ಗುಜರಾತ್ ಟೈಟಾನ್ಸ್ ತಂಡ 7 ವಿಕೆಟ್ ಗಳಿಂದ ರಾಜಸ್ಥಾನ್ ರಾಯಲ್ಸ್ ತಂಡವನ್ನು ಸೋಲಿಸಿ ಐಪಿಎಲ್ ಟಿ-20 ಟೂರ್ನಿಯ ನೂತನ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಅಹಮದಾಬಾದ್ ಮೈದಾನದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 130 ರನ್ ಗಳಿಸಿತು. ಸುಲಭ ಗುರಿ ಬೆಂಬತ್ತಿದ ಗುಜರಾತ್ ಟೈಟಾನ್ಸ್ ತಂಡ 18.1 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು.
ಈ ಮೂಲಕ ಗುಜರಾತ್ ತಂಡ ಐಪಿಎಲ್ ಪ್ರವೇಶಿಸಿದ ಮೊದಲ ಆವೃತ್ತಿಯಲ್ಲೇ ಪ್ರಶಸ್ತಿ ಗೆದ್ದ ದಾಖಲೆ ಬರೆದರೆ, ರಾಜಸ್ಥಾನ್ ರಾಯಲ್ಸ್ 14 ವರ್ಷಗಳ ನಂತರ ಪ್ರಶಸ್ತಿ ಗೆಲ್ಲುವ ಕನಸು ಭಗ್ನಗೊಂಡಿತು.
ಗುಜರಾತ್ ಪರ ಶುಭಮನ್ ಗಿಲ್ 43 ಎಸೆತಗಳಲ್ಲಿ 3 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 47 ರನ್ ಬಾರಿಸಿ ಔಟಾಗದೇ ಉಳಿದರೆ, ನಾಯಕ ಹಾರ್ದಿಕ್ ಪಟೇಲ್ (34) ಮತ್ತು ಡೇವಿಡ್ ಮಿಲ್ಲರ್ 19 ಎಸೆತಗಳಲ್ಲಿ 3 ಬೌಂಡರಿ ಮತ್ತು 1 ಸಿಕ್ಸರ್ ಸಹಾಯದಿಂದ 32 ರನ್ ಬಾರಿಸಿ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡ ಹಾರ್ದಿಕ್ ಪಟೇಲ್ ಮಾರಕ ದಾಳಿಗೆ ತತ್ತರಿಸಿ ಬೃಹತ್ ಮೊತ್ತ ದಾಖಲಿಸುವ ಅವಕಾಶ ಕಳೆದುಕೊಂಡಿತು. ಹಾರ್ದಿಕ್ 3 ವಿಕೆಟ್ ಪಡೆದರೆ, ಸಾಯಿ ಕಿಶೋರ್ 2 ವಿಕೆಟ್ ಪಡೆದು ರಾಜಸ್ಥಾನ್ ಗೆ ಕಡಿವಾ ಹಾಕಿದರು.
ಜೋಸ್ ಬಟ್ಲರ್ 35 ಎಸೆತಗಳಲ್ಲಿ 5 ಬೌಂಡರಿ ಸೇರಿದ 39 ರನ್ ಗಳಿಸಿ ಔಟಾದರೆ, ಯಶಸ್ವಿ ಜೈಸ್ವಾಲ್ (22), ರಯಾನ್ ಪರಾಗ್ (15), ಸಂಜು ಸ್ಯಾಮ್ಸನ್ (14) ದೊಡ್ಡ ಮೊತ್ತ ಕಲೆಹಾಕುವಲ್ಲಿ ವಿಫಲರಾದರು.