ʻಹೊಯ್ಸಳʼ ಅಂತಾನೇ ಖ್ಯಾತಿ ಪಡೆದಿರೋ ʻಗುರುದೇವ್,ʼ ಖಾಕಿ ತೊಟ್ಟಿರುವ ಖಡಕ್ ಪೊಲೀಸ್ ಅಧಿಕಾರಿ. ಎಲ್ರಿಗೂ ಮೂಗಿನ ಮೇಲೆ ಕೋಪ ಇದ್ರೆ, ಈತನಿಗೆ ನಾಲಿಗೆ ತುದಿಯಲ್ಲೇ ಕೋಪ. ಎದುರಾಳಿಗೆ ಮಾತಲ್ಲೇ ಪಂಚ್ ಕೊಡೋ ಸೂಪರ್ ಕಾಪ್.. ಏನೇ ಬಂದ್ರೂ, ಯಾರೇ ಎದುರಾದ್ರೂ ಮುನ್ನುಗ್ಗುವ ಸಿಂಗಲ್ ಪಡೆಯೇ ʻಗುರುದೇವ್ ಹೊಯ್ಸಳʼ. ಕರ್ತವ್ಯ ಅಂತ ಬಂದ್ರೆ ಪ್ರಾಣ ಬೇಕಾದ್ರೂ ಪಣಕ್ಕಿಡುವ ನಾಯಕ.

ಮರಳು ಮಾಫಿಯಾ ದಂಧೆಯನ್ನ ಬಯಲಿಗೆಳೆದು, ಪ್ರತಿಕೋದ್ಯಮ ಅಂದ್ರೆ ಏನು ಅಂತ ಮಾಧ್ಯಮದವರಿಗೆ ತಿಳಿಸಿಕೊಡುವ ಗುರುದೇವ್, ನಾವು ಅನಾಥರು ಅಂತ ಹೇಳ್ಕೊಂಡು ಬಂದ ಪ್ರೇಮಿಗಳಿಗೆ ಮದುವೆ ಮಾಡಿಸಿ ಸಂಕಷ್ಟದಲ್ಲಿ ಸಿಲುಕಿಕೊಳ್ತಾನೆ. ತನ್ನ ಮಗಳನ್ನ ಬೇರೆ ಜಾತಿ ಯುವಕನಿಗೆ ಕೊಟ್ಟು ಮದುವೆ ಮಾಡಿಸಿದ ಅನ್ನೋ ಕಾರಣಕ್ಕೆ, ಗುರುದೇವ್ ಮೇಲೆ ದ್ವೇಷ ಕಟ್ಟಿಕೊಳ್ಳುವ ಖಳನಾಯಕ.. ತಾನು ಪ್ರೀತಿಸಿದ ಹುಡುಗಿಯನ್ನ ಬೇರೊಬ್ಬನಿಗೆ ಮದುವೆ ಮಾಡಿಸಿದ ಅಂತ ಖಾಕಿಯನ್ನೇ ಎದುರುಹಾಕಿಕೊಳ್ಳುವ ಮತ್ತೊಬ್ಬ ಖಳನಾಯಕ.. ತಾನೇ ನಿಂತು ಮದುವೆ ಮಾಡಿಸಿದ ಯುವತಿ ಸಂಕಷ್ಟದಲ್ಲಿದ್ದಾಳೆ ಅಂತ ಗೊತ್ತಾದಾಗ, ಆಕೆಯ ಹುಡುಕ್ಕಾಟಕ್ಕಿಳಿಯೋ ಗುರುದೇವ್‌ಗೆ ಎದುರಾಗ್ತಾನೆ ಬಲಿ.

