ಬಂಡವಾಳಶಾಹಿ ಅರ್ಥವ್ಯವಸ್ಥೆಯಲ್ಲಿ ಶ್ರಮ ಮಾರುಕಟ್ಟೆಯಲ್ಲಿನ ಒಂದು ಸರಕಿನಂತಾದರೆ, ಶ್ರಮದ ಮೌಲ್ಯವೂ ಮಾರುಕಟ್ಟೆಯ ವ್ಯತ್ಯಯಗಳಿಗನುಸಾರವಾಗಿಯೇ ನಿರ್ಧಾರವಾಗುತ್ತದೆ. ತನ್ನ ದೈಹಿಕ ಮತ್ತು ಬೌದ್ಧಿಕ ಶ್ರಮವನ್ನು ಮಾರಿ ಜೀವನ ನಡೆಸುವ ಶ್ರಮಿಕ ಇವೆರಡರ ನಡುವಿನ ವಾಹಕವಾಗಿ ಮಾತ್ರ ಕಾಣುತ್ತಾನೆ. ಶ್ರಮಿಕನ ಜೀವನ ಮತ್ತು ಜೀವನೋಪಾಯದ ಪ್ರಶ್ನೆಗಳು, ವ್ಯಕ್ತಿಗತ ಅಥವಾ ಸಾಮುದಾಯಿಕ ಬದುಕಿನ ವಾಸ್ತವಗಳಿಂದ ವಿಮುಖವಾಗಿ, ಬಂಡವಾಳದ ಚಲನೆ, ಹರಿವು ಮತ್ತು ಅದರಿಂದ ಉಂಟಾಗುವ ಲಾಭದ ಸುತ್ತ ನಿರ್ಧರಿಸಲ್ಪಡುತ್ತದೆ. ದೈಹಿಕ ಶ್ರಮವನ್ನು ಆರ್ಥಿಕ ಬೆಳವಣಿಗೆಯಲ್ಲಿ ಮತ್ತು ಸಂಪತ್ತಿನ ಶೇಖರಣೆಯಲ್ಲಿ ಅನಿವಾರ್ಯ ಸರಕು ಎಂದೇ ಪರಿಗಣಿಸುವ ಬಂಡವಾಳಶಾಹಿ ವ್ಯವಸ್ಥೆ, ಬೌದ್ಧಿಕ ಶ್ರಮವನ್ನು ಈ ಸಂಪತ್ತಿನ ಮೌಲಿಕ ಸಂರಕ್ಷಣೆ ಮತ್ತು ಪಾಲನೆಯ ಸರಕಿನಂತೆ ಭಾವಿಸುತ್ತದೆ. ಹಾಗಾಗಿ ಒಂದು ಸಾಮಾಜಿಕ ವ್ಯವಸ್ಥೆಯ ಮೇಲೆ ಬಂಡವಾಳದ ಹಿಡಿತ ಬಿಗಿಯಾಗುತ್ತಿದ್ದಂತೆಲ್ಲಾ ದೈಹಿಕ ಮತ್ತು ಬೌದ್ಧಿಕ ಶ್ರಮಗಳ ನಡುವೆ ಇರಬಹುದಾದ ಮೌಲ್ಯದ ಅಂತರ ಕ್ಷೀಣಿಸುತ್ತಾ ಹೋಗುತ್ತದೆ.
