿವೆ.
ಕುಮಾರಸ್ವಾಮಿ ಅವರು ಬಿಡುಗಡೆ ಮಾಡಿರುವ ವಿಡಿಯೋ ಸಿಡಿಯ ಮೇಲೊಮ್ಮೆ ಕಣ್ಣಾಡಿಸಿದರೆ ಪೊಲೀಸರ ದೌರ್ಜನ್ಯ ಎಲ್ಲೆ ಮೀರಿದಂತಿದೆ. ಈ ದೃಶ್ಯಗಳು ಅತ್ಯಂತ ಬೀಭತ್ಸಕರವಾಗಿದ್ದು ಪೊಲೀಸರ ಅನಾಗರಿಕ ವರ್ತನೆಯನ್ನು ಅನಾವರಣಗೊಳಿಸಿವೆ.
ಕಳೆದ ತಿಂಗಳು 19 ರಂದು ಸಿಎಎ ವಿರುದ್ಧ ನಾಗರಿಕರು ಸೇರಿ ಪ್ರತಿಭಟನೆ ನಡೆಸಲು ಮುಂದಾಗಿದ್ದರು. ಆದರೆ, ಪ್ರತಿಭಟನೆಗಳನ್ನು ಹತ್ತಿಕ್ಕಲೆಂದೇ ರಾಜ್ಯ ಸರ್ಕಾರ ಇಡೀ ರಾಜ್ಯಾದ್ಯಂತ 144 ಸೆಕ್ಷನ್ ಅನ್ನು ಜಾರಿಗೆ ತಂದಿತ್ತು. ಇದನ್ನು ಲೆಕ್ಕಿಸದೇ ಪ್ರತಿಭಟನೆಯನ್ನು ನಡೆಸಲು ಮುಂದಾಗಿದ್ದ ಪ್ರತಿಭಟನಾಕಾರರ ಮೇಲೆ ಮಂಗಳೂರು ಪೊಲೀಸರು ದೌರ್ಜನ್ಯ ನಡೆಸಿದರು. ಹಲ್ಲೆ ನಡೆಸಿದರು. ಅಟ್ಟಾಡಿಸಿಕೊಂಡು ನಾಗರಿಕರ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿದರು.
ಪೊಲೀಸರ ಅಟ್ಟಹಾಸ ಹೇಗಿತ್ತೆಂದರೆ, ಬಸ್ ನಿಲ್ದಾಣದಲ್ಲಿ ಬಸ್ ಗಾಗಿ ಕಾಯುತ್ತಾ ನಿಂತಿದ್ದ ಯುವಕನೊಬ್ಬನನ್ನು ಹತ್ತಾರು ಮಂದಿ ಪೊಲೀಸರು ಸೇರಿಕೊಂಡು ಹಿಗ್ಗಾಮುಗ್ಗ ಥಳಿಸಿದ್ದಲ್ಲದೇ, ಆತನ ಮೇಲೆ ಮನಬಂದಂತೆ ಲಾಠಿ ಬೀಸಿದರು. ಬಸ್ಸಿಗಾಗಿ ಕಾಯುತ್ತಿದ್ದೇನೆ ಎಂದು ಪರಿಪರಿಯಾಗಿ ಹೇಳಿಕೊಂಡರೂ ಬಿಡದ ಪೊಲೀಸರು ದೌರ್ಜನ್ಯ ವ್ಯಸಗಿದ್ದಾರೆ.
ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮತ್ತೊಬ್ಬ ಯುವಕನ ಮೇಲೆ ಏಕಾಏಕಿ ದಾಳಿ ನಡೆಸಿದ ಐದಾರು ಪೊಲೀಸರು ಆತನ ಮೇಲೆ ಮನಸೋಇಚ್ಛೆ ಲಾಠಿ ಬೀಸಿದ್ದಾರೆ. ಇದನ್ನು ಪ್ರಶ್ನಿಸಿದ ಆ ಯುವಕನಿಗೆ ಮತ್ತಷ್ಟು ಲಾಠಿ ಬೀಸಿದ ಪೊಲೀಸರು ಕುತ್ತಿಗೆ ಪಟ್ಟಿ ಹಿಡಿದು ಕ್ರಿಮಿನಲ್ ನನ್ನು ಹಿಡಿದು ಎಳೆದಾಡುವ ರೀತಿಯಲ್ಲಿ ಎಳೆದಾಡಿದ್ದಾರೆ.
