~ಡಾ. ಜೆ ಎಸ್ ಪಾಟೀಲ.
“ಏನೆ ಪದ್ಮಾ ˌ ಸಂಜೆ ಆತುˌ ದಿನವೆಲ್ಲ ರಾಷ್ಟ್ರಪ್ರೇಮ ಜಾಗೃತಾ ಕಾರ್ಯ ಮಾಡ್ಲಿಕ್ಕೆ ಅಡ್ಡಾಡಿ ಸುಸ್ತಾಗೇತಿ ಒಂದ್ ವಾಟೆ ಚಹಾನಾದರೂ ತಂದು ಕೊಡೆ…” ಅದೇ ಆಗ ಮುಖ ತೊಳೆದು ಸಂಧ್ಯಾವಂದನೆ ಮಾಡಿ ಮುಗಿಸಿಕೊಂಡು ತಮ್ಮ ಮನೆಯ ಹೊರಪಡಸಾಲೆಯಲ್ಲಿ ನೇತ್ಹಾಕಿದ್ದ ತೂಗು ಮಂಚದ ಮೇಲೆ ಪವಡಿಸಿˌ ತಮ್ಮ ನಗಾರಿಯಂತ ಉದರದ ಮೇಲಿನ ಜನಿವಾರವನ್ನು ಎರಡೂ ಕೈಗಳಿಂದ ಸವರುತ್ತ ಹಯವದನರಾಯರು ರಾಗವಾಗಿ ಹೆಂಡತಿಯನ್ನು ಒಂದು ಲೋಟ ಚಹಕ್ಕಾಗಿ ಪೂಸಲಾಯಿಸಿದರು.
ಏನ್ರಿ ನಿಮ್ಮ ಗೋಳುˌ ಮುಂಜಾನಿಂದ ಹಪ್ಳಾ-ಸಂಡಿಗೆ ಮಾಡಿ ನನಗೂ ದಣಿವಾಗೇತಿˌ ಅಯ್ಯ ಸುಡ್ಲಿ ˌಇದೇ ಈಗ ಸಂಧ್ಯಾವಂದನೆ ಮುಗಿಸಿ ಕುಂತಿರಿˌ ಇಷ್ಟ್ ಲಘು ಚಹ ಚಹ ಅಂತ ಬಡ್ಕೋಂಡ್ರ ಹೆಂಗ. ಒಂದು ಘಳಿಗಿ ತಡಿರಿˌ ಚಹ ಮಾಡ್ಕೊಂಡು ತಗೊಂಡು ಬರ್ತಿನಿ..” ಎಂದು ಅಡುಗೆ ಕೋಣೆಯಿಂದಲೆ ರಾಯರ ಪತ್ನಿ ಪದ್ಮಕ್ಕ ರಾಯರ ಮೇಲೆ ಜೋರು ಮಾಡಿದಳು.

ಈ ಭಾಗದಲ್ಲಿ ಹಯವದನರಾವ್ ಜೋಶಿ ಅಂದ್ರೆ ಬಹಳ ಫೇಮಸ್ ಹಿಂದೂ ಸಂಘಟನೆಯ ಭಾಷಣಕಾರರು. ಜನರ ಬಾಯಲ್ಲಿ ಅವರು ಹಯರಾಯರೆಂದೆ ಪ್ರಸಿದ್ದಿ. ಹೆಂಡತಿಗೆ ಚಹ ಮಾಡಲು ಹೇಳಿ ಪುರಂಧರದಾಸರ ಕೀರ್ತನೆ ಗೊಣಗುತ್ತ ಕುಂತಿದ್ದ ರಾಯರು ತಮ್ಮ ಅಂಗಳದಲ್ಲಿ ಹೆಗಲ ಮೇಲೆ ಕೇಸರಿ ಶಾಲುಗಳನ್ನು ಹಾಕಿಕೊಂಡು ನಾಲ್ಕಾರು ಜನ ಹಿಂದೂ ಸಂಘಟನೆಯ ಯುವ ಕಾರ್ಯಕರ್ತರು ಪ್ರವೇಶಿಸಿದ್ದನ್ನು ನೋಡಿದರು.
