ರಾಜ್ಯ ರಾಜಕಾರಣದಲ್ಲಿ ಬಿಎಸ್ವೈ ಅಭಿಮಾನೋತ್ಸವ ಭಾರೀ ರ್ಚೆಗೆ ಗ್ರಾಸವಾಗಿರುವ ನಡುವೆಯೇ, ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಕೊಪ್ಪಳದ ಗವಿಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್, “ರಾಜ್ಯದಲ್ಲಿ ಈಗ ಯಡಿಯೂರಪ್ಪ ಅವರ ಅಭಿಮಾನೋತ್ಸವ ನಡೆಯುತ್ತಿದೆ. ಆದರೆ ಯಾವ ಪುರುಷಾರ್ಥಕ್ಕಾಗಿ ಈ ಕಾರ್ಯಕ್ರಮ ನಡೆಸಲಾಗುತ್ತಿದೆ?” ಎಂದು ಪ್ರಶ್ನಿಸಿದರು.

ಇತ್ತೀಚಿನ ಪಂಚರಾಜ್ಯ ಚುನಾವಣಾ ಫಲಿತಾಂಶಗಳನ್ನು ಉಲ್ಲೇಖಿಸಿದ ಅವರು, “ಬಿಜೆಪಿ ನಾಯಕರು ಬೇರೆ ರಾಜ್ಯಗಳಲ್ಲಿ ಪಕ್ಷ ಗೆದ್ದಾಗ ಪೇಡ ಹಂಚಿದರು. ಆದರೆ ಕರ್ನಾಟಕದಲ್ಲಿ ಯಾಕೆ ಗೆಲ್ಲಲು ಸಾಧ್ಯವಾಗಲಿಲ್ಲ ಎಂಬುದನ್ನು ಮೊದಲು ಆತ್ಮಾವಲೋಕನ ಮಾಡಿಕೊಳ್ಳಬೇಕು” ಎಂದು ಟೀಕಿಸಿದರು.ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧವೂ ಗಂಭೀರ ಆರೋಪ ಮಾಡಿದ ಯತ್ನಾಳ್, “ವಿಜಯೇಂದ್ರ ಅಧ್ಯಕ್ಷರಾದ ಬಳಿಕ ರಾಜ್ಯದಲ್ಲಿ ನಡೆದ ಬಹುತೇಕ ಚುನಾವಣೆಗಳಲ್ಲಿ ಬಿಜೆಪಿ ಸೋತಿದೆ. ಒಂದು ಕಾಲದಲ್ಲಿ 25 ಲೋಕಸಭಾ ಸದಸ್ಯರಿದ್ದ ಬಿಜೆಪಿ ಈಗ 17 ಸ್ಥಾನಗಳಿಗೆ ಇಳಿದಿದೆ. ಎಲ್ಲೆಡೆ ಡೀಲಿಂಗ್ ರಾಜಕಾರಣ ನಡೆಯುತ್ತಿದೆ” ಎಂದು ಆರೋಪಿಸಿದರು.

ಬಿಎಸ್ವೈ ಅಭಿಮಾನೋತ್ಸವದ ಕುರಿತು ಮಾತನಾಡಿದ ಅವರು, “ಭ್ರಷ್ಟಾಚಾರ ಆರೋಪದಲ್ಲಿ ಜೈಲು ಹೋಗಿದ್ದವರ ಅಭಿಮಾನೋತ್ಸವವನ್ನು ಯಾವ ಕಾರಣಕ್ಕೆ ಮಾಡುತ್ತಿದ್ದಾರೆ? ವಿಜಯೇಂದ್ರ ಅವರ ರಾಜ್ಯಾಧ್ಯಕ್ಷ ಸ್ಥಾನಾವಧಿ ನವೆಂಬರ್ನಲ್ಲಿ ಮುಗಿಯಲಿದ್ದು, ಅದನ್ನು ಮುಂದುವರಿಸಿಕೊಳ್ಳಲು ಈ ರೀತಿಯ ಶಕ್ತಿ ಪ್ರದರ್ಶನ ನಡೆಸಲಾಗುತ್ತಿದೆ” ಎಂದು ಕಿಡಿಕಾರಿದರು.ಇದೇ ವೇಳೆ ಯಡಿಯೂರಪ್ಪ ಕುಟುಂಬದ ಆರ್ಥಿಕ ಬೆಳವಣಿಗೆ ಕುರಿತೂ ಪ್ರಶ್ನೆ ಎತ್ತಿದ ಯತ್ನಾಳ್, “ಒಂದು ಕಾಲದಲ್ಲಿ ನಿಮ್ಮ ಮನೆಯಲ್ಲೇ ಕಾರು ಇರಲಿಲ್ಲ. ಈಗ ಪ್ರದರ್ಶನಕ್ಕೆ ಇಟ್ಟಿರುವ ಅಂಬಾಸಿಡರ್ ಕಾರು ಕೂಡ ಬಿಜೆಪಿಯದ್ದು. ಸಾವಿರಾರು ಕೋಟಿ ರೂಪಾಯಿ ಸಂಪಾದಿಸಿದ್ದೀರಿ. ಸಮಾಜಕ್ಕೆ ನೀವು ಕೊಟ್ಟ ಕೊಡುಗೆ ಏನು?” ಎಂದು ಪ್ರಶ್ನಿಸಿದರು.

ರಾಜ್ಯ ಕಾಂಗ್ರೆಸ್ನ ನಾಯಕತ್ವ ಬದಲಾವಣೆ ಚರ್ಚೆ ಕುರಿತೂ ಪ್ರತಿಕ್ರಿಯಿಸಿದ ಯತ್ನಾಳ್, “ಡಿ.ಕೆ. ಶಿವಕುಮಾರ್ ಸಿಎಂ ಆಗುತ್ತಾರೋ ಇಲ್ಲವೋ ನನಗೆ ಗೊತ್ತಿಲ್ಲ. ಆದರೆ ಡಿ.ಕೆ. ಶಿವಕುಮಾರ್ಗಿಂತ ಸಿದ್ದರಾಮಯ್ಯ ಉತ್ತಮ” ಎಂದು ಅಭಿಪ್ರಾಯಪಟ್ಟರು.
ಕೊನೆಯಲ್ಲಿ ಬಿಜೆಪಿ ಸೇರ್ಪಡೆ ಕುರಿತು ಪ್ರಶ್ನೆಗೆ ಉತ್ತರಿಸಿದ ಅವರು, “ಈ ತಂದೆ-ಮಕ್ಕಳು ಪಕ್ಷದಲ್ಲಿರುವವರೆಗೂ ನಾನು ಬಿಜೆಪಿಗೆ ಮರಳುವುದಿಲ್ಲ. ನಿಜವಾದ ಹಿಂದೂ ವಿಚಾರಧಾರೆಯ ನಾಯಕತ್ವ ಬಂದರೆ ಮಾತ್ರ ನಾನು ಪಕ್ಷಕ್ಕೆ ಹೋಗುತ್ತೇನೆ” ಎಂದು ಸ್ಪಷ್ಟಪಡಿಸಿದರು.






