ಸೆಪ್ಟೆಂಬರ್ 16 ರವರೆಗೆ ಭಾರತದ ಶೇ. 56 ರಷ್ಟು ನಾಗರಿಕರಿಗೆ ಕೋವಿಡ್ ಲಸಿಕೆಗಳನ್ನು ನೀಡಲಾಗಿದೆ. ಆದರೂ ಕೃತಕವಾಗಿ ಇಂಜೆಕ್ಟ್ ಮಾಡಲಾದ ರೋಗನಿರೋಧಕದ (Adverse Events Following Immunization (AEFI) ) ಪ್ರತಿಕೂಲ ಪರಿಣಾಮಗಳ ಕುರಿತ ಸರ್ಕಾರದ ಮೌಲ್ಯಮಾಪನ ವರದಿಯನ್ನು ಇನ್ನೂ ಬಿಡುಗಡೆ ಮಾಡಿಲ್ಲ.
“ಇಲ್ಲಿಯವರೆಗೆ ನಡೆದ ಸಭೆಗಳಿಗೆ ನಾವು ವರದಿಗಳನ್ನು ಸಲ್ಲಿಸಿದ್ದೇವೆ. ವರದಿ ಈಗ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಬಳಿ ಇದೆ. ವರದಿಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸುವ ಮೊದಲು ಭಾಷಾಂತರಿಸಬೇಕಾಗುತ್ತದೆ ಮತ್ತು ಪರಿಶೀಲಿಸಬೇಕಾಗುತ್ತದೆ. ಇದು ಹೆಚ್ಚಿನ ಸಮಯವನ್ನು ಬೇಡುವ ಕೆಲಸ ” ಎಂದು ಶಾರದಾ ವಿಶ್ವವಿದ್ಯಾಲಯದ ಪೀಡಿಯಾಟ್ರಿಕ್ಸ್ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥರಾಗಿರುವ ಡಾ. ಅನೀಜಾ ಅವರು ಹೇಳಿರುವುದಾಗಿ ‘ದಿ ಪ್ರಿಂಟ್’ ವರದಿ ಮಾಡಿದೆ.
ಕೋವಿನ್ (CoWin) ವೆಬ್‌ಸೈಟ್‌ನಲ್ಲಿ ದೈನಂದಿನ ಎಇಎಫ್‌ಐ ಸಂಖ್ಯೆಗಳನ್ನು ವರದಿ ಮಾಡಲಾಗಿದ್ದರೂ, ಅಂತಹ ಪ್ರಕರಣಗಳ ಪ್ರೊಫೈಲ್‌ಗಳನ್ನು ಅರ್ಥಮಾಡಿಕೊಳ್ಳಲು ಮೌಲ್ಯಮಾಪನ ವರದಿ ಮುಖ್ಯವಾಗಿದೆ.
ಜೂನ್ 30 ರವರೆಗೆ ಭಾರತವು 33,57,16,019 ಕೋವಿಡ್ ಲಸಿಕೆಗಳನ್ನು ನೀಡಿತ್ತು. ಈವರೆಗೆ ದೇಶದಲ್ಲಿ ಕೋವಿಡ್ ಲಸಿಕೆ ಪಡೆದುಕೊಂಡವರ ಸಂಖ್ಯೆ 76,57,17,137 ದಾಟಿದೆ. ಸರ್ಕಾರದ ಉತ್ತೇಜನೆಯೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಲಸಿಕೆ ಹಾಕಿಸಿಕೊಳ್ಳುತ್ತಿದ್ದಾರೆ. ಹಾಗಾಗಿ, AEFI ಯ ಪ್ರೊಫೈಲ್ ಮತ್ತು ವ್ಯಾಕ್ಸಿನೇಷನ್ ನಂತರದ ಸಾವುಗಳ ಬಗ್ಗೆ ನಿಗಾ ಇಡುವುದು, ಪರಿಸ್ಥಿತಿ ಹೇಗೆ ಬದಲಾಗುತ್ತಿದೆ ಎಂಬುದನ್ನು ಅಧ್ಯಯನ ಮಾಡುವುದು ಮುಖ್ಯವಾಗಿದೆ. (ಅಂದರೆ, ಲಸಿಕೆಗಳ ಅಡ್ಡ ಪರಿಣಾಮದ ಕುರಿತು ವಿವರವಾದ ಅಧ್ಯಯನದ ಅಗತ್ಯವಿದೆ)
ರಾಷ್ಟ್ರೀಯ ಕೋವಿಡ್ ಇಮ್ಯುನೈಸೇಶನ್ ಕಾರ್ಯಕ್ರಮವು ಈ ವರ್ಷ ಜನವರಿ 16 ರಂದು ಆರಂಭವಾದಾಗಿನಿಂದ, ವ್ಯಾಕ್ಸಿನ್ ಪಡೆದುಕೊಳ್ಳುವವರ ವಯಸ್ಸಿನ ಮಿತಿಯು ಗಮನಾರ್ಹವಾಗಿ ಬದಲಾಗಿದೆ. AEFI ದಾಖಲೆಗಳು ಸಾಮಾನ್ಯವಾಗಿ ವಯಸ್ಸಿನ ಮಿತಿ ಬದಲಾಗುವುದರೊಂದಿಗೆ ಬದಲಾಗುತ್ತದೆ. ಆದರೆ ವರದಿಗಳನ್ನು ಇನ್ನೂ ನವೀಕರಿಸದೇ ಇರುವುದರಿಂದ, ಆ ಮಾಹಿತಿಯು ಸಾರ್ವಜನಿಕ ಡೊಮೇನ್‌ನಲ್ಲಿ ಲಭ್ಯವಿಲ್ಲ.
