ಬೆಂಗಳೂರು ; ರಾಜ್ಯದ ಅತ್ಯಂತ ಪುಟ್ಟ ಜಿಲ್ಲೆಯ ವಿಶಿಷ್ಟ ಸಂಸ್ಕೃತಿ ಹೊಂದಿರುವ ಕೊಡವ ಜನಾಂಗವು ಇಂದು ಆಧುನಿಕತೆ, ನಗರ ಪ್ರದೇಶದ ಆಕರ್ಷಣೆಗೆ ಮಾರು ಹೋಗಿ ಯುವ ಜನಾಂಗವು ಕೊಡವ ಸಂಸ್ಕೃತಿ, ಪರಂಪರೆಯಿಂದಲೇ ವಿಮುಖವಾಗುತ್ತಿದೆ. ಕೊಡಗಿನಲ್ಲಿ ಆಸ್ತಿ ಮಾರಾಟ ಮಾಡಿ ನಗರ ಪ್ರದೇಶಕ್ಕೆ ವಲಸೆ ಹೋಗುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ.

ಅದರಲ್ಲೂ ಉದ್ಯೋಗದ ಕಾರಣಕ್ಕೆ ವಲಸೆ ಹೋಗುವ ಹೆಣ್ಣು ಮತ್ತು ಗಂಡು ಮಕ್ಕಳು ಕೆಲಸದ ಸ್ಥಳದಲ್ಲಿಯೇ ಇತರ ಜಾತಿಯವರನ್ನು ಮದುವೆ ಆಗುವ ಪ್ರಕರಣಗಳೂ ಹೆಚ್ಚಾಗುತ್ತಿವೆ. ಅಂತರ್ಜಾತಿ ವಿವಾಹಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೊಡವ ಭಾಷೆ ಮಾತನಾಡುವವರ , ಸಂಪ್ರದಾಯ ಪಾಲಿಸುವವರ ಸಂಖ್ಯೆ ಇಳಿಮುಖವಾಗುತಿದ್ದು ಕೊಡವ ಜನಾಂಗದ ಸಂಖ್ಯೆಯೂ ಇಳಿಮುಖವಾಗುತ್ತಿದೆ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಕೊಡವ ಸಮಾಜಗಳ ಮಾತೃ ಸಂಸ್ಥೆ ಹಾಗೂ ಅತ್ಯಂತ ದೊಡ್ಡ ಸಂಸ್ಥೆ ಎಂದು ಗುರುತಿಸಲ್ಪಟ್ಟಿರುವ ಬೆಂಗಳೂರು ಕೊಡವ ಸಮಾಜವು ಕೊಡವ ಯುವಕ ಯುವತಿಯರ ಅಂತರ್ಜಾತಿ ವಿವಾಹಕ್ಕೆ ಕಡಿವಾಣ ಹಾಕಲು ಕ್ರಮವನ್ನು ಕೈಗೊಂಡಿದೆ.

ಈಗಾಗಲೇ ಕೊಡವ ಜನಾಂಗದ ಅಂತರ್ಜಾತಿ ವಿವಾಹಗಳಿಗೆ ಕೊಡವ ಸಮಾಜದ ಕಲ್ಯಾಣ ಮಂಟಪದಲ್ಲಿ ಅವಕಾಶ ನೀಡುತ್ತಿಲ್ಲ. ಭಾನುವಾರ ನಡೆದ ಬೆಂಗಳೂರು ಕೊಡವ ಸಮಾಜದ ಮಹಾಸಭೆಯಲ್ಲಿ ತೀರ್ಮಾನವನ್ನು ಕೈಗೊಂಡಿದ್ದು ಇನ್ನು ಮುಂದೆ ಕೊಡವ ಜನಾಂಗದವರ ಮಕ್ಕಳು ಅಂತರ್ಜಾತಿ ವಿವಾಹ ಆಗಿದ್ದರೆ ಅಂತಹವರು ಕೊಡವ ಸಮಾಜದ ಆಡಳಿತ ಮಂಡಳಿಯ ಸದಸ್ಯರಾಗುವಂತಿಲ್ಲ. ಸಮಾಜದ ಚುನಾವಣೆಗೂ ಸ್ಪರ್ದಿಸಲು ಅವಕಾಶ ಇಲ್ಲ. ೊಂದು ವೇಳೆ ಈಗಾಗಲೇ ಆಡಳಿತ ಮಂಡಳಿ ಸದಸ್ಯರು ಅಥವಾ ನಿರ್ಧೇಶಕರಾಗಿದ್ದು ಅಂತವರ ಮಕ್ಕಳು ಅಂತರ್ಜಾತಿ ವಿವಾಹ ಆದರೆ ಅವರ ಆಡಳಿತ ಮಂಡಳಿಯ ಸದಸ್ಯತ್ವ ಅಥವಾ ನಿರ್ದೇಶಕ ಸ್ಥಾನ ರದ್ದಾಗಲಿದೆ. ಈ ನಿರ್ಣಯಕ್ಕೆ ಹಿರಿಯ ಕೊಡವರಿಂದ ಸ್ವಾಗತ ವ್ಯಕ್ತವಾಗಿದೆ.
ಈ ಹಿಂದೆಯೇ ಅನೇಕ ಕೊಡವ ಸಮಾಜಗಳು ಮದುವೆಯ ಸಂದರ್ಭದ ಗಂಗಾ ಪೂಜೆ ಸಂದರ್ಭದಲ್ಲಿ ಮದ್ಯಪಾನ ನಿಷೇದ, ವಾಣಿಜ್ಯ ಚಟುವಟಿಕೆ ಅಥವಾ ಇತರ ಸಂದರ್ಭಗಳಲ್ಲಿ ಕೊಡವ ಸಾಂಪ್ರದಾಯಿಕ ಉಡುಗೆ ಧರಿಸುವುದಕ್ಕೂ ನಿಷೇಧ ಮಾಡಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಕೊಡಗಿನಲ್ಲಿ ಸುಮಾರು 30 ಮತ್ತು ದೇಶಾದ್ಯಂತ ಸುಮಾರು ಅಷ್ಟೇ ಸಂಖ್ಯೆಯ ಸಮಾಜಗಳು ಇವೆ.