
ರಾಜ್ಯದಲ್ಲಿ ಪವರ್ ಶೇರಿಂಗ್ ಬಗ್ಗೆ ಭಾರೀ ಚರ್ಚೆ ನಡೀತಿದೆ. ಇದರ ಬೆನ್ನಲ್ಲೆ ಚೆನ್ನಗಿರಿ ಶಾಸಕ ಶಿವಗಂಗಾ ಬಸವರಾಜ್ ಸ್ಪೋಟಕ ಹೇಳಿಕೆ ಕೊಟ್ಟಿದ್ದು, ಡಿಸೆಂಬರ್ನಲ್ಲಿ ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ ಆಗ್ತಾರೆ ಎಂದಿದ್ದಾರೆ. ದಾವಣಗೆರೆಯಲ್ಲಿ ಮಾತನಾಡಿದ ಶಾಸಕರು, ನಾನು ಈಗಲೇ ರಕ್ತದಲ್ಲಿ ಬೇಕಾದರೂ ಬರೆದು ಕೊಡ್ತೀನಿ, ಬರುವ ಡಿಸೆಂಬರ್ ಒಳಗೆ ಡಿ.ಕೆ ಶಿವಕುಮಾರ್ ರಾಜ್ಯದ ಸಿಎಂ ಆಗ್ತಾರೆ. ಪಕ್ಷಕ್ಕಾಗಿ ಡಿ.ಕೆ ಶಿವಕುಮಾರ್ ಸಾಕಷ್ಟು ದುಡಿದಿದ್ದಾರೆ. ಸುಮಾರು 80 ಶಾಸಕರ ಗೆಲುವಿನಲ್ಲಿ ಡಿ.ಕೆ ಶಿವಕುಮಾರ್ ಅವರ ಪಾತ್ರವಿದೆ ಎಂದಿದ್ದಾರೆ.

ಬರುವ ಡಿಸೆಂಬರ್ಗೆ ಮುಖ್ಯಮಂತ್ರಿ ಆದರೆ ಮುಂದಿನ ಬಾರಿಯ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಮತ್ತೆ 5 ವರ್ಷ ಸಂಪೂರ್ಣವಾಗಿ ಡಿ.ಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಿರುತ್ತಾರೆ. ಅಂದರೆ ಬರೋಬ್ಬರಿ 7 ವರ್ಷ ಡಿ.ಕೆ ಶಿವಕುಮಾರ್ ಅವರೇ ಸಿಎಂ ಆಗಿರುತ್ತಾರೆ ಅಂತ ಹೇಳಿದ್ದಾರೆ. ಶಾಸಕ ಶಿವಗಂಗಾ ಬಸವರಾಜ್ ಹೇಳಿಕೆ ಬೆನ್ನಲ್ಲೇ ಯಾದಗಿರಿಯಲ್ಲಿ ಸ್ವಾಮೀಜಿ ಸ್ಫೋಟಕ ಹೇಳಿಕೆ ನೀಡುವ ಮೂಲಕ ಪರೋಕ್ಷವಾಗಿ ಡಿ.ಕೆ ಶಿವಕುಮಾರ್ಗೆ ಟಾಂಗ್ ಕೊಟ್ಟಿದ್ದಾರೆ.

ಯಾದಗಿರಿಯಲ್ಲಿ ಕೋಡಿಮಠದ ಡಾ.ಶಿವಯೋಗಿ ಶಿವಾನಂದ ಸ್ವಾಮೀಜಿ ಸ್ಫೋಟಕ ಭವಿಷ್ಯ ನುಡಿದಿದ್ದು, ಹಾಲು ಮತ ಸಮಾಜವು ಪ್ರಾಚೀನ ಕಾಲದಿಂದ ದೈವರಾಧನೆ ಮಾಡುವ ಸಮಾಜ. ಹಾಲು ಕೆಟ್ಟರು ಹಾಲುಮತ ಸಮಾಜ ಕೆಡದು ಅನ್ನೋ ನಾಣ್ಣುಡಿಯಂತೆ, ಅಕ್ಕ ಬುಕ್ಕರು ವಿಜಯನಗರ ಸಾಮ್ರಾಜ್ಯ ಕಟ್ಟಿದರು. ಸದ್ಯ ಹಾಲು ಮತ ಸಮಾಜದ ಕೈಯ್ಯಲ್ಲಿ ರಾಜ್ಯ ಸರ್ಕಾರದ ಅಧಿಕಾರವಿದೆ. ಸಿಎಂ ಕುರ್ಚಿಯಿಂದ ಬಿಡಿಸುವುದು ಅಷ್ಟು ಸುಲಭವಾದ ಮಾತಲ್ಲ ಎಂದಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರು ಅವರಾಗಿಯೇ ಸಿಎಂ ಸ್ಥಾನ ಬಿಡಬೇಕೇ ಹೊರತು, ನೀವು ಬಿಡಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಮುಂದೆ ಏನಾಗುತ್ತೆ ಅಂತ ಯುಗಾದಿ ಆದ ಮೇಲೆ ಹೇಳುತ್ತೇನೆ ಎಂದು ಸ್ವಾಮೀಜಿ ಹೇಳಿದ್ದಾರೆ. ಅಂದರೆ ಡಿ.ಕೆ ಶಿವಕುಮಾರ್ ಒಂದು ವೇಳೆ ಪೈಪೋಟಿಗೆ ಬಿದ್ದು ಅಧಿಕಾರ ಕಸಿದುಕೊಳ್ಳಲು ಮುಂದಾದರೆ ಮುಂದಿನ ದಿನಗಳಲ್ಲಿ ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ ಆಗಲಿದೆ ಎಂದು ಸ್ವಾಮೀಜಿ ಪರೋಕ್ಷವಾಗಿ ಹೇಳಿದ್ದಾರೆ. ಕಾಂಗ್ರೆಸ್ ಶಾಸಕ ಶಿವಗಂಗಾ ಬಸವರಾಜ್ ಹೇಳಿಕೆ ಬೆನ್ನಲ್ಲೇ ಸ್ವಾಮೀಜಿ ಹೇಳಿಕೆ ಹೊರಬಿದ್ದಿರುವುದು ಎಚ್ಚರಿಕೆ ಎನ್ನುವಂತಾಗಿದೆ.