ಈ ಪ್ರಕ್ರಿಯೆಯಲ್ಲಿ ದುಡಿಮೆಯನ್ನೇ ನಂಬಿ ಬದುಕುವ ದುಡಿಯುವ ವರ್ಗಗಳು ತಮ್ಮ ಜೀವನ ಮತ್ತು ಜೀವನೋಪಾಯದ ಪ್ರಶ್ನೆಯನ್ನು ಸಮನಾಗಿ ಎದುರಿಸುತ್ತವೆ. ಎಲ್ಲ ಸಾಮಾಜಿಕಾರ್ಥಿಕ ವಲಯಗಳನ್ನೂ ವಾಣಿಜ್ಯೀಕರಣಗೊಳಿಸುವ ಮೂಲಕ ಬೌದ್ಧಿಕ ಬುದ್ಧಿಮತ್ತೆಯನ್ನೂ ಸಂಪತ್ತಿನ ವೃದ್ಧಿಗಾಗಿ ಬಳಸಬೇಕಾದ ಒಂದು ಕಚ್ಚಾ ಸರಕಿನಂತೆ ಮಾರುಕಟ್ಟೆ ಪರಿಗಣಿಸುತ್ತದೆ. ಬಂಡವಾಳ ಹೂಡಿಕೆ ಮತ್ತು ಅದರಿಂದ ಪಡೆಯಬಹುದಾದ ಲಾಭಾಂಶವೇ ಪ್ರಧಾನವಾಗುವುದರಿಂದ ಉತ್ಪಾದನೆ ಮತ್ತು ತಯಾರಿಕೆಯ ವಲಯಗಳಲ್ಲಿರುವಂತೆಯೇ ಬೌದ್ಧಿಕ ವಲಯದಲ್ಲೂ ಸಹ ಹಣಕಾಸಿನ ಹರಿವು ಮತ್ತು ವ್ಯಾಪ್ತಿ ಮಾರುಕಟ್ಟೆಯ ಅವಶ್ಯಕತೆಗಳನ್ನು ಪೂರೈಸುವ ನಿಟ್ಟಿನಲ್ಲೇ ನಿಷ್ಕರ್ಷೆಗೊಳಗಾಗುತ್ತದೆ. ಕಾರ್ಖಾನೆಯಲ್ಲಿ ದುಡಿಯುವ ಕಾರ್ಮಿಕ, ಸೇವಾ ವಲಯದಲ್ಲಿ ದುಡಿಯುವ ಅಧಿಕಾರಿ ಮತ್ತು ಶೈಕ್ಷಣಿಕ ವಲಯದಲ್ಲಿ ದುಡಿಯುವ ಬೋಧಕ ಈ ಮೂರೂ ವರ್ಗಗಳು ಮಾರುಕಟ್ಟೆಯ ಉತ್ಪಾದಕ ವಾಹಕಗಳಾಗಿಬಿಡುತ್ತಾರೆ.
1980ರಲ್ಲಿ ಇಂದಿರಾಗಾಂಧಿಯ ಮರುಪ್ರವೇಶದ ನಂತರ ಭಾರತದಲ್ಲಿ ಸುಭದ್ರ ನೆಲೆ ಕಂಡುಕೊಂಡ ಬಂಡವಾಳಶಾಹಿ ಅರ್ಥವ್ಯವಸ್ಥೆ ಮತ್ತು 1991ರ ನಂತರದ ಜಾಗತೀಕರಣ ಪ್ರಕ್ರಿಯೆ ಇಂದು ನಾಲ್ಕನೆಯ ಔದ್ಯೋಗಿಕ ಕ್ರಾಂತಿಯ ಹೊಸ್ತಿಲಲ್ಲಿದ್ದು, ನವ ಉದಾರವಾದದ ಆರ್ಥಿಕ ನೀತಿಗಳು ದೇಶದ ಸಂಪತ್ತು ಮತ್ತು ಸಂಪನ್ಮೂಲಗಳ ಒಡೆತನವನ್ನು ನಿರ್ಧರಿಸುತ್ತಿವೆ. ಈ ಪ್ರಕ್ರಿಯೆಯಲ್ಲಿ ಬೌದ್ಧಿಕ ಶ್ರಮವೂ ಸಹ ದೈಹಿಕ ಶ್ರಮದಂತೆಯೇ ಮಾರುಕಟ್ಟೆಯ ವ್ಯತ್ಯಯಗಳಿಗನುಸಾರವಾಗಿ ತಮ್ಮ ಮೌಲ್ಯದ ಏರುಪೇರುಗಳನ್ನು ಎದುರಿಸಬೇಕಾಗುತ್ತದೆ. ಡಿಜಿಟಲೀಕರಣದ ಯುಗದಲ್ಲಿ ಸೇವಾ ವಲಯವನ್ನೇ ಸಂಪನ್ಮೂಲ ವೃದ್ಧಿಯ ಪ್ರಧಾನ ಆಕರವಾಗಿ ಪರಿಗಣಿಸಲಾಗುವುದರಿಂದ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿನ ಬೌದ್ಧಿಕ ಶ್ರಮವೂ ಸಹ ಸೇವಾ ವಲಯದ ಒಂದು ಭಾಗವಾಗಿ ತಂತ್ರಜ್ಞಾನಾಧಾರಿತ ಸರಕುಗಳಾಗುತ್ತವೆ.
