ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY) ತನ್ನ ವೆಬ್‌ಸೈಟ್‌ನಲ್ಲಿ 21 ಫೆಬ್ರವರಿ 2022 ರಂದು India Data Accessibility and Use Policy ( ಭಾರತ ಡೇಟಾ ಪ್ರವೇಶ ಮತ್ತು ಬಳಕೆಯ ನಿಯಮ) ಎಂಬ ಡಾಕ್ಯುಮೆಂಟ್ ಅನ್ನು ಪ್ರಕಟಿಸಿದ್ದು ಅದರಲ್ಲಿನ ಎರಡು ನಿಯಮಗಳ ಬಗ್ಗೆ ತೀವ್ರ ಆಕ್ಷೇಪಗಳು ಎದ್ದಿವೆ.
MeitY ಪ್ರಕಟಿಸಿದ ಕರಡಿನ ಪ್ರಕಾರ ಮೊದಲನೆಯದಾಗಿ, ಮೌಲ್ಯವರ್ಧಿತ ಅಥವಾ ರೂಪಾಂತರಿತ ಡೇಟಾಸೆಟ್‌ಗಳಿಗೆ ‘ಸೂಕ್ತವಾದ ಬೆಲೆ’ ನೀಡಬಹುದು. ಎರಡನೆಯದು, ವಿಶೇಷ ಸಂದರ್ಭಗಳನ್ನು ಹೊರತುಪಡಿಸಿ ಪ್ರತಿ ಸರ್ಕಾರಿ ಸಂಸ್ಥೆಯು ಎಲ್ಲಾ ಡೇಟಾವನ್ನು ‘ಮುಕ್ತವಾಗಿ ಹಂಚಿಕೊಳ್ಳಬಹುದು’. ಈ ಎರಡೂ ನಿಯಮಗಳಿಗೆ ಸಾರ್ವಜನಿಕ ವಲಯದಿಂದ ಆಕ್ಷೇಪ ವ್ಯಕ್ತವಾದ ನಂತರ ಫೆಬ್ರವರಿ 26 ರಂದು ಈ ನಿಬಂಧನೆಗಳನ್ನು ಬದಲಿಸಿ ಮೃದುವಾದ ಭಾಷೆಯಲ್ಲಿ ಪುನಃ ಬರೆಯಲಾಗಿದ್ದು ‘ಡೇಟಾ’ ಪದವನ್ನು ಡಾಕ್ಯುಮೆಂಟ್‌ನಾದ್ಯಂತ ‘ವೈಯಕ್ತಿಕವಲ್ಲದ ಡೇಟಾ’ ಎಂದು ಬದಲಾಯಿಸಲಾಗಿದೆ, ‘ಮತ್ತು ಗೌಪ್ಯತೆ’ ಅನ್ನುವ ಪದವನ್ನು ಹೆಚ್ಚಾಗಿ ಬಳಸಲಾಗಿದ್ದು ‘ಹೆಚ್ಚಿನ ಮೌಲ್ಯದ ಡೇಟಾಸೆಟ್‌ಗಳು’ ಎಂಬ ಪದಗುಚ್ಛವು ಸಂಪೂರ್ಣವಾಗಿ ಕಣ್ಮರೆಯಾಗಿದೆ. ಆದರೆ ಡಾಕ್ಯುಮೆಂಟ್ ಇನ್ನೂ ಅದರ ವಿವಾದಾತ್ಮಕ ಉದ್ದೇಶವನ್ನು ಉಳಿಸಿಕೊಂಡಿದೆ ಎಂದು ಮೇಲ್ನೋಟಕ್ಕೆ ಕಂಡು ಬರುತ್ತದೆ.
ಸರ್ಕಾರದ ಉದ್ದೇಶವೇನು?
