ಆರ್ ಸಿ ಬಿ ವಿಜಯೋತ್ಸವದ (RCB Event) ವೇಳೆಯ ಸಾವಿನ ಪ್ರಕರಣದ ಹಿನ್ನೆಲೆಯಲ್ಲಿ ಅಮಾನತು ಮಾಡಿದ್ದ ಸರ್ಕಾರ, ಎಲ್ಲಾ ಪೊಲೀಸ್ ಅಧಿಕಾರಿಗಳ ಅಮಾನತು ವಾಪಸ್ ಪಡೆದುಕೊಂಡಿದೆ

ಚಿನ್ನಸ್ವಾಮಿ ಕಾಲ್ತುಳಿತ ದುರಂತ (Chinnaswamy Stadium Stampede) ಸಂಬಂಧ ಪೊಲೀಸ್ (Police) ಅಧಿಕಾರಿಗಳ ಅಮಾನತು (Suspension) ಆದೇಶವನ್ನು ಸರ್ಕಾರ 52 ದಿನಗಳ ನಂತರ ಹಿಂದಕ್ಕೆ ಪಡೆದಿದೆ.

ಬೆಂಗಳೂರು ಪಶ್ಚಿಮ ವಲಯದ ಹೆಚ್ಚುವರಿ ಪೊಲೀಸ್ ಕಮಿಷನರ್ ಆಗಿದ್ದ ವಿಕಾಸ್ ಕುಮಾರ್ (Vikas Kumar) ಒಬ್ಬರನ್ನು ಬಿಟ್ಟು ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ್(Dayanand), ಡಿಸಿಪಿ ಶೇಖರ್(DCP Shekar), ಎಸಿಪಿ ಎಚ್.ಟಿ.ಬಾಲಕೃಷ್ಣ(ACP H T Balakrishna) ಹಾಗೂ ಕಬ್ಬನ್ ಪಾರ್ಕ್ ಠಾಣೆಯ ಇನ್‌ಸ್ಪೆಕ್ಟರ್ ಗಿರೀಶ್ (Inspector Girish) ಅವರ ಅಮಾನತು ಆದೇಶವನ್ನು ರಾಜ್ಯ ಸರ್ಕಾರ ವಾಪಸ್ ಪಡೆದುಕೊಂಡಿದೆ.

ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾ. ಮೈಕಲ್ ಡಿ ಕುನ್ಹಾ, ಜಿಲ್ಲಾಧಿಕಾರಿಗಳ ಮ್ಯಾಜಿಸ್ಟ್ರೇಟ್ ತನಿಖೆ ಪೂರ್ಣಗೊಂಡು ಸರ್ಕಾರಕ್ಕೆ ವರದಿ ಸಲ್ಲಿಸಿದ ಬಳಿಕ ಸರ್ಕಾರ ತನ್ನ ಅಮಾನತು ನಿರ್ಧಾರವನ್ನು ಹಿಂದಕ್ಕೆ ಪಡೆದಿದೆ. ನಿಯಾಮವಳಿ ಪ್ರಕಾರ ಅಮಾನತು ಆದೇಶ ರದ್ದುಗೊಳಿಸಿ ನಾಲ್ವರ ವಿರುದ್ಧ ಇಲಾಖಾ ತನಿಖೆಗೆ ಆದೇಶ ಹೊರಡಿಸಿದೆ.

ಕರ್ತವ್ಯಲೋಪದ ಅಡಿಯಲ್ಲಿ ಐಪಿಎಸ್ ಅಧಿಕಾರಿ ವಿಕಾಸ್ ಕುಮಾರ್ ಅವರನ್ನು ಅಮಾನತು ಮಾಡಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿ (CAT) ರದ್ದುಗೊಳಿಸಿತ್ತು. ಅರ್ಜಿದಾರರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಪುನಃ ನೇಮಕ ಮಾಡಿಕೊಳ್ಳುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ಆದೇಶಿಸಿತ್ತು. ಈ ಆದೇಶವನ್ನು ಸರ್ಕಾರ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದೆ. ಪ್ರಕರಣ ಹೈಕೋರ್ಟ್‌ನಲ್ಲಿ ಇರುವ ಕಾರಣ ಇವರ ಅಮಾನತು ಆದೇಶವನ್ನು ಸರ್ಕಾರ ಹಿಂದಕ್ಕೆ ಪಡೆದಿಲ್ಲ.

ಈ ಹಿಂದೆ CAT ಆದೇಶ ಪ್ರಶ್ನಿಸಿ ಅರ್ಜಿ ವಿಚಾರಣೆ ನಡೆಯುವ ಸಂದರ್ಭದಲ್ಲಿ ಸರ್ಕಾರಿ ಪರ ವಕೀಲರಿಗೆ ಹೈಕೋರ್ಟ್ , ಆ.1 ರ ಒಳಗೆ ಅಧಿಕಾರಿಗಳ ವಿರುದ್ಧ ಅಮಾನತು ಆದೇಶಕ್ಕೆ ಸಂಬಂಧಪಟ್ಟಂತೆ ನಿರ್ಧಾರ ಕೈಗೊಳ್ಳುವಂತೆ ಸೂಚಿಸಿತ್ತು. ಇಲ್ಲದಿದ್ದರೆ ಪ್ರತ್ಯೇಕ ಆದೇಶ ಮಾಡುವುದಾಗಿ ಕೋರ್ಟ್ ಎಚ್ಚರಿಕೆ ನೀಡಿತ್ತು.