ಶಿಕ್ಷಣ ಮತ್ತು ಆರೋಗ್ಯ ಈ ಎರಡೂ ವಲಯಗಳು ಸಮಾಜದ ಬೌದ್ಧಿಕ ಮತ್ತು ದೈಹಿಕ ಸ್ವಾಸ್ಥ್ಯವನ್ನು ಸಂರಕ್ಷಿಸುವ ಪ್ರಧಾನ ಸಾಧನಗಳು. ಜನಸಾಮಾನ್ಯರಲ್ಲಿ ಸಾಮಾಜಿಕ ಜಾಗೃತಿಯನ್ನು ಮೂಡಿಸಲು ಮತ್ತು ಸುತ್ತಲಿನ ವಿದ್ಯಮಾನಗಳ ಬಗ್ಗೆ ತಿಳುವಳಿಕೆಯನ್ನು ಮೂಡಿಸಲು ಅವಶ್ಯವಾಗಿ ನೆರವಾಗುವ ಶಿಕ್ಷಣ ವ್ಯವಸ್ಥೆಯು, ದೇಶದ ಬೌದ್ಧಿಕ ಸಂಪತ್ತನ್ನು ಕಾಪಾಡುತ್ತಲೇ ಹೊಸ ಪೀಳಿಗೆಯಲ್ಲಿ ನವ ಚೈತನ್ಯ ತುಂಬುವಂತಹ ಜ್ಞಾನ ಸಂಪನ್ಮೂಲಗಳನ್ನು ವೃದ್ಧಿಸುವ ಒಂದು ಭೂಮಿಕೆಯಾಗಿರಬೇಕು. ಹಾಗಾಗಿ ಶೈಕ್ಷಣಿಕ ವಲಯದಲ್ಲಿ ಹೂಡಲಾಗುವ ಬಂಡವಾಳಕ್ಕೆ ವಾಣಿಜ್ಯೋದ್ದೇಶಗಳಿಗಿಂತಲೂ ಹೆಚ್ಚು ಜ್ಞಾನಾಭಿವೃದ್ಧಿಯ ಚಿಂತನೆಗಳು ಇರಬೇಕಾಗುತ್ತದೆ. ಸಮಾಜವಾದಿ ಆರ್ಥಿಕ ಚಿಂತನೆಯಲ್ಲಿ ಶಿಕ್ಷಣ ಎನ್ನುವುದು ಸಮ ಸಮಾಜವನ್ನು ರೂಪಿಸುವ ಒಂದು ಅಸ್ತ್ರ ಎಂದೇ ಪರಿಗಣಿಸಲಾಗುತ್ತದೆ. ಹಾಗಾಗಿಯೇ ಆಡಳಿತ ವ್ಯವಸ್ಥೆಯನ್ನು ನಿರ್ವಹಿಸುವ ಸರ್ಕಾರಗಳು ಶೈಕ್ಷಣಿಕ ವಲಯವನ್ನು ಆದ್ಯತಾ ವಲಯ ಎಂದೇ ಪರಿಗಣಿಸಿ, ಲಾಭಾಂಶದ ಹಂಗಿಲ್ಲದ ಬಂಡವಾಳ ಹೂಡಿಕೆಗೆ ಮುಂದಾಗಬೇಕಾಗುತ್ತದೆ.
