ಆಗಸ್ಟ್ ಅಂತ್ಯಕ್ಕೆ ಅಮೆರಿಕ ತನ್ನ ಸೈನ್ಯವನ್ನು ಸಂಪೂರ್ಣವಾಗಿ ಅಫ್ಘಾನಿಸ್ತಾನದಿಂದ ಹಿಂದೆಗೆಯಲಿದೆ ಎಂದು ಘೋಷಿಸಿದ ನಂತರ ಅಫ್ಘಾನ್ ಮತ್ತೊಮ್ಮೆ ಅಂತರ್ಯುದ್ಧ ಪೀಡಿತ ದೇಶವಾಗಿದೆ. ಪತ್ರಕರ್ತರು, ಸೈನಿಕರು, ರಾಜತಾಂತ್ರಿಕರು ಸೇರಿದಂತೆ ಭಾರತೀಯರನ್ನೂ ಒಳಗೊಂಡು ಅನೇಕ ವಿದೇಶಿಯರು ಈಗಾಗಲೇ ತಾಲಿಬಾನ್ ದಾಳಿಗೆ ತುತ್ತಾಗಿದ್ದಾರೆ. ಅಫ್ಘಾನಿನ ಅನೇಕ ಪ್ರಾಂತ್ಯಗಳು ಮತ್ತೆ ತಾಲಿಬಾನ್ ವಶವಾಗಿದೆ ಎಂಬ ಸುದ್ದಿ ಪ್ರಸಾರವಾಗುತ್ತಿದ್ದಂತೆ ಭಾರತದಲ್ಲಿ ಆಶ್ರಯ ಪಡೆದಿರುವ ಅನೇಕ ಅಫ್ಘಾನ್ ನಿರಾಶ್ರಿತರು ಮತ್ತೆ ಆತಂಕಕ್ಕೆ ಒಳಗಾಗಿದ್ದಾರೆ.
ಅನೇಕ ಅಫ್ಘಾನ್ ನಿರಾಶ್ರಿತರು ದೆಹಲಿ ಮತ್ತದರ ಆಸುಪಾಸಿನ ಜಿಲ್ಲೆಗಳಲ್ಲಿ ವಾಸಿಸುತ್ತಿದ್ದಾರೆ. ಜೀವನೋಪಾಯಕ್ಕಾಗಿ ರೆಸ್ಟೋರೆಂಟ್ಗಳು, ಬೇಕರಿಗಳು ಮತ್ತು ಮಿಠಾಯಿ ಅಂಗಡಿಗಳನ್ನು ನಡೆಸುತ್ತಾರೆ. ಕಳೆದ ಕೆಲವು ವರ್ಷಗಳಿಂದ ನೂರಾರು ಅಫಘಾನ್ ಕುಟುಂಬಗಳು ಖಿರ್ಕಿ ಪ್ರದೇಶವನ್ನು ತಮ್ಮ ಮನೆಯನ್ನಾಗಿ ಮಾಡಿಕೊಂಡಿವೆ. ಆದರೆ ತಾಲಿಬಾನ್ ಅಫ್ಫಾನಿಸ್ತಾನದಲ್ಲಿ ತನ್ನ ನೆಲೆಯನ್ನು ವಿಸ್ತಿರಿಸುತ್ತಿರುವ ಬಗ್ಗೆ ಕೇಳಿ ಬರುತ್ತಿರುವ ಇತ್ತೀಚಿನ ವರದಿಗಳು ಅವರಲ್ಲಿ ಭಯ ಮತ್ತು ಆತಂಕವನ್ನುಂಟು ಮೂಡಿಸಿದೆ.
