ಕಳೆದ ಸೆಪ್ಟೆಂಬರ್ ನಲ್ಲಿ 20 ವರ್ಷದ ದಲಿತ ಯುವತಿಯನ್ನು ನಾಲ್ಕು ಥಾಕುರ್ ಸಮಾಜದ ಪುರುಷರು ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ಗುಂಪು ಅತ್ಯಾಚಾರಕ್ಕೆ ಮಾಡಿ ಯುವತಿಯನ್ನು ಹತ್ಯೆ ಮಾಡಿದ್ದರು. ಸೆಪ್ಟೆಂಬರ್ 30ಕ್ಕೆ ಸಂಶಯಾಸ್ಪದವಾಗಿ ಯುವತಿಯ ಸಂಸ್ಕಾರ ನಡೆದು ಒಂದು ವರ್ಷವಾಗುತ್ತದೆ. ಇದು ಎರಡು ಭಾಗಗಳ ಲೇಖನದ ಎರಡನೇ ಭಾಗವಾಗಿದೆ.
ಗ್ರಾಮದ ನಿರಾಕರಣೆ
ಬೂಲ್ಗರ್ಹೀ ಗ್ರಾಮದಲ್ಲಿ ಯಾವಾಗಲೂ ಅಸ್ತಿತ್ವದಲ್ಲಿದ್ದ ಜಾತಿ ವಿಭಜನೆ ಇನ್ನೂ ಆಳವಾಗಿ ಬೇರೂರಿ ಒಂದು ಭಯಾನಕ ಮೌನದ ವಾತಾವರಣ ಸೃಷ್ಟಿಯಾಗಿದೆ.
ಥಾಕೂರ್-ಬ್ರಾಹ್ಮಣರ ದೇವಾಲಯದ ಗೋಡೆಗಳ ಮೇಲೆ ಗೀಚಲಾಗಿದ್ದ “ಮೇಲ್ಜಾತಿಗಳಿಗೆ ಮಾತ್ರ ಪ್ರವೇಶ” ಎಂಬ ಬರಹವನ್ನು ಸುರಿವ ಮಳೆ ಅಳಿಸಿದೆ. ಆದರೂ ದಲಿತರಿಗೆ ಅಲ್ಲಿ ಪ್ರವೇಶ ದಕ್ಕಿಲ್ಲ. ದೇವಾಲಾಯದ ಆಸುಪಾಸಿನಲ್ಲಿ ವಾಸಿಸುವ ಬ್ರಾಹ್ಮಣ ಹೆಂಗಸೊಬ್ಬರು “ಹುಡುಗರು ಮತ್ತೆ ಹಾಗೆ ಬರೆಯುತ್ತಾರೆ” ಎಂದು ಹೇಳುತ್ತಾರೆ.
ಯಾರೂ ಸಹ ಆ ಯುವತಿಯ ಬಗ್ಗೆ ಮಾತನಾಡುವುದಿಲ್ಲ. ಬದಲಾಗಿ ಆ ಯುವತಿ ಥಾಕೂರ್ ರ ಪುರುಷನೊಬ್ಬನ ಜೊತೆಗೆ ಸಂಬಂಧವಿಟ್ಟುಕೊಂಡಿದ್ದಳು ಮತ್ತು ಹೇಗೆ ನಾಲ್ವರು ‘ಮುಗ್ಧ’ರನ್ನು ‘ಮರ್ಯಾದಾ ಹತ್ಯೆ’ಯ ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದೇ ಮಾತನಾಡುತ್ತಾರೆ.
ಈ ದಲಿತ ಕುಟುಂಬ ಯಾರೊಂದಿಗೂ ಕೆಲಸಕ್ಕೆ ಹೋಗಲಾಗದೇ, ಯಾರೊಂದಿಗೂ ಸಂವಹನ ನಡೆಸಲಾಗದೇ, ಪ್ರತ್ಯೇಕೀಕರಣಗೊಳಗಾಗಿದೆ. “ನಮ್ಮನ್ನು ಮೇಲಜಾತಿಗಳು ಸಾಮಾಜಿಕವಾಗಿ ಪ್ರತ್ಯೇಕಿಸಿಟ್ಟಿದ್ದಾರೆ,” ಎಂದು ಆಹುತಿಯ ತಾಯಿ ಹೇಳಿದ್ದಾರೆ.
