ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳು ಮುಸ್ಲಿಮರು ಮತ್ತು ಆರ್ಥಿಕವಾಗಿ ಹಿಂದುಳಿದವರ ಮನೆಗಳ ಮೇಲೆ ಬುಲ್ಡೋಜರ್ ದಾಳಿ ಮಾಡುತ್ತಿರುವುದರ ಬಗ್ಗೆ ಯುಎಸ್ ಮೂಲದ ಗ್ಲೋಬಲ್ ಹ್ಯೂಮನ್ ರೈಟ್ಸ್ ಅಬ್ಸರ್ವರ್ ಆತಂಕ ವ್ಯಕ್ತಪಡಿಸಿದೆ. ಜನವರಿ 12 ರಂದು ಅದು ಬಿಡುಗಡೆ ಮಾಡಿರುವ Human Rights Watch( HRW)ವಾರ್ಷಿಕ ವರದಿಯಲ್ಲಿ ಈ ಬಗ್ಗೆ ವಿಸ್ತೃತ ಮಾಹಿತಿಗಳಿವೆ.
ಈ ಹಿಂದೆಯೇ HRW ಅಲ್ಲದೆ ಅನೇಕ ಮಾನವ ಹಕ್ಕು ಹೋರಾಟಗಾರರು ಆಡಳಿತವು ಪ್ರತಿಭಟನೆಗಳನ್ನು ಮೌನವಾಗಿಸಲು ಬುಲ್ಡೋಜರ್‌ಗಳನ್ನು ಬಳಸುವುದನ್ನು ಖಂಡಿಸಿದ್ದರೂ ಸಹ ಕೆಲ ರಾಜ್ಯ ಸರ್ಕಾರಗಳು ಕಾನೂನು ಉಲ್ಲಂಘನೆ ಅನ್ನುವ ಹೆಸರಲ್ಲಿ ತಮ್ಮ ಕೃತ್ಯಗಳನ್ನು ಸಮರ್ಥಿಸಿಕೊಳ್ಳುತ್ತಲೇ ಬಂದಿವೆ. ಇತ್ತೀಚೆಗೆ ಉತ್ತರ ಪ್ರದೇಶ ಸರ್ಕಾರವು ಬುಲ್ಡೋಜರ್ ದಾಳಿಯನ್ನು ‘ಶಾಂತಿಯ ಕ್ರಮ’ ಎಂದು ವ್ಯಂಗ್ಯವಾಗಿ ಕರೆದಿದ್ದು ಅದಕ್ಕೊಂದು ತಾಜಾ ಉದಾಹರಣೆ.
ಆದರೆ ಈಗ HRW ತನ್ನ 2022 ವಾರ್ಷಿಕ ವರದಿಯಲ್ಲಿ 712 ಪುಟಗಳಿದ್ದು ಇದೇ ಮೊದಲ ಬಾರಿ ದುರ್ಬಲ ವರ್ಗದವರ ವಿರುದ್ಧ ಬುಲ್ಡೋಜರ್ ಬಳಸಿರುವುದರ ಬಗ್ಗೆ ಆತಂಕ ವ್ಯಕ್ತಪಡಿಸಿದೆ. ಹಿಂದುತ್ವವಾದಿ ಸಿದ್ಧಾಂತದ ಬಿಜೆಪಿ ಪಕ್ಷವು ಆಡಳಿತದಲ್ಲಿರುವ ರಾಜ್ಯಗಳಲ್ಲಿ ಮುಸ್ಲಿಮರ ವಿರುದ್ಧ ಇಂತಹ ದಾಳಿಗಳು ನಡೆಯುತ್ತಿವೆ ಎಂದು ಆ ವರದಿ ಒತ್ತಿ ಹೇಳಿದೆ. 2022ರಲ್ಲಿ ನಡೆದ ಅನೇಕ ಘಟನೆಗಳನ್ನು ವರದಿ ಮಾಡಿದ್ದು “ಏಪ್ರಿಲ್ನಲ್ಲಿ ಮಧ್ಯಪ್ರದೇಶ, ಗುಜರಾತ್, ಮತ್ತು ದೆಹಲಿಯ ಅಧಿಕಾರಿಗಳು ಸಾಮೂಹಿಕ ಘರ್ಷಣೆಗೆ ಪ್ರತಿಕ್ರಿಯೆಯಾಗಿ ಮುಸ್ಲಿಮರು ಒಡೆತನದಲ್ಲಿದ್ದ ಕಟ್ಟಡಗಳನ್ನು ಅಕ್ರಮವಾಗಿ ಕಟ್ಟಲಾಗಿದೆ ಎಂದು ಆರೋಪಿಸಿ ಕೆಡವಿದ್ದಾರೆ, ಅದೇ ಹೊತ್ತಿಗೆ ಇದೇ ಆರೋಪಗಳಿರುವ ಹಿಂದೂಗಳ ಮನೆಗಳನ್ನು ಮುಟ್ಟಿಲ್ಲ. ಮುಸ್ಲಿಮರಿಗೆ ಒಂದು ರೀತಿಯಲ್ಲಿ ಸಾಮೂಹಿಕ ಶಿಕ್ಷೆ ನೀಡುವುದೇ ಇದರ ಉದ್ದೇಶವಾಗಿತ್ತು “ಎಂದು HRW ಹೇಳಿದೆ.

