ಬೆಂಗಳೂರು:”ರಾಜ್ಯಪಾಲರು ಮುಖ್ಯಮಂತ್ರಿಗಳ ವಿರುದ್ಧ ಪ್ರಾಸಿಕ್ಯೂಷನ್ ತನಿಖೆಗೆ ಅನುಮತಿ ನೀಡಿರುವುದು ರಾಜಕೀಯ ದುರುದ್ದೇಶ ಹೊಂದಿರುವ ಹಾಗೂ ಹಾಸ್ಯಾಸ್ಪದ ನಿರ್ಧಾರ” ಎಂದು ಮಾಜಿ ಸಂಸದ ಡಿ. ಕೆ. ಸುರೇಶ್ ಅವರು ಅಭಿಪ್ರಾಯಪಟ್ಟರು.
ಸದಾಶಿವನಗರದ ತಮ್ಮ ನಿವಾಸದಲ್ಲಿ ಮಾಧ್ಯಮ ಘೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು “ಬಿಜೆಪಿ ಮತ್ತು ಜನತಾದಳ ರಾಜ್ಯಪಾಲ ಕಚೇರಿಯ ಮೂಲಕ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸುವ ಕೆಲಸ ಮಾಡುತ್ತಿವೆ ಇದು ಅಸಾಧ್ಯ” ಎಂದರು.
“ದೂರುದಾರರು ಈ ಹಿಂದೆ ಲೋಕಾಯುಕ್ತ ಸೇರಿದಂತೆ ಇತರೇ ತನಿಖಾ ಸಂಸ್ಥೆಗಳ ಮುಂದೆ ದೂರು ದಾಖಲಿಸಿಲ್ಲ. ನೇರವಾಗಿ ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ಯಾವುದೇ ತನಿಖೆಯೇ ನಡೆಯದೇ ಮುಖ್ಯಮಂತ್ರಿಗಳ ವಿರುದ್ಧ ಏಕಾಏಕಿ ಪ್ರಾಸಿಕ್ಯೂಷನ್ ತನಿಖೆಗೆ ನೀಡಿರುವುದು ಸರಿಯಲ್ಲ” ಎಂದು ಹೇಳಿದರು.
“ನಾಳೆಯಿಂದ ಪ್ರತಿಯೊಬ್ಬರೂ ಒಬ್ಬೊಬ್ಬರ ಮೇಲೆ ದೂರನು ನೀಡುತ್ತಾರೆ ಇವುಗಳನ್ನು ಪರಿಗಣಿಸಲಾಗುತ್ತದೆಯೇ? ಲೋಕಾಯುಕ್ತ ಅಥವಾ ಪೊಲೀಸ್ ತನಿಖೆ, ಇತರೇ ಸಂಸ್ಥೆಗಳಿಂದ ತನಿಖೆ ನಡೆದು ತಪ್ಪಿತಸ್ಥರು ಎಂದು ಸಾಬೀತಾದ ನಂತರ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಬಹುದು. ಆದರೆ ಈಗ ನೀಡಿರುವುದು ರಾಜಕೀಯ ದುರುದ್ದೇಶ ಪೂರಿತವಾಗಿದೆ” ಎಂದರು.
ನ್ಯಾಯಾಲಯದಲ್ಲಿ ನ್ಯಾಯ ಕೇಳುತ್ತೇವೆ:”ಬಿಜೆಪಿ ಮತ್ತು ಜೆಡಿಎಸ್ ನವರು ಏನೋ ಮಾಡಬೇಕು ಎಂದು ಹೊರಟಿದ್ದಾರೆ. ಇವರ ಪ್ರಯತ್ನಗಳು ಫಲ ನೀಡುವುದಿಲ್ಲ. ನಾವು ಈ ರಾಜ್ಯಪಾಲರ ತೀರ್ಮಾನದ ವಿರುದ್ಧ ನ್ಯಾಯಾಲಯದಲ್ಲಿ ನ್ಯಾಯ ಕೇಳುತ್ತೇವೆ. ಮೂಡ ಪ್ರಕರಣದ ಬಗ್ಗೆ ಸ್ವತಃ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು ರಾಜ್ಯದ ಜನರಿಗೆ ಎಳೆ ಎಳೆಯಾಗಿ ವಿವರಿಸಿದ್ದಾರೆ.ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿಗಳ ಹಾಗೂ ಸರ್ಕಾರದ ಪಾತ್ರ ಕಿಂಚಿತ್ತು ಇಲ್ಲ.ಈ ಪ್ರಕರಣ ನಡೆದಿರುವುದು ಬಿಜೆಪಿ ಸರ್ಕಾರದ ಅವಧಿಯಲ್ಲಿ ಅವರೇ ಭೂಮಿ ಕಳೆದುಕೊಂಡಿರುವುದಕ್ಕೆ ಸೈಟ್ ಹಂಚಿದ್ದಾರೆ. ಕೂಡಲೇ ರಾಜ್ಯಪಾಲರು ಈ ಅನುಮತಿಯನ್ನು ಹಿಂದಕ್ಕೆ ಪಡೆಯಬೇಕು” ಎಂದು ಆಗ್ರಹಿಸಿದರು.
