ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹಲಾಲ್ ಕಟ್ ಹಾಗೂ ಜಟ್ಕಾ ಕಟ್ ವಿವಾದ ಜೋರಾಗುತ್ತಿದೆ. ಹಿಂದೂ ಸಂಘಟನೆಗಳು ಕರಪತ್ರ ಹಂಚಿ ಅಭಿಯಾನ ಶುರುಮಾಡಿದ್ದಾರೆ. ಏತನ್ಮಧ್ಯೆ, ಮುಸ್ಲಿಂ ಮುಖಂಡರು ಹಲಾಲ್ ಬಗ್ಗೆ ಅಪಪ್ರಚಾರ ಮಾಡಲಾಗಿದೆ ಎಂದು ಹೇಳಿದ್ದಾರೆ. ಅಷ್ಟಕ್ಕೂ ಏನಿದು ಹಲಾಲ್ ಕಟ್..? ಏನಿದು ಜಟ್ಕಾ ಕಟ್..?
ಮುಸ್ಲಿಮರ ಹಲಾಲ್ ಕಟ್ ಮಾಂಸ ಖರೀದಿ ಮಾಡದಂತೆ ಅಭಿಯಾನ !
ಹಿಜಾಬ್ ನಿಂದ ಶುರುವಾದ ವಿವಾದಗಳ ಭರಾಟೆ ಸದ್ಯ ಹಲಾಲ್ ಕಟ್ ವರ್ಸಸ್ ಜಟ್ಕಾ ಕಟ್ ಗೆ ಬಂದು ನಿಂತಿದೆ. ಅದ್ಯಾವಾಗ ಹಿಜಾಬ್ ಹೈ ಕೋರ್ಟ್ ತೀರ್ಪು ಒಪ್ಪದೆ ಮುಸ್ಲಿಂ ಸಂಘಟನೆಗಳು ಬಂದ್ ಆಚರಿಸಿದರೋ, ಇದರ ಬೆನ್ನಲ್ಲೇ ಹಿಂದೂ ಪರ ಸಂಘಟನೆಗಳು ಮುಸ್ಲಿಂ ವ್ಯಾಪಾರಿಗಳಿಗೆ ಬಹಿಷ್ಕಾರ ಹೇರಿ ವಿವಾದ ಹುಟ್ಟು ಹಾಕಿದರು. ಈ ವಿವಾದ ಈಗ ಹಲಾಲ್ ಹಾಗೂ ಜಟ್ಕಾಗೆ ಬಂದು ನಿಂತಿದ್ದು, ಸಂಘರ್ಷ ಜೋರಾಗಿದೆ. ಈಗಾಗಲೇ ಹಿಂದೂ ಸಂಘಟನೆಗಳು ಮನೆ ಮನೆಗೆ, ಅಂಗಡಿಗಳಿಗೆ, ಹೋಟೆಲ್ ಗಳಿಗೆ ಭೇಟಿ ಕೊಟ್ಟು ಕರಪತ್ರ ಹಂಚಿ ಹಲಾಲ್ ಮಾಂಸ ಖರೀದಿಸದಂತೆ ಅಭಿಯಾನ ಕೈಗೊಂಡಿದ್ದಾರೆ. ಬೆಂಗಳೂರಿನ ಹಲವೆಡೆ ಇಂದೂ ಅಭಿಯಾನ ಮುಂದುವರೆದಿದ್ದು, ಕರಪತ್ರ ಹಂಚಲಾಯ್ತು.
ಹೋಟೆಲ್ ಗಳ ಬೋರ್ಡ್ ಗಳಲ್ಲಿದ್ದ ಹಲಾಲ್ ಹೆಸರು ತೆರವು ಮಾಡಿದ ಹಿಂದೂ ಕಾರ್ಯಕರ್ತರು !
