ಪೆಟ್ರೋಲ್ ಬೆಲೆ ಏರಿಕೆಯಾದರೆ, ಜನರು ಸೈಕಲ್ ಮೇಲೆ ಓಡಾಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆʼ ಎಂಬ ಮಾತಿಗೆ ಉತ್ತರಿಸಿದ್ದ ಸಂಸದ ಜಿಎಂ ಸಿದ್ದೇಶ್ವರ್ ಸೈಕಲಲ್ಲಿ ಓಡಾಡಿದ್ರೆ ವ್ಯಾಯಾಮ ಆಗುತ್ತದೆ ಎಂದು ಹೇಳಿದ್ದರು. ಈ ಹೇಳಿಕೆಗೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ʼಸಂಸದರೇ ತಾವು ದಾವಣಗೆರೆಯಿಂದ ಬೆಂಗಳೂರಿಗೆ ಸೈಕಲ್ ತುಳಿದು ಪ್ರಯಾಣಿಸಿ ವ್ಯಾಯಾಮ ಮಾಡುವಿರಾ?ʼ ಎಂದು ವ್ಯಂಗ್ಯಮಾಡಿದೆ.

ದಾವಣಗೆರೆಯಲ್ಲಿ ಮಾತನಾಡಿದ ಅವರು, ಕಚ್ಚಾ ತೈಲದ ಬ್ಯಾರೆಲ್ ಬೆಲೆ ಜಾಸ್ತಿ ಆದಾಗ ದರ ಹೆಚ್ಚುವುದು ಸಹಜ, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಳ ಆದ ಹಿನ್ನಲೆ ದೇಶದಲ್ಲಿ ಪೆಟ್ರೋಲ್ ಬೆಲೆ ಏರಿಕೆಯಾಗಿದೆ, ದರ ಕಡಿಮೆ ಮಾಡಲು ಪ್ರಧಾನಿಗಳು ಪ್ರಯತ್ನಿಸುತ್ತಿದ್ದಾರೆ ಎಂದಿದ್ದರು.
ಸಂಸದರ ಮಾತಿಗೆ ತಿರುಗೇಟು ನೀಡಿದ ಕರ್ನಾಟಕ ಕಾಂಗ್ರೆಸ್ ʼ ಮೂರ್ಖರೆಲ್ಲ ಸೇರಿ ಬಿಜೆಪಿ ಪಕ್ಷವಾಗಿದೆಯೇ ಅಥವಾ ಬಿಜೆಪಿಗೆ ಸೇರಿದಮೇಲೆ ಮೂರ್ಖರಾಗುವರೇ? ಎಂಬುದೇ ಯಕ್ಷಪ್ರಶ್ನೆ!. ʼಇಂಧನತೈಲಗಳ ಬೆಲೆ ಏರಿಕೆಗೆ ಸೈಕಲ್ ತುಳಿದರೆ ವ್ಯಾಯಾಮವಾಗುತ್ತದೆ ಎಂಬುದು ಸಂಸದ ಜಿಎಂ ಸಿದ್ದೇಶ್ವರ್ ಅವರ ಬಾಲಿಶ ಸಮರ್ಥನೆ!. ʼಸಂಸದರೇ ತಾವು ದಾವಣಗೆರೆಯಿಂದ ಬೆಂಗಳೂರಿಗೆ ಸೈಕಲ್ ತುಳಿದು ಪ್ರಯಾಣಿಸಿ ವ್ಯಾಯಾಮ ಮಾಡುವಿರಾ?ʼ ಎಂದು ಟ್ವೀಟ್ ಮೂಲಕ ವ್ಯಂಗ್ಯ ಪ್ರತಿಕ್ರಿಯೆ ನೀಡಿದೆ.