ಆದರೆ ಬಂಡವಾಳಶಾಹಿ ಅರ್ಥವ್ಯವಸ್ಥೆಯನ್ನು ಅಪ್ಪಿಕೊಂಡು, ಹಣಕಾಸು ಬಂಡವಾಳದ ಆಧಿಪತ್ಯದಲ್ಲಿ ನವ ಉದಾರವಾದಿ ಅರ್ಥ ವ್ಯವಸ್ಥೆಯತ್ತ ಮುನ್ನುಗ್ಗುತ್ತಿರುವ ಭಾರತ ಇಂದು ಶಿಕ್ಷಣ ಮತ್ತು ಆರೋಗ್ಯ ವಲಯಗಳನ್ನು ಮಾರುಕಟ್ಟೆಯ ಶಕ್ತಿಗಳಿಗೆ ಒಪ್ಪಿಸಲು ಸಜ್ಜಾಗಿದೆ. ಕಾರ್ಪೋರೇಟ್ ಬಂಡವಾಳ ನಿಯಂತ್ರಿತ ಶೈಕ್ಷಣಿಕ ವಲಯಗಳಿಗೆ ಹೆಚ್ಚಿನ ಉತ್ತೇಜನ ನೀಡುವ ಮೂಲಕ ಶಿಕ್ಷಣವನ್ನು ಜ್ಞಾನಾರ್ಜನೆಯ ನೆಲೆಯಿಂದ ಬೇರ್ಪಡಿಸಿ ಲಾಭಗಳಿಕೆಯ ಉದ್ಯಮವನ್ನಾಗಿ ಮಾಡಲು ಭಾರತ ಸರ್ಕಾರ ಮುಂದಾಗಿದೆ. 1980ರಿಂದಲೇ ಆರಂಭವಾದ ಶಿಕ್ಷಣ ಕ್ಷೇತ್ರದ ವಾಣಿಜ್ಯೀಕರಣ ಪ್ರಕ್ರಿಯೆಗೆ ಈಗ ಅಂತಿಮ ಸ್ವರೂಪ ನೀಡಲಾಗುತ್ತಿದ್ದು, ಪೂರ್ವ ಪ್ರಾಥಮಿಕ ಹಂತದಿಂದ ಅತ್ಯುನ್ನತ ಶಿಕ್ಷಣದವರೆಗೆ ಶೈಕ್ಷಣಿಕ ವಲಯ ಕಾರ್ಪೋರೇಟೀಕರಣ ಪ್ರಕ್ರಿಯೆಗೊಳಗಾಗುತ್ತಿದೆ. ಈ ಪ್ರಕ್ರಿಯೆಯ ಒಂದು ದುರಂತ ಆಯಾಮವನ್ನು ಅತಿಥಿ ಉಪನ್ಯಾಸಕರ ಸಮಸ್ಯೆಗಳಲ್ಲಿ ಗುರುತಿಸಬಹುದಾಗಿದೆ.

ಬೋಧಕ ವೃತ್ತಿಯ ಔದ್ಯೋಗೀಕರಣ
14 ವರ್ಷ ವಯಸ್ಸಿನವರೆಗೂ ಎಲ್ಲ ಮಕ್ಕಳಿಗೂ ಉಚಿತ ಸಾರ್ವತ್ರಿಕ ಪ್ರಾಥಮಿಕ ಶಿಕ್ಷಣ ನೀಡುವುದು ಭಾರತದ ಸಂವಿಧಾನದ ಮೂಲ ಆಶಯವಾದರೂ, ಈವರೆಗಿನ 74 ವರ್ಷಗಳಲ್ಲಿ ಯಾವುದೇ ಸರ್ಕಾರವೂ ಈ ಧ್ಯೇಯವನ್ನು ಸಾಕಾರಗೊಳಿಸಲು ಮುಂದಾಗಿಲ್ಲ. ಭಾರತದ ಜಾತಿ ವ್ಯವಸ್ಥೆ ಸೃಷ್ಟಿಸಿರುವ ತಾರತಮ್ಯಗಳು ಮತ್ತು ಶೋಷಣೆಯ ನೆಲೆಗಳನ್ನು ಧ್ವಂಸ ಮಾಡಲು ಶಿಕ್ಷಣವೊಂದೇ ಮಾರ್ಗ ಎಂಬ ಉದ್ದೇಶದಿಂದಲೇ ಡಾ ಬಿ ಆರ್ ಅಂಬೇಡ್ಕರ್ ಮತ್ತಿತರ ನೇತಾರರು ಶಿಕ್ಷಣಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಿದ್ದರು. ಒಂದು