“ವರದಿಗಳು ಬರುತ್ತಲೇ ಇರುತ್ತವೆ ಆದರೆ ವಿಶ್ಲೇಷಣೆಯು ಸಮಯ ತೆಗೆದುಕೊಳ್ಳುತ್ತದೆ. ಒಬ್ಬರ ಎಲ್ಲಾ ದಾಖಲೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಬೇಕು, ಕೆಲವೊಮ್ಮೆ ಆಸ್ಪತ್ರೆಗಳ ದಾಖಲೆಗಳ ಪರಿಶೀಲನೆಗಾಗಿ ಕರೆ ಮಾಡಬೇಕು. ಕೆಲವೊಮ್ಮೆ ನಮಗೆ ಬೇಕಿರುವ ದಾಖಲೆಗಳನ್ನು ಒದಗಿಸುವಲ್ಲಿ ಅವರು ಬಹಳ ಕರಾರುವಕ್ಕಾಗಿರುವುದಿಲ್ಲ, ಹಾಗಾಗಿ ವಿಶ್ಲೇಷಣೆಯು ತಡವಾಗುತ್ತದೆ. ಈ ರೀತಿಯ ವರದಿಗಳನ್ನು ಸಾರ್ವಜನಿಕಗೊಳಿಸಬಾರದು. ಏಕೆಂದರೆ ಜನರು ವರದಿಯಲ್ಲಿ ಉಲ್ಲೇಖಿಸಿದ ಅಂಶಗಳನ್ನು ತಪ್ಪಾಗಿ ಅರ್ಥೈಸಿಕೊಳ್ಳಬಹುದು, ಇದು ಮತ್ತಷ್ಟು ಅಪಾಯಕ್ಕೆ ಕಾರಣವಾಗಬಹುದು ” ಎಂದು ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ ಭಾರತದಲ್ಲಿ, ಎಇಎಫ್‌ಐಗಳ ವರದಿ ಮಾಡುವ ವಿಧಾನ ಸಮರ್ಪಕವಾಗಿಲ್ಲ ಎಂಬುದು ಸಹ ಸತ್ಯ.
“ಜನರು ಸಾಮಾನ್ಯವಾಗಿ AEFI ಗಳನ್ನು ವರದಿ ಮಾಡುವುದಿಲ್ಲ. ಸಮಿತಿಯ ಮುಂದೆ ಗಂಭೀರ AEFI ಮಾತ್ರ ಬರುತ್ತವೆ. ಸ್ವಲ್ಪ ಪ್ರಮಾಣದ ದೇಹದ ನೋವು, ಜ್ವರ ಇತ್ಯಾದಿಗಳು ಸಮಿತಿಯ ಗಮನಕ್ಕೆ ಬರುವುದಿಲ್ಲ. ನಾವು ಇತರ ಗಂಭೀರ ಘಟನೆಗಳ ಕಾರಣವನ್ನು ಸ್ಥಾಪಿಸಲು ನೋಡುತ್ತೇವೆ. ಸಮಿತಿಯ ಮುಂದೆ ಬಂದಿರುವ AEFI ಘಟನೆಗಳನ್ನು ವಿಶ್ಲೇಷಣೆ ಮಾಡುವಾಗ ವ್ಯಕ್ತಿಯ ಹಿನ್ನೆಲೆಯನ್ನೂ ಸಮಗ್ರವಾಗಿ ಪರಿಶೀಲಿಸಬೇಕಾಗುತ್ತದೆ. ಉದಾಹರಣೆಗೆ, ಒಬ್ಬ ವ್ಯಕ್ತಿಯು 80 ಅಥವಾ 90 ವರ್ಷ ವಯಸ್ಸಿನವರಾಗಿದ್ದು ಅವರಿಗೆ ಇತರ ಖಾಯಿಲೆಗಳೂ ಇದ್ದರೆ ಆ ವ್ಯಕ್ತಿಯ AEFI ಅನ್ನು ಪರಿಶೀಲಿಸುವಾಗ ಇತರ ಖಾಯಿಲೆಗಳನ್ನೂ ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ ” ಎಂದು ಸಮಿತಿಯ ಸದಸ್ಯರು ಅಭಿಪ್ರಾಯ ಪಟ್ಟಿದ್ದಾರೆ.
