ನವದೆಹಲಿ : ಕೇಂದ್ರ ಸರ್ಕಾರವು ರೈತರಿಗೆ ಸಿಹಿಸುದ್ದಿ (GOOD NEWS) ನೀಡಿದ್ದು, 2026-27ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ರಾಜ್ಯದ ರೈತರಿಂದ ಕನಿಷ್ಠ ಬೆಂಬಲ ಬೆಲೆ (MSP) ಯೋಜನೆಯಡಿ ಹೆಸರುಕಾಳು, ಸೂರ್ಯಕಾಂತಿ ಮತ್ತು ಸೋಯಾಬೀನ್ ಖರೀದಿಸಲು ಕೇಂದ್ರ ಕೃಷಿ ಹಾಗೂ ರೈತರ ಕಲ್ಯಾಣ ಸಚಿವಾಲಯ ಅನುಮೋದನೆ ನೀಡಿದೆ. ಕೃಷಿ ಸಚಿವ ಶ್ರೀ ಪಿ.ಎಂ. ನರೇಂದ್ರಸ್ವಾಮಿ ಅವರು ದೆಹಲಿಗೆ ಭೇಟಿ ನೀಡಿ ಸಲ್ಲಿಸಿದ್ದ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಸೆಪ್ಟೆಂಬರ್ 29 ರಂದು ಈ ಮಹತ್ವದ ನಿರ್ಧಾರ ಕೈಗೊಂಡಿದೆ.

ಬೆಂಬಲ ಬೆಲೆ ದರ ಹಾಗೂ ಖರೀದಿ ಪ್ರಮಾಣದ ವಿವರ
ಕೇಂದ್ರದ ಅನುಮೋದನೆಯ ಪ್ರಕಾರ, ಹೆಸರುಕಾಳಿಗೆ ಪ್ರತಿ ಕ್ವಿಂಟಲ್‌ಗೆ ₹8,780 ಬೆಲೆ ನಿಗದಿಪಡಿಸಲಾಗಿದ್ದು, ಒಟ್ಟು 38,250 ಮೆಟ್ರಿಕ್ ಟನ್ ಖರೀದಿಗೆ ಮಂಜೂರಾತಿ ಸಿಕ್ಕಿದೆ. ಸೂರ್ಯಕಾಂತಿಗೆ ಪ್ರತಿ ಕ್ವಿಂಟಲ್‌ಗೆ ₹8,343 ನಿಗದಿ ಮಾಡಲಾಗಿದ್ದು, ಒಟ್ಟು 13,413 ಮೆಟ್ರಿಕ್ ಟನ್ ಸಂಗ್ರಹಿಸಲು ಅವಕಾಶ ನೀಡಲಾಗಿದೆ. ಅದೇ ರೀತಿ, ಸೋಯಾಬೀನ್‌ಗೆ ಪ್ರತಿ ಕ್ವಿಂಟಲ್‌ಗೆ ₹5,708 ದರ ನಿಗದಿಪಡಿಸಿದ್ದು, ಬರೋಬ್ಬರಿ 1,15,500 ಮೆಟ್ರಿಕ್ ಟನ್ ಖರೀದಿಸಲು ಅನುಮತಿ ದೊರೆತಿದೆ. ಇಷ್ಟೇ ಅಲ್ಲದೆ, ಶೀಘ್ರದಲ್ಲೇ ಉದ್ದಿನಕಾಳು ಖರೀದಿಗೂ ಕೇಂದ್ರದಿಂದ ಒಪ್ಪಿಗೆ ದೊರೆಯುವ ನಿರೀಕ್ಷೆಯಿದೆ ಎಂದು ಸಚಿವರು ತಿಳಿಸಿದ್ದಾರೆ.