ಸ್ವಸ್ಥ-ಸೌಹಾರ್ದಯುತ-ಸಮಾನತೆಯ ಸಮಾಜವನ್ನು ರೂಪಿಸುವ ನಿಟ್ಟಿನಲ್ಲಿ ಶಿಕ್ಷಣ ಬಹುಮುಖ್ಯ ಆಕರವಾಗಿ ಕಾರ್ಯನಿರ್ವಹಿಸುತ್ತದೆ. ಯಾವುದೇ ದೇಶದ ಶೈಕ್ಷಣಿಕ ನೀತಿಯನ್ನು ಅಲ್ಲಿನ ಸಾಮಾಜಿಕ ಪರಿಸರ ಮತ್ತು ಸಾಂಸ್ಕೃತಿಕ ನೆಲೆಯನ್ನು ಆಧರಿಸಿ ರೂಪಿಸಬೇಕಾಗುತ್ತದೆ. ಹಾಗಾಗಿಯೇ ಭಾರತದ ಸಂವಿಧಾನದಲ್ಲೂ ಸಹ ಭಾರತದ ಜನಪದೀಯ ಬಹುಸಂಸ್ಕೃತಿಯ ನೆಲೆಗಳನ್ನು ಗಟ್ಟಿಗೊಳಿಸುವ ರೀತಿಯಲ್ಲಿ ಜಾತ್ಯತೀತ ಪರಂಪರೆಯ ಶಿಕ್ಷಣ ವ್ಯವಸ್ಥೆಯನ್ನು ರೂಪಿಸಲಾಗಿತ್ತು.
ಆಧುನಿಕ ತಂತ್ರಜ್ಞಾನ ಮತ್ತು ತಾಂತ್ರಿಕ ಅವಿಷ್ಕಾರಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವುದರ ಮೂಲಕವೇ ಭಾರತದ ಅತ್ಯುನ್ನತ ಶಿಕ್ಷಣ ಸಂಸ್ಥೆಗಳನ್ನೂ ಸ್ಥಾಪಿಸಲಾಗಿತ್ತು. ಸ್ವಾತಂತ್ರ್ಯಾನಂತರದ ಮೊದಲೆರಡು ದಶಕಗಳಲ್ಲಿ ದೇಶಾದ್ಯಂತ ಸ್ಥಾಪಿಸಲಾದ ಐಐಟಿ, ಐಐಎಂ ಮತ್ತು ಏಮ್ಸ್‍ನಂತಹ ಉನ್ನತ ಶಿಕ್ಷಣ ಸಂಸ್ಥೆಗಳು ಭಾರತದ ಬೌದ್ಧಿಕ ಸಂಪತ್ತನ್ನು ಹೆಚ್ಚಿಸುವ ಪ್ರಮುಖ ವಾಹಿನಿಗಳಾದವು. ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಪ್ರೋತ್ಸಾಹಿಸುವ ಐಐಎಸ್‍ಸಿ, ಇಸ್ರೋ ಮುಂತಾದ ಸಂಸ್ಥೆಗಳು ಭಾರತದಲ್ಲಿ ವಿಜ್ಞಾನ, ಸಂಶೋಧನೆ ಮತ್ತು ಹೊಸ ಅವಿಷ್ಕಾರಗಳಿಗೆ ಸುಭದ್ರ ಬುನಾದಿ ಒದಗಿಸಿದ್ದವು. ಇಂದು ಭಾರತ ಚಂದ್ರಾಯಣದ ಕನಸು ಸಾಕಾರಗೊಳ್ಳುವುದನ್ನು ಕಾಣುತ್ತಿದ್ದರೆ ಅದಕ್ಕೆ ಕಾರಣ ಈ ನೀತಿಗಳೇ ಆಗಿವೆ. ಕ್ಷುದ್ರ ರಾಜಕೀಯ ಕಾರಣಗಳಿಗಾಗಿ ಪ್ರಧಾನಮಂತ್ರಿಗಳಾದಿಯಾಗಿ ಅನೇಕರು, ಮೊದಲ 25 ವರ್ಷಗಳಲ್ಲಿ ಏನೂ ಸಾಧಿಸಿಲ್ಲ ಎಂದು ಹೇಳುತ್ತಿದ್ದರೂ, ವಾಸ್ತವ ಕಣ್ಣೆದುರಿನಲ್ಲೇ ಇದೆ.
