ಶಿವಮೊಗ್ಗದಲ್ಲಿ ಭಜರಂಗದಳದ ಕಾರ್ಯಕರ್ತ ಹರ್ಷನ ಸಾವನ್ನು ಎದುರಿಟ್ಟು ದೊಡ್ಡ ಮಟ್ಟದ ಗಲಭೆಯನ್ನು ಸೃಷ್ಟಿಸಲು ಯೋಜನೆ ಹಾಕಿಕೊಳ್ಳಲಾಗಿತ್ತು ಎಂಬ ಅನುಮಾನ ಹುಟ್ಟಿದೆ.
ವಿಧಾನ ಪರಿಷತ್ ಸದಸ್ಯ ಡಿಎಸ್ ಅರುಣ್ ಅವರಿಗೆ ಬೆದರಿಕೆ ಹಾಕಿದ್ದ ಆರೋಪಿ ಇದೀಗ ಪೊಲೀಸ್ ಬಲೆಗೆ ಬಿದ್ದಿದ್ದು, ಆತ ಮುಸಲ್ಮಾನರ ಹೆಸರಿನಲ್ಲಿ ನಕಲಿ ಖಾತೆ ತೆರದು ಅರುಣ್ ವಿರುದ್ಧ ಬೆದರಿಕೆ ಹಾಕಿದ್ದ ಎಂದು ಪೊಲೀಸ್ ಮೂಲಗಳು ಹೇಳಿವೆ.
ಬಂಧಿತ ಆರೋಪಿಯನ್ನು ಬೆಳಗಾವಿ ತಾಲ್ಲೂಕಿನ ಗೋಕಾಕದ ಶಿಂದಿಕುರಬೆಟ್‌ನ ಸಿದ್ಧಾರೂಢ ಶ್ರೀಕಾಂತ್ ಎಂದು ಗುರುತಿಸಲಾಗಿದೆ. ಬಾಗಲಕೋಟೆ ಪೊಲೀಸರು ಬೇರೊಂದು ಪ್ರಕರಣದಲ್ಲಿ ಶ್ರೀಕಾಂತ್ ನನ್ನು ಬಂಧಿಸಿದಾಗ ಮುಸ್ಲಿಂ ಯುವಕನ ಹೆಸರಲ್ಲಿ ಅರುಣ್‌ಗೆ ಬೆದರಿಕೆ ಹಾಕಿರುವ ವಿಷಯ ಬೆಳಕಿಗೆ ಬಂದಿದೆ.
ಫೆಬ್ರವರಿ 20ರ ರಾತ್ರಿ ಹರ್ಷನ ಕೊಲೆ ನಡೆದಿದ್ದು, ಪ್ರಕರಣ ಸಂಬಂಧ ಡಿ.ಎಸ್.ಅರುಣ್ ಅವರು ಈ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ್ದರು.

ಫೆಬ್ರವರಿ 21ರಂದು ಅಪರಿಚಿತ ವ್ಯಕ್ತಿಯಿಂದ ಜೀವ ಬೆದರಿಕೆ ಕರೆ ಬಂದಿದೆ ಮತ್ತು ಸಾಮಾಜಿಕ ಜಾಲತಾಣದಲ್ಲಿ ಮುಸ್ತಾಕ್ ಅಲಿ ಎಂಬ ಹೆಸರಿನ ಫೇಸ್‌ಬುಕ್ ಖಾತೆಯಿಂದ ‘ನಿಮ್ಮ ತಲೆಲಿ ಇವತ್ತು ಕೇವಲ ಒಬ್ಬ ಹಿಂದೂ ಕಾರ್ಯಕರ್ತ ಸತ್ತಿದ್ದಾನೆ ಅಷ್ಟೆ. ಆದರೆ, ಮುಂದಿನ ದಿನ ನಿಮ್ಮ ಪತ್ನಿ, ಮಕ್ಕಳೇ ಟಾರ್ಗೆಟ್ ನೆನಪಿಸಿ, ಷಂಡ ಸರ್ಕಾರದ ಭಂಡರಂತೆ ವರ್ತಿಸುವ ಪ್ರಚಂಡರೆ’ ಎಂದು ಬೆದರಿಕೆ ಹಾಕಲಾಗಿದೆ ಎಂದು ಆರೋಪಿಸಿ ಅರುಣ್ ಆಪ್ತ ಸಹಾಯಕ ವಾಗೀಶ್ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ. ಲಕ್ಷ್ಮೀಪ್ರಸಾದ್ ಅವರಿಗೆ ದೂರು ನೀಡಿದ್ದರು.
ಅದರ ಆಧಾರದ ಮೇಲೆ ಮುಸ್ತಾಕ್ ಅಲಿ ಎಂಬುವವರ ವಿರುದ್ಧ ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಫೆ. 20ರ ರಾತ್ರಿ ಬಜರಂಗದಳದ ಕಾರ್ಯಕರ್ತ ಹರ್ಷ ಅವರ ಹತ್ಯೆಯಾದ ನಂತರ ಅರುಣ್ ಅವರು, ‘ಕೃತ್ಯದ ಹಿಂದೆ ಮುಸ್ಲಿಮರು ಇದ್ದಾರೆ’ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು.
ʼಮುಸ್ತಾಕ್ ಅಲಿʼ ಹೆಸರಿನಲ್ಲಿ ಶ್ರೀಕಾಂತ್ ಹಿಂದೂಗಳಿಗೆ ಬೆದರಿಕೆ ಹಾಕಿದ್ದು, ಅದನ್ನು ಮುಸ್ಲಿಮರ ಮೇಲೆ ಕಟ್ಟಲು, ಆ ಮೂಲಕ ಸಮಾಜದ ಸ್ವಾಸ್ಥ್ಯ ಕದಡಲು ಪ್ರಯತ್ನಿಸಿದ್ದ ಎಂದು ಬಹಿರಂಗಗೊಂಡಿದೆ.