ಚುಚ್ಚುಮದ್ದು ನೀಡಿದ ಸ್ಥಳದಲ್ಲಿ ನೋವು, ಜ್ವರ, ತಲೆ ನೋವು ಮತ್ತು ದೇಹದ ಇತರ ಕಡೆ ನೋವುಂಟಾಗುವುದು ಲಸಿಕೆಯ ನಂತರದ ಕೆಲವು ಸಾಮಾನ್ಯ ಪರಿಣಾಮಗಳಾಗಿವೆ ಮತ್ತು ಅಂತಹ ಸಂದರ್ಭಗಳಲ್ಲಿ ಪ್ಯಾರಸಿಟಮಾಲ್ ಬಳಕೆಯನ್ನು ಸರ್ಕಾರ ಶಿಫಾರಸು ಮಾಡುತ್ತದೆ.
ಸಾರ್ವಜನಿಕ ವಲಯದ ಅವಗಾಹಣೆಗೆ ಇಟ್ಟಿರುವ ಕೊನೆಯ ವರದಿಯು 88 ಎಇಎಫ್‌ಐಗಳನ್ನು ವಿಶ್ಲೇಷಿಸಿದೆ. ಮತ್ತು 61 ಪ್ರಕರಣಗಳು ವ್ಯಾಕ್ಸಿನ್ ಗೆ ಪ್ರತಿಕೂಲವಾಗಿ ಪ್ರತಿಕ್ರಿಯಿಸಿರುವುದಾಗಿ ಹೇಳಿದೆ. ಈ 61 ಪ್ರಕರಣಗಳಲ್ಲಿ, 37 ಲಸಿಕೆ ಉತ್ಪನ್ನ ಸಂಬಂಧಿತ ಪ್ರತಿಕ್ರಿಯೆಗಳು, 22 ರೋಗನಿರೋಧಕ ಆತಂಕಕ್ಕೆ ಸಂಬಂಧಿಸಿದ ಪ್ರತಿಕ್ರಿಯೆಗಳು ಮತ್ತು ಎರಡು ರೋಗನಿರೋಧಕ ದೋಷ ಸಂಬಂಧಿತ ಪ್ರತಿಕ್ರಿಯೆಗಳು ಎಂದು ವರದಿ ಹೇಳಿದೆ. ಮೂರು ಸಾವುಗಳು ಸೇರಿದಂತೆ ವ್ಯಾಕ್ಸಿನೇಷನ್ಗೆ ಅಸಮಂಜಸವಾದ ಸಾಂದರ್ಭಿಕ ಸಂಬಂಧವನ್ನು ಹೊಂದಿರುವ 18 ಪ್ರಕರಣಗಳಿವೆ. ಒಂಬತ್ತು ಪ್ರಕರಣಗಳನ್ನು ‘ಅನಿರ್ದಿಷ್ಟ ವರ್ಗದಲ್ಲಿ’ ಹಾಕಲಾಗಿದೆ, ಇದರಲ್ಲಿ ಎರಡು ಸಾವುಗಳೂ ಸೇರಿವೆ.
ಇದರ ಜೊತೆಗೆ ಭಾರತ ಸರ್ಕಾರವು ಪ್ರಸ್ತುತ ಇಮ್ಯುನೈಸೇಶನ್ ಕಾರ್ಯಕ್ರಮದಲ್ಲಿ ಬಳಕೆಯಲ್ಲಿರುವ ಎಲ್ಲಾ ಮೂರು ಲಸಿಕೆಗಳ ಸಂಭಾವ್ಯ ಅಡ್ಡ ಪರಿಣಾಮಗಳನ್ನು ಪಟ್ಟಿ ಮಾಡಿದೆ.
ಅತಿ ಹೆಚ್ಚು ಜನರಿಗೆ ನೀಡಲಾಗಿರುವ ಕೋವಿಶೀಲ್ಡ್‌ನ ಸಾಮಾನ್ಯ ಅಡ್ಡಪರಿಣಾಮಗಳಲ್ಲಿ ಬಹುಮುಖ್ಯವಾದುದು ಇಂಜೆಕ್ಷನ್ ಸ್ಥಳದಲ್ಲಿ ನೋವು, ತಲೆನೋವು, ಆಯಾಸ, ದೇಹದ ನೋವು ಮತ್ತು ವಾಕರಿಕೆ. ಕೋವಾಕ್ಸಿನ್‌ನ ಅಡ್ಡಪರಿಣಾಮಗಳಲ್ಲಿ ಹೊಟ್ಟೆ ನೋವು, ವಾಕರಿಕೆ ಮತ್ತು ವಾಂತಿ, ತಲೆತಿರುಗುವಿಕೆ, ನಡುಕ, ಬೆವರುವುದು, ಶೀತ ಮತ್ತು ಕೆಮ್ಮು ಪ್ರಮುಖವಾಗಿವೆ. ಅಜೀರ್ಣ ಮತ್ತು ಹಸಿವಾಗದಿರುವಿಕೆ ಸ್ಪುಟ್ನಿಕ್ ವಿಯ ಅಡ್ಡಪರಿಣಾಮಗಳಲ್ಲಿ ಪ್ರಮುಖವಾದವು.