ಇದೇ ಅವಧಿಯಲ್ಲೇ ಭಾರತದಲ್ಲಿ ಸಾರ್ವತ್ರಿಕ ಶಿಕ್ಷಣದ ತಳಪಾಯವನ್ನೂ ಭದ್ರಪಡಿಸುವ ನೀತಿಯನ್ನು ಅನುಸರಿಸಲಾಯಿತು. ಆದರೆ ಸಂವಿಧಾನದ ಅನುಚ್ಚೇದ 21 ಎ ಅನುಸಾರ ಭಾರತದಲ್ಲಿ 14 ವರ್ಷದವರೆಗಿನ ಎಲ್ಲ ಮಕ್ಕಳಿಗೂ ಉಚಿತ, ಕಡ್ಡಾಯ, ಸಾರ್ವತ್ರಿಕ ಶಿಕ್ಷಣ ನೀಡಬೇಕು ಎಂದು ಹೇಳಲಾಗಿದ್ದರೂ, ಶಿಕ್ಷಣವನ್ನು ಮೂಲಭೂತ ಹಕ್ಕು ಎಂದು ಪರಿಗಣಿಸಿರಲೇ ಇಲ್ಲ. ಈ ಲೋಪವನ್ನು ಸರಿಪಡಿಸಲು ಆರು ದಶಕಗಳೇ ಬೇಕಾದವು. 2009ರಲ್ಲಿ ಯುಪಿಎ ಸರ್ಕಾರ ಶಿಕ್ಷಣ ಹಕ್ಕು ಕಾಯ್ದೆಯನ್ನು ಜಾರಿಗೊಳಿಸುವ ಮೂಲಕ ಶಿಕ್ಷಣ ಮೂಲಭೂತ ಹಕ್ಕು ಎಂದು ಘೋಷಿಸಿತ್ತು. ವಿಶ್ವದಲ್ಲಿ 135 ದೇಶಗಳಲ್ಲಿ ಮಾತ್ರವೇ ಶಿಕ್ಷಣವನ್ನು ಮೂಲಭೂತ ಹಕ್ಕು ಎಂದು ಪರಿಗಣಿಸಲಾಗುತ್ತದೆ. ಆದರೆ ಈ ಕಾಯ್ದೆಯನ್ನು ರೂಪಿಸುವ ವೇಳೆಗೆ ಶಿಕ್ಷಣ ಸರ್ಕಾರದ ಆದ್ಯತಾ ಕ್ಷೇತ್ರವಾಗಿ ಉಳಿದಿರಲಿಲ್ಲ. 1980ರಿಂದಲೇ “ ಶಿಕ್ಷಣ ನೀಡುವುದು ಸರ್ಕಾರದ ಕೆಲಸ ಅಲ್ಲ ” ಎನ್ನುವ ಅಘೋಷಿತ ನೀತಿಯನ್ನು ಭಾರತದ ಸರ್ಕಾರಗಳು ಜಾರಿಗೊಳಿಸಲಾರಂಭಿಸಿದ್ದವು.
