
ರಾಜ್ಯದಲ್ಲಿ 200 ಯೂನಿಟ್ ಉಚಿತ ವಿದ್ಯುತ್ ಸೇರಿದಂತೆ ಕಾಂಗ್ರೆಸ್ ಸರ್ಕಾರ 5 ಗ್ಯಾರಂಟಿಗಳನ್ನು ಘೋಷಣೆ ಮಾಡಿದೆ. ಈ ಎಲ್ಲಾ ಯೋಜನೆಗಳು ರಾಜ್ಯದ ಜನರನ್ನು ತಲುಪುತ್ತಿವೆ. ಅದರಲ್ಲೂ ಎಲ್ಲರ ಮನೆಯಲ್ಲೂ ವಿದ್ಯುತ್ ಬಿಲ್ ಶೂನ್ಯ ಬರುವುತ್ತಿರುವುದಕ್ಕೆ ಜನರಲ್ಲಿ ಸಂತಸ ಮನೆ ಮಾಡಿದೆ. ಇನ್ನು ಕರೆಂಟ್ ಬಿಲ್ ಬಂದರೂ 50 ರೂಪಾಯಿ, 70 ರೂಪಾಯಿ ಬಂದರೂ ಜನರು ಖುಷಿಯಿಂದ ವಿದ್ಯುತ್ ಬಿಲ್ ಪಾವತಿ ಮಾಡ್ತಿದ್ದಾರೆ. ಆದರೆ ಕರ್ನಾಟಕ ಸರ್ಕಾರದ ಅಧೀನಕ್ಕೆ ಒಳಪಟ್ಟ ಸರ್ಕಾರಿ ಕಚೇರಿಗಳು ಹಾಗು ಬೀದಿದೀಪಗಳ ಬಿಲ್ ವಿದ್ಯುತ್ ಕಂಪನಿಗಳಿಗೆ ಬರ್ತಿಲ್ಲ. ಹೀಗಾಗಿ ಬಾಕಿ ಇರುವ ಬಿಲ್ ವಸೂಲಿ ಮಾಡಲು ಸರ್ಕಾರಕ್ಕೆ ಇಂಧನ ಇಲಾಖೆ ಪತ್ರ ಬರೆದಿದ್ದು, ಬಿಜೆಪಿ ಇದನ್ನೇ ಅಸ್ತ್ರ ಮಾಡಿಕೊಂಡು ಇಂಧನ ಇಲಾಖೆ ಬರ್ಬಾದ್ ಆಗಿದೆ ಎಂದು ವಾಗ್ದಾಳಿ ನಡೆಸಿತ್ತು.
ಕರ್ನಾಟಕವನ್ನು ಎಲ್ಲಾ ವಲಯಗಳಲ್ಲೂ ಸಂಪೂರ್ಣ ಬರ್ಬಾದ್ ಮಾಡುವುದೇ ಕಾಂಗ್ರೆಸ್ ಸರ್ಕಾರದ ಅಸಲಿ ಕರ್ನಾಟಕ ಮಾಡೆಲ್ ಎಂದಿದ್ದ ಬಿಜೆಪಿ, ಸುಭಿಕ್ಷವಾಗಿದ್ದ ಕರ್ನಾಟಕವನ್ನು ಒಂದು ವರ್ಷದಲ್ಲಿ ಹಾಳು ಮಾಡಿದ ಸಂಪೂರ್ಣ ಶ್ರೇಯ ಕಾಂಗ್ರೆಸ್ ಪಕ್ಷಕ್ಕೆ ಸಲ್ಲುತ್ತದೆ. ರಾಜ್ಯದ ಇಂಧನ ಇಲಾಖೆ ತನ್ನ ದೈನಂದಿನ ಚಟುವಟಿಕೆಗಳಿಗೂ ಸಹ ಹಣವಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿ, ಹೆಚ್ಚಿನ ಸಾಲ ಪಡೆಯಲು ಅನುಮತಿ ನೀಡಿ, ಇಲ್ಲವೇ ಸರ್ಕಾರದಿಂದ ಬರಬೇಕಿರುವ ಬಾಕಿಯನ್ನು ಪಾವತಿಸಿ ಎಂದು ಪತ್ರ ಬರೆದಿರುವುದು ಕಾಂಗ್ರೆಸ್ ಸರ್ಕಾರ ಕರ್ನಾಟಕವನ್ನು ಎಷ್ಟರ ಮಟ್ಟಿಗೆ ಹದಗೆಡಿಸಿದೆ ಎಂಬುದರ ಸ್ಪಷ್ಟ ನಿದರ್ಶನ ಎಂದಿತ್ತು.