‘ಕಲ್ಲೆಸೆಯುವಿಕೆಯಲ್ಲಿ’ ಭಾಗಿಯಾಗಿರುವವರ ಮನೆಗಳು ‘ಕಲ್ಲುಮಣ್ಣುಗಳಾಗಿ ಮಾರ್ಪಡಲಿವೆ’ ಎಂದು ಸಾರ್ವಜನಿಕವಾಗಿ ಬೆದರಿಕೆ ಹಾಕಿದ ಮಧ್ಯಪ್ರದೇಶದ ಗೃಹ ಸಚಿವರ ಮಾತನ್ನೂ ವರದಿ ಉಲ್ಲೇಖಿಸಿದೆ. ಜೂನ್ನಲ್ಲಿ, ಪ್ರವಾದಿ ಮುಹಮ್ಮದ್ ಅವರ ವಿರುದ್ಧ ಬಿಜೆಪಿ ರಾಜಕಾರಣಿಗಳು ಮಾಡಿದ್ದ ಟೀಕೆಗಳಿಂದಾಗಿ ದೇಶದಾದ್ಯಂತ ಮುಸ್ಲಿಮರು ವ್ಯಾಪಕವಾಗಿ ಪ್ರತಿಭಟನೆಗೆ ಇಳಿದಿದ್ದರು . ಇದೇ ಸಂದರ್ಭದಲ್ಲಿ ಜಾರ್ಖಂಡ್ನಲ್ಲಿ ಪೊಲೀಸರು ಪ್ರತಿಭಟನಾಕಾರರ ವಿರುದ್ಧ ತಮ್ಮ ಅಧಿಕಾರ ಬಳಸಿ ಇಬ್ಬರನ್ನು ಕೊಂದಿದ್ದರು ಮತ್ತು ಉತ್ತರಪ್ರದೇಶದ ಅಧಿಕಾರಿಗಳು ಪ್ರತಿಭಟನೆಯ ‘ಪ್ರಮುಖ ಸಂಚುಗಾರ’ ಎಂಬ ಸಂಶಯ ವ್ಯಕ್ತಪಡಿಸಿ ಮುಸ್ಲಿಮರ ಮನೆಗಳನ್ನು ಕೆಡವಿದ್ದಾರೆ ಎಂದೂ ಎಚ್ಆರ್ಡಬ್ಲ್ಯೂ ಆರೋಪಿಸಿದೆ.
