ಬೆಂಗಳೂರು: ಬಿಎಂಎಸ್ ಟ್ರಸ್ಟ್’ನಲ್ಲಿ ನಡೆದಿರುವ ಗೋಲ್ ಮಾಲ್ ಬಗ್ಗೆ 2022ರ ಸೆಪ್ಟೆಂಬರ್ 22, 23ರಂದು ವಿಧಾನಸಭಾ ಅಧಿವೇಶನದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸವಿಸ್ತಾರವಾಗಿ ಮಾತನಾಡಿ, ತನಿಖೆಗೆ ಆಗ್ರಹಿಸಿದ್ದರು. ಈ ಸಂಬಂಧ ಪ್ರಧಾನಿ ಮೋದಿಯವರಿಗೆ ಸುಧೀರ್ಘವಾದ ಪತ್ರ ಬರೆದಿದ್ದು, ನ್ಯಾಯಾಂಗ ತನಿಖೆಗೆ ವಿನಂತಿಸಿರುವುದಾಗಿ ಜಾತ್ಯಾತೀತ ಜನತಾ ದಳ ಪಕ್ಷ ತಿಳಿಸಿದೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಜಾತ್ಯಾತೀತ ಜನತಾ ದಳ ಪಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಪ್ರಧಾನ ಮಂತ್ರಿಗೆ ಬರೆದಿರುವ ಪತ್ರವನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.
1957ರಲ್ಲಿ ರಚನೆಯಾಗಿ ನೋಂದಣಿಯಾದ BMS ಟ್ರಸ್ಟ್’ನ ಮೂಲ ಡೀಡನ್ನು ಬದಲಾಯಿಸುವ ತಿದ್ದುಪಡಿಗೆ ಅನುಮೋದನೆ ನೀಡಿದ್ದು ಏಕೆ ಎಂಬ ಪ್ರಶ್ನೆಗೆ ರಾಜ್ಯದ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ಅವರು ಸಮರ್ಪಕ ಉತ್ತರವನ್ನೇ ಈವರೆಗೂ ನೀಡಿಲ್ಲ. 2018ರಲ್ಲಿ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಗಳಾಗಿದ್ದಾಗ ಈ ತಿದ್ದುಪಡಿಯನ್ನು ತಿರಸ್ಕರಿಸಲಾಗಿತ್ತು ಎಂದು ಟ್ವೀಟ್ ನಲ್ಲಿ ತಿಳಿಸಲಾಗಿದೆ.
ದಾನಿ ಟ್ರಸ್ಟ್, ಆಜೀವ ಟ್ರಸ್ಟ್ ನೇಮಕಾತಿ ಬಗ್ಗೆ BMS ಟ್ರಸ್ಟ್ ನಲ್ಲಿ ಕೈಗೊಂಡಿದ್ದ ತಿದ್ದುಪಡಿಗಳನ್ನು ಅಕ್ರಮ ಎಂದಿತ್ತು ಕುಮಾರಸ್ವಾಮಿ ನೇತೃತ್ವದ ಸರ್ಕಾರ. ಅಕ್ರಮ ನಿರ್ಧಾರಗಳನ್ನು ಸಕ್ರಮಗೊಳಿಸಿದ್ದು ಯಾರ ಹಿತಾಸಕ್ತಿ ಕಾಪಾಡಲು, ಅಶ್ವಥ್ ನಾರಾಯಣ್ ಅವರೆ? ಪ್ರಧಾನಿ ಮೋದಿಯವರೆ, ಭ್ರಷ್ಟಾಚಾರ ನಿರ್ಮೂಲನೆ ಎಂದರೆ ಇದೆಯೆ? ಎಂದು ಪ್ರಶ್ನಿಸಿದೆ.
ಶಿಕ್ಷಣ ಸಂಸ್ಥೆಯ ಟ್ರಸ್ಟ್ ನಲ್ಲಿ ಸರ್ಕಾರಿ ಟ್ರಸ್ಟಿಯಾಗಿದ್ದ ಐಎಎಸ್ ಅಧಿಕಾರಿಗಳಾದ ಡಾ. ಮಂಜುಳಾ, ಮದನ್ ಗೋಪಾಲ್ ಅವರು BMS ಟ್ರಸ್ಟ್ ನಲ್ಲಿ ನಡೆಯುತ್ತಿರುವ ಕಾನೂನುಬಾಹಿರ ನಿರ್ಧಾರಗಳ ಬಗ್ಗೆ ಸರ್ಕಾರಕ್ಕೆ ಬರೆದ ಪತ್ರಗಳು ಕಸದ ಬುಟ್ಟಿ ಕಂಡಿದ್ದು ಏಕೆ? ಪ್ರಧಾನಿಗೆ ಬರೆದ ಪತ್ರದಲ್ಲಿ ಇಂಚಿಂಚೂ ದಾಖಲೆಗಳನ್ನು ವಿವರಿಸಲಾಗಿದೆ.
ಸರ್ಕಾರಿ ಸ್ವತ್ತಾದ BMS ಟ್ರಸ್ಟ್ ಅನ್ನು ಹೀಗೆ ಖಾಸಗಿ ವ್ಯಕ್ತಿಗಳಿಗೆ ಧಾರೆ ಎರೆದು ಕೊಡುತ್ತಿರುವುದು ಏಕೆ? ಸಾರ್ವಜನಿಕರಿಗೆ ಸೇರಬೇಕಿದ್ದ ಶಿಕ್ಷಣ ಸಂಸ್ಥೆ, ಮತ್ತದರ ಸಾವಿರಾರು ಕೋಟಿ ಆಸ್ತಿಯನ್ನು ಲಪಟಾಯಿಸುವ ಉದ್ದೇಶವಲ್ಲದೆ, ಮತ್ತೇನು? ಸರ್ಕಾರದ ಜತೆ ಹಲವರು ಕೊಟ್ಟ ಕಾಣಿಕೆಯಿಂದ ಬೆಳೆದ ಸಂಸ್ಥೆಯನ್ನು ಖಾಸಗಿ ಟ್ರಸ್ಟ್ ಆಗಿ ಬದಲಿಸಿದ್ದು ಏಕೆ?
ಟ್ರಸ್ಟ್ ಗೆ ದಯಾನಂದ ಪೈ ಅವರನ್ನು ಆಜೀವ ಸದಸ್ಯರಾಗಿ ಹೇಗೆ ಕೂರಿಸಿದ್ರಿ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗಲು ನ್ಯಾಯಾಂಗ ತನಿಖೆಯಾಗಲೇಬೇಕು. ಖಾಸಗಿ ರಿಯಲ್ ಎಸ್ಟೇಟ್ ಕುಳಗಳ ಪಟ್ಟಭದ್ರ ಹಿತಾಸಕ್ತಿಗೆ ನೆರವಾಗಲು ಈ ಷಡ್ಯಂತ್ರ ನಡೆದಿದೆ. ಇದಕ್ಕೆ ಸಚಿವ ಅಶ್ವಥ್ ನಾರಾಯಣ್ ಮತ್ತು ರಾಜ್ಯ ಬಿಜೆಪಿ ಸರ್ಕಾರ ಸಹಕಾರ ನೀಡಿದ್ದು ನಾಚಿಕೆಗೇಡಿನ ವಿಷಯ ಎಂದು ಟ್ವೀಟ್ ನಲ್ಲಿ ಜೆಡಿಎಸ್ ಆಕ್ರೋಶ ವ್ಯಕ್ತಪಡಿಸಿದೆ.