ಜಾತಿಗೆ ಹೆದರಿ ಊರು ಬಿಟ್ಟು, ಊರೂರು ಅಲೆದು ಬದುಕು ಕಟ್ಟಿಕೊಳ್ಳಬೇಕು ಅಂದುಕೊಂಡಿದ್ದ ಪ್ರೇಮಿಗಳಿಗೆ ಭರವಸೆ ನೀಡುವ ಗುರುದೇವ್, ಅವರನ್ನ ಕಾಪಾಡುವುದಲ್ಲಿ ವಿಫಲನಾಗುತ್ತಾನೆ. ಜಾತಿಗೋಸ್ಕರ ಹೆತ್ತ ಮಗಳನ್ನ ಬೇಕಾದ್ರೂ ತುಳಿದು ಸಾಯಿಸುವ ಖಳನಾಯಕನಿಗೆ ತಕ್ಕ ಪಾಠ ಕಲಿಸುತ್ತಾನೆ ಗುರುದೇವ್. ಮತ್ತೊಂದೆಡೆ ಪ್ರಾಣಿಗಳನ್ನ ಅಟ್ಟಾಡಿಸಿಕೊಂಡು ಬೇಟೆಯಾಡುವ ಬಲಿ, ತನ್ನ ಪ್ರಾಣ ಸ್ನೇಹಿತನನ್ನ ಕೊಂದಿದ್ದಕ್ಕೆ ಗುರುದೇವ್‌ನನ್ನು ಬೇಟೆಯಾಡಲು ಹೊಂಚು ಹಾಕುತ್ತಿರ್ತಾನೆ. ಪೊಲೀಸ್ ಅಂದ್ರೆ ಸಿಎಂ ಅನ್ನೋ ಕಾಮನ್ ಮ್ಯಾನ್‌ನಿಂದ ಹಿಡಿದು, ಸಿಎಂ ಅನ್ನೋ ಚೀಫ್ ಮಿನಿಸ್ಟರ್‌ವರೆಗೂ ಬೇಕೇ ಬೇಕು ಅಂತ ಪೊಲೀಸರ ಪ್ರಾಮುಖ್ಯತೆಯನ್ನ ತಿಳಿಸಿಕೊಡುವ ಗುರುದೇವ್, ಕೋರ್ಟ್‌ನಲ್ಲಿ ನ್ಯಾಯ ಸಿಗದೇ ಇದ್ರೂ, ಬಡವರಿಗೆ ನ್ಯಾಯ ಕೊಡಿಸುವಲ್ಲಿ ಯಶಸ್ವಿಯಾಗುತ್ತಾನೆ..

ಇದು ಗುರುದೇವ್ ಹೊಯ್ಸಳ ಚಿತ್ರದ ಸಾರಾಂಶ.. ಡಾಲಿ ಧನಂಜಯ್ ಖಂಡಿತವಾಗಿಯೂ ನಟರಾಕ್ಷಸನೇ ಅನ್ನೋದಕ್ಕೆ ʻಗುರುದೇವ್ ಹೊಯ್ಸಳʼ ಸಿನಿಮಾ ಸಾಕ್ಷಿ. ತಮ್ಮ ಮ್ಯಾನರಿಸಂ, ಪಂಚ್ ಡೈಲಾಗ್‌ಗಳಿಂದಲೇ ಪ್ರೇಕ್ಷಕರನ್ನ ಹಿಡಿದಿಟ್ಟುಕೊಳ್ಳೋ ಧನಂಜಯ್, ಆಕ್ಷನ್, ಫೈಟ್ ಮೂಲಕ ಮತ್ತಷ್ಟು ಗಮನ ಸೆಳೆದಿದ್ದಾರೆ. ಇನ್ನು ಚಿತ್ರದಲ್ಲಿ ಬರುವ ನಾಯಕಿಯ ಪಾತ್ರ ಕಡಿಮೆ ಅನಿಸಿದ್ರೂ, ನಾಯಕನಿಗೆ ಮಡದಿಯಾಗಿ ಕೊಟ್ಟಿರುವ ಪಾತ್ರವನ್ನ ಅಚ್ಚುಕಟ್ಟಾಗಿ ಮಾಡಿದ್ದಾರೆ ನಟಿ ಅಮೃತಾ ಅಯ್ಯಂಗಾರ್.

ʻಗುರುದೇವ್ ಹೊಯ್ಸಳʼ ಸಿನಿಮಾದಲ್ಲಿ ಮೂವರು ಖಳನಾಯಕರಿದ್ದರೂ ನೆನಪಿನಲ್ಲಿ ಉಳಿದುಕೊಳ್ಳುವುದು ʻಬಲಿʼ ಎಂಬ ಪಾತ್ರ. ಬಲಿ ಪಾತ್ರದಲ್ಲಿ ನಟ ನವೀನ್ ಕಾಣಿಸಿಕೊಂಡಿದ್ದು, ಉತ್ತಮ ನಟನೆಯ ಮೂಲಕ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಒಟ್ನಲ್ಲಿ ಸ್ಯಾಂಡಲ್‌ವುಡ್‌ನಲ್ಲಿ ತೆರೆಗೆ ಬಂದಿರುವ ಮತ್ತೊಂದು ಅದ್ಭುತ ಸಿನಿಮಾ ʻಗುರುದೇವ್ ಹೊಯ್ಸಳʼ ಅಂದ್ರೆ ತಪ್ಪಾಗಲಿಕ್ಕಿಲ್ಲ.. ಎಲ್ಲರೂ ಥಿಯೇಟರ್‌ನಲ್ಲೇ ಹೋಗಿ ಸಿನಿಮಾ ನೋಡಿ.. ಕನ್ನಡ ಚಿತ್ರರಂಗವನ್ನ ಬೆಳೆಸಿ..

			
                                
                                
                                