ಮೂರು ವರ್ಷಗಳ ಹಿಂದೆ ದೆಹಲಿಗೆ ಬಂದು ಜೀವನೋಪಾಯ ಕಂಡುಕೊಂಡಿರುವ ನಸೀಮ್ ಎಂಬ ಯುವಕ ” ಇಂತಹ ಸುದ್ದಿಗಳನ್ನು ಕೇಳಿದಾಗ ನಮಗೆ ಭಯವಾಗುತ್ತದೆ. ಈಶಾನ್ಯ ಅಫ್ಘಾನಿಸ್ತಾನದಲ್ಲಿರುವ ಪಂಜಶೀರ್ ಕಣಿವೆಯಲ್ಲಿ ಈಗಲೂ ಇರುವ ನನ್ನ ಹೆತ್ತವರ ಬಗ್ಗೆ ನಾನು ಯೋಚಿಸುತ್ತೇನೆ. ಈಗ ಆ ಪ್ರದೇಶ ಸುರಕ್ಷಿತವಾಗಿದ್ದರೂ, ಇತಿಹಾಸ ಮರುಕಳಿಸುವುದನ್ನು ನೋಡಲು ನಾನು ಬಯಸುವುದಿಲ್ಲ” ಎಂದು ಹೇಳಿರುವುದಾಗಿ ‘ದಿ ವೈರ್’ ವರದಿ ಮಾಡಿದೆ.
ಅಫ್ಘಾನಿಸ್ತಾನದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರಾಗಿರುವ ಹಿಂದೂ ಅಥವಾ ಸಿಖ್ ಧರ್ಮಕ್ಕೆ ಸೇರಿದ ಸಾವಿರಾರು ಅಫ್ಘಾನ್ ನಿರಾಶ್ರಿತರು ಕಳೆದ ಒಂದು ದಶಕದಲ್ಲಿ ಭಾರತವನ್ನು ತಮ್ಮ ಮನೆಯನ್ನಾಗಿಸಿಕೊಂಡಿದ್ದಾರೆ.
ವಿಶ್ವಸಂಸ್ಥೆಯ ನಿರಾಶ್ರಿತರ ಹೈ ಕಮೀಷನರ್ ಪ್ರಕಾರ, 2019 ರಲ್ಲಿ ಭಾರತದಲ್ಲಿ ಸರಿಸುಮಾರು 40,000 ನಿರಾಶ್ರಿತರು ಮತ್ತು ಆಶ್ರಯ ಬಯಸುವವರು ಆಶ್ರಯ ಕೇಳಿ ನೋಂದಾಯಿಸಿಕೊಂಡಿದ್ದರು. ಈ ನಿರಾಶ್ರಿತರಲ್ಲಿ 27%ರಷ್ಟು ಮಂದಿ ಅಫ್ಘಾನಿಸ್ತಾನದವರು ಮತ್ತು ಆ ಸಮುದಾಯವು ಆಶ್ರಯ ಬಯಸಿ ಬರುವವರಲ್ಲಿ ಎರಡನೇ ಅತಿದೊಡ್ಡ ಸಮುದಾಯವಾಗಿದೆ.
“ನಾವು ನಮ್ಮ ಯುದ್ಧದಿಂದ ಹಾನಿಗೊಳಗಾದ ದೇಶದಿಂದ ಸುರಕ್ಷತೆ ಮತ್ತು ಉತ್ತಮ ಜೀವನಕ್ಕಾಗಿ ಪಲಾಯನ ಮಾಡಿದ್ದೇವೆ. ನಮ್ಮ ಜೀವನ ಮತ್ತು ಮನೆಗಳನ್ನು ತ್ಯಜಿಸುವ ಹೋರಾಟಗಳ ಹೊರತಾಗಿಯೂ, ನಮ್ಮಲ್ಲಿ ಅನೇಕರು ಸಣ್ಣ ಉದ್ಯೋಗಗಳನ್ನು ಕಂಡುಕೊಂಡಿದ್ದಾರೆ ಅಥವಾ ತಮ್ಮದೇ ಆದ ವ್ಯಾಪಾರಗಳನ್ನು ತೆರೆದಿದ್ದಾರೆ ” ಎನ್ನುತ್ತಾರೆ ಟ್ರಾವೆಲ್ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿರುವ ಆದಿಲಾ ಭಶೀರ್ . “ಆದರೆ ಯಾವುದೇ ಭದ್ರತೆ ಇಲ್ಲ ಮತ್ತು ನಾಳೆ ಏನಾಗಬಹುದು ಎಂದು ಹೇಳಲು ಸಾಧ್ಯವಿಲ್ಲ” ಎಂದೂ ಅವರು ಆತಂಕ ವ್ಯಕ್ತಪಡಿಸುತ್ತಾರೆ.