HRW ಪ್ರಕಾರ ಇಂತ ಎಲ್ಲಾ ಪ್ರಕರಣಗಳಲ್ಲಿ ಸರ್ಕಾರಕ್ಕೆ ಯಾವುದೇ ರೀತಿಯ ಕಾನೂನಾತ್ಮಕ ಅಧಿಕಾರವಿಲ್ಲದಿದ್ದರೂ ಬಿಜೆಪಿ ಆಡಳಿತವಿರುವ ಹಲವಾರು ರಾಜ್ಯಗಳಲ್ಲಿನ ಅಧಿಕಾರಿಗಳು ಪ್ರತಿಭಟನಾಕಾರರ ಮನೆಗಳು ಮತ್ತು ಆಸ್ತಿಗಳನ್ನು ಕೆಡವಿದ್ದಾರೆ. ಅಲ್ಲದೆ ಜೂನ್ 2022 ರಲ್ಲೇ ವಿಶ್ವಸಂಸ್ಥೆಯ ವಿಶೇಷ ವರದಿಗಾರರು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಅನಿಯಂತ್ರಿತ ಮನೆ ಧ್ವಂಸಗಳ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ ಎಂದೂ HRW ಹೇಳಿದೆ. ಅದೇ ರೀತಿ ಜಾಗತಿಕ ಮಾನವ ಹಕ್ಕುಗಳ ಮಾನದಂಡಗಳನ್ನು ಉಲ್ಲಂಘಿಸುವಲ್ಲಿ ಚೀನಾವನ್ನು “ಅನುಕರಿಸಲು” ಭಾರತವು ಪ್ರಯತ್ನಿಸುತ್ತಿದೆ ಮತ್ತು ವಿಶೇಷವಾಗಿ ಅಲ್ಪಸಂಖ್ಯಾತರ ವಿರುದ್ಧ ಆಡಳಿತಾರೂಢ ಬಿಜೆಪಿಯಿಂದ ಆಕ್ರಮಣಗಳು ಹೆಚ್ಚುತ್ತಿದೆ ಎಂದೂ ವರದಿಯು ತಿಳಿಸಿದೆ.
ಜೊತೆಗೆ ಈ ವರದಿಯು ಮಹಿಳೆಯರು ಮತ್ತು ಬಾಲಕಿಯರ ಮೇಲಿನ ದೌರ್ಜನ್ಯದ ಅಪಾಯಕಾರಿ ಹೆಚ್ಚಳದ ಬಗ್ಗೆಯೂ ಕಳವಳವನ್ನು ವ್ಯಕ್ತಪಡಿಸಿದೆ. ಇವುಗಳೆಲ್ಲವುಗಳ ನಡುವೆಯೂ ಸುಪ್ರೀಂಕೋರ್ಟಿನ ಕೆಲವು ತೀರ್ಪುಗಳ ಬಗ್ಗೆ ವರದಿ ಮೆಚ್ಚುಗೆ ವ್ಯಕ್ತಪಡಿಸಿದ್ದು ವಸಾಹತುಶಾಹಿ ಕಾಲದ ‘ದೇಶದ್ರೋಹಿ ಕಾನೂನ’ನ್ನು (Sedition law) ಪದೇ ಪದೇ ಬಳಸುವುದರ ಮೂಲಕ ಸರ್ಕಾರಗಳು ದುರುಪಯೋಗ ಪಡಿಸಿಕೊಳ್ಳುತ್ತಿವೆ ಎಂದು ಸುಪ್ರೀಂ ಕೋರ್ಟ್ ಹೇಳಿರುವುದನ್ನು ಶ್ಲಾಘಿಸಿದೆ. ಅದೇ ರೀತಿ ತಮ್ಮ ವೈವಾಹಿಕ ಸ್ಥಿತಿ ಗತಿ ಮತ್ತು ಲೈಂಗಿಕ ಆಯ್ಕೆಯನ್ನು ಲೆಕ್ಕಿಸದೆ ಎಲ್ಲಾ ಮಹಿಳೆಯರಿಗೆ ಗರ್ಭಪಾತದ ಹಕ್ಕುಗಳನ್ನು ವಿಸ್ತರಿಸುವ ಆದೇಶವನ್ನೂ, ಲೈಂಗಿಕ ದೌರ್ಜನ್ಯದಿಂದ ಬದುಕುಳಿದವರಿಗೆ ‘ಟು ಫಿಂಗರ್ ಟೆಸ್ಟ್’ ನಿಷೇಧ ಮಾಡಿರುವುದನ್ನೂ ಅದು ಸ್ವಾಗತಿಸಿದೆ. ಜೊತೆಗೆ ಕರ್ನಾಟಕ ಸರ್ಕಾರವು ರಾಜ್ಯದ ಶಾಲೆ ಕಾಲೇಜುಗಳಲ್ಲಿ ಹಿಜಾಬ್ ನಿಷೇಧ ಮಾಡಿ ಆದೇಶ ಹೊರಡಿಸಿರುವ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಒಂದು ಸ್ಪಷ್ಟ ನಿರ್ಧಾರಕ್ಕೆ ಬರದೇ ಇರುವುದರ ಬಗ್ಗೆಯೂ HRW ಆಕ್ಷೇಪ ವ್ಯಕ್ತಪಡಿಸಿದೆ.