ಅಲ್ಲಿನ ಸ್ಥಳೀಯರು ತೋರಿಸದೇ ಇದ್ದರೆ, ಹಚ್ಚ ಹಸಿರ ಗದ್ದೆಗಳ ನಡುವೆ ಅಂತ್ಯಸಂಸ್ಕಾರದ ಸ್ಥಳ ಅಡಗಿ ಹೋಗುತ್ತದೆ. “ಆ ಘಟನೆ ನಡೆದ ನಂತರ ನಾವು ಇಲ್ಲಿಗೆ ಕೆಲಸಕ್ಕಾಗಿ ಬರುವುದನ್ನು ನಿಲ್ಲಿಸಿಬಿಟ್ಟೆವು. ಇಲ್ಲಿ ಒಂದಿಷ್ಟು ದಿನಗಳ ಕಾಲ ಪೋಲೀಸರ ಭಾರಿ ಬಂದೋಬಸ್ತು ಇತ್ತು,” ಎನ್ನುತ್ತಾರೆ ಗ್ರಾಮದ ನಿವಾಸಿಯಾದ ಈಶ್ವರಿ ದೇವಿ. “ಈ ವರ್ಷದ ಮೇ ತಿಂಗಳಿಂದ ನಾವು ಬರುವುದನ್ನು ಆರಂಭಿಸಿದ್ದೇವೆ.”
ರಾಜಕೀಯಕ್ಕಾಗಿ ಬಂದವರು ಈಗ ಎಲ್ಲಿದ್ದಾರೆ?
ಈ ದಲಿತ ಕುಟುಂಬ ವಾಸವಿರುವ ಜಾಗದ ಪಕ್ಕದ ಬೀದಿಯಲ್ಲಿ ಆರೋಪಿತರ ಸಂಬಂಧಿಕರು ತಮ್ಮ ಮಕ್ಕಳೊಂದಿಗೆ ಸರಿಯಾಗಿ ಮಾತನಾಡಲೂ ಸಮಯಾವಕಾಶ ಒದಗಿಸಿಲ್ಲ ಎಂದು ದೂರುತ್ತಾರೆ.
“ರಾಮು ಮತ್ತು ರವಿಯ ಮಕ್ಕಳು ಬೆಳೆಯುತ್ತಿದ್ದಾರೆ. ಅವರು ಅವರ ತಂದೆಯವರ ಬಗ್ಗೆ ಕೇಳಿದರೆ, ಅವರಿಗೆ ನಾವೇನೆಂದು ಹೇಳೋಣ?” ಎಂದು ಸಂದೀಪ್ ಅವರ ತಾತ ಕೇಳುತ್ತಾರೆ. “ಅವರ ಪತ್ನಿಯರು ಮೌನವಾಗಿ ಹೋಗಿದ್ದಾರೆ. ಅವರಿಗೆ ಸಿಗುವ ಎರಡು ನಿಮಿಷದ ಕರೆಗಳಲ್ಲಿ ಅವರು ಮುಗ್ಧರು ಎಂದು ಮಾತ್ರ ಅಳುತ್ತಾರೆ.”
ಮಾಧ್ಯಮಗಳೇ ನ್ಯಾಯವಿಚಾರಣೆಗಳನ್ನು ನಡೆಸಿರುವುದರಿಂದ ಆರೋಪಿತರು ಹಿಂದಿರುಗಿ ಬರುತ್ತಾರೆ ಎಂಬ ಯಾವ ನಂಬಿಕೆಯೂ ಅವರಲ್ಲಿ ಉಳಿದಿಲ್ಲ. “ನ್ಯಾಯಾಲಯದ ಕಾರ್ಯಾಕಲಾಪಗಳು ನಡೆಯುವಾಗ ದೂರದಿಂದ ಅವರನ್ನು ನೋಡಲು ಅವಕಾಶ ಸಿಗುತ್ತದಷ್ಟೇ.”
ಲವ್ ಕುಶ್ ಅವರ ಕುಟುಂಬದ ಪ್ರಕಾರ ಯುವತಿಯ ತಾಯಿಗೆ ಯುವತಿ ಸಿಕ್ಕಿದಾಗ ಲವ್ ಕುಶ್ ಅವರೇ ಮೊದಲು ನೀರನ್ನು ಕೊಟ್ಟಿದ್ದರು. “ಆ ರೀತಿ ಯಾರಾದರೂ ಮಾಡಿದ್ದರೆ, ನೀರನ್ನು ಯಾಕೆ ಕೊಡುತ್ತಾರೆ, ಅವರು ಓಡಿ ಹೋಗುವುದಿಲ್ಲವೇ?” ಎಂದು ಅವರ ತಂದೆ ಕೇಳುತ್ತಾರೆ.