ಡ್ರಾಫ್ಟಿನ ಪ್ರಕಾರ ಈ ನೀತಿಯು ‘ಸಾರ್ವಜನಿಕ ವಲಯದ ಡೇಟಾವನ್ನು ಬಳಸಿಕೊಳ್ಳುವಲ್ಲಿ ಭಾರತದ ಸಾಮರ್ಥ್ಯವನ್ನು ಆಮೂಲಾಗ್ರವಾಗಿ ಹೆಚ್ಚಿಸಲು’ ಮತ್ತು ‘ವೈಯಕ್ತಿಕವಲ್ಲದ ಡೇಟಾದ ಪಡೆಯುವಿಕೆ, ಗುಣಮಟ್ಟ ಮತ್ತು ಬಳಕೆಯನ್ನು ಹೆಚ್ಚಿಸುವ’ ಗುರಿಯನ್ನು ಹೊಂದಿದೆ.
ಈ ನಿಯಮಗಳನ್ನು ರಾಜ್ಯ ಸರ್ಕಾರಗಳು ಅಂಗೀಕರಿಸಲು ಒಪ್ಪಿದರೆ, ಸರ್ಕಾರದಿಂದ ನೇರವಾಗಿ ಅಥವಾ ಅಧಿಕೃತ ಏಜೆನ್ಸಿಗಳ ಮೂಲಕ ರಚಿಸಿದ ಅಥವಾ ಸಂಗ್ರಹಿಸಲಾದ ಎಲ್ಲಾ ವೈಯಕ್ತಿಕವಲ್ಲದ ಡೇಟಾ ಮತ್ತು ಮಾಹಿತಿಗಳಿಗೆ ನಿಯಮಗಳನ್ನು ಅನ್ವಯಿಸಲಾಗುತ್ತದೆ. ಆದರೆ ರಾಜ್ಯ ಸರ್ಕಾರಗಳಿಗೆ ನಿಬಂಧನೆಗಳನ್ನು ತಮ್ಮ ಇಚ್ಛೆಯಂತೆ ಅಳವಡಿಸಿಕೊಳ್ಳುವ ಸ್ವಾತಂತ್ರ್ಯವಿರುತ್ತದೆ.
ನಿಯಮಗಳು ಸರಿಯಾದ ರೀತಿಯಲ್ಲಿ ಕಾರ್ಯ ನಿರ್ವಹಿಸುವಂತಾಗಲು ಐಟಿ ಸಚಿವಾಲಯದಿಂದ ಸೆಂಟ್ರಲ್ ಇಂಡಿಯಾ ಡಾಟಾ ಆಫೀಸ್ (IDO) ಅನ್ನು ಸ್ಥಾಪಿಸಲಾಗುವುದು ಮತ್ತು ಇದು ಪ್ರತಿ ಸಚಿವಾಲಯ ಅಥವಾ ಇಲಾಖೆಯ ಮುಖ್ಯ ಡೇಟಾ ಅಧಿಕಾರಿಗಳೊಂದಿಗೆ ಡೇಟಾ ಹಂಚಿಕೆ ಮತ್ತು ವರ್ಗೀಕರಣವನ್ನು ಸಂಯೋಜಿಸಲಿದೆ ಎಂದು MeitY ತಿಳಿಸಿದೆ.
ಎಲ್ಲಾ ‘ವೈಯಕ್ತಿಕವಲ್ಲದ ಡೇಟಾವನ್ನು’ ಮೂರು ವಿಧಗಳಾಗಿ ವರ್ಗೀಕರಿಸಲಾಗುತ್ತದೆ, ಅವೆಂದರೆ
1.ಮುಕ್ತ (open)
2.ನಿರ್ಬಂಧಿಸಲಾದ (restricted)
3. ಹಂಚಿಕೊಳ್ಳಲಾಗದ (non-shareable)
ಅಸ್ತಿತ್ವದಲ್ಲಿರುವ ಮತ್ತು ಹೊಸ ಡೇಟಾವನ್ನು ವಿವರವಾದ ಮತ್ತು ಹುಡುಕಬಹುದಾದ ಡೇಟಾ ಇನ್ವೆಂಟರಿಗಳಾಗಿ (ದಾಸ್ತಾನು) ಜೋಡಿಸಲಾಗುತ್ತದೆ ಮತ್ತು ಅನುಮೋದಿತ ಡೇಟಾವನ್ನು ಸರ್ಕಾರದಿಂದ ಸರ್ಕಾರಕ್ಕೆ ಡೇಟಾ ಹಂಚಿಕೆಗಾಗಿ ವ್ಯಾಪಕವಾಗಿ ಹುಡುಕಬಹುದಾದ ಡೇಟಾಬೇಸ್‌ನಲ್ಲಿ ಇರಿಸಲಾಗುತ್ತದೆ.