ಶಿಕ್ಷಣ ಕ್ಷೇತ್ರದ ಖಾಸಗೀಕರಣ ಮತು ಶೈಕ್ಷಣಿಕ ಕೇಂದ್ರಗಳ ಔದ್ಯಮೀಕರಣ ಪ್ರಕ್ರಿಯೆಗೆ 1991ರ ನಂತರ ಕ್ಷಿಪ್ರ ಗತಿಯಲ್ಲಿ ಚಾಲನೆ ನೀಡಲಾಗಿತ್ತು. ಪ್ರಾಥಮಿಕ ಹಂತದ ಶಾಲಾ ಮಕ್ಕಳಿಗೆ ಸಮೀಪದಲ್ಲೇ ಶಾಲಾ ಸೌಲಭ್ಯವನ್ನು ಒದಗಿಸುವ ನೀತಿಗೆ ತಿಲಾಂಜಲಿ ನೀಡಿ , ಪೂರ್ವ ಪ್ರಾಥಮಿಕ ಹಂತದಲ್ಲೂ ಖಾಸಗಿ ಶಾಲೆಗಳಿಗೆ ಹೆಚ್ಚಿನ ಆದ್ಯತೆ ನೀಡುವ ಶೈಕ್ಷಣಿಕ ನೀತಿಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಯಿತು. ಗ್ರಾಮೀಣ ಮಕ್ಕಳಿಗೆ ಉತ್ತಮ ಸೌಲಭ್ಯಗಳುಳ್ಳ ಗುಣಮಟ್ಟದ ಶಾಲೆಗಳನ್ನು ಒದಗಿಸುವ ಬದಲು ಸಮೀಪದ ನಗರ-ಪಟ್ಟಣಗಳಲ್ಲಿ ಖಾಸಗಿ ಶಾಲೆಗಳಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಯಿತು. 2009ರಲ್ಲಿ ಜಾರಿಯಾದ ಶಿಕ್ಷಣ ಹಕ್ಕು ನೀತಿಯ ಅನುಸಾರ ಶಿಕ್ಷಣವನ್ನು ಮೂಲಭೂತ ಹಕ್ಕು ಎಂದು ಪರಿಗಣಿಸಲಾಯಿತಾದರೂ, ಖಾಸಗಿ ಶಾಲೆಗಳಲ್ಲಿ ಶೇ 25ರಷ್ಟು ಅವಕಾಶವನ್ನು ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ನೀಡಬೇಕು ಎನ್ನುವ ನೀತಿಯ ಮೂಲಕ, ಖಾಸಗೀಕರಣಕ್ಕೆ ಅಧಿಕೃತ ಮನ್ನಣೆ ನೀಡಲಾಯಿತು. ಶಿಕ್ಷಣ ವ್ಯವಸ್ಥೆಯನ್ನು ಸಾರ್ವತ್ರೀಕರಿಸಬೇಕಿದ್ದ ಈ ಕಾಯ್ದೆ ಪರೋಕ್ಷವಾಗಿ ಖಾಸಗೀಕರಣ ನೀತಿಗೆ ಪುಷ್ಟಿ ನೀಡಲು ಸಹಾಯಕವಾಗಿತ್ತು.
ಈ ಪರಂಪರೆಯಲ್ಲೇ ಶಿಕ್ಷಕರನ್ನು-ಬೋಧಕ ಉಪನ್ಯಾಸಕರನ್ನು ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳುವ ಪದ್ಧತಿಯನ್ನೂ ಪೋಷಿಸಿಕೊಂಡು ಬರಲಾಗಿದೆ. 1980ರ ದಶಕದಿಂದಲೇ ದೇಶದ ವಿಶ್ವವಿದ್ಯಾಲಯಗಳಲ್ಲಿ ಅಧ್ಯಾಪಕರಿಗೆ ಖಾಯಂ ನೌಕರಿ ನೀಡದೆ ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳುವ ಪದ್ಧತಿಗೆ ಯುಜಿಸಿ ಸಹ ಅನುಮೋದನೆ ನೀಡಿತ್ತು. ಶಿಕ್ಷಣವನ್ನು ಸರ್ಕಾರದ ಆದ್ಯತಾವಲಯದಿಂದ ಹೊರತುಪಡಿಸಿದ ಪರಿಣಾಮ ಶೈಕ್ಷಣಿಕ ಸಂಸ್ಥೆಗಳ ನಿರ್ವಹಣೆ ಮತ್ತು ಬೋಧಕ ಸಿಬ್ಬಂದಿನ ನೇಮಕ ಪ್ರಕ್ರಿಯೆಗಳೂ ಸಹ ಮಾರುಕಟ್ಟೆಗನುಗುಣವಾಗಿ ಬದಲಾಗತೊಡಗಿದ್ದವು. ಉನ್ನತ ಶಿಕ್ಷಣ ಹಂತದಲ್ಲೂ ಸಹ ಉಪನ್ಯಾಸಕ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳುವ ಒಂದು ವ್ಯವಸ್ಥೆಗೆ ಗೌರವಯುತವಾಗಿ “ ಅತಿಥಿ ಉಪನ್ಯಾಸಕ-ಬೋಧಕ ” ಎಂದು ಹೆಸರಿಡಲಾಯಿತು. ಅಂದರೆ ಅವಶ್ಯಕತೆ ಇದ್ದಾಗ ಮಾತ್ರವೇ ಬಳಸಿಕೊಳ್ಳಬಹುದಾದ ಸರಕು ಮಾರುಕಟ್ಟೆಯ ತಂತ್ರವನ್ನು ಬೋಧಕರನ್ನು ನೇಮಿಸುವಾಗಲೂ ಅನುಸರಿಸಲಾಯಿತು.