ಇನ್ನು ಕೋರಮಂಗಲ, ಜೆಪಿನಗರ ಹಾಗೂ ಎಲೆಕ್ಟ್ರಾನಿಕ್ ಸಿಟಿಯಲ್ಲಿ ರಾಷ್ಟ್ರ ರಕ್ಷಣಾ ಪಡೆ ಎಂಬ ಸಂಘಟನೆಯಿಂದ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಕೋರಮಂಗಲದಲ್ಲಿರುವ ಅರಮನೆ ದೊನ್ನೆ ಬಿರಿಯಾನಿ ಹೋಟೆಲ್, ಜೆಪಿನಗರದಲ್ಲಿರುವ ಅಲ್ಟ್ರಾ ಬಿರಿಯಾನಿ ಹೋಟೆಲ್ ಹಾಗೂ ಎಲೆಕ್ಟ್ರಾನಿಕ್ ಸಿಟಿಯಲ್ಲಿನ ದಿಂಡಗಲ್ ಬಿರಿಯಾನಿ ಹೋಟೆಲ್ಗಳಿಗೆ ಭೇಟಿ ಕೊಟ್ಟು ಬೋರ್ಡ್ ಮೇಲಿರುವ ಹಲಾಲ್ ಹೆಸರನ್ನು ಅಳಿಸಿ ಹಾಕಿ ಹಲಾಲ್ ಬಾಯ್ಕಾಟ್ ಅಭಿಯಾನದ ಉದ್ದೇಶ ವಿವರಿಸಿದರು.

ಹಲಾಲ್ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ : ಮುಸ್ಲಿಂ ಮುಖಂಡರ ಅಸಮಾಧಾನ !
ಇನ್ನು ಹಲಾಲ್ ಕಟ್ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಮುಸ್ಲಿಂ ಮುಖಂಡ ಸಿದ್ದೀಖ್ ಮುಂಟುಗೋಳಿ ಅಸಮಾಧಾನ ಹೊರಹಾಕಿದರು. ಹಲಾಲ್ ಎಂದರೆ ಕೇವಲ ಪ್ರಾಣಿ ವಧೆ ಮಾಡಿ ಮಾಂಸ ಪಡೆಯುವುದಕ್ಕೆ ಇರುವ ವಿಧಾನವಲ್ಲ. ಇಸ್ಲಾಂನ ಪ್ರಮುಖ ವಿಚಾರಗಳ ಪೈಕಿ ಹಲಾಲ್ ಕೂಡ ಒಂದು. ಹಲಾಲ್ ಎಂದರೆ ಸರಿಯಾದ ಮಾದರಿಯಲ್ಲಿರುವುದು ಎಂದರ್ಥ. ಇಸ್ಲಾಂ ಧರ್ಮಶಾಸ್ತ್ರದ ಪ್ರಕಾರ ಹೇಳಿರುವ ಹಾಗೆ ಜೀವನ ರೂಪಿಸಿಕೊಳ್ಳುವುದು ಹಲಾಲ್. ಅದನ್ನು ಕೇವಲ ಮಾಂಸಹಾರಕ್ಕೆ ಮಾತ್ರ ಸೀಮಿತಗೊಳಿಸಬೇಡಿ. ಕದ್ದು ತಂದಿರುವ ಯಾವುದೇ ವಸ್ತುಗಳು ಹಲಾಲ್ ಅಲ್ಲ, ಬದಲಿಗೆ ಹರಾಮ್. ಸರಿಯಾದ ದಾರಿಯಲ್ಲಿ ಬೇಕಾದ ವಸ್ತುಗಳನ್ನು ಪಡೆದುಕೊಳ್ಳುವುದು ಹಲಾಲ್. ಇನ್ನು ಪ್ರಾಣಿವಧೆ ವೇಳೆ ಹಲಾಲ್ ಮಾಡುವುದು ಒಂದು ಪದ್ಧತಿ ಎಂದರು.