ಆದರೆ ‘ಹೆಚ್ಚಿನ ಡೇಟಾ ಸೆಟ್‌ಗಳನ್ನು ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸಲು ಯಾವುದೇ ವೆಚ್ಚವಿಲ್ಲದೆ ಲಭ್ಯವಾಗುವಂತೆ ಮಾಡಲಾಗುತ್ತದೆ’ ಎಂಬ ನಿಯಮವು ಕೆಲವು ಡೇಟಾ ಸೆಟ್‌ಗಳು ಖರೀದಿಗೂ ಲಭ್ಯವಿರುತ್ತವೆ ಎಂಬುವುದನ್ನು ಸೂಚಿಸುತ್ತವೆ. ಇನ್ನೊಂದೆಡೆ, ಭಾರತವು $5 ಟ್ರಿಲಿಯನ್ ಡಿಜಿಟಲ್ ಆರ್ಥಿಕತೆ ಸಾಧಿಸಲು ಸಹಾಯ ಮಾಡಲು ಖಾಸಗಿ ವಲಯಕ್ಕೆ ಉತ್ತಮ ಗುಣಮಟ್ಟದ ಸಾರ್ವಜನಿಕ ವಲಯದ ಡೇಟಾವನ್ನು ಲಭ್ಯವಾಗುವಂತೆ ಮಾಡಲು ನೋಡಲಾಗುತ್ತಿದೆ ಎಂದು ಸರ್ಕಾರವೇ ಹೇಳಿದೆ. ಹಾಗಾಗಿ ನಮ್ಮಿಂದ ಸಂಗ್ರಹಿಸಲಾದ ಡಾಟಾವನ್ನು ಖಾಸಗಿಯವರಿಗೆ ಮಾರಲಾರರು ಎಂದು ಹೇಳಲು ಸಾಧ್ಯವಿಲ್ಲ.
ಈ ನಿಯಮಗಳ ಬಗ್ಗೆ ಮಾಡಿರುವ ಅನೇಕ ಕಂಪೆನಿಗಳು ಪರಾಮರ್ಶೆ ನಡೆಸಿದ್ದು ತಮ್ಮ ಅಭಿಪ್ರಾಯಗಳನ್ನು ದಾಖಲಿಸಿವೆ. ಉದ್ದೇಶಗಳು ಮತ್ತು ತತ್ವಗಳು ‘ಪ್ರಾಥಮಿಕವಾಗಿ ಮೌಲ್ಯಯುತ’ ವಾಗಿದ್ದರೂ, ಡೇಟಾ ಪಡೆಯುವಿಕೆ ಮತ್ತು ಗುಣಮಟ್ಟವನ್ನು ಸುಧಾರಿಸುವ ಹಾಗೂ ಗೌಪ್ಯತೆ ಮತ್ತು ಭದ್ರತಾ ಅಪಾಯಗಳನ್ನು ತಗ್ಗಿಸುವ ನಡುವೆ ಸಮತೋಲನವನ್ನು ಸಾಧಿಸಿದರೆ ಮಾತ್ರ ಅದು ಯಶಸ್ವಿಯಾಗುತ್ತದೆ ಎಂದು ಲಾಭರಹಿತ ವ್ಯಾಪಾರ ಸಂಸ್ಥೆಯಾದ Nasscom ಹೇಳಿದೆ.
