ನಾಯಕ ಹಾರ್ದಿಕ್ ಪಟೇಲ್ ಮತ್ತು ಡೇವಿಡ್ ಮಿಲ್ಲರ್ ಅವರ ಸಿಡಿಲಬ್ಬರದ ಆಟದಿಂದ ಗುಜರಾತ್ ಟೈಟಾನ್ಸ್ ತಂಡ 7 ವಿಕೆಟ್ ಗಳಿಂದ ರಾಜಸ್ಥಾನ್ ರಾಯಲ್ಸ್ ತಂಡವನ್ನು ಸೋಲಿಸಿ ಐಪಿಎಲ್ ಪ್ರವೇಶಿಸಿದ ಮೊದಲ ಪ್ರಯತ್ನದಲ್ಲೇ ಫೈನಲ್ ತಲುಪಿದ ಸಾಧನೆ ಮಾಡಿತು.
ಕೋಲ್ಕತಾದಲ್ಲಿ ಮಂಗಳವಾರ ನಡೆದ ಕ್ವಾಲಿಫೈಯರ್-1 ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಒಡ್ಡಿದ 189 ರನ್ ಗಳ ಕಠಿಣ ಗುರಿ ಬೆಂಬತ್ತಿದ ಗುಜರಾತ್ ಟೈಟಾನ್ಸ್ 3 ಎಸೆತಗಳು ಬಾಕಿ ಇರುವಂತೆಯೇ 3 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು.
ಪಂದ್ಯದ ಕೊನೆಯ ಓವರ್ ನಲ್ಲಿ 16 ರನ್ ಗಳಿಸಬೇಕಿದ್ದ ಸಂದರ್ಭದಲ್ಲಿ ಪ್ರಸಿದ್ಧ ಕೃಷ್ಣ ಅವರ ಮೊದಲ ಮೂರು ಎಸೆತಗಳನ್ನೂ ಡೇವಿಡ್ ಮಿಲ್ಲರ್ ಸಿಕ್ಸರ್ ಬಾರಿಸಿ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರು.
ಡೇವಿಡ್ ಮಿಲ್ಲರ್ ಮತ್ತು ನಾಯಕ ಹಾರ್ದಿಕ್ ಪಟೇಲ್ ಮುರಿಯದ 4ನೇ ವಿಕೆಟ್ ಗೆ 10 ಓವರ್ ಗಳಲ್ಲಿ 106 ರನ್ ಜೊತೆಯಾಟ ನಿಭಾಯಿಸಿದರು. ಮಿಲ್ಲರ್ 38 ಎಸೆತಗಳಲ್ಲಿ 3 ಬೌಂಡರಿ ಮತ್ತು 5 ಸಿಕ್ಸರ್ ಸೇರಿದ 68 ರನ್ ಸಿಡಿಸಿದರೆ, ಹಾರ್ದಿಕ್ ಪಟೇಲ್ 27 ಎಸೆತಗಳಲ್ಲಿ 5 ಬೌಂಡರಿ ಸಹಾಯದಿಂದ 40 ರನ್ ಬಾರಿಸಿ ಔಟಾಗದೇ ಉಳಿದರು.