ಇಡೀ ದಿನದ ಘಟನಾವಳಿಗಳ 35 ದೃಶ್ಯಗಳಲ್ಲಿ ಒಂದಕ್ಕಿಂತ ಒಂದು ಪೊಲೀಸರ ಕರಾಳ ಮುಖವನ್ನು ಎತ್ತಿ ತೋರಿಸುತ್ತಿವೆ. ರೊಚ್ಚಿಗೆದ್ದ ಪ್ರತಿಭಟನಾಕಾರರು ತಮ್ಮ ಮೇಲೆ ಹಲ್ಲೆ, ಲಾಠಿ ಪ್ರಹಾರ ಮಾಡಿದ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಅವರಿಗೆ ಬುದ್ಧಿ ಇಲ್ಲ ಎಂದುಕೊಳ್ಳೋಣ. ಆದರೆ, ಈ ಕಾನೂನು ಪಾಲನೆ ಮಾಡಬೇಕಾದ ಪೊಲೀಸರಿಗೆ ಬುದ್ದಧಿ ಬೇಡವೇ? ಪ್ರತಿಭಟನಾಕಾರರಿಗೆ ನಾವೇನು ಕಡಿಮೆ ಎನ್ನುವಂತೆ ಚಾಲೆಂಜಿಗೆ ಬಿದ್ದವರಂತೆ ಪೊಲೀಸರೂ ಸಹ ಪ್ರತಿಭಟನಾಕಾರರ ಮೇಲೆ ಕಲ್ಲು ತೂರಿದ್ದಾರೆ. ಅಷ್ಟೇ ಅಲ್ಲ, ರಸ್ತೆಗಳ ಇಕ್ಕೆಲಗಳಲ್ಲಿ ಬಿದ್ದಿದ್ದ ಬಾಟಲಿಗಳು, ಬಾಟಲಿಗಳ ಚೂರುಗಳನ್ನು ಪ್ರತಿಭಟನಾಕಾರರ ಮೇಲೆ ತೂರಿದ್ದಾರೆ. ಇದಕ್ಕೆ ಪೊಲೀಸರ ದುಂಡಾವರ್ತನೆಯೆನ್ನದೇ ವಿಧಿಯೇ ಇಲ್ಲ.
ಪೊಲೀಸರು ಅಂದಿನ ಘಟನೆ ವಿಚಾರದಲ್ಲಿ ಪ್ರತಿಭಟನಾಕಾರರೇ ತಪ್ಪಿತಸ್ಥರು ಎಂದು ಬಿಂಬಿಸುವ ರೀತಿಯಲ್ಲಿ ವಿಡೀಯೋಗಳನ್ನು ಬಿಡುಗಡೆ ಮಾಡಿದ್ದರು. ಆದರೆ, ಕುಮಾರಸ್ವಾಮಿ ಬಿಡುಗಡೆ ಮಾಡಿರುವ ದೃಶ್ಯಾವಳಿಗಳನ್ನು ಗಮನಿಸಿದರೆ ಅದರ ಅಸಲಿಯತ್ತು ಗೊತ್ತಾಗುತ್ತದೆ. ಅಂದು ಪ್ರತಿಭಟನಾ ಸ್ಥಳಕ್ಕೆ ಒಂದು ಗೂಡ್ಸ್ ಆಟೋ ಬಂದು ನಿಲ್ಲುತ್ತದೆ. ಅದರಲ್ಲಿದ್ದ ವಸ್ತುಗಳನ್ನು ತೋರಿಸಿರುವ ಪೊಲೀಸರು ಪ್ರತಿಭಟನಾಕಾರರು ಪೂರ್ವನಿರ್ಧಾರ ಮಾಡಿ ಆಟೋದಲ್ಲಿ ಕಲ್ಲುಗಳನ್ನು ತಂದು ತಮ್ಮ ಮೇಲೆ ತೂರಿದ್ದಾರೆ ಎಂದು ಆರೋಪಿಸಿದ್ದರು. ಪ್ರತಿಭಟನಾ ಸ್ಥಳದಲ್ಲಿ ಆಟೋ ಬಂದು ನಿಲ್ಲುವುದನ್ನು ಮಾತ್ರ ಪೊಲೀಸರು ತೋರಿಸಿದ್ದಾರೆ.
