
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಕರ್ನಾಟಕ ಹೈಕೋರ್ಟ್ನಿಂದ ಜಾಮೀನು ಪಡೆದು ಸಾಮಾನ್ಯ ಬದುಕಿಗೆ ವಾಪಸ್ ಆಗಿರುವ ನಟ ದರ್ಶನ್, ಪವಿತ್ರಾಗೌಡ ಸೇರಿದಂತೆ 7 ಜನರ ಜಾಮೀನು ರದ್ದು ಮಾಡುವಂತೆ ಕರ್ನಾಟಕ ಸರ್ಕಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಇವತ್ತು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಜೆಬಿ ಪರ್ದಿವಾಲಾ ಹಾಗು ಆರ್ ಮಹದೇವನ್ ಅವರ ವಿಭಾಗೀಯ ಪೀಠ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಮಾರ್ಚ್ 18ಕ್ಕೆ ಮುಂದೂಡಿಕೆ ಮಾಡಲಾಗಿದೆ.
ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕೊಲೆ ಮಾಡಲಾಗಿದೆ. ಡಿಸೆಂಬರ್ 13ರಂದು ಕರ್ನಾಟಕ ಹೈಕೋರ್ಟ್ ಜಾಮೀನು ನೀಡುವಾಗ ಸಾಕಷ್ಟು ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ. ಹೀಗಾಗಿ ಜಾಮೀನು ರದ್ದು ಮಾಡಬೇಕು ಎಂದು ಮೇಲ್ಮನವಿ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಸುಪ್ರೀಂಕೋರ್ಟ್ ಮುಂದೆ ಹಾಜರಾಗಿದ್ದ ಹಿರಿಯ ವಕೀಲ ಸಿದ್ಧಾರ್ಥ ಲೂತ್ರಾ, ಜಾಮೀನು ನೀಡಿರುವುದು ಸರಿಯಾದ ಕ್ರಮ ಅಲ್ಲ ಎಂದು ವಾದಿಸಿದ್ರು. ಆರೋಪಿಗಳಿಗೆ ನೋಟಿಸ್ ಜಾರಿ ಮಾಡಲು ಕೋರ್ಟ್ ಸೂಚಿಸಿದೆ.
ಯಾವುದೇ ಹೈಕೋರ್ಟ್ ಆದೇಶವನ್ನು ಕೆಳಹಂತದ ನ್ಯಾಯಾಲಯಗಳು ಪಾಲಿಸುವ ಸಾಧ್ಯತೆ ಇರುತ್ತದೆ. ಇನ್ನು ಕರ್ನಾಟಕ ಹೈಕೋರ್ಟ್ ಕೂಡ ತನ್ನದೇ ಆದೇಶವನ್ನು ಬೇರೆ ಕೇಸ್ಗಳಲ್ಲಿ ಬಳಸಿಕೊಳ್ಳುವ ಸಾಧ್ಯತೆ ಇರುತ್ತದೆ. ಹೈಕೋರ್ಟ್ ಆದೇಶದಲ್ಲಿ ನ್ಯೂನ್ಯತೆ ಇದೆ ಅನ್ನೋ ಆರೋಪ ಹಿನ್ನೆಲೆಯಲ್ಲಿ ದರ್ಶನ್ ಜಾಮೀನು ಆದೇಶವನ್ನು ಮಾದರಿ ಆಗಿ ಬಳಸಿಕೊಳ್ಳದಂತೆ ಸುಪ್ರೀಂಕೋರ್ಟ್ ಸೂಚನೆ ಕೊಟ್ಟಿದೆ.
ಈಗಾಗಲೇ 7 ಜನರು ಹೈಕೋರ್ಟ್ನಿಂದ ಜಾಮೀನು ಪಡೆದಿದ್ದು, ಉಳಿದವರು ಸೆಷನ್ಸ್ ಕೋರ್ಟ್ನಿಂದ ಜಾಮೀನು ಪಡೆದಿದ್ದಾರೆ. ಉಳಿದವರ ಜಾಮೀನು ಆದೇಶ ರದ್ದು ಕೋರಿ ಈಗಾಗಲೇ ಹೈಕೋರ್ಟ್ ಮೆಟ್ಟಿಲೇರಲಾಗಿದೆ. ಇದೀಗ ದರ್ಶನ್ ಸೇರಿದಂತೆ 7 ಜನರಿಗೆ ಸಿಕ್ಕಿರುವ ಆದೇಶವನ್ನೇ ಮಾನದಂಡವಾಗಿ ಬಳಸಿಕೊಂಡು ಜಾಮೀನು ನೀಡಬಾರದು ಅನ್ನೋದು ಸುಪ್ರೀಂಕೋರ್ಟ್ ಆದೇಶದ ಪ್ರಮುಖ ಉದ್ದೇಶ. ಒಂದು ವೇಳೆ ವಿಚಾರಣೆ ನಡೆಸಿ ವಿಭಿನ್ನ ತೀರ್ಪು ಬಂದರೆ ಮತ್ತೆ ಸುಪ್ರೀಂಕೋರ್ಟ್ನಲ್ಲಿ ದರ್ಶನ್ಗೆ ಸಂಕಷ್ಟ ಫಿಕ್ಸ್.







