
ಕಲಬುರಗಿ : M.A ಇಂಗ್ಲಿಷ್ನಲ್ಲಿ ಪ್ರಥಮ ಶ್ರೇಯಾಂಕ ಪಡೆದಿದ್ದ ವಿದ್ಯಾರ್ಥಿನಿ ರೋಷಿನಿ ಅವರಿಗೆ ಚಿನ್ನದ ಪದಕ ಘೋಷಿಸಿದ್ದ ಗುಲಬರ್ಗಾ ವಿಶ್ವವಿದ್ಯಾಲಯ ಕೊನೆ ಗಳಿಯಲ್ಲಿ ಈ ಪದಕ ನೀಡಲು ನಿರಾಕರಿಸಿದ ಘಟನೆ ವಿ.ವಿ. ಘಟಿಕೋತ್ಸವದಲ್ಲಿ ನಡೆದಿದೆ. ಇದರಿಂದ ವಿದ್ಯಾರ್ಥಿನಿ ರೋಷಿನಿ ಹಾಗೂ ಪೋಷಕರು ಆಕ್ರೋಶ ಹೊರ ಹಾಕಿದರಲ್ಲದೇ, ಚಿನ್ನದ ಪದ ಕೈತಪ್ಪಿದ್ದಕ್ಕೆ ರೋಷಿನಿ ಗಳಗಳನೇ ಕಣ್ಣೀರು ಸುರಿಸಿದರು.

ಬೀದರ್ ಜಿಲ್ಲೆಯ ಭಾಲ್ಕಿಯ ಸಿ.ಬಿ. ಕಲಾ ಮತ್ತು ವಾಣಿಜ್ಯ ಕಾಲೇಜಿನ ಪದವೀಧರೆ ರೋಷಿನಿ ಅವರು ‘ಎಂಎ ಇಂಗ್ಲಿಷ್ನಲ್ಲಿ ಪ್ರಥಮ ಶ್ರೇಯಾಂಕ ಪಡೆದಿದ್ದೀರಿ. ಘಟಿಕೋತ್ಸವದಲ್ಲಿ ಚಿನ್ನದ ಪದಕ ನೀಡುತ್ತೇವೆ. ಹೀಗಾಗಿ ಫೋಟೋ ಹಾಗೂ ವಿಳಾಸ ಇತ್ಯಾದಿ ವಿವರಗಳನ್ನು ಕಳುಹಿಸಿಕೊಡಿ’ ಎಂದು ಪತ್ರದ ಮೂಲಕ ವಿವಿಯು ರೋಷಿನಿ ಕಾಲೇಜಿಗೆ ಕೇಳಿತ್ತು. ಈ ಸಂಬಂಧ ಕಳೆದ ಜು.10ರಂದೇ ಮಾಹಿತಿಯನ್ನು ಕಾಲೇಜು ಕಳುಹಿಸಿಕೊಟ್ಟಿತ್ತು.ಆದರೆ ಇಂದು ನಡೆದ ಘಟಿಕೋತ್ಸವದ ಕೊನೆಗಳಿಗೆಯಲ್ಲಿ ರೋಷಿನಿ ಅವರಿಗೆ ಚಿನ್ನದ ಪದಕ ನೀಡಲು ವಿ.ವಿ.ನಿರಾಕರಿಸಿದೆ.
ಇದಕ್ಕೆ ಸ್ಪಷ್ಟನೆ ನೀಡಿರುವ ವಿವಿ ಕುಲಪತಿ ಪ್ರೊ.ದಯಾನಂದ ಅಗಸರ, ರೋಷಿನಿ ಅವರು ಹೆಚ್ಚು ಅಂಕ ಪಡೆದಿದ್ದಾರೆಂದು ಮಾಹಿತಿ ಕೋರಿ ಪತ್ರ ಬರೆಯಲಾಗಿತ್ತು. ಬಳಿಕ ಮತ್ತೊಮ್ಮೆ ಪರಿಶೀಲಿಸಲಾಗಿತ್ತು. ರೋಷಿನಿಕ್ಕಿಂತ ಬೇರೊಬ್ಬ ವಿದ್ಯಾರ್ಥಿನಿ ಹೆಚ್ಚು ಅಂಕ ಪಡೆದಿರುವುದು ಗಮನಕ್ಕೆ ಬಂದಿದೆ. ಹೀಗಾಗಿ ರೋಷಿನಿ ಅವರು ಚಿನ್ನದ ಪದಕಕ್ಕೆ ಅರ್ಹರಲ್ಲ ಎಂದು ನಿರ್ಧರಿಸಲಾಗಿದೆ ಎಂದು ವಿವಿಯ ಯಡವಟ್ಟಿನ ಬಗ್ಗೆ ಕುಲಪತಿಗಳು ಕ್ಷಮೆಯಾಚಿಸಿದ ಪ್ರಸಂಗ ನಡೆದಿದೆ.