ಮಹಿಳಾ ಸಂಘಗಳಲ್ಲಿ ಮಾಡಿದ್ದ ಸಾಲ ತೀರಿಸಲಾಗದೇ ಬೀದರ್ನ ಗಡಿಗೌಡಗಾಂವ್ ಎಂಬ ಗ್ರಾಮದ ಮಹಿಳೆ ಸಾವಿಗೆ ಶರಣಾಗಿದ್ದಾರೆ. 2 ದಿನಗಳ ಹಿಂದೆ ರೇಷ್ಮಾ ಎನ್ನುವವರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. 6ಕ್ಕೂ ಹೆಚ್ಚು ಸಂಘಗಳಲ್ಲಿ 3 ಲಕ್ಷಕ್ಕೂ ಹೆಚ್ಚು ಸಾಲ ಮಾಡಿಕೊಂಡಿದ್ರಂತೆ. ಸಾಲ ಮಾಡಿದ ಮಹಿಳೆ ಮನೆಗೆ ಶೆಡ್ ಹಾಕಿಸಿಕೊಂಡಿದ್ರು. ಆದ್ರೆ ಈಗ ಸಾಲ ತೀರಿಸಲಾಗದೇ ಮಹಿಳೆ ನೇಣಿಗೆ ಶರಣಾಗಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ರೇಷ್ಮಾ ನೇಣಿಗೆ ಕೊರಳೊಡ್ಡಿದ್ದಾರೆ. ಹುಲಸೂರ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಮೀಟರ್ ಬಡ್ಡಿ ದಂಧೆಕೋರರ ಅಟ್ಟಹಾಸಕ್ಕೆ ಯುವಕ ಬಲಿಯಾಗಿದ್ದಾನೆ. ಮೀಟರ್ ಬಡ್ಡಿಗೆ ಸಾಲ ಮಾಡಿ ಮರು ಪಾವತಿ ಮಾಡದ್ದಕ್ಕೆ ಖಾಸಿಂ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಯುವಕ ಸಾವನ್ನಪ್ಪಿದ್ದಾನೆ. ಯಾದಗಿರಿಯ ಲಾಡೇಜ ಗಲ್ಲಿ ನಿವಾಸಿ ಖಾಸಿಂ ಸಾವನ್ನಪ್ಪಿದ್ದಾನೆ. ಯಾಸಿನ್ ಎನ್ನುವವರ ಬಳಿ ಖಾಸಿಂ ಅಲಿಯಾಸ್ ಬಿಲ್ಲಿ ಸಾಲ ಪಡೆದಿದ್ರು. 35 ಸಾವಿರ ಸಾಲ ಮರುಪಾವತಿ ಮಾಡೋದು ತಡವಾಗಿದ್ದಕ್ಕೆ ಖಾಸೀಂ ಮೇಲೆ ಬಾರು ಕೋಲಿನಿಂದ ಹೊಡೆದು ಮೊಣಕಾಲಿನಿಂದ ಒದ್ದು ಮಾರಣಾಂತಿಕ ಹಲ್ಲೆ ಮಾಡಿದ್ದ. ತೀವ್ರವಾಗಿ ಗಾಯಗೊಂಡ ಯಾಸಿನ್ನನ್ನ ಕಲಬುರಗಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಖಾಸೀಂ ಸಾವನ್ನಪ್ಪಿದ್ದಾನೆ.
ಬೆಳಗಾವಿಯಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಯ ಕಿರುಕುಳಕ್ಕೆ 1 ತಿಂಗಳ ಬಾಣಂತಿ ಬೀದಿ ಪಾಲಾಗಿದ್ದಾರೆ. ತಾರಿಹಾಳ ಗ್ರಾಮದಲ್ಲಿ ಘಟನೆ ನಡೆದಿದೆ. ಗಣಪತಿ ರಾಮಚಂದ್ರ ಲೋಹಾರ್ ಎನ್ನುವವರು ಖಾಸಗಿ ಹೌಸಿಂಗ್ ಕಂಪನಿಯಿಂದ 5 ವರ್ಷದ ಹಿಂದೆ ಮನೆ ನಿರ್ಮಾಣಕ್ಕಾಗಿ 5 ಲಕ್ಷ ಸಾಲ ಪಡೆದಿದ್ರು. ಬಳಿಕ 3 ವರ್ಷ ನಿರಂತರವಾಗಿ ಸಾಲ ಮರುಪಾವತಿ ಮಾಡಿದ್ರು. ಆದ್ರೆ ಆ ಬಳಿಕ ಮರುಪಾವತಿ ಮಾಡದ ಹಿನ್ನೆಲೆ ಪೊಲೀಸರು ಹಾಗೂ ವಕೀಲರ ಸಮ್ಮುಖದಲ್ಲಿ ಮನೆ ಜಪ್ತಿ ಮಾಡಲಾಗಿದೆ. ಮನೆಯಲ್ಲಿ ಇದ್ದ ಒಂದು ತಿಂಗಳ ಬಾಣಂತಿ ಸದ್ಯ ಬೀದಿಪಾಲಾಗಿದ್ದಾರೆ. ಅನಾರೋಗ್ಯ, ಮನೆಯ ಪರಿಸ್ಥಿತಿ ನೆನದು ರಾಮಚಂದ್ರ ಲೋಹಾರ್ ಕಣ್ಣೀರಿಟ್ಟಿದ್ದಾರೆ.
ಕೋಲಾರದಲ್ಲಿ ಸಾಲ ಮರುಪಾವತಿ ಮಾಡುವಂತೆ ಡಿಸಿಸಿ ಬ್ಯಾಂಕ್ ಆಸ್ತಿ ಮುಟ್ಟುಗೋಲು ನೋಟೀಸ್ ಜಾರಿ ಮಾಡಿದೆ. ಸ್ತ್ರೀ ಶಕ್ತಿ ಸಂಘದಿಂದ ಸಾಲ ಪಡೆದಿದ್ದ ಮಹಿಳೆಯರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಕೋಲಾರದ ಆಜಾದ್ ನಗರದ ಮಹಿಳಾ ಸಂಘದ ಸದಸ್ಯರು 5 ಲಕ್ಷ ಸಾಲ ಪಡೆದಿದ್ರು. ಈ ಪೈಕಿ 8 ಕಂತು ಕಟ್ಟದೇ 83 ಸಾವಿರ ಹಣ ಬಾಕಿಯಾಗಿತ್ತು. ಬಾಕಿ ಹಣಕ್ಕೆ ಬ್ಯಾಂಕ್ 88 ಸಾವಿರ ಬಡ್ಡಿ ವಿಧಿಸಿದೆ. ಸಾಲದ ಕಂತು ಕಟ್ಟದೇ ಹೋದಲ್ಲಿ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ. ಡಿಸಿಸಿ ಬ್ಯಾಂಕ್ ನೋಟೀಸ್ ಕ್ರಮಕ್ಕೆ ರೈತ ಸಂಘದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೋಲಾರದ ಡಿಸಿಸಿ ಬ್ಯಾಂಕ್ ಪ್ರಧಾನ ಕಚೇರಿ ಎದುರು ಮೈಕ್ರೋ ಫೈನಾನ್ಸ್ ಹಾವಳಿ ತಪ್ಪಿಸುವಂತೆ ಒತ್ತಾಯಿಸಿ ರೈತಸಂಘ ಪ್ರತಿಭಟನೆ ನಡೆಸಿದೆ. ಇನ್ನು ಫೈನಾನ್ಸ್ ಕಿರಿಕಿರಿ ಮಧ್ಯೆಯೇ ಮಹಿಳಾ ಸಂಘಗಳಿಗೆ ಡಿಸಿಸಿ ಬ್ಯಾಂಕ್ನಿಂದಲೂ ನೋಟಿಸ್ ಜಾರಿ ಮಾಡಿದ್ದು, ರೈತರು ಹಾಗೂ ಮಹಿಳೆಯರನ್ನ ಸಾಲದಿಂದ ರಕ್ಷಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಗ್ತಿದೆ. ನೋಟಿಸ್ ಪ್ರತಿ ಹರಿದು ಹಾಕಿ ಮಹಿಳೆಯರು ಕೈಯಲ್ಲಿ ಮಾಂಗಲ್ಯ ಸರ ಹಿಡಿದು ಪ್ರತಿಭಟನೆ ನಡೆಸಿದ್ದಾರೆ.