ಇನ್ನೊಂದು ಲಾಭ ರಹಿತ ಸಂಸ್ಥೆಯಾದ ‘ಥಿಂಕ್ ಟ್ಯಾಂಕ್ ಸಾಫ್ಟ್‌ವೇರ್ ಫ್ರೀಡಂ ಲಾ ಸೆಂಟರ್’ (ಎಸ್‌ಎಫ್‌ಎಲ್‌ಸಿ) ಡಾಟಾ ಸಂರಕ್ಷಣಾ ಕಾಯ್ದೆಯನ್ನು (Data Protection Act)ಅಂಗೀಕರಿಸದೆ ಮತ್ತು ಕಾರ್ಯಗತಗೊಳಿಸದೆ, ಡೇಟಾದ ಮಾರಾಟ ಮಾಡಲು ಹೊರಟಿರುವುದು ‘ಸಂಶಯಾಸ್ಪದ’ ಎಂದು ಹೇಳಿದೆ. ‘ದಿ ಡೈಲಾಗ್’ನ ಕಾರ್ಯಕ್ರಮ ನಿರ್ವಾಹಕ ಕಾರ್ತಿಕ್ ವೆಂಕಟೇಶ್ ಮಾತಾಡಿ ಈ ನೀತಿಯು ಸುಪ್ರೀಂ ಕೋರ್ಟ್‌ನ ಖಾಸಗಿತನದ ಹಕ್ಕಿನ ತೀರ್ಪಿನೊಂದಿಗೆ ಹೇಗೆ ಸಂವಹಿಸುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ ಎಂದು ಹೇಳಿದ್ದಾರೆ. ಅಲ್ಲದೆ “ಮಾಹಿತಿ ಗೌಪ್ಯತೆಯನ್ನು ಸುರಕ್ಷಿತಗೊಳಿಸಲು ದೇಶಕ್ಕೆ ಡೇಟಾ ಸಂರಕ್ಷಣಾ ಕಾರ್ಯಸೂಚಿಯನ್ನು MeitY ಇನ್ನೂ ಅಂತಿಮಗೊಳಿಸದಿರುವುದರಿಂದ ಅಂತರ್ಸಂಪರ್ಕಿತ ವೈಯಕ್ತಿಕವಲ್ಲದ ಡೇಟಾವು ಶೋಷಣೆಯ ಅಸ್ತ್ರವಾಗುವ ಸಾಧ್ಯತೆಯೂ ಇದೆ” ಎಂದೂ ಅವರು ಹೇಳಿದ್ದಾರೆ.
‘ಇಂಟರ್ನೆಟ್ ಫ್ರೀಡಂ ಫೌಂಡೇಶನ್’ (IFF) “ಈ ನೀತಿಯು ‘ವಿಕೃತ ಆರ್ಥಿಕತೆ’ಯನ್ನು ಹೊಂದಿದೆ ಮತ್ತು ಡ್ರಾಫ್ಟಲ್ಲಿ ಮಾಡಿರುವ ಬದಲಾವಣೆಗಳು ಸಹ ಮೂಲಭೂತ ಸಮಸ್ಯೆಗಳನ್ನು ಪರಿಹರಿಸಲು ವಿಫಲವಾಗಿದೆ” ಎಂದು ಹೇಳಿದೆ.
ಒಟ್ಟಿನಲ್ಲಿ ಸರ್ಕಾರವು ದೇಶದ ನಾಗರಿಕರಿಂದ ಸಂಗ್ರಹಿಸಿದ ಮಾಹಿತಿಗಳು ಖಾಸಗಿ ವಲಯದ ಕೈ ಸೇರುತ್ತಿದೆ ಎಂಬ ಅರ್ಧ ದಶಕದ ದೂರಿಗೆ ಈಗ ಸರ್ಕಾರವೇ ಬಲ ಒದಗಿಸಿದಂತಾಗಿದೆ. ಜೊತೆಗೆ ಜನರ ಖಾಸಗಿತನವನ್ನೇ ಮಾರಾಟಕ್ಕಿಟ್ಟಿರುವ ಸರ್ಕಾರವನ್ನು ಇನ್ನಷ್ಟು ಕಾಲ ನಂಬಬಹುದು ಎನ್ನುವ ಪ್ರಶ್ನೆಯನ್ನೂ ಈ ಬೆಳವಣಿಗೆ ಹುಟ್ಟುಹಾಕಿದೆ.