ಹಾಸನಾಂಬೆ ದರ್ಶನಕ್ಕೆ ಜನಸಾಗರವೇ ಹರಿದು ಬರುತ್ತಿದ್ದು, ನವೆಂಬರ್ 3ರ ತನಕ ಸಾರ್ವಕಜನಿಕ ದರ್ಶನಕ್ಕೆ ಅವಕಾಶ ಕೊಡಲಾಗಿದೆ. ಆದರೆ ಭಕ್ತರ ದರ್ಶನ ವ್ಯವಸ್ಥೆಯಲ್ಲಿ ನಿಯಂತ್ರಣ ತಪ್ಪಿದೆ. ಭಕ್ತರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ದರ್ಶನದ ವೇಳೆ ಭಾರಿ ಮಳೆ ಸುರಿಯುತ್ತಿದ್ದು, ಭಕ್ತರು ಬ್ಯಾರಿಕೇಡ್ ಮುರಿದು ಒಳಕ್ಕೆ ನುಗ್ಗುತ್ತಿದ್ದಾರೆ.
ಸೂಕ್ತ ರೀತಿಯನ್ನು ಭಕ್ತರನ್ನು ನಿಯಂತ್ರಿಸಲಾಗದ ಜಿಲ್ಲಾಡಳಿತ ಈಗಾಗಲೇ ಎಲ್ಲಾ ರೀತಿಯ ವಿಶೇಷ ಪಾಸ್, ಟಿಕೆಟ್ ರದ್ದುಗೊಳಿಸಿದೆ ಅನ್ನೋ ಮಾಹಿತಿ ಹೊರಬಿದ್ದಿದೆ.. ಲಕ್ಷಾಂತರ ವಿವಿಐಪಿ ಪಾಸ್ ಹಂಚಿ ದರ್ಶನೋತ್ಸವವನ್ನ ಜಿಲ್ಲಾಡಳಿತ ಅಧೋಗತಿಗೆ ತಳ್ಳಿದೆ ಎಂದು ಹಾಸನ ಜಿಲ್ಲಾಡಳಿತದ ವಿರುದ್ಧ ಭಕ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಾಸನಾಂಬೆ ದೇವಿ ದರ್ಶನಕ್ಕೆ ಭಕ್ತರ ದಂಡೇ ಹರಿದು ಬರುತ್ತಿದ್ದು, ಕುಟುಂಬಸ್ಥರನ್ನು ದೇವಾಲಯಕ್ಕೆ ಕರೆದೊಯ್ಯುವ ವಿಚಾರವಾಗಿ ಕಂದಾಯ ಇಲಾಖೆ ಸಿಬ್ಬಂದಿ ನಡುವೆ ಮಾರಾಮಾರಿ ನಡೆದಿದೆ. ದೇವಾಲಯದ ಎಕ್ಸಿಟ್ ಗೇಟ್ ಬಳಿ ಘಟನೆ ನಡೆದಿದ್ದು, ಕುಟುಂಬಸ್ಥರ ಎದುರೇ ಪರಸ್ಪರ ಇಬ್ಬರು ಅಧಿಕಾರಿಗಳು ಕೈ ಕೈ ಮಿಲಾಯಿಸಿದ್ದಾರೆ. ಈ ವೇಳೆ ಜಗಳ ಬಿಡಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ.
ಹಾಸನಾಂಬೆ ದರ್ಶನಕ್ಕೆ ನಾನಾ ಜಿಲ್ಲೆಗಳಿಂದ ಭಕ್ತರು ಆಗಮಿಸಲು ಸಹಕಾರಿ ಆಗುವಂತೆ ಹೆಚ್ಚುವರಿ ಬಸ್ ನಿಯೋಜನೆ ಮಾಡಲಾಗಿತ್ತು. ವಿವಿಧ ಜಿಲ್ಲೆಗಳಿಂದ ಹಾಸನಕ್ಕೆ ಆಗಮಿಸುತ್ತಿರುವ ಭಕ್ತರನ್ನು ನಿಯಂತ್ರಿಸಲಾಗದೆ ವಿಶೇಷ ಬಸ್ಗಳ ಸಂಚಾರ ರದ್ದು ಮಾಡಲಾಗಿದೆ. 500 ಬಸ್ಗಳನ್ನು ರದ್ದು ಮಾಡಿದೆ ಸರ್ಕಾರ. ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ನಿಯೋಜಿಸಿದ್ದ ವಿಶೇಷ ಬಸ್ ರದ್ದು ಮಾಡಲಾಗಿದೆ.
ಕೆನಡಾದಿಂದ ಹಾಸನಾಂಬೆ ದರ್ಶನಕ್ಕೆ ಬಂದ ಮಹಿಳಾ ಭಕ್ತರು ಪರದಾಡಿದ್ದಾರೆ. ಪುಟ್ಟ ಮಗು ಜೊತೆ ಕೆನಡಾದಿಂದ ಬಂದಿದ್ದ ಭಕ್ತೆ ರೋಷಿಣಿ, ಸಾವಿರ ರೂಪಾಯಿ ಕೊಟ್ಟು ಟಿಕೆಟ್ ಪಡೆದು 5 ಗಂಟೆ ಕಾದರೂ ದರ್ಶನ ಸಿಗಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಜಿಲ್ಲಾಡಳಿತದ ವಿರುದ್ಧ ಮಹಿಳೆ ಆಕ್ರೋಶ ವ್ಯಕ್ತಪಡಿಸಿದ್ದು, ಸರಿಯಾದ ವ್ಯವಸ್ಥೆ ಮಾಡಿಲ್ಲ ಎಂದು ಕಿಡಿಕಾರಿದ್ದಾರೆ.