ಸಿಎಂ ಸಿದ್ದರಾಮಯ್ಯನವರೇ ಕರ್ನಾಟಕ ಬರ್ಬಾದ್ ಆಗಿದೆ ಎಂಬುದು ನಿಮ್ಮ ಇಂಧನ ಇಲಾಖೆ ಬರೆದ ಪತ್ರದಿಂದಲೇ ಋಜುವಾತಾಗಿದೆ. ಸಿದ್ದರಾಮಯ್ಯನವರು, ಕರ್ನಾಟಕ ಕಂಡ ಅತ್ಯಂತ ದುರ್ಬಲ ಸಿಎಂ ಎನ್ನುವುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿಯ ಅಗತ್ಯವಿದೆಯೇ..? ಎಂದು ಪ್ರಶ್ನೆ ಮಾಡಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಹಾಕಿದ್ದ ಪೋಸ್ಟ್ಗೆ ಇಂಧನ ಸಚಿವ ಕೆ.ಜೆ ಜಾರ್ಜ್ ಖಾರವಾಗಿ ಉತ್ತರ ಕೊಟ್ಟಿದ್ದಾರೆ. ಸದಾ ಮೌನವಾಗಿ ತಮ್ಮ ಕಾರ್ಯವಾಯ್ತು, ತಾವಾಯ್ತು ಎಂದು ಇರುತ್ತಿದ್ದ ಸಚಿವ ಕೆ.ಜೆ ಜಾರ್ಜ್ ಬಿಜೆಪಿಗೆ ಅರ್ಥವಾಗುವ ರೀತಿಯಲ್ಲಿ ಬಿಡಿಸಿ ಹೇಳುವ ಯತ್ನ ಮಾಡಿದ್ದಾರೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ವಿದ್ಯುತ್ ಬಿಲ್ ವಸೂಲಿ ಮಾಡದೆ ಇದ್ದ ಕಾರಣ ಎಸ್ಕಾಂಗಳಿಗೆ ಸಮಸ್ಯೆಯಾಗಿದೆ. ಬಿಜೆಪಿ ಸರ್ಕಾರ ರಾಜ್ಯ ಸರ್ಕಾರದ ಬೊಕ್ಕಸ ಖಾಲಿ ಮಾಡಿದ್ದಲ್ಲದೆ, ಸ್ಥಳೀಯ ಸಂಸ್ಥೆಗಳನ್ನೂ ಖಾಲಿ ಮಾಡಿ ಬಿಲ್ ಬಾಕಿ ಉಳಿಸಿಕೊಂಡಿತ್ತು. ಎಸ್ಕಾಂಗಳನ್ನು ಸಾಲದ ಸುಳಿಗೆ ತಳ್ಳಿತ್ತು. ಈಗ ನಾವು ಅದರ ಪರಿಣಾಮ ಎದುರಿಸುತ್ತಿದ್ದೇವೆ ಎಂದಿದ್ದಾರೆ. ಕಳೆದ 6 ರಿಂದ 8 ವರ್ಷಗಳಿಂದ ವಿವಿಧ ಸರ್ಕಾರಿ ಇಲಾಖೆಗಳಿಂದ ಎಸ್ಕಾಂಗಳಿಗೆ ವಿದ್ಯುತ್ ಬಿಲ್ ಬಾಕಿ ಉಳಿದಿದ್ದು, ಇದರಿಂದ ಎಸ್ಕಾಂಗಳು ಸಂಕಷ್ಟದಲ್ಲಿದ್ದವು. ಸರ್ಕಾರಿ ಇಲಾಖೆಗಳು ಉಳಿಸಿಕೊಡಿರುವ ಬಾಕಿ ಮೊತ್ತವನ್ನು ಪಿಸಿಕೆಎಲ್ ಮೂಲಕ ಹೊಂದಿಸಿಕೊಳ್ಳುವ ಖಾತರಿ ಪಡೆದು ನಮ್ಮ ಸರ್ಕಾರ ಎಸ್ಕಾಂಗಳ ನೆರವಿಗೆ ಬಂದಿದೆ ಎಂದಿದ್ದಾರೆ. ಈಗ ಬೃಹದಾಕಾರವಾಗಿ ಬೆಳೆದಿರುವ ಬಾಕಿ ಸಮಸ್ಯೆಯನ್ನು ಬಗೆಹರಿಸಲು ಮುಂದಾದರೂ ಬಿಜೆಪಿ ಪಕ್ಷ ಅಡ್ಡಗಾಲು ಹಾಕುತ್ತಿದೆ. ರಾಜ್ಯದ ಹಿತದೃಷ್ಟಿಯಿಂದ ದ್ವೇಷ ರಾಜಕಾರಣ ಬದಿಗೊತ್ತಿ ಎಂದಷ್ಟೇ ಅವರಿಗೆ ಹೇಳಬಹುದು ಎಂದು ಚಾಟಿ ಬೀಸಿದ್ದಾರೆ.
ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಬಿಜೆಪಿ ನಾಯಕರ ನಿದ್ರೆಗೆಡಿಸಿದೆ ಎನ್ನುವುದು ಸತ್ಯಸಂಗತಿ. ಒಂದು ವೇಳೆ ಗ್ಯಾರಂಟಿ ಯೋಜನೆಯನ್ನು ಯಶಸ್ವಿಯಾಗಿ ಪೂರೈಸಿದರೆ ಮುಂದಿನ ಬಾರಿಯೂ ಅಧಿಕಾರ ಸಿಗುವುದು ಕಷ್ಟಸಾಧ್ಯ. ಈಗಾಗಲೇ ಗ್ಯಾರಂಟಿ ಬಗ್ಗೆ ನಕಾರಾತ್ಮಕ ಮಾತುಗಳನ್ನು ಆಡುತ್ತಿರುವ ಬಿಜೆಪಿ ಯಾವಾಗ ಗ್ಯಾರಂಟಿ ಯೋಜನೆ ನಿಲ್ಲಿಸ್ತಾರೆ ಎಂದು ಕಾಯುತ್ತಿದೆ. ಆದರೆ ಕಾಂಗ್ರೆಸ್ ಸರ್ಕಾರ ಅದರಲ್ಲೂ ಇಂಧನ ಇಲಾಖೆ ಗ್ಯಾರಂಟಿ ಯೋಜನೆಯನ್ನು ಪ್ರತಿಯೊಬ್ಬರಿಗೂ ತಲುಪಿಸುವ ಮೂಲಕ ಬಡವರಿಗೆ ಆಶಾದಾಯಕವಾಗಿದೆ. ಪ್ರತಿ ತಿಂಗಳು ಬಡವ ಬಲ್ಲಿಗ ಎನ್ನದೆ 200 ಯೂನಿಟ್ ಒಳಗೆ ಬಳಸುವ ಎಲ್ಲರಿಗೂ ಉಚಿತ ವಿದ್ಯುತ್ ಸಿಗುತ್ತಿದೆ. ಬಿಜೆಪಿ ಕಾರ್ಯಕರ್ತರು ಪಕ್ಷಕಾರಣಕ್ಕಾಗಿ ವಿರೋಧ ಮಾಡಬಹುದೇ ಹೊರತು, ಉಚಿತವನ್ನು ಎಲ್ಲೂ ತಿರಸ್ಕಾರ ಮಾಡಿಲ್ಲ ಅನ್ನೋದನ್ನು ಒಪ್ಪಲೇಬೇಕು. ಬಾಕಿ ವಸೂಲಿ ಮಾಡದಿದ್ದರೆ ಇಲಾಖೆ ನಡೆಯುವುದಾದರೂ ಹೇಗೆ..? ಇದನ್ನು ಬಿಜೆಪಿ ನಾಯಕರು ಅರ್ಥ ಮಾಡಿಕೊಳ್ಳಬೇಕು ಅಲ್ಲವೇ..?