ನ್ಯಾಯಾಂಗ ತನಿಖೆ ಆಗುತ್ತಿರುವ ಹೊತ್ತಿನಲ್ಲಿ ಇದು ರಾಜ್ಯಪಾಲರ ಅವಸರದ ನಿರ್ಧಾರವೇ ಎಂದು ಕೇಳಿದಾಗ “ನಾನು ಇದರ ಬಗ್ಗೆ ಈ ಮೊದಲೇ ಹೇಳಿದ್ದೆ. ಯಾವುದಾದರೂ ತನಿಖಾ ಸಂಸ್ಥೆಯಿಂದ ತನಿಖೆ ನಡೆದ ನಂತರ ಆ ತನಿಖೆಯಲ್ಲಿ ಅಥವಾ ಮುಖ್ಯಮಂತ್ರಿಗಳು ತೆಗೆದುಕೊಂಡಿರುವ ಕ್ರಮದಲ್ಲಿ ಏನಾದರೂ ಲೋಪ ಕಂಡುಬಂದಾಗ ರಾಜ್ಯಪಾಲರು ಪ್ರಾಸಿಕ್ಯೂಷನ್ ಕ್ರಮ ತೆಗೆದುಕೊಳ್ಳಬಹುದಿತ್ತು.ಯಾರೋ ಅರ್ಜಿ ನೀಡಿದರು ಎಂದು ಈ ಕ್ರಮ ತೆಗೆದುಕೊಂಡಿರುವುದು ಸಂವಿಧಾನ, ಆಡಳಿತ ವ್ಯವಸ್ಥೆಗೆ ಅಪಮಾನ”ಎಂದರು.
ಪ್ರತಿಪಕ್ಷದವರು ಸಿಎಂ ರಾಜೀನಾಮೆ ಕೇಳುತ್ತಿದ್ದಾರೆ ಎಂದು ಕೇಳಿದಾಗ “ಮುಖ್ಯಮಂತ್ರಿ ಸೀಟಿಗೆ ಅರ್ಜಿ ಹಾಕಿಕೊಳ್ಳಬೇಕು ಎಂದು ಎಲ್ಲರೂ ಕೇಳುತ್ತಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ರವರು ಈ ಮೊದಲಿನಿಂದಲೂ ಸರ್ಕಾರ ಅಸ್ಥಿರಗೊಳಿಸಲು ನೋಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ರಚನೆ ಮಾಡಿದಾಗ. ಈ ಸರ್ಕಾರ ಮೂರು ತಿಂಗಳಿಗೆ ಬಿದ್ದು ಹೋಗುತ್ತದೆ ಎಂದು ಹೇಳಿದರು ಕಾಂಗ್ರೆಸ್ ನಿಂದ 20 ಜನ 50 ಜನ ಬರುತ್ತಾರೆ ಎಂದು ಹೇಳಿದರು ಅವರ ಪಕ್ಷದ ಅಸ್ಥಿತ್ವವನ್ನು ಉಳಿಸಿಕೊಳ್ಳಲು ಕೆಲವೊಬ್ಬರು ಆಗಾಗ ಈ ರೀತಿಯ ಡೈಲಾಗ್ ಹೊಡೆಯುತ್ತಿರುತ್ತಾರೆ. ಅವರ ಇಂತಹ ಡೈಲಾಗ್ ಗಳಿಗೆ ಎಷ್ಟು ಮಾನ್ಯತೆಯಿದೆ ಎಂದು ಎಲ್ಲರಿಗೂ ಗೊತ್ತಿದೆ. ಡೈಲಾಗ್ ಹೊಡೆಯುತ್ತಿರುತ್ತಾರೆ ಮುಂದಕ್ಕೆ ಹೋಗುತ್ತಿರುತ್ತಾರೆ. ಅವರ ಜೀವನದಲ್ಲಿ ಒಳ್ಳೆಯದನ್ನು ಸಾಧಿಸಿದ್ದಾಗಲಿ, ನಿರೂಪಿಸಿದ್ದಾಗಲಿ ಇದುವರೆಗೂ ಆಗಿಲ್ಲ. ಸುಳ್ಳೇ ಇವರ ಜೀವನ ಸುಳ್ಳಿನಲ್ಲಿ ರಾಜಕಾರಣ ಮಾಡುತ್ತಿದ್ದಾರೆ” ಎಂದು ಕಿಡಿಕಾರಿದರು.