ಹಲಾಲ್ ಕಟ್ ಬಾಯ್ಕಾಟ್ ಒಂದು ಬಿಜೆಪಿ ಪ್ರೇರಿತ ಅಜೆಂಡಾ : ಹರಿಹಾಯ್ದ SDPI !
ಇನ್ನು ಹಲಾಲ್ ಬ್ಯಾನ್ ವಿಚಾರಕ್ಕೆ SDPI ಕೂಡ ರಂಗ ಪ್ರವೇಶ ಮಾಡಿದ್ದು, ಇಂದು ಸುದ್ದಿಗೋಷ್ಟಿ ನಡೆಸಿ ಬಿಜೆಪಿ ಮೇಲೆ ಹರಿಹಾಯ್ದಿದೆ. ಹಿಂದೂ ಸಂಘಟನೆಗಳನ್ನು ಮುಂದೆ ಬಿಟ್ಟು ಈ ಮೂಲಕ ರಾಜ್ಯದಲ್ಲಿ ಹರಾಜಕತೆ ಸೃಷ್ಟಿ ಮಾಡಲು ಬಿಜೆಪಿ ಪ್ರಯತ್ನಿಸುತ್ತಿದೆ. ಆಡಳಿತ ವೈಫಲ್ಯವನ್ನು ಮುಚ್ಚಿಹಾಕಲು ಬಿಜೆಪಿ ಮುಂದಾಗಿದೆ. ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಇಂಥಾ ನೀಚ ಹಾಗೂ ಕೋಮುದ್ವೇಷ ಹರಡುವ ಆಡಳಿತ ಯಾವ ಸರ್ಕಾರವೂ ನಡೆಸಿಲ್ಲ ಎಂದು SDPI ರಾಜ್ಯಾದ್ಯಕ್ಷ ಮಜೀದ್ ಮೈಸೂರು ಹೇಳಿದರು.
ಹಿಜಾಬ್ ವಿವಾದ, ಮುಸ್ಲಿಂರ ಮೇಲೆ ಆರ್ಥಿಕ ಹೇರಿಕೆ, ಹಲಾಲ್ ಬ್ಯಾನ್ ಖಂಡಿಸಿ ನಾಳೆ ಪ್ರತಿಭಟನೆ !
ಇನ್ನು ಸಾಲು ಸಾಲು ವಿವಾದಗಳ ಬಳಿಕ ಇದೀಗ SDPI ನಾಳೆ ಬಿಜೆಪಿ ಸರ್ಕಾರ ವಿರುದ್ಧ ಹೋರಾಟ ಮಾಡಲು ನಿರ್ಧರಿಸಿದೆ. ನಾಳೆ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ಮಾಡಿ ಬಿಜೆಪಿ ವಿರುದ್ಧ ಅಸಮಾಧಾನ ಹೊರ ಹಾಕಲು ಸಿದ್ಧತೆ ಮಾಡಿಕೊಂಡಿದೆ. ಇದರ ಜೊತೆಗೆ ಬಯಾಕನ್ ಸಂಸ್ಥೆಯ ಮುಖ್ಯಸ್ಥೆ ಕಿರಣ್ ಮಜೂಮ್ದಾರ್ ಶಾ ಕೂಡ ಇದರ ಬಗ್ಗೆ ಟ್ವೀಟ್ ಮಾಡಿದ್ದು, ಸಿಎಂ ಬೊಮ್ಮಾಯಿ ಮಧ್ಯಪ್ರವೇಶಿಸಿ ಪರಿಸ್ಥಿರಿ ತಣ್ಣಗಾಗುವಂತೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಒಟ್ಟಾರೆ ದಿನದಿಂದ ದಿನಕ್ಕೆ ರಾಜ್ಯದಲ್ಲಿ ವಿವಾದಗಳು ಭುಗಿಲೇಳುತ್ತಿದ್ದು, ಧರ್ಮಗಳ ನಡುವೆ ಕಂದಕ ಸೃಷ್ಟಿಯಾಗುತ್ತಿದೆ.