ರೈತರು ಎಫ್‌ಐಡಿ ನೀಡಿ ನೋಂದಾಯಿಸಿಕೊಳ್ಳಲು ಕರೆ
ಗ್ರಾಮೀಣ ಭಾಗದ ಅರ್ಹ ರೈತರು ಬೆಂಬಲ ಬೆಲೆ ಯೋಜನೆಯ ಸದುಪಯೋಗ ಪಡೆಯಲು ತಮ್ಮ ವ್ಯಾಪ್ತಿಯ ಟಿಎಪಿಸಿಎಂಎಸ್, ಪಿಎಸಿಎಸ್ ಅಥವಾ ಎಫ್‌ಪಿಒ ಕೇಂದ್ರಗಳಿಗೆ ಭೇಟಿ ನೀಡಿ ಎಫ್‌ಐಡಿ (FID) ಮೂಲಕ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ನಿಗದಿತ ಖರೀದಿ ಕೇಂದ್ರಗಳಲ್ಲಿ ವ್ಯವಸ್ಥಿತವಾಗಿ ಉತ್ಪನ್ನಗಳನ್ನು ಸಂಗ್ರಹಿಸಲು ಎಲ್ಲಾ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ.
ಕೃಷಿ ವಿಕಾಸ ಹಾಗೂ ಕೃಷಿಯೋನ್ನತಿ ಯೋಜನೆಗೆ ಬೃಹತ್ ಮೊತ್ತ
ರಾಜ್ಯದಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳ ಜಾರಿಗೆ ಉಭಯ ಸರ್ಕಾರಗಳು ಭಾರಿ ಮೊತ್ತದ ಕ್ರಿಯಾ ಯೋಜನೆಗಳಿಗೆ ಅಂಕಿತ ಹಾಕಿವೆ. ಪಿಎಂ-ಆರ್.ಕೆ.ವಿ.ವೈ ಯೋಜನೆಯಡಿ ಮಣ್ಣಿನ ಆರೋಗ್ಯ, ಕೃಷಿ ಸಿಂಚಾಯಿ ಮತ್ತು ಯಾಂತ್ರೀಕರಣಕ್ಕಾಗಿ ಒಟ್ಟು ₹921.78 ಕೋಟಿ ಅನುಮೋದನೆಯಾಗಿದ್ದು, ಇದರಲ್ಲಿ ಕೇಂದ್ರದ ಪಾಲು ₹553.07 ಕೋಟಿ ಹಾಗೂ ರಾಜ್ಯದ ಪಾಲು ₹368.71 ಕೋಟಿ ಇರಲಿದೆ. ಇದರೊಂದಿಗೆ ಆಹಾರ ಭದ್ರತೆ, ಖಾದ್ಯ ತೈಲ ಉತ್ಪಾದನೆ ಮತ್ತು ಡಿಜಿಟಲ್ ಬೆಳೆ ಸಮೀಕ್ಷೆಗೆ ಒತ್ತು ನೀಡುವ ಕೃಷಿಯೋನ್ನತಿ ಯೋಜನೆಗೆ ₹778.86 ಕೋಟಿ ಮೀಸಲಿಡಲಾಗಿದ್ದು, ಕೇಂದ್ರವು ₹471.95 ಕೋಟಿ ಹಾಗೂ ರಾಜ್ಯ ಸರ್ಕಾರ ₹306.91 ಕೋಟಿ ಭರಿಸಲಿವೆ.

ರಾಜ್ಯಕ್ಕೆ ₹407.99 ಕೋಟಿ ಎರಡನೇ ಕಂತಿನ ಹಣ ಬಿಡುಗಡೆ
ಕಳೆದ ಏಪ್ರಿಲ್ ತಿಂಗಳಲ್ಲಿ ಮೊದಲ ಕಂತು ಬಿಡುಗಡೆಯಾಗಿದ್ದು, ಸಚಿವರ ನಿರಂತರ ಪ್ರಯತ್ನದ ಫಲವಾಗಿ ಇದೀಗ ಎರಡನೇ ಕಂತಿನ ಮೊತ್ತವೂ ಕೈಸೇರಿದೆ. ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ₹276.54 ಕೋಟಿ ಹಾಗೂ ಕೃಷಿಯೋನ್ನತಿ ಯೋಜನೆಯಡಿ ₹131.45 ಕೋಟಿ ಸೇರಿ ಒಟ್ಟು ₹407.99 ಕೋಟಿ ರಾಜ್ಯಕ್ಕೆ ಲಭ್ಯವಾಗಿದೆ. ಈ ಅನುದಾನವು ಕೃಷಿ ವಲಯದ ಪ್ರಗತಿಗೆ ಮತ್ತು ರೈತರ ಆದಾಯ ಹೆಚ್ಚಳಕ್ಕೆ ವೇಗ ನೀಡಲಿದ್ದು, ರಾಜ್ಯದೊಂದಿಗೆ ಸದಾ ಕೈಜೋಡಿಸಿ ಕೆಲಸ ಮಾಡಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
36 ಎಕರೆ ಸರಕಾರಿ ಭೂಮಿ ಲಪಟಾಯಿಸಿದ ಹೆಚ್.ಸಿ.ಬಾಲಕೃಷ್ಣ : ಮಾಜಿ ಶಾಸಕ ಎ.ಮಂಜುನಾಥ್ ಗಂಭೀರ ಆರೋಪ | A. Manjunath






