ಪಾರ್ಕಿಂಗ್ ನಿಯಮ ಉಲ್ಲಂಘಿಸುವ ವಾಹನಗಳನ್ನು ಸಂಚಾರ ಪೊಲೀಸರು ಹೊತ್ತೊಯುವ (ಟೋಯಿಂಗ್) ಸಮಯದಲ್ಲಿ ನಾಗರೀಕರ ಮೇಲೆ ದೌರ್ಜನ್ಯವಾಗುತ್ತಿದೆ ಎಂದು ವ್ಯಾಪಕ ದೂರು ಮತ್ತ ಆರೋಪಗಳು ಕೇಳಿ ಬಂದ ಹಿನ್ನಲೆಯಲ್ಲಿ ಈ ಇಡೀ ವ್ಯವಸ್ಥೆಗೆ ಹೊಸ ರೂಪ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ.
ಈ ಕುರಿತು ಇಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ಪೊಲೀಸ್ ಆಯುಕ್ತರು, ಪೊಲೀಸ್ ಮಹಾನಿರ್ದೇಶಕರು ಹಾಗೂ ಸಂಚಾರ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ ಮುಖ್ಯಮಂತ್ರಿಗಳು ಟೋಯಿಂಗ್ ಅನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲು ಸೂಚಿಸಿದ್ದಾರೆ.
ಇತ್ತೀಚಿಗೆ ಟೋಯಿಂಗ್ ಮಾಡುವ ವಿಚಾರದಲ್ಲಿ ಅಂಗವಿಕಲೆ ಮೇಲೆ ಟ್ರಾಫಿಕ್ ಎಎಸ್ಐ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಸಭೆ ಕರೆಯಲಾಗಿತ್ತು.

ಈ ಕುರಿತು ಮಾತನಾಡಿದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಟೋಯಿಂಗ್ ವಿಚಾರವಾಗಿ ಜನರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆ ಬೆಂಗಳೂರು ನಗರದಲ್ಲಿ ತಾತ್ಕಾಲಿಕವಾಗಿ ಟೋಯಿಂಗ್ಅನ್ನು ಬಂದ್ ಮಾಡಲಾಗಿದೆ. ಮುಂದಿನ ಆದೇಶ ಬರುವವರೆಗೂ ಟೈಗರ್ ವಾಹನಗಳು ನಗರದಲ್ಲಿ ಎಲ್ಲಿಯೂ ಸಂಚರಿಸುವುದಿಲ್ಲ ಎಂದು ತಿಳಿಸಿದ್ದಾರೆ.
ಟೋಯಿಂಗ್ ವ್ಯವಸ್ಥೆ ಸುಧಾರಣೆ ಬಗ್ಗೆ ಇಂದು ನಗರದ ಅರಮನೆ ಮೈದಾನದಲ್ಲಿ ಸಭೆ ನಡೆಸಿದ ಸಂಚಾರ ಜಂಟಿ ಕಮಿಷನರ್ ಬಿ.ಆರ್.ರವಿಕಾಂತೇಗೌಡ ಪೊಲೀಸರು ಜನರ ಜೊತೆ ಹೇಗೆ ನಡೆದುಕೊಳ್ಳಬೇಕು ಎಂಬುದರ ಬಗ್ಗೆ ನಗರದ ಎಲ್ಲಾ ಸಂಚಾರ ಠಾಣೆಗಳ ಎಎಸ್ಐ, ಪಿಎಸ್ಐ, ಇನ್ಸ್ಪೆಕ್ಟರ್, ಎಸಿಪಿ ಹಾಗೂ ಡಿಸಿಪಿಗಳ ಜೊತೆ ಸಭೆ ನಡೆಸಿದ್ದರು. ನಗರದಲ್ಲಿ ಉಂಟಾಗುತ್ತಿರುವ ಸಂಚಾರ ದಟ್ಟನೆ ಹಾಗೂ ಸಮಸ್ಯಗಳ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗಿದೆ.
 
			
 
                                 
                                 
                                