ಆದರೆ, ಈ ಆಟೋದ ಅಸಲಿಯತ್ತೇ ಬೇರೆ ಇದೆ. ಅಂದು ಈ ಗೂಡ್ಸ್ ಆಟೋದ ಚಾಲಕ ಕಟ್ಟಡವೊಂದರ ಒಡೆದು ಹಾಕಿದ ಕಲ್ಲು ಚೂರು, ಮಣ್ಣು, ಇಟ್ಟಿಗೆ ಚೂರುಗಳನ್ನು ಸಾಗಿಸುತ್ತಿದ್ದ. ಅದೃಷ್ಟವಶಾತ್ ಆ ಆಟೋ ಬಂದು ಹೋಗುವ ದೃಶ್ಯಗಳು ಕಟ್ಟಡ ನೆಲಸಮ ಮಾಡಿದ್ದ ಪಕ್ಕದ ಕಟ್ಟಡದಲ್ಲಿನ ಸಿಸಿ ಟಿವಿ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದೆ.
ಹೀಗೆ ಅಂದು ಚಾಲಕ ನಾಲ್ಕೈದು ಬಾರಿ ಕಟ್ಟಡದ ಬಳಿ ಬಂದು ಅವಶೇಷಗಳನ್ನು ಸಾಗಿಸಿದ್ದ ದೃಶ್ಯಗಳು ಸೆರೆಯಾಗಿವೆ. ಐದನೇ ಬಾರಿ ಅವಶೇಷಗಳನ್ನು ಕೊಂಡೊಯ್ಯುತ್ತಿದ್ದ ಸಂದರ್ಭದಲ್ಲಿ ಪ್ರತಿಭಟನಾ ಸ್ಥಳಕ್ಕೆ ಬಂದಿರುತ್ತಾನೆ. ಗಲಾಟೆ ಹೆಚ್ಚಾದ ಹಿನ್ನೆಲೆಯಲ್ಲಿ ಆಟೋವನ್ನು ಅಲ್ಲಿಯೇ ಬಿಟ್ಟು ಓಡಿಹೋಗುತ್ತಾನೆ. ಆದರೆ, ಪೊಲೀಸರು ಆಟೋದ ಈ ಎಲ್ಲಾ ಚಟುವಟಿಕೆಗಳನ್ನು ಮುಚ್ಚಿಟ್ಟು, ಪ್ರತಿಭಟನೆ ನಡೆಯುವ ಸ್ಥಳಕ್ಕೆ ಬಂದು ನಿಂತಿದ್ದನ್ನು ತೋರಿಸಿ ಜನರ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡಿದ್ದಾರೆ.
ಇನ್ನು ಗೋಲಿಬಾರ್ ನಡೆಯುವ ವೇಳೆ ಅವಿವೇಕಿ ಪೊಲೀಸನೊಬ್ಬ ಗುಂಡು ಹಾರಿಸುತ್ತಾ, ಒಂದು ಹೆಣವೂ ಬೀಳಲಿಲ್ಲವಲ್ಲಾ ಸಾರ್. ಒಂದು ಹೆಣ ಬೀಳಲಿ ಬಿಡಿ ಎಂದು ಹೇಳಿದ್ದಾನೆ. ಇವರಿಗೆ ಪೊಲೀಸರು ಎನ್ನಬೇಕೇ ಅಥವಾ ರೌಡಿಗಳು ಎನ್ನಬೇಕೇ?