ಅಫ್ಘಾನಿಸ್ತಾನದಲ್ಲಿ 20 ವರ್ಷಗಳ ಯುದ್ಧದ ನಂತರ ವಿದೇಶಿ ಪಡೆಗಳು ತಮ್ಮ ಸೈನ್ಯವನ್ನು ವಾಪಸ್ ಕರೆಸಿಕೊಂಡ ನಂತರ ಯುಎಸ್ ಬೆಂಬಲಿತ ಸರ್ಕಾರವನ್ನು ಸೋಲಿಸಿ ಕಠಿಣ ಇಸ್ಲಾಮಿಕ್ ಕಾನೂನನ್ನು ಪುನಃ ಜಾರಿಗೆ ತರಲು ತಾಲಿಬಾನ್ ಹೋರಾಡುತ್ತಿದೆ. ಕಳೆದ ಕೆಲವು ವಾರಗಳಲ್ಲಿ ದಂಗೆಕೋರರು ಇರಾನ್, ಪಾಕಿಸ್ತಾನ ಮತ್ತು ತುರ್ಕಮೆನಿಸ್ತಾನ್ ಜೊತೆಗಿನ ಅಫ್ಘಾನಿಸ್ತಾನದ ಗಡಿಯುದ್ದಕ್ಕೂ 14 ಕಸ್ಟಮ್ಸ್ ಪೋಸ್ಟ್ಗಳಲ್ಲಿ ಕನಿಷ್ಠ ಎಂಟು ಪೋಸ್ಟ್ಗಳನ್ನು ನಿಯಂತ್ರಣವನ್ನು ಪಡೆದುಕೊಂಡಿದ್ದಾರೆ.
ದೇಶದ ದಕ್ಷಿಣದ ಅತಿದೊಡ್ಡ ಪ್ರಾಂತ್ಯಗಳಲ್ಲಿ ಒಂದಾದ ಹೆಲ್ಮಂಡ್ ನಲ್ಲಿ 12 ಜಿಲ್ಲೆಗಳನ್ನು ತಾಲಿಬಾನ್ ವಶಪಡಿಸಿಕೊಂಡಿದೆ ಎಂಬ ವರದಿಗಳೂ ಇವೆ.
“ತಾಲಿಬಾನ್ ಅವರು ವಶಪಡಿಸಿಕೊಂಡ ಜಿಲ್ಲೆಗಳಲ್ಲಿ ಮಹಿಳೆಯರ ಮೇಲೆ ಕಠಿಣ ನಿರ್ಬಂಧಗಳನ್ನು ಹೇರುತ್ತಿದ್ದಾರೆ ಮತ್ತು ಶಾಲೆಗಳಿಗೆ ಬೆಂಕಿ ಹಚ್ಚುತ್ತಿದ್ದಾರೆ ಎಂಬ ವರದಿಗಳನ್ನು ನಾವು ಕೇಳುತ್ತೇವೆ. ಇದು ಹಳೆಯ ಕೆಟ್ಟ ದಿನಗಳನ್ನು ನೆನಪಿಸುತ್ತದೆ ” ಎಂದು ಫಾರ್ಮಟಿಕಲ್ ವರ್ಕರ್ ಆಗಿರುವ ವಾಜಮಾ ಅಬ್ದುಲ್ ಹೇಳಿರುವುದಾಗಿ ‘ದಿ ವೈರ್’ ವರದಿ ಮಾಡಿದೆ.