ಡಿಜಿಟಲೀಕರಣ ಮತ್ತು ನಾಲ್ಕನೆಯ ಔದ್ಯೋಗಿಕ ಕ್ರಾಂತಿಯ ಹೊಸ್ತಿಲಲ್ಲಿರುವ ನವ ಭಾರತದಲ್ಲಿ ಈಗ ಶಿಕ್ಷಣವೂ ಮಾರುಕಟ್ಟೆಯ ಒಂದು ಭಾಗವಾಗಿದೆ. ಕೇಂದ್ರ ಸರ್ಕಾರ ಜಾರಿಗೊಳಿಸಿರುವ ರಾಷ್ಟ್ರೀಯ ಶಿಕ್ಷಣ ನೀತಿ- 2020ಯನ್ನು ಮಾರುಕಟ್ಟೆಯ ಅವಶ್ಯಕತೆಗಳಿಗನುಗುಣವಾಗಿಯೇ ರೂಪಿಸಲಾಗಿದ್ದು, ಡಿಜಿಟಲ್ ಆರ್ಥಿಕತೆ ಮತ್ತು ಹಣಕಾಸು ಬಂಡವಾಳದ ಮಾರುಕಟ್ಟೆ ವ್ಯವಸ್ಥೆಗೆ ಅವಶ್ಯವಾದ ಮಾನವ ಸರಕುಗಳನ್ನು ಉತ್ಪಾದಿಸಲು ಕಾರ್ಪೋರೇಟ್ ನಿಯಂತ್ರಿತ ಶಿಕ್ಷಣ ಸಂಸ್ಥೆಗಳಿಗೆ ಮುಕ್ತ ಅವಕಾಶ ನೀಡಲಾಗುತ್ತಿದೆ. ಶಿಕ್ಷಣ ವ್ಯವಸ್ಥೆ ಜ್ಞಾನಾರ್ಜನೆಯ ಮಾರ್ಗಗಳಿಂದ ವಿಮುಖವಾಗಿ ಬಂಡವಾಳ ಕ್ರೋಢೀಕರಣದ ವಾಹಕದಂತೆ ಕಾರ್ಯನಿರ್ವಹಿಸಲಾರಂಭಿಸುತ್ತದೆ. ಮಾರುಕಟ್ಟೆ ಅರ್ಥವ್ಯವಸ್ಥೆ ಸೃಷ್ಟಿಸಬಹುದಾದ ಅನಿಶ್ಚಿತತೆ, ಅಭದ್ರತೆ ಮತ್ತು ತಾರತಮ್ಯಗಳನ್ನೇ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯೂ ಎದುರಿಸಬೇಕಾಗುತ್ತದೆ. ರಾಜ್ಯದಲ್ಲಿ ಕಳೆದ ಹಲವು ವರ್ಷಗಳಿಂದ ಕಂಡಬರುತ್ತಿರುವ ಅತಿಥಿ ಉಪನ್ಯಾಸಕರ ಸಮಸ್ಯೆಯನ್ನು ಈ ಹಿನ್ನೆಲೆಯಲ್ಲೇ ವಿಶ್ಲೇಷಿಸಬೇಕಿದೆ.
ಮುಂದುವರೆಯುವುದು…..