ಈ ಬಗ್ಗೆ ಮಾತನಾಡಿರುವ ಕುಮಾರಸ್ವಾಮಿ ಅವರು, ಈ ಘಟನೆಯಲ್ಲಿ ಪೊಲೀಸರ ಲೋಪ ಇದ್ದ ಬಗ್ಗೆ ಗುಮಾನಿ ಬಂದಿದ್ದರಿಂದಲೇ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಗೋಪಾಲಗೌಡರ ಅಧ್ಯಕ್ಷತೆಯಲ್ಲಿ ಮಾಜಿ ಪಬ್ಲಿಕ್ ಪ್ರಾಸಿಕ್ಯೂಟರ್ ವೆಂಕಟೇಶ್ ಹಾಗೂ ಹಿರಿಯ ಪತ್ರಕರ್ತ ಸುಗತ ಶ್ರೀನಿವಾಸರಾಜು ಅವರ ನೇತೃತ್ವದ ಸಮಿತಿಯೊಂದನ್ನು ರಚಿಸಿದ್ದೆವು. ಆ ಸಮಿತಿ ಮಂಗಳೂರಿಗೆ ಹೋಗಿ ಮಾಹಿತಿಯನ್ನು ಕಲೆ ಹಾಕಿ ಬಂದಿದೆ ಮತ್ತು ಪೊಲೀಸರ ಆಟಾಟೋಪಗಳ ಬಗ್ಗೆ ಬೆಚ್ಚಿ ಬಿದ್ದಿದೆ ಎಂದಿದ್ದಾರೆ.
ಇಲ್ಲಿ ಪೊಲೀಸರಿಂದ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಈ ಘಟನೆ ಕುರಿತಂತೆ ಎಲ್ಲಾ ಮಾಹಿತಿಗಳನ್ನು ಕಲೆ ಹಾಕಿದ್ದು, ವಿಧಾನಮಂಡಲದಲ್ಲಿ ಇದರ ಬಗ್ಗೆ ಪ್ರಸ್ತಾಪ ಮಾಡುತ್ತೇನೆ. ಮಂಗಳೂರಿನ ಪೊಲೀಸ್ ಅಧಿಕಾರಿ ಹರ್ಷ ಅವರ ನಡೆಯ ಬಗ್ಗೆ ಸಾಕಷ್ಟು ಅನುಮಾನಗಳಿವೆ. ಮೊದಲು ಅವರನ್ನು ಸಸ್ಪೆಂಡ್ ಮಾಡಿ, ಈ ಬಗ್ಗೆ ಸದನ ಸಮಿತಿಯಿಂದ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ನಮ್ಮ ದೇಶದ ಸಂವಿಧಾನದ ಚೌಕಟ್ಟಿನಲ್ಲಿ ಇರುವ ಹಕ್ಕುಗಳನ್ನು ಮೊಟಕುಗೊಳಿಸುವಂತ ವಿಶೇಷವಾದ ಅಧಿಕಾರವನ್ನು ಇವರಿಗೆ ಕೊಟ್ಟವರು ಯಾರು? ಡಿಸೆಂಬರ್ 19ರಂದು ನಡೆದ ಘಟನೆಯ ಬಗ್ಗೆ ಪೋಲಿಸ್ ಕಮೀಷನರ್ ಹರ್ಷ ಅವರ ನಡವಳಿಕೆಗಳೇ ಅನುಮಾನಸ್ಪದವಾಗಿವೆ. ರಾಜ್ಯದಲ್ಲಿ ಜನರ ಪರವಾಗಿ ಸರ್ಕಾರ ಇದ್ದಿದ್ದರೆ, ಮೊದಲು ಸರ್ಕಾರ ಈ ಕಮೀಷನರ್ ಅವರನ್ನು ಅಮಾನತು ಮಾಡಬೇಕಿತ್ತು. ಸರ್ಕಾರ ಮ್ಯಾಜಿಸ್ಟ್ರೇಟ್ ಮುಖಾಂತರ ತನಿಖೆ ಮಾಡಿಸುತ್ತಿದೆ. ಆದರೆ ಇದು ಈಗಾಗಲೇ ದಾರಿ ತಪ್ಪಿದೆ. ರಾಜ್ಯದಲ್ಲೂ ಸಹ ಮತ್ತೊಂದು ಕಾಶ್ಮೀರವನ್ನು ಸೃಷ್ಟಿ ಮಾಡಲು ರಾಜ್ಯ ಸರ್ಕಾರ ಮುಂದಾಗುತ್ತಿದೆ.
