ಚೆನೈ : ಹಲವಾರು ರಾಜಕೀಯ ಕಸರತ್ತುಗಳ ಬಳಿಕ ಕೊನೆಗೂ ತಮಿಳುನಾಡಿನ ರಾಜ್ಯಪಾಲರಾದ ರಾಜೇಂದ್ರ ಅರ್ಳೇಕರ್ ಸರ್ಕಾರ ರಚಿಸುವಂತೆ ಟಿವಿಕೆ ಮುಖ್ಯಸ್ಥ ನಟ ವಿಜಯ್ ಅವರಿಗೆ ಆಹ್ವಾನಿಸಿದ್ದಾರೆ. ಕಳೆದೆರಡು ದಿನಗಳಿಂದಲೂ ವಿಜಯ್ ರಾಜ್ಯಪಾಲರನ್ನು ಎರಡು ಬಾರಿ ಭೇಟಿಯಾಗಿ ಸರ್ಕಾರ ರಚಿಸಲು ಅನುಮತಿ ಕೇಳಿದ್ದರು.

ಆದರೆ ಸಂಖ್ಯಾಬಲದ ಕೊರತೆಯಿಂದ ರಾಜ್ಯಪಾಲರು ಅವಕಾಶ ನಿರಾಕರಿಸಿದ್ದರು. ಆದರೆ ಇದೀಗ ಕಾಂಗ್ರೆಸ್ ಹಾಗೂ ಎಡಪಕ್ಷಗಳ ಬೆಂಬಲದೊಂದಿಗೆ ಸರ್ಕಾರ ರಚಿಸಲು ಆಹ್ವಾನಿಸಿದ್ದು, ಟಿವಿಕೆ ಕಾರ್ಯಕರ್ತರಲ್ಲಿ ಸಂಭ್ರಮಕ್ಕೆ ಕಾರಣವಾಗಿದೆ. ಇಂದು ಮೂರನೇ ಬಾರಿಗೆ ರಾಜ್ಯಪಾಲರನ್ನು ಭೇಟ ಮಾಡಿ 118 ಶಾಸಕರ ಬೆಂಬಲ ಪತ್ರವನ್ನು ತೋರಿಸಿದ್ದಾರೆ. ಇದಕ್ಕೆ ಸಮ್ಮತಿಸಿರುವ ಅರ್ಳೇಕರ್ ನಾಳೆ ಬೆಳಿಗ್ಗೆ 11 ಗಂಟೆಗೆ ವಿಜಯ್‌ಗೆ ಪ್ರಮಾಣ ವಚನ ಬೋಧಿಸಲಿದ್ದಾರೆ.
ಈಗಾಗಲೇ ನಗರದ ನೆಹರು ಕ್ರೀಡಾಂಗಣದಲ್ಲಿ ಪ್ರಮಾಣ ವಚನ ಕಾರ್ಯಕ್ರಮದ ಪೂರ್ವ ಸಿದ್ಧತೆಗಳು ಪೂರ್ಣಗೊಂಡಿದ್ದು, ನಾಳೆ ಬೆಳಿಗ್ಗೆಯಿಂದಲೇ ತಮಿಳುನಾಡಿನಲ್ಲಿ ಸಿನಿಮಾ ಸ್ಟಾರ್‌ನ ದರ್ಬಾರ್ ಶುರುವಾಗಲಿದ್ದು, ಎಂಜಿಆರ್, ಜಯಲಲಿತಾರಂತೆಯೇ ವಿಜಯ್ ಆಡಳಿತಕ್ಕಾಗಿ ಜನರು ತುದಿಗಾಲಲ್ಲಿ ನಿಂತಿದ್ದಾರೆ.
ಕಳೆದ ತಿಂಗಳ ಚುನಾವಣೆಯಲ್ಲಿ ವಿಜಯ್ ಅವರ ಟಿವಿಕೆ ಭರ್ಜರಿ ಜಯ ಸಾಧಿಸಿತು; ಪಕ್ಷವು ತನ್ನ ಚೊಚ್ಚಲ ರಾಜಕೀಯ ಆರಂಭದಲ್ಲೇ 234 ಸ್ಥಾನಗಳಲ್ಲಿ 108 ಸ್ಥಾನಗಳನ್ನು ಗೆದ್ದು ರಾಜ್ಯ ರಾಜಕೀಯದ ಮೇಲೆ ದ್ರಾವಿಡ ದೈತ್ಯ ಪಕ್ಷಗಳಾದ ಡಿಎಂಕೆ ಮತ್ತು ಎಐಎಡಿಎಂಕೆ 62 ವರ್ಷಗಳ ಹಿಡಿತವನ್ನು ಕಳೆದುಕೊಳ್ಳುವಂತೆ ಮಾಡಿದೆ. ಆದರೆ ಸರ್ಕಾರ ರಚನೆಗೆ ಸಂಖ್ಯಾಬಲದ ಕೊರತೆಯಿದ್ದ ಕಾರಣಕ್ಕೆ ಸರ್ಕಾರ ರಚಿಸಲು ಟಿವಿಕೆ ನಾಯಕನನ್ನು ಆಹ್ವಾನಿಸುವುದಿಲ್ಲ ಎಂದು ರಾಜ್ಯಪಾಲ ಆರ್‌ವಿ ಅರ್ಲೇಕರ್ ಸ್ಪಷ್ಟಪಡಿಸಿದ್ದರು. ಇಂದು ಸಂಜೆ ಮೂರನೇ ಬಾರಿಗೆ ರಾಜ್ಯಪಾಲರನ್ನು ಭೇಟಿ ಮಾಡಿದ ವಿಜಯ್‌ಗೆ ಸರ್ಕಾರ ರಚಿಸೋಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ.