ಬಜರಂಗ ದಳ, ಕರ್ಣೀ ಸೇನಾ ಮತ್ತು ಕ್ಷತ್ರಿಯ ಮಹಾಸಭಾ ದಂತಹ ಹಿಂದೂ ಬಲಪಂಥೀಯ ಗುಂಪುಗಳು ಕಳೆದ ಸೆಪ್ಟೆಂಬರ್ ನಲ್ಲಿ ಆರೋಪಿತರ ಪರವಾಗಿ ಪ್ರತಿಭಟನೆ ನಡೆಸಿದ್ದರು. ಅವರಿಂದ ಯಾವುದಾದರು ರೀತಿಯ ಬೆಂಬಲ ದೊರಕಿದೆಯೇ ಎಂದು ಕೇಳಿದಾಗ ಅವರ್ಯಾರು ಇವರನ್ನು ಭೇಟಿಯಾಗಲೀ, ಮಾತುಕತೆಯಾಗಲೀ ಅಥವಾ ಪ್ರಕರಣದ ಕುರಿತು ಬೆಂಬಲ ನೀಡಿಲ್ಲ ಎಂದು ಹೇಳುತ್ತಾರೆ.
“ಆಗ ಅವರು ರಾಜಕಾರಣಕ್ಕಾಗಿ ಬಂದರು,” ಎನ್ನುತ್ತಾರೆ ಲವ್ ಕುಶ್ ಅವರ ತಂದೆ. “ನನ್ನ ಮಗ ಸೆರೆಮನೆಯಲ್ಲಿ ಒಂದು ವರ್ಷ ಕಳೆದಿದ್ದಾನೆ. ಅವರೆಲ್ಲಾ ಈಗ ಎಲ್ಲಿದ್ದಾರೆ?”
ಪ್ರತ್ಯೇಕಗೊಂಡ ಕುಟುಂಬ
20 ವರ್ಷದ ಯುವತಿ ತನ್ನ ಕುಟುಂಬದ ಅತೀ ಕಿರಿಯ ಸದಸ್ಯರಾಗಿದ್ದರು. ಅವರಿಗೆ ಒಬ್ಬಾಕೆ ಅಕ್ಕ ಹಾಗು ಇಬ್ಬರು ಅಣ್ಣಂದಿರು ಇದ್ದರು.
ಇಬ್ಬರೂ ಅಣ್ಣಂದಿರು ಅವರ ಕೊನೆಯ ರಕ್ಷಾಬಂಧನದ ಫೋಟೋಗಳನ್ನು ತೋರಿಸಿದರು. ಗುಲಾಬಿ ಮತ್ತು ಹಳದಿ ಬಣ್ಣದ ಉಡುಪನ್ನು ತೊಟ್ಟಿರುವ ಯುವತಿ ಅವರಿಗೆ ರಾಖಿ ಕಟ್ಟುವುದನ್ನು ಕಾಣಬಹುದು. ಅವಳು ಪಡೆದ ಉಡುಗೊರೆಗಳನ್ನು ಇನ್ನೂ ಮುಟ್ಟಿಲ್ಲ.
“ಈ ಬಾರಿಯ ರಕ್ಷಾಬಂಧನದಂದು ಇಬ್ಬರೂ ಅಣ್ಣಂದಿರು ಬಹಳ ಅತ್ತರು. ಕಳೆದ ವರ್ಷ ಇಬ್ಬರೂ ಸಹೋದರಿಯರು ರಾಖಿಯನ್ನು ಕಟ್ಟಿದ್ದರು. ಆದರೆ ಈ ಬಾರಿ ಕಿರಿಯವಳು ಇಲ್ಲ.” ಎನ್ನುತ್ತಾರೆ ಅವರ ತಾಯಿ.
ಬಳಸಿ ಉಳಿದ ವಸ್ತುಗಳಲ್ಲಿ ಆಕೆ ತಯಾರಿಸಿದ್ದ ಡೋರ್ ಮ್ಯಾಟ್ ಗಳನ್ನು ತೋರಿಸುತ್ತಾ, “ಅವಳು ಬಹಳ ಪ್ರತಿಭಾವಂತೆಯಾಗಿದ್ದಳು,” ಎಂದು ತಂದೆ ದುಃಖದಿಂದ ನೆನೆದರು. ತಂದೆ ಮತ್ತು ತಾಯಿ ಅಳುವುದನ್ನು ನೋಡುತ್ತಲೇ ಅವರ ಪುಟ್ಟ ಮೊಮ್ಮಕ್ಕಳೂ ಅಳಲಾರಂಭಿಸಿದವು.