ಸರ್ಕಾರ ಯಾವುದೇ ತಪ್ಪುಗಳನ್ನು ಮಾಡದೇ ಇದ್ದಿದ್ದರೆ, ಮಂಗಳೂರಿನಲ್ಲಿ ಪೋಲಿಸ್ ಇಲಾಖೆಯ ದೌರ್ಜನ್ಯ ನಡೆಯದೇ ಇದ್ದಿದರೆ, ರಾಜ್ಯದಲ್ಲಿ 30 ಜಿಲ್ಲೆಯಲ್ಲೂ ಶಾಂತರೀತಿಯಲ್ಲಿ ಪ್ರತಿಭಟನೆ ನಡೆಯಿತು. ಮಂಗಳೂರಿನಲ್ಲಿ ಏಕೆ ಈ ರೀತಿ ಘಟನೆ ನಡೆಯಿತು? ಈಗ ತನಿಖೆ ನಡೆಸುತ್ತಿರುವವರು ಯಾರು ಎಂದು ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿ. ಅದರೆ ಇವರಿಂದ ಯಾವ ಮಾಹಿತಿ ಕಲೆಹಾಕಲು ಸಾಧ್ಯ? ಸರ್ಕಾರ ಹೇಳುವುದನ್ನೇ, ಇವರು ಬರೆದು ಕೊಡುತ್ತಾರೆ ಅಷ್ಟೇ. ಇದನ್ನು ಹೊರತು ಪಡಿಸಿ ಬೇರೆ ಏನಾದರೂ ಮಾಡಲು ಸಾಧ್ಯವೇ? ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಹಿರಿಯ ಪತ್ರಕರ್ತರಾದ ಸುಗತ ಶ್ರೀನಿವಾಸರಾಜು ಅವರು ಹೊಟೇಲ್‌ವೊಂದರಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡುವುದಕ್ಕೆ ಅನುಮತಿ ಕೊಡುವುದಿಲ್ಲ ಎಂದರೆ ಸರ್ಕಾರ ಏನು ಮಾಡುತ್ತಿದೆ ಎಂಬುದು ಗೊತ್ತಾಗುತ್ತದೆ. ಮಾಧ್ಯಮವನ್ನು ಉದ್ದೇಶಿಸಿ ಮಾತನಾಡುವ ಅವಕಾಶವನ್ನು ಕೊಡುವುದಿಲ್ಲ ಎನ್ನುವ ಮಾತನ್ನು ಅಧಿಕಾರಿಗಳು ಹೇಳುವುದಾದರೆ ಹೇಗೆ? ಸುಗತ ಶ್ರೀನಿವಾಸರಾಜು ಗಲಭೆ ಸೃಷ್ಟಿ ಮಾಡಲು ಹೋಗಿದ್ದಾರೆಯೇ? ಪತ್ರಿಕಾರಂಗದಲ್ಲಿ ಹಲವಾರು ಪ್ರಶಸ್ತಿಗಳನ್ನು ಪಡೆದ ಒಬ್ಬ ಜವಾಬ್ದಾರಿಯುತ ಪತ್ರಕರ್ತ ಇವರು. ಇಂತಹವರಿಗೆ ಪೋಲಿಸ್‌ನವರು ಅವಕಾಶ ಕೊಡುವುದಿಲ್ಲ ಎಂದಾದರೆ, ಅಲ್ಲಿಗೆ ಕರ್ನಾಟಕ ರಾಜ್ಯದಲ್ಲಿ ಯಾವ ರೀತಿಯ ಸರ್ಕಾರ ಇದೆ? ಒಂದು ಕಡೆ ಸಿಐಡಿ ತನಖೆ ಮತ್ತೊಂದು ಮ್ಯಾಜಿಸ್ಟ್ರೇಟ್ ತನಿಖೆಯಂತೆ. ಇದರಿಂದ ಸರ್ಕಾರ ಸಾಧನೆ ಮಾಡುವುದಾದರು ಏನು? ಹಲವಾರು ಅಮಾಯಕರಿಗೆ ಅನಾಹುತ ಆಗಿದ್ದರಿಂದ ಸರ್ಕಾರದಿಂದ ಯಾವ ನ್ಯಾಯ ಕೊಡಲು ಸಾಧ್ಯ?