ಮೇ ತಿಂಗಳ ಆರಂಭದಿಂದಲೇ ಅಫ್ಘಾನಿಸ್ತಾನದಾದ್ಯಂತ ಹಿಂಸಾಚಾರವು ಹೆಚ್ಚಾಗಿದೆ. ತಾಲಿಬಾನ್ ದೇಶದ ದೊಡ್ಡ ಭಾಗಗಳಲ್ಲಿ ವ್ಯಾಪಕವಾದ ಆಕ್ರಮಣವನ್ನು ಪ್ರಾರಂಭಿಸಿತ್ತು. ಹೆಚ್ಚಿನ ಹೋರಾಟವೇ ಇಲ್ಲದೆ ಅತ್ಯಂತ ತ್ವರಿತವಾಗಿ ಗ್ರಾಮೀಣ ಜಿಲ್ಲೆಗಳನ್ನು ಅದು ವಶಪಡಿಸಿಕೊಂಡಿತ್ತು. ಆದರೆ ಲಷ್ಕರ್ ಗಾಹ್, ಕಂದಹಾರ್ ಮತ್ತು ಹೆರಾತ್ ಸೇರಿದಂತೆ ಪ್ರಾಂತೀಯ ರಾಜಧಾನಿಗಳನ್ನು ಹಾಗೂ ಪ್ರಮುಖ ನಗರಗಳನ್ನು ರಕ್ಷಿಸಲು ದೇಶದ ಮಿಲಿಟರಿ ಸಿದ್ಧತೆಗಳನ್ನು ಮಾಡುತ್ತಿದೆ.
ಕಳೆದ ಆರು ತಿಂಗಳಲ್ಲಿ ನಡೆದ ಸಂಘರ್ಷದ ಪರಿಣಾಮವಾಗಿ ದಾಖಲೆಯ ಸಂಖ್ಯೆಯ ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ವಿಶ್ವ ಸಂಸ್ಥೆ ಹೇಳಿದೆ.
ಈ ಹೋರಾಟವು ಅನೇಕ ಜನರನ್ನು ತಮ್ಮ ಮನೆಗಳನ್ನು ತೊರೆಯುವಂತೆ ಮಾಡಿದೆ ಮತ್ತು ಸುಮಾರು 3,00,000 ಅಫ್ಘಾನಿಸ್ಥಾನಿಗರನ್ನು ಸ್ಥಳಾಂತರಿಸಲಾಗಿದೆ.
ಭಾರತದಲ್ಲಿ ನೆಲೆಸಿರುವ ಹೆಚ್ಚಿನ ಅಫ್ಘಾನಿಸ್ಥಾನಿಗರಿಗೆ ಯುಎಸ್ ಅಥವಾ ಯುರೋಪಿನಲ್ಲಿ ಪುನರ್ವಸತಿ ಪಡೆದುಕೊಳ್ಳುವುದು ಅಂತಿಮ ಗುರಿಯಾಗಿದೆ. ಅಲ್ಲಿ ಹೆಚ್ಚಿನ ಆರ್ಥಿಕ ಅವಕಾಶಗಳಿವೆ ಎಂದು ಅವರು ನಂಬುತ್ತಾರೆ. ಆದರೆ COVID ಸಾಂಕ್ರಾಮಿಕದಿಂದಾಗಿ ಅನೇಕ ದೇಶಗಳು ಪ್ರಯಾಣ ಮತ್ತು ವಲಸೆಗೆ ತಮ್ಮ ಬಾಗಿಲುಗಳನ್ನು ಮುಚ್ಚಿವೆ. “ನನ್ನ ತಾಯ್ನಾಡಿಗೆ ಮರಳುವ ನನ್ನ ಅವಕಾಶಗಳು ಸಂಪೂರ್ಣವಾಗಿ ನಾಶವಾಗಿವೆ ಎಂದು ನನಗೆ ತಿಳಿದಿದೆ. ನನ್ನ ಸ್ನೇಹಿತರು ಮತ್ತು ಸಂಬಂಧಿಕರು ಸುರಕ್ಷಿತವಾಗಿದ್ದಾರೆ ಎಂದು ನಂಬಲು ನಾನು ಬಯಸುತ್ತೇನೆ ” ಎಂದು ರೊಸಾನಾ ಎಂಬ ವಿದ್ಯಾರ್ಥಿ ಅಂತರರಾಷ್ಟ್ರೀಯ ಬ್ರಾಡ್ಕಾಸ್ಟರ್ ಆಗಿರುವ DWಗೆ ತಿಳಿಸಿದ್ದಾರೆ ಎಂದು ‘ದಿ ವೈರ್’ ವರದಿ ಮಾಡಿದೆ.