“ನನ್ನ ಹಿರಿಯ ಮಗುವನ್ನು ನನ್ನ ತವರು ಮನೆಗೆ ಕಳಿಸಿದ್ದೇನೆ. ಇಲ್ಲೆಲ್ಲೂ ಹತ್ತಿರದಲ್ಲಿ ಶಾಲೆಯಿಲ್ಲ ಮತ್ತು ನನ್ನ ಮಕ್ಕಳು ಇಂತಹ ಅಹಿತಕರ ಪರಿಸರದಲ್ಲಿ ಬೆಳೆಯುವುದು ನನಗೆ ಇಷ್ಟವಿಲ್ಲ,” ಎಂದು ಯುವತಿಯ ಅತ್ತಿಗೆ ಹೇಳಿದರು. ಇತ್ತೀಚೆಗಷ್ಟೇ ಐದು ವರ್ಷ ತುಂಬಿದ ಅವರ ಮಧ್ಯಮ ಪುತ್ರಿ ಮೊಬೈಲಿನಲ್ಲಿ ಯುವತಿಯ ಚಿತ್ರವನ್ನು ತೋರಿಸಿ, “ಅತ್ತೆಯನ್ನು ಸಾಯಿಸಿಬಿಟ್ಟರು” ಎಂದು ಹೇಳಿತು. ಘಟನೆ ನಡೆದಾಗ ಕೇವಲ 14ದಿನಗಳ ಕೂಸಾಗಿದ್ದ ಕೊನೆಯ ಮಗುವಿಗೆ 26 ಆಗಸ್ಟ್ ರಂದು ಒಂದು ವರ್ಷ ತುಂಬಿತು.
2017ರಲ್ಲಿ ಮಧುವೆಯೊಂದರಲ್ಲಿ ಯುವತಿ ರಾಜಸ್ಥಾನಿ ಜನಪದ ಗೀತೆಯೊಂದಕ್ಕೆ ಕುಣಿಯುತ್ತಿರುವ ವೀಡಿಯೋವನ್ನು ಮತ್ತೊಂದು ಮಗು ಪ್ಲೇ ಮಾಡಿದಾಗ ಕುಟುಂಬದ ಮಿಕ್ಕ ಸದಸ್ಯರು ವಿಡಿಯೋ ನೋಡಲು ಸೇರುವರು.
“ನಾವು ಈ ಹಳ್ಳಿಯನ್ನು ಎಂದಿಗೂ ತೊರೆಯುವುದಿಲ್ಲ. ಇದು ನಮ್ಮ ಮನೆ. ಇಲ್ಲಿಯ ಪ್ರತಿ ಮೂಲೆಯಲ್ಲೂ ಅವಳ ನೆನಪುಗಳು ಅಡಗಿ ಕೂತಿವೆ.” ಎಂದು ತಂದೆ ಹೇಳಿದರು.
ಮೂರು ಶಿಫ್ಟ್ ಗಳಲ್ಲಿ ತಮ್ಮನ್ನು ರಕ್ಷಿಸುವ 18 ರಿಂದ 20 CRPF ಜವಾನರೊಂದಿಗೆ ಈ ಕುಟುಂಬ ಒಳ್ಳೆಯ ಸಂಬಂಧವನ್ನು ಬೆಳೆಸಿಕೊಂಡಿದೆ. ಕಳೆದ ನವೆಂಬರ್ ತಿಂಗಳಿನಿಂದ ಈ ಜವಾನರು ಅಲ್ಲಿಗೆ ಭೇಟಿ ನೀಡುವ ಎಲ್ಲರನ್ನು ಪರೀಕ್ಷಿಸಿ ಅವರ ಮಾಹಿತಿಯನ್ನು ಸಂಗ್ರಹಿಸಿ ನ್ಯಾಯಾಲಯಕ್ಕೆ ತಲುಪಸಿತ್ತದೆ. ಎಂಟು ಸಿ.ಸಿ.ಟಿ.ವಿ. ಕ್ಯಾಮರಾ, ಟೆರಸ್ಸಿನ ಮೇಲೆ ಔಟ್ಪೋಸ್ಟ್ ಮತ್ತು ಮನೆಯ ಸುತ್ತ ಮುತ್ತ ಹಲವಾರು ಸ್ಥಳಗಳಲ್ಲಿ ನಿಗಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇವರು ಕುಟಂಬದ ಸದಸ್ಯರು ಎಲ್ಲೇ ಹೋದರು ಕಾವಲಾಗಿ ಹೋಗುತ್ತಾರೆ. ದಿನನಿತ್ಯ ಸಾಮಗ್ರಿಗಳ ಖರೀದಿಗೂ ಜವಾನರು ಜೊತೆಗಿರುತ್ತಾರೆ.
ಯಾವುದೇ ನಾಯಕರು ಬಂದಿಲ್ಲ
ಘಟನೆಯ ಕಾವು ಇಳಿದ ಬಳಿಕ ಯಾವುದೇ ರಾಜಕೀಯ ನಾಯಕರು ಅವರನ್ನು ಭೇಟಿ ಮಾಡಿಲ್ಲ ಎಂಬುದಾಗಿ ಕುಟುಂಬ ಹಂಚಿಕೊಳ್ಳುತ್ತದೆ. “ಸಾಮಾಜವಾದಿ ಪಕ್ಷ, ಬಹುಜನ ಸಮಾಜವಾದಿ ಪಕ್ಷ, ಕಾಂಗ್ರೆಸ್ ಅಥವಾ ಚಂದ್ರಶೇಖರ್ ಆಜಾದರ ಭೀಮ್ ಆರ್ಮಿಯ ಯಾವುದೇ ಮುಖಂಡರು ನಮ್ಮನ್ನು ತಡನಂತರ ಭೇಟಿ ಮಾಡಿಲ್ಲ.” ಎಂದು ಕಿರಿಯ ಸಹೋದರ ಹಂಚಿಕೊಂಡರು.
ಭೇಟಿ ನೀಡಿದವರ ಪಟ್ಟಿಯನ್ನು ನೋಡಿದಾಗ ಕೇವಲ ಸಂಬಂಧಿಕರ ಹಾಗು ಪತ್ರಕರ್ತರ ಹೆಸರುಗಳು ಕಾಣುತ್ತವೆ. ಘಟನೆ ನಡೆದ ನಂತರ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಅಖಿಲೇಶ್ ಯಾದವ್, ಮಾಯಾವತಿ ಮತ್ತು ಅನೇಕ ರಾಜಕೀಯ ಮುಖಂಡರು ದಲಿತ ಕುಟುಂಬಕ್ಕೆ ಭೇಟಿ ನೀಡಿ ಬೆಂಬಲ ಸೂಚಿಸಿದ್ದರು. ಅವರು ಕೇವಲ ಆರೋಪಿತರ ಮೇಲಲ್ಲದೆ ಜಿಲ್ಲಾಧಿಕಾರಿ ಪ್ರವೀಣ್ ಕುಮಾರ್ ಲಕ್ಸ್ಕರ್ ಅವರ ಮೇಲೂ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದ್ದರು.
ಕುಟುಂಬಕ್ಕೆ ಬಿ.ಎಸ್.ಪಿ. ಬೆಂಬಲ ಇದ್ದದ್ದೇ, ಆದರೆ ಕಳೆದ ಒಂದು ವರ್ಷದಲ್ಲಿ ಅವರನ್ನು ಮತ್ತೆ ಭೇಟಿ ಮಾಡಲು ಸಾಧ್ಯವಾಗಿಲ್ಲ ಎಂದು ಹತ್ರಾಸಿನ ಮಾಜಿ ಶಾಸಕ, ಗೆಂಡಲಾಲ್ ಚೌಧರಿ ಅವರು ಹೇಳಿದ್ದಾರೆ.
ಹತ್ದರಾಸ್ ಕ್ಷೇತ್ರದ ಬಿ.ಜೆ.ಪಿ.ಯ ಮಾಜಿ ಶಾಸಕ ರಾಜ್ವೀರ್ ಪೆಹಲ್ವಾನ್ ಅವರು ಅರೋಪಿತರ ಪರವಾಗಿ ಕಳೆದ ವರ್ಷ ಪ್ರತಿಭಟನೆ ಆಯೋಜಿಸಿದ್ದರು. ಈಗಲೂ ಅವರ ನಿಲುವು ಬದಲಾಗಿಲ್ಲ ಎಂದು ಹೇಳುತ್ತಾರೆ. “ಅಲ್ಲಿ ಅತ್ಯಾಚಾರವಾಗಲೀ, ಜಾತಿ ತಾರತಮ್ಯವಾಗಲೀ ಅಥವಾ ಶೋಷಣೆಯಾಗಲೀ ಇಲ್ಲವೇ ಇಲ್ಲ,” ಎಂದು ಹೇಳಿದರು. “ಇದನ್ನು ಹೊರಗಿನವರು ದೊಡ್ಡ ವಿಷಯವನ್ನಾಗಿ ಮಾಡಿದ್ದಾರೆ. ನ್ಯಾಯಾಲಯದ ಕಾರ್ಯಾಕಲಾಪಗಳೂ ಅದನ್ನೇ ನಿದರ್ಶಿಸುತ್ತದೆ.”
ಮೂಲ: ದ ಪ್ರಿಂಟ್