ಇನ್ನು ಒಬ್ಬ ಗೌರವಾನ್ವಿತ ಜಸ್ಟಿಸ್ ಗೋಪಾಲಗೌಡರಿಗೆ ಮಂಗಳೂರಿನಲ್ಲಿ ದಿಗ್ಭಂಧನ ಹೇರುವುದಾದರೆ, ಅಲ್ಲಿನ ಜನ ಸಾಮಾನ್ಯರ ಪರಿಸ್ಥಿತಿ ಏನು? ರಾಜ್ಯವನ್ನು ಎಲ್ಲಿಗೆ ತೆಗೆದುಕೊಂಡು ಹೋಗುತ್ತಿದೆ ಸರ್ಕಾರ? ಈಗಾಗಲೇ ಗೃಹಮಂತ್ರಿ ಬೊಮ್ಮಾಯಿ ಹೇಳುವುದು, “ಪ್ರತಿಭಟನೆಯಿಂದ ಕೇರಳದವರ ಒಳಸಂಚು” ಎಂದು. ಘಟನೆಯು ತನಿಖೆಯ ಹಂತದಲ್ಲೇ ಇರುವಾಗಲೇ, ಜವಾಬ್ದಾರಿಯುತ ಸ್ಥಾನದಲ್ಲಿರುವವರು ಇಂತಹ ಹೇಳಿಕೆ ಕೊಟ್ಟರೆ, ತನಿಖೆಯ ಮಹತ್ವವೇನಿದೆ? ಮತ್ತೆ, ತನಿಖೆಗೆ ಆದೇಶ ಕೊಟ್ಟ ನಂತರ, ಪೋಲಿಸ್ ಇಲಾಖೆಯವರು ಹೇಳುವುದೇನೆಂದರೆ ಕೇರಳದಿಂದ ಕಿಡಿಗೇಡಿಗಳು ಎರಡು ದಿನಗಳ ಮುಂಚೆ ಯೋಜನೆ ಹಾಕಿಕೊಂಡಿದ್ದರು, ಎನ್ನುವ ಮಾಹಿತಿಯನ್ನು ಈಗ ಪೋಲಿಸ್ ಅಧಿಕಾರಿಗಳು ಇಡುತ್ತಿದ್ದಾರೆ. ಇಂತಹ ಪ್ಲಾನ್ ಮಾಡಿದ್ದಾರೆ ಎನ್ನುವುದು ನಿಮ್ಮ ಇಲಾಖೆಗೆ ಗೊತ್ತಾದ ತಕ್ಷಣ, ಸಭೆ ನಡೆಸಿದ ಕೇರಳಿಗರನ್ನು ಅರೆಸ್ಟ್ ಮಾಡಿದ್ರಾ? ಏಕೆ ಬಂಧಿಸಲಿಲ್ಲ? ಎಂದು ಕುಮಾರಸ್ವಾಮಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಒಂದು ಕಡೆ ಸಿಐಡಿ ತನಖೆ ಮತ್ತೊಂದು ಮ್ಯಾಜಿಸ್ಟ್ರೇಟ್ ತನಿಖೆಯಂತೆ. ಇದರಿಂದ ಸರ್ಕಾರ ಸಾಧನೆ ಮಾಡುವುದಾದರು ಏನು? ಹಲವಾರು ಅಮಾಯಕರಿಗೆ ಅನಾಹುತ ಆಗಿದ್ದರಿಂದ ಸರ್ಕಾರದಿಂದ ಯಾವ ನ್ಯಾಯ ಕೊಡಲು ಸಾಧ್ಯ?