ಯುವ ಕಾರ್ಯಕರ್ತರು ಬಂದಿದ್ದು ಕಂಡು ರಾಯರು ದಿಗಿಲುಗೊಂಡರು. ಬರೋಬ್ಬರಿ ಚಹ ಕುಡಿಯುವ ಸಮಯದಲ್ಲಿ ಇಷ್ಟೊಂದು ಜನರು ಮನೆಗೆ ಬಂದರೆ ಎಲ್ಲರಿಗೂ ಚಹ ಕುಡಿಸಬೇಕಲ್ಲ ಎನ್ನುವ ಕೊರಗು ಒಂದುಕಡೆಯಾದರೆˌ ಚಹ ಕುಡಿದ ಲೋಟಗಳು ಈ ಶೂದ್ರ ಮುಂಡೇವು ತೊಳೆಯದೆ ಇಡ್ತಾವಲ್ಲ ಎನ್ನುವ ಪೇಚಾಟ ಇನ್ನೊಂದು ಕಡೆ. ಎಲ್ಲಿ ತಮ್ಮ ಪತ್ನಿ ಪದ್ಮ ಎಲ್ಲರ ಎದುರಿಗೆ ಚಹಾ ತಗೊಂಡು ಬಂದ್ರೆ ಹೇಗೆ ಎಂದು ರಾಯರು ಹೌಹಾರಿದರು. ಕಾರ್ಯಕರ್ತರು ಬರುವುದನ್ನು ನೋಡುತ್ತಲೆ ತಡಬಡಿಸಿ “ಏಯ್ ಪದ್ಮಾˌ ಇಲ್ಲಿ ನಮ್ಮ ಮನೆಗೆ ಯಾರೊ ಹಿಂದೂ ಕಾರ್ಯಕರ್ತರು ಬಂದಾರˌ ನಿನಗ ಆಗ್ಲೆ ಹೇಳಿದ ಕೆಲ್ಸ ಆಮೇಲೆ ಮಾಡಿದರಾಯ್ತು ˌ ನಿನಗೆ ಬೇರೆ ಕೆಲ್ಸ ಇದ್ರೆ ಮಾಡ್ಲಾ…” ಎಂದು ರಾಯರು ಒಂದೇ ಊಸಿರಲ್ಲಿ ಪತ್ನಿ ಪದ್ಮಳಿಗೆ ಆದೇಶಿಸಿ ಹಿಂದೂ ಕಾರ್ಯಕರ್ತರನ್ನು ಬರಮಾಡಿಕೊಂಡರು.
“ಏನ್ರೊ ತಮ್ಮಾ ನೀವೆಲ್ಲಾ ಸೇರಿ ಈ ಬಡವನ ಮನಿ ಕಡೆ ಬಂದಿರಲ್ಲಾ ˌ ಅದೂ ಚಹ ಕುಡಿಯುವ ಟೈಮಿನ್ಯಾಗ ˌ ನಿಮಗೆಲ್ಲರಿಗೆ ಚಹಾ ಕುಡಿಸಬಹುದಿತ್ತು ˌ ಏನ್ ಮಾಡುದ್ಪಾ ಇವತ್ ಏಕಾದಶಿ ಬೇರೆ ಐತಿˌ ನಾನೇ ಇನ್ನು ತನ್ಕ ಚಹ ಕುಡಿದಿಲ್ನೋಡುˌ ಇನ್ನ ನಿಮಗೆಲ್ಲ ಹ್ಯಾಂಗ್ ಕುಡಿಸುದುˌ ಕ್ಷಮಿಸಬೇಕು ನನ್ನ” ಎಂದರು ರಾಯರು ಬಹಳ ವಿನಮ್ರತೆಯಿಂದ.

ಚಹದ ಮಾತು ಅತ್ಲಾಗಿರ್ಲಿ ˌ ಇಂತ ಅಪಸಮಯದಾಗ ನನ್ನ ಮನಿಗಿ ಬಂದಿರಲ್ಲ ನೀವೆಲ್ಲ ಸೇರಿˌ ಏನಾದ್ರೂ ಅರ್ಜಂಟ್ ಕೆಲ್ಸ ಇತ್ತೇನ್ಮತ್ತ..?” ಹಿಂದೂ ಕಾರ್ಯಕರ್ತರನ್ನು ಪ್ರಶ್ನಿಸಿದರು ಹಯವದನರಾಯರು. ಆಗ ಪಾಟಿದಾರ ಸಖಾರಾಮ… “ನೋಡ್ರಿ ರಾಯರˌ ನಿನ್ನೆ ನೀವು ಮುಸಲ್ಮಾನರ ವಿರುದ್ಧ ನಾವೆಲ್ಲ ಹಿಂದೂಗಳು ಒಗ್ಗಾಟ್ಟಾಗಿರಬೇಕುˌ ಹಿಂದೂ ನಾವೆಲ್ಲಾ ಒಂದು ಅಂತ ಮಾಡಿದ ಭಾಷ್ಣಾ ಕೇಳಿ ಊರಿನ ಹಿಂದೂ ಜನರೆಲ್ಲರಿಗೆ ಭಾಳ ಖುಷಿಯಾಗೇತಿ..” ಅಂದ.
ಹಯವದನರಾಯರ ಮುಖಾರವಿಂದ ಋಷಿಯಿಂದ ಅರಳಿತು. ಕುದುರೆ ಮುಖದವರಾಗಿದ್ದ ರಾಯರು ಹೆಸರಿಗೆ ತಕ್ಕಂತೆ ಹಿಂದೂ ಕಾರ್ಯಕರ್ತನ ಮಾತಿನಿಂದ ಕುದುರೆಯಂತೆ ಕೆನೆಯುತ್ತಾ..” ಸಂತೋಷ ಆಯ್ತಪಾ ಸಖಾರಾಮˌ ಎಷ್ಟೇ ಆಗ್ಲಿ ಆ ಸಾಬರ ಎದುರಿಗೆ ನಾವೆಲ್ಲ ಹಿಂದೂˌ ನಾವೆಲ್ಲ ಒಂದಲ್ಲೇನು… ಇನ್ಮುಂದ ನಮ್ಮೂರಲ್ಲಿರುವ ಎಲ್ಲ ಹಿಂದೂಗಳು ಒಂದsss ನೋಡ್ರಿ ˌ ನಮ್ಮ ನಡುವೆ ಎಳ್ಳಷ್ಟೂ ಭೇದ-ಭಾವ ಇರಬಾರದು…” ಎಂದು ಫರ್ಮಾನು ಹೊರಡಿಸಿದರು.
ರಾಯರ ಮಾತಿನಿಂದ ಉತ್ತೇಜಿತನಾದ ಹಿಂದೂ ಕಾರ್ಯಕರ್ತ ಯಂಕಪ್ಪ ವಡ್ಡರ…”ಆಗ್ಲಿರೀ ರಾಯರˌ ನಿಮ್ಮ ಭಾಷ್ಣಾದಿಂದ ಋಷಿಯಾಗಿರುವ ಊರ ಜನರು ನಾಳೆ ರವಿವಾರ ಊರೊಳಗ ಒಂದು ಔತಣಕೂಟ ಕಾರ್ಯಕ್ರಮ ಮಾಡೂದಂತ ನಿಶ್ಚಯಿಸ್ಯಾರ…” ಎಂದ. ಆಗ ರಾಯರು..”ಭಲೆ ಭಲೆನಪಾ ಯಂಕ್ಯಾ.. ಚಲೊ ಕೆಲ್ಸಾ ಮಾಡಿರಿ ನೋಡ್ಲೆ…” ಎಂದು ಪ್ರೋತ್ಸಾಹಿಸಿತ್ತಲೆ… ಅಂದ್ಹಂಗ ಔತಣಕೂಟ ಎಲ್ಲಿ ಅರೇಂಜ್ ಮಾಡಿರಿ ಎಂದು ಮರು ಪ್ರಶ್ನಿಸಿದರು. ಅದಕ್ಕೆ ವಡ್ಡರ ಯಂಕಪ್ಪ… “ಅದೇರಿ ರಾಯರˌ ನಿಮ್ಮ ರಾಯರ ಮಠದೊಳಗ ಮಾಡ್ಬೇಕಂತ ಜನರೆಲ್ಲ ನಿರ್ಧಾರ ಮಾಡ್ಯಾರ್ರಿ ˌ ನಿಮ್ಮ ಒಪ್ಪಿಗೆ ಬೇಕುˌ ಅಷ್ಟೇ ಅಲ್ದೆ ನೀವುˌ ಮತ್ತ ನಿಮ್ಮ ರಾಯರ ಮಠದ ಶ್ರೀಪಾದಂಗಳು ಊರಿನ ಎಲ್ಲಾ ಹಿಂದೂಗಳೊಂದಿಗೆ ಸಹಪಂಕ್ತಿ ಭೋಜನ ಮಾಡಬೇಕಂತ ಜನರ ಅಪೇಕ್ಷಾ ಐತ್ರಿ ಎಂದ.

ಆಗ ಮಾದರ ಎಲ್ಲಪ್ಪ…”ರಾಯರˌ ಔತಣಕೂಟ ಕಾರ್ಯಕ್ರಮದೊಳಗ ಮಾಂಸ ಸಮಾರಾಧನೆ ಕೂಡ ಇರ್ತೈತಿˌ ಇದನ್ನು ತಾವು ಮತ್ತು ತಮ್ಮ ಮಠದ ಶ್ರೀಪಾದಂಗಳು ಮಾಂಸಾಹಾರ ಸೇವಿಸುವ ಮೂಲಕ ತಾವೇ ಉದ್ಘಾಟಿಸಬೇಕು ಅಂತ ನಮ್ಮೆಲ್ಲರ ಅಪೇಕ್ಷೆ ಐತಿ..” ಎಂದ ಖುಷಿಯಿಂದ. ಮಾದರ ಎಲ್ಲಪ್ಪನ ಮಾತು ಕೇಳಿದ ಹಯವದನರಾಯರ ಕುದುರೆ ಮುಖ ಥೇಟ್ ಕತ್ತೆಯ ಮುಖದಂತಾಯಿತು. ಅದಕ್ಕೆ ಕೋಪಗೊಂಡ ರಾಯರು…”ಅದ್ಹ್ಯಾಂಗ ಅಕ್ಕೈತೊ ಎಲ್ಯಾ? ನಾವು ಆಚಾರ್ಯರು ಮಾಂಸಾಹಾರ ಸೇವಿಸೋದಿಲ್ಲ” ಅಂದರು. ಅದಕ್ಕೆ ಲಂಬಾಣಿ ಬಾಬು…”ಅಲ್ರಿ ರಾಯರˌ ಹಗಲೆಲ್ಲಾ ಹಿಂದುˌ ನಾವೆಲ್ಲ ಒಂದು ಅಂತಿರಿ ˌ ನಿನ್ನೆನೆ ಈ ಮಾತು ಸಾರ್ವಜನಿಕವಾಗಿ ಹೇಳಿರಿˌ ನಿಮ್ಮ ಭಾಷ್ಣಾ ಕೇಳಿ ಜನರೆಲ್ಲ ಋಷಿಯಿಂದ ಕುಣ್ಯಾಕ್ಹತ್ಯಾರˌ ಈಗ ನೀವೇ ಅಪಸ್ವರ ಹಾಡಿದ್ರ ಹ್ಯಾಂಗರಿ..? ಅಂದ.
“ಅಲ್ಲಲೇ ಬಾಬ್ಯಾ ˌ ನಾವು ಆಚಾರ್ಯರುˌ ಮಾಂಸ ಮಣ್ಣು ತಿನ್ನವರಲ್ಲ ಅಂತ ನಿನಗ ಗೊತ್ತೈತಿಲ್ಲ..” ಎಂದು ಕೋಪದಿಂದ ಬುಸುಗುಟ್ಟಿದರು. ಅದಕ್ಕೆ ತಳವಾರ ಭಿಮಶ್ಯಾ..
“ಅಲ್ರಿಪಾ ರಾಯರˌ ಕಾಶ್ಮೀರದೊಳಗಿನ ಪಂಡಿತರು ಕುರಿ ತಿಂತಾರˌ ಬಂಗಾಳಿ ಮತ್ತ ಕೊಂಕಣಿ ಬ್ರಾಮರು ಮೀನುˌ ಮಸಳಿˌ ಏಡಿˌ ಕೋಳಿ ಮಾಂಸ ತಿಂತಾರಂತ ಕೇಳೇವಿ… ಹಾಂಗsss ನೀವೂ ನಾಳೆ ಒಂದಿವ್ಸ ನಮ್ಮೆಲ್ಲರ ಜೊತೆಗೆ ಸೇರಿ ಮಾಂಸ ತಿಂದು ಹಿಂದೂˌ ನಾವೆಲ್ಲ ಒಂದು ಅನ್ನೋದನ್ನ ಖಾತ್ರಿ ಮಾಡಿ ತೋರಿಸ್ರಿಲ್ಲ…” ಅಂದ. ಇದರಿಂದ ಭಯಂಕರ ಮಾನಸಿಕ ಉರಿಹತ್ತಿಕೊಂಡು ರಾಯರ ಮುಖ ಅಕ್ಷರಶಃ ಕತ್ತೆಯ ಮುಖದಂತಾಯಿತು. ….”ಏಯ್ ಭೀಮ್ಯಾ… ಹೊಟ್ಟಿಗೇನ್ ತಿಂತಿಲೇಪಾˌ ಬುದ್ದಿಗಿದ್ದಿ ಆಯ್ತಿಲ್ಲೊ ನಿನಗˌ ನನ್ನನ್ನ ಜಾತಿಭ್ರಷ್ಟ ಮಾಡ್ಬೇಕಂದಿಯೇನ್? ಎಂದು ಗದರಿಸಿದರು.
ಕೊನೆಗೆ ರಾಜಿ ಸಂಧಾನ ಮಾಡಿದ ಕುರಬರ ಮಾಳಪ್ಪ .. ರಾಯರˌ ಹೋಗ್ಲಿ ಬಿಡ್ರಿ ಹುಡಗರ ಮಾತಿಗೆ ಬ್ಯಾಸ್ರಾ ಮಾಡ್ಕೋಬ್ಯಾಡ್ರಿ ˌ ಮಾಂಸ ತಿನ್ನುದು ಬ್ಯಾಡ ಖರೆˌ ಆದ್ರ ನಮ್ಮೆಲ್ಲರ ಜೊತೆ ನೀವು ಮತ್ತ ನಿಮ್ಮ ಶ್ರೀಪಾದಂಗಳವರು ಸಸ್ಯಾಹಾರ ಸಹಪಂಕ್ತಿ ಭೋಜನವಾದ್ರೂ ಮಾಡಬಹುದಲ್ಲ” ಎಂದ. ರಾಯರ ಪಿತ್ತ ನೆತ್ತಿಗೇರಿತು…”ಏಯ್ ಮಾಳ್ಯಾ ˌ ಏನ್ ತಿಳ್ಕೊಂಡಿಯಲೆ ಈ ರಾಯರನ್ನ ˌ ನಾವು ಈ ಹೊಲಸು ಶೂದ್ರ ಮುಂಡೇವುಗಳ ಜೊತೆ ಕುಳಿತು ಉಣ್ಬೇಕಂತಿಯೇನೊ ಭಡವಾˌ ಹೋಗ್ರಿಲ್ಲಿಂದˌ ಹಿಂದೂˌ ನಾವೆಲ್ಲ ಒಂದುನೂ ಬ್ಯಾಡˌ ನಿಮ್ಮ ಸಹಪಂಕ್ತಿ ಊಟನೂ ಬ್ಯಾಡ..” ಎಂದು ಅಬ್ಬರಿಸುತ್ತ..ರಾಯರು “ಏಯ್ ಪದ್ಮಾ ಚಹಾ ಮಾಡುದ್ ಆತೇನˌ ಎಂದು ಅಡುಗೆ ಮನೆಯ ಕಡೆಗೆ ಬಿರಬಿರನೆ ಹೊರಟೆ ಬಿಟ್ಟರು.
~ಡಾ. ಜೆ ಎಸ್